ಮುಖಪುಟ /ಪ್ರವಾಸಿತಾಣ  /ನಮ್ಮದೇವಾಲಯಗಳು

ಸುಂದರ ದೇವಾಲಯಗಳ ನೆಲೆವೀಡು ವಿಘ್ನಸಂತೆ

ವಿಘ್ನಸಂತೆಯ ಪ್ರಧಾನ ದೇವಾಲಯತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿರುವ ಕುಗ್ರಾಮ ವಿಘ್ನಸಂತೆ. ತುರುವೇಕೆರೆಯಿಂದ 12 ಕಿಲೋಮೀಟರ್ ಮತ್ತು ನೊಣವಿನಕೆರೆಯಿಂದ ಸುಮಾರು 5 ಕಿಮೀ ದೂರದಲ್ಲಿರುವ ಈ ಗ್ರಾಮ ಶಿಲ್ಪಕಲಾ ವೈಭವಕ್ಕೆ ಹೆಸರಾದ ಸುಂದರ ದೇವಾಲಯಗಳ ತವರಾಗಿದೆ.

ಇಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದ ಶಿಖರದಲ್ಲಿರುವ ನಾಟ್ಯಗಣಪ ಹಳೆಬೀಡಿನ ಪ್ರವೇಶ ದ್ವಾರದ ಬಲಭಾಗದಲ್ಲಿರುವ ನಾಟ್ಯ ಗಣಪನನ್ನೇ ಹೋಲುತ್ತದೆ. ದೇವಾಲಯದ ಮುಂಭಾಗದಲ್ಲಿರುವ ಆನೆಗಳ ವಿಗ್ರಹ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳ ಆವರಣದಲ್ಲಿರುವ ಆನೆಗಳ ಶಿಲ್ಪವನ್ನೇ ಹೋಲುತ್ತದೆ.

ವಿಘ್ನಸಂತೆ ದೇವಾಲಯದ ಸುಂದರ ಗೋಪುರದೇವಾಲಯ ಹೊಯ್ಸಳ ಶೈಲಿಯಲ್ಲಿದ್ದು, ದೇಗುಲದಲ್ಲಿರುವ ಕೇಶವ, ಲಕ್ಷ್ಮೀನಾರಾಯಣ ಹಾಗೂ ವೇಣುಗೋಪಾಲಸ್ವಾಮಿ ವಿಗ್ರಹಗಳು ನಯನ ಮನೋಹರವಾಗಿವೆ.

ಈ ಗ್ರಾಮಕ್ಕೆ ಹಿಂದೆ ಇಗನಸಂತೆ ಎಂದು ಕರೆಯುತ್ತಿದ್ದರಂತೆ. ಕಾಲಾನುಕ್ರಮದಲ್ಲಿ ಇದು ವಿಘ್ನಸಂತೆಯಾಗಿದೆ. ಹೊಯ್ಸಳರ ಕಾಲದಲ್ಲಿ ಇದೊಂದು ಪ್ರಮುಖ ಸ್ಥಳವಾಗಿತ್ತು ಎಂಬುದನ್ನು ದೇವಾಲಯದ ಎಡಭಾಗದಲ್ಲಿರುವ ಶಾಸನಗಳು ಸಾರುತ್ತವೆ. ಹೊಯ್ಸಳ ಮೂರನೆಯ ನರಸಿಂಹನ ದಂಡನಾಯಕರೂ ಮಲ್ಲಿದೇವದಂಡನಾಯ ಕನ ಮಕ್ಕಳೂ ಆದ ಅಪ್ಪಯ್ಯ, ಗೋಪಾಲ ಮತ್ತು ಮಾಧವ ಎಂಬವರು ಈ ದೇವಾಲಯವನ್ನು 1286ರಲ್ಲಿ ಕಟ್ಟಿಸಿದರೆಂದು ಶಾಸನ ತಿಳಿಸುತ್ತದೆ.

ವಿಶಿಷ್ಟ ವಿನ್ಯಾಸ ಮತ್ತು ಸೂಕ್ಷ್ಮ ಶಿಲ್ಪಾಲಂಕರಣಗಳಿಂದ ಕೂಡಿದ ಹೊಯ್ಸಳ ಶೈಲಿಯಲ್ಲೇ ಪೂರ್ಣವಾಗಿ ರಚಿತವಾಗಿರುವ vignasante temple Ganeshaದೇವಾಲಯದ ಹೊರ ಭಿತ್ತಿಯ ಮೇಲೆ ಹೆಚ್ಚಿನ ಸೂಕ್ಷ್ಮ ಕೆತ್ತನೆಗಳಿಲ್ಲದಿದ್ದರೂ, ಶಿಖರದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಪ್ರವಾಸಿಗರಿಗೆ ಮಾಹಿತಿ ಇಲ್ಲದೆ, ಸೂಕ್ತ ನಿರ್ವಹಣೆ ಇಲ್ಲದೆ ದೇವಾಲಯ ಇಂದು ಕಳಾಹೀನವಾಗಿದೆ. ಸುಂದರ ಶಿಖರಗಳಲ್ಲಿ ಗಿಡ ಗಂಟೆಗಳು ಬೆಳೆದಿವೆ. ಆನೆಗಳು ದನ ಕಟ್ಟುವ ಕಲ್ಲುಗಳಾಗಿವೆ.

ಈ ಗ್ರಾಮದಲ್ಲಿ ಹರಿಯುವ ಹಳ್ಳದ ಪಕ್ಕದಲ್ಲಿ ಬಾಲಲಿಂಗೇಶ್ವರ ದೇವಾಲಯವಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ಈಗ ನಡೆಯುತ್ತಿದೆ.

ಗ್ರಾಮದ ಉತ್ತರದಲ್ಲಿರುವ ಬಯಲಲ್ಲಿ ನೂತನವಾಗಿ ಕಟ್ಟಿದ ಬನಶಂಕರಿ ದೇವಾಲಯವಿದೆ. ಗರ್ಭಗೃಹ ಮತ್ತು ಸುಕನಾಸಿ ಮಾತ್ರವಿರುವ ಈ ದೇವಾಲಯದಲ್ಲಿ ಸುಖಾಸನಾರೂಢವಾದ ಬಹುಶಃ ಹೊಯ್ಸಳ ಕಾಲಕ್ಕೆ ಸೇರಿದ ದೇವಿಯ ವಿಗ್ರಹವಿದೆ. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯಿಂದ ಜಾತ್ರೆಯೂ ನಡೆಯುತ್ತದೆ.

ವಿಘ್ನಸಂತೆ ಬನಶಂಕರಿ ದೇವಾಲಯಹೋಗುವುದು ಹೇಗೆ - ತುರುವೇಕೆರೆಯಿಂದ ತಿಪಟೂರಿಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ನೊಣವಿನಕೆರೆಗೆ 5 ಕಿಲೋ ಮೀಟರ್ ನಂತರ ಎಡಕ್ಕೆ ತಿರುಗಿದರೆ ವಿಘ್ನಸಂತೆಗೆ ಹೋಗಬಹುದು. ತಿಪಟೂರಿನಿಂದ ತುರುವೇಕೆರೆಗೆ ಹೋಗುವ ಮಾರ್ಗದಲ್ಲಿ 8 ಕಿಲೋ ಮೀಟರ್ ಕ್ರಮಿಸಿದ ಬಳಿಕ ಬಲ ಭಾಗದಲ್ಲಿ ಈ ಗ್ರಾಮಕ್ಕೆ ಹೋಗುವ ದಾರಿ ಸಿಗುತ್ತದೆ. ಎರಡು ಮೂರು ಕಿಲೋ ಮೀಟರ್ ಕಚ್ಚಾ ರಸ್ತೆಯಲ್ಲಿ ಕ್ರಮಿಸುವುದು ಅನಿವಾರ್ಯ. ದೇವಾಲಯ 10 ಗಂಟೆ ನಂತರ ತೆರೆಯುತ್ತದೆ.

ಮುಖಪುಟ /ಪ್ರವಾಸಿತಾಣ /ನಮ್ಮ ದೇವಾಲಯಗಳು