ಮುಖಪುಟ /ಪ್ರವಾಸಿತಾಣ/ನಮ್ಮ ದೇವಾಲಯಗಳು

ಸುಂದರ ದೇಗುಲಗಳ ತುರುವೇಕೆರೆ
ಬೇಲೂರು ಹಳೇಬೀಡಿನ ಪ್ರತಿರೂಪದಂತಿರುವ ದೇಗುಲಗಳನ್ನುಳ್ಳ ತುರುವೇಕೆರೆ ತೆಂಗಿನ ತವರು.

mule shankara temple, turuvekereಬೇಲೂರು, ಹಳೇಬೀಡಿನ ದೇಗುಲಗಳ ಪ್ರತಿರೂಪದಂತಿರುವ ಸುಂದರ ದೇವಾಲಯಗಳನ್ನುಳ್ಳ ತುರುವೇಕೆರೆ, ತುಮಕೂರು ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ. ಕೆಂಪು ಮಣ್ಣಿನ ನಾಡಾದ ಇದು ತೆಂಗಿನಕಾಯಿಯ ತವರು. ತುರುವೇಕೆರೆ ತೆಂಗಿನ ಕಾಯಿ ಬಲು ಪ್ರಸಿದ್ಧಿ.

ಸಾಹಿತ್ಯ, ಸಂಸ್ಕೃತಿ, ಕಲೆ, ವಾಣಿಜ್ಯ, ಶಿಕ್ಷಣ ಹಾಗೂ ಕೈಗಾರಿಕಾ ಕೇಂದ್ರವಾಗಿರುವ ತುರುವೇಕೆರೆ ಹಿಂದೆ ದುಮ್ಮನಹಳ್ಳಿ ದುಮ್ಮಿ ಒಡೆಯರ ಪಾಳೆಯಪಟ್ಟವಾಗಿತ್ತು. ಹೊಯ್ಸಳ ಚಕ್ರವರ್ತಿಗಳ ಕಾಲದಲ್ಲಿ ತುರುವೇಕೆರೆ ತಾಲೂಕಿನಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಲಾಗಿದೆ.

ಈ ಪೈಕಿ ಹೊಸಹಳ್ಳಿಯಲ್ಲಿ ಕಲ್ಲೇಶ್ವರ ದೇವಾಲಯವಿದ್ದರೆ, ನಾಗಲಾಪುರದಲ್ಲಿ ಪಾಳುಬಿದ್ದಿರುವ ವಿಷ್ಣು ಹಾಗೂ ಶಿವ ದೇವಾಲಯಗಳಿವೆ. ಸನಿಹದಲ್ಲೇ ಇರುವ ಸೂಳೆಕೆರೆಯಲ್ಲಿ ಹೊಯ್ಸಳ ಶೈಲಿಯ ಈಶ್ವರ ದೇವಾಲಯವಿದೆ. ತಂಡಗದಲ್ಲೂ ಹೊಯ್ಸಳ ಶೈಲಿಯ ದೇಗುಲಗಳಿವೆ. ಶಂಕರನಾರಾಯಣಪುರ ಎಂದೂ ಕರೆಯಲಾಗುವ ತಂಡಗದಲ್ಲೇ ಶಕಪುರುಷನಾದ ಶಾಲಿವಾಹನನು ಹುಟ್ಟಿದ್ದು ಎಂಬ ಐತಿಹ್ಯವೂ ಇದೆ.

ತುರುವೇಕೆರೆ: ಇನ್ನು ತಾಲೂಕು ಕೇಂದ್ರವಾದ ತುರುವೇಕೆರೆಯಲ್ಲಿ ಇರುವ ಮೂಲೆಶಂಕರ ದೇಗುಲ, ಚನ್ನಿಗರಾಯ ಸ್ವಾಮಿ ದೇವಾಲಯಗಳಂತೂ ಬೇಲೂರು ಹಳೇಬೀಡಿನ ದೇಗುಲಗಳ ಪ್ರತಿರೂಪದಂತಿವೆ. ಈ ಎರಡೂ ಸುಂದರ ದೇವಾಲಯಗಳನ್ನು ಕ್ರಿಸ್ತಶಕ ೧೨ನೇ ಶತಮಾನದಲ್ಲಿ ಸೋಮನಾಥಪುರದ ಇತಿಹಾಸ ಪ್ರಸಿದ್ಧ ಕೇಶವ ದೇವಾಲಯವನ್ನು ಕಟ್ಟಿಸಿದ ಹೊಯ್ಸಳರ ದಂಡನಾಯಕ ಸೋಮಣ್ಣನೇ ನಿರ್ಮಿಸಿದ್ದು ಎನ್ನುತ್ತದೆ ಇತಿಹಾಸ.

ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಈ ಎರಡೂ ದೇವಾಲಯಗಳೂ ಇಂದು ಜೀರ್ಣೋದ್ಧಾರಗೊಂಡು ತಮ್ಮ ಹಿಂದಿನ ಸೊಬಗು ಮತ್ತು ಸೌಂದರ್ಯ ಪಡೆದುಕೊಂಡಿವೆ. ಹೂಳು ತುಂಬಿಕೊಂಡಿದ್ದ ಬೇಲೂರಿನ ಚೆನ್ನಕೇಶವ ಸ್ವಾಮಿಯ ಪ್ರತಿರೂಪದಂತಿರುವ ಶ್ರೀಚನ್ನಿಗರಾಯಸ್ವಾಮಿ ದೇವಾಲಯವನ್ನು ಸ್ಥಳೀಯ ಸುರಭಿ ಸಂಗಮ ಮತ್ತು ನಾಗರಿಕರು ಜೀರ್ಣೋದ್ಧಾರಗೊಳಿಸಿ, ನಿತ್ಯ ಪೂಜೆ ನಡೆಯುವಂತೆ ಮಾಡುವ ಮೂಲಕ ಹೊಸ ರೂಪ ನೀಡಿದ್ದಾರೆ.

ಇನ್ನು ಅತ್ಯಂತ ಸುಂದರವೂ ಮನಮೋಹಕವೂ ಆದ ಮೂಲೇ ಶಂಕರ ದೇವಾಲಯದ ಜೀರ್ಣೋದ್ಧಾರವನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿ ಧರ್ಮೋತ್ಥಾನ ಟ್ರಸ್ಟ್ - ಸುರಭಿ ಸಂಗಮ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ೫ ಲಕ್ಷ ರುಪಾಯಿ ವೆಚ್ಚದಲ್ಲಿ ನೆರವೇರಿಸಲಾಗಿದೆ.

ಹೊಯ್ಸಳ ಶೈಲಿಯ ದೇಗುಲ: ಈ ಎರಡೂ ದೇವಾಲಯಗಳೂ ಪೂರ್ವಾಭಿಮುಖವಾಗಿವೆ. ಮೂಲೆ ಶಂಕರನ ದೇಗುಲ ಪೂರ್ವಾಭಿಮುಖವಾಗಿದ್ದರೂ, ಪ್ರವೇಶ ಮುಖಮಂಟಪ ದಕ್ಷಿಣಾಭಿಮುಖವಾಗಿದೆ. ಬೇಲೂರು ಹಳೇಬೀಡು ದೇವಾಲಯಗಳಂತೆಯೇ ಸುಕನಾಸಿ, ನವರಂಗ, ಮುಖಮಂಟಪ, ಗರ್ಭಗೃಹ, ಸುಂದರ ಕಲಾಕೆತ್ತನೆಯ ಹೊರಭಿತ್ತಿ, ಅರೆಗಂಬಳಿಂದ ಕೂಡಿದೆ. ನವರಂಗದಲ್ಲಿ ಹೊಯ್ಸಳ ಕಾಲದ ಭೈರವ, ವೀರಭದ್ರ ಮತ್ತು ಸುಬ್ರಹ್ಮಣ್ಯ ಶಿಲ್ಪಗಳಿವೆ. ಹೊರಗಡೆ ಅಡಿಪಟ್ಟಿಕೆಯಲ್ಲಿ ಸರೋಜ, ಜಕ್ಕಣ, ಈಶ್ವರ ಎಂಬ ಶಿಲ್ಪಿಗಳ ಹೆಸರಿದ್ದು ಈ ದೇವಾಲಯವನ್ನು ಖ್ಯಾತ ಶಿಲ್ಪ ಜಕ್ಕಣಾಚಾರಿಯೇ ಕಟ್ಟಿರಬಹುದು ಎಂದೂ ಹೇಳಲಾಗುತ್ತದೆ.

ಹಲವಾರು ವರ್ಷಗಳ ಹಿಂದೆ ಮೂಲೆಶಂಕರನ ದೇವಾಲಯದೊಳಗೆ ಹುಲ್ಲು ತುಂಬಿ ಬೆಂಕಿ ಇಡಲಾಗಿತ್ತು. ಹೀಗಾಗಿ ಒಳಗಿರುವ ಬೃಹತ್ ಗಾತ್ರದ ಬೋಗಳು (ಬೀಮ್ಸ್) ಸೀಳಿಹೋಗಿದ್ದವು. ಆದರೂ ಕಟ್ಟಡ ಬಲಿಷ್ಠವಾಗಿದ್ದರಿಂದ ಛಾವಣಿ ನೆಲಕಚ್ಚಲಿಲ್ಲ. ಆನಂತರ ದೇವಾಲಯವನ್ನು ಭದ್ರಗೊಳಿಸಲು ಜನರು ೪ ಅಡಿಯಷ್ಟು ಎತ್ತರದವರೆಗೂ ಮಣ್ಣು ತುಂಬಿದ್ದರು.

ಸರ್.ಎಂ.ವಿ. ಭೇಟಿ : ೧೯೩೯ರಲ್ಲಿ ತುರುವೇಕೆರೆಗೆ ಭೇಟಿ ನೀಡಿದ್ದ ಮೋಕ್ಷಗೊಂಡಂ ಸರ್.ಎಂ. ವಿಶ್ವೇಶ್ವರಯ್ಯನವರು ಸೀಳಿದ್ದ ಬೋಗಳು ನೆಲಕ್ಕೆ ಬೀಳದಂತೆ ಕೃತಕ ಶಿಲಾಕಂಬ ಜೋಡಿಸಲು ಸಲಹೆ ನೀಡಿದ್ದರು. ಆಗ ಅವರ ಆದೇಶದಂತೆ ಕೃತಕ ಕಂಬ ಜೋಡಿಸಲಾಗಿತ್ತು. ದೇವಾಲಯದ ಛಾವಣಿಗೆ ರಕ್ಷಣೆಯೂ ಸಿಕ್ಕಿತ್ತು. ಆದರೆ, ದೇವರ ದರ್ಶನಕ್ಕೆ ಈ ಕೃತಕ ಕಂಬಗಳು ಅಡ್ಡಿಯಾಗಿದ್ದವು.

ಜೀರ್ಣೋದ್ಧಾರ :ಈ ದುರವಸ್ಥೆಯ ಬಗ್ಗೆ ಪತ್ರಿಕೆಗಳಲ್ಲೂ ಸಚಿತ್ರ ಲೇಖನಗಳು ಪ್ರಕಟಗೊಂಡವು. ಆಗ ಸ್ಥಳೀಯ ಸುರಭಿ ಸಂಗಮ ದೇಗುಲದ ಅಭಿವೃದ್ಧಿಗೆ ಕಿರುಪ್ರಮಾಣದ ಕರಸೇವೆ ಆರಂಭಿಸಿತು. ದೇವಾಲಯದ ಸುತ್ತ ಹಬ್ಬಿದ್ದ ಕಳ್ಳಿ ಪೊದೆಗಳನ್ನು ಬೇರು ಸಹಿತ ಕಿತ್ತೊಗೆದು ಸ್ವಚ್ಛಗೊಳಿಸಿತು. ದೇಗುಲದ ಮೇಲೆ ಬೆಳೆದಿದ್ದ ಗಿಡಗಂಟಿಗಳನ್ನೂ ನಿರ್ಮೂಲ ಮಾಡಿತು. ಐದು ಲಕ್ಷ ರುಪಾಯಿಗಳ ಸಮಗ್ರ ಅಭಿವೃದ್ಧಿ ಕಾರ್ಯಯೋಜನೆಯನ್ನೂ ತಯಾರಿಸಿತು. ೧೧-೦೪-೯೩ರಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಭೂಮಿ ಪೂಜೆಯೂ ನೆರವೇರಿತು. ಆನಂತರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಸಹಕಾರದಿಂದ ಮತ್ತೆ ತನ್ನ ಆರಂಭದ ಕಳೆಯನ್ನು ಪಡೆದಿರುವ ದೇಗುಲ ಸುಂದರವಾಗಿ ನಳನಳಿಸುತ್ತಿದೆ. ಮೂಲಕ್ಕೆ ಚ್ಯುತಿಯಾಗದ ರೀತಿಯಲ್ಲಿ ದೇಗುಲವನ್ನು ಪುನರ್ ನಿರ್ಮಿಸಲಾಗಿದೆ.

ಬೇಟೇರಾಯ ಸ್ವಾಮಿ : ತುರುವೇಕೆರೆಯಲ್ಲಿ ಈ ಎರಡು ದೇವಾಲಯಗಳಲ್ಲದೆ ವೈಭವದ ಗಂಗಾಧರೇಶ್ವರ ಹಾಗೂ ಸುಂದರ ವರದ ಬೇಟೇರಾಯಸ್ವಾಮಿಯ ದೇವಾಲಯಗಳೂ ಇವೆ. ಇತ್ತೀಚೆಗೆ ವರದ ಬೇಟೇರಾಯನ ದೇಗುಲದ ಜೀರ್ಣೋದ್ಧಾರವೂ ನೆರವೇರಿದೆ. ಸರಕಾರದ ನೆರವಿಲ್ಲದೆಯೇ ನಾಗರಿಕರೆ ಹಣ ಸಂಗ್ರಹಿಸಿ ರಾಜಗೋಪುರ ನಿರ್ಮಾಣ ಮಾಡಿ, ಕುಸಿಯುತ್ತಿದ್ದ ಗೋಡೆಗಳನ್ನು ಬಲಗೊಳಿಸಿದ್ದಾರೆ.

ಬೇಟೆರಾಯನ ದೇವಾಲಯ ಕೂಡ ಪೂರ್ವಾಭಿಮುಖವಾಗಿದ್ದು, ಗರ್ಭಗುಡಿ, ಸುಕನಾಸಿ, ನವರಂಗ, ಹಜಾರ ಒಳಗೊಂಡಿದೆ. ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿರುವ ಈ ದೇವಾಲಯದ ಪೂರ್ವದಲ್ಲಿ ಎತ್ತರವಾದ ಪ್ರವೇಶದ್ವಾರವಿದೆ. ಮಹಾದ್ವಾರದ ಒಳಗಂಬದ ಮೇಲೆ ಭಕ್ತವಿಗ್ರಹವಿದ್ದು, ಇದು ದೇಗುಲ ಕಟ್ಟಿಸಿದ ಚೌಡಪ್ಪಯ್ಯ (ವರದ ಬೇಟೆರಾಯ)ರದು ಎಂದು ತೋರಿಸಲಾಗಿದೆ. ಪ್ರತಿವರ್ಷ ಪಾಲ್ಗುಣ ಮಾಸದಲ್ಲಿ ಇಲ್ಲಿ ರಥೋತ್ಸವ ಜರುಗುತ್ತದೆ. ರಥೋತ್ಸವದ ಹಿಂದಿನ ದಿನ ನಡೆವ ಮಡೆ ಸಂತರ್ಪಣೆ ಪ್ರಮುಖ ಆಕರ್ಷಣೆ. ಆ ದಿನ ಹರಕೆಹೊತ್ತ ಬೇಟೇರಾಯನ ಒಕ್ಕಲಿನವರು ಭಕ್ತರು ಊಟ ಮಾಡಿದ ಎಲೆಗಳ ಮೇಲೆ ಉರುಳು ಸೇವೆ ಮಾಡುತ್ತಾರೆ.

ಗಂಗಾಧರೇಶ್ವರ ದೇಗುಲ: ಇನ್ನು ಗಂಗಾಧರೇಶ್ವರ ದೇವಾಲಯ ಕೂಡ ದ್ರಾವಿಡ ಶೈಲಿಯಲ್ಲಿದೆ. ಉತ್ತರಾಭಿಮುಖವಾಗಿರುವ ಈ ದೇವಾಲಯದ ಎದುರು ಎತ್ತರವಾದ ಸುಂದರ ನಂದಿಯ ವಿಗ್ರಹವಿದೆ. ನುಣುಪಾದ ಕಪ್ಪು ವರ್ಣದ ಏಕಶಿಲೆಯಲ್ಲಿ ಕೆತ್ತಲಾಗಿರುವ ಈ ನಂದಿಯಷ್ಟು ಸುಂದರವಾದ ನಂದಿ ಮತ್ತೊಂದಿಲ್ಲ. ಮೈಸೂರಿನ ಚಾಮುಂಡಿಬೆಟ್ಟ, ಬಸವನಗುಡಿಯ ಬೃಹತ್ ಬಸವಣ್ಣನ ಮೂರ್ತಿಗಳಿಗಿಂತಲೂ ಈ ನಂದಿ ಸುಂದರವಾಗಿದೆ.

ದೊಡ್ಡ ಪ್ರಾಕಾರವಿರುವ ಈ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿಯ ಗುಡಿಗಳಿವೆ. ದೇಗುಲದ ಹೊರಭಾಗದಲ್ಲಿ ರಸ್ತೆಯಂಚಿನಲ್ಲಿರುವ ಕಲ್ಲಿನ ದೀಪಸ್ತಂಭದ ಮೇಲೆ ಭಕ್ತದಂಪತಿ ವಿಗ್ರಹವಿದ್ದು ಆ ವಿಗ್ರಹಗಳು ದೇವಾಲಯ ನಿರ್ಮಿಸಿದ ಅಣ್ಣಯ್ಯ ನಾಯಕ ಎಂಬ ಪಾಳೆಗಾರ ಹಾಗೂ ಆತನ ಪತ್ನಿಯದೆಂದು ಹೇಳಲಾಗುತ್ತದೆ. ಶಿವಲಿಂಗದ ಮೇಲೆ ಗಂಗೆಯನ್ನುಳ್ಳ ಸುಂದರ ಗಂಗಾಧರೇಶ್ವರನ ಮೂರ್ತಿ ಅತ್ಯಂತ ಮನಮೋಹಕವಾಗಿದೆ. ಪ್ರವಾಸೋದ್ಯಮ ಪಟ್ಟಿಯಲ್ಲಿ ತುರುವೇಕೆರೆಯೂ ಸೇರಿದೆ.

ವಾಣಿಜ್ಯ ಕೇಂದ್ರ: ವಿನೋಬನಗರ, ಸುಬ್ರಹ್ಮಣ್ಯನಗರ, ಗಾಂನಗರವೆಂಬ ವಿಸ್ತರಣೆಗಳನ್ನೊಳಗೊಂಡು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತುರುವೇಕೆರೆ ಒಂದು ವಾಣಿಜ್ಯಕೇಂದ್ರ. ನಿಯಂತ್ರಿತ ಮಾರುಕಟ್ಟೆ, ನ್ಯಾಯಾಲಯವನ್ನೂ ಒಳಗೊಂಡ ಈ ಊರು ಒಂದು ಕಾಲದಲ್ಲಿ ಹತ್ತಿಯ ವಾಣಿಜ್ಯ ಕೇಂದ್ರವಾಗಿತ್ತು .

೧೯೬೦ರಲ್ಲಿ ತಾಲೂಕಿನ ಅಮ್ಮಸಂದ್ರದಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಲಾಯಿತು. ಹೇಮಾವತಿ ನದಿಯ ಕಾಲುವೆಯ ನೀರಿನಿಂದ ವ್ಯವಸಾಯ ಕ್ಷೇತ್ರ ಸಮೃದ್ಧವಾಗಿದೆ. ಸುಸಜ್ಜಿತ ಕಾಲೇಜು ಇರುವ ತಾಲೂಕು ಕೇಂದ್ರ ಶಿಕ್ಷಣ ಶ್ರೀಮಂತವಾಗಿದೆ. ೧೬೭೬ರಲ್ಲಿ ತುರುವೇಕೆರೆ ಮೈಸೂರು ರಾಜ ಮನೆತನದ ಚಿಕ್ಕದೇವರಾಯರ ಆಳ್ವಿಕೆಗೂ ಒಳಪಟ್ಟಿತ್ತು.

ತುರುವೇಕೆರೆಗೆ ನೇರವಾಗಿ ರೈಲು ಮಾರ್ಗವಿಲ್ಲದಿದ್ದರೂ, ತಾಲೂಕಿನ ಬಾಣಸಂದ್ರದಲ್ಲಿ ರೈಲು ನಿಲ್ಣಾಣವಿದ್ದು, ಬೆಂಗಳೂರು- ಪುಣೆ ರೈಲು ಮಾರ್ಗವನ್ನು ಇದು ಸಂದಿಸುತ್ತದೆ. ಬಾಣಸಂದ್ರದಿಂದ ತುರುವೇಕೆರೆಗೆ ೧೩ ಕಿ.ಮೀಟರ್. ಬೆಂಗಳೂರಿನಿಂದ ೧೨೦ ಕಿ.ಮೀಟರ್ ದೂರದಲ್ಲಿರುವ ತುರುವೇಕೆರೆಗೆ ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳಿಂದಲೂ ನೇರ ಬಸ್ ಸೌಕರ್ಯವಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಮುಖಪುಟ /ಪ್ರವಾಸಿತಾಣ