ಮುಖಪುಟ /ಪ್ರವಾಸಿತಾಣ   

ಸಂಸ್ಕೃತಿಯ ತವರು ಮೈಸೂರು
ಅರಮನೆಗಳ ನಗರಿ ಮೈಸೂರು ಪ್ರವಾಸಕ್ಕೆ ನೂರೆಂಟು ಮೆರುಗು...

*ಟಿ.ಎಂ.ಸತೀಶ್

Mysore Palaceಕರ್ನಾಟಕ ಪ್ರವಾಸ ಎಂದೊಡನೆ ಮೊದಲ ಕಣ್ಮುಂದೆ ನಿಲ್ಲುವುದು ಮೈಸೂರು. ಮೈಸೂರಿನ ಆಕರ್ಷಣೆಯೇ ಅಂತದ್ದು. ಮೈಸೂರು ತನ್ನ ಸುಂದರ ಅರಮನೆಗಳು, ಭವ್ಯವಾದ ಪುರಾತನ ಹಾಗೂ ಐತಿಹಾಸಿಕ ಮಹತ್ವಗಳು, ವಿಖ್ಯಾತ ಮೃಗಾಲಯ, ಮೈಸೂರರಸರ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿಹ ಬೆಟ್ಟ ಹಾಗೂ ಸನಿಹದಲ್ಲೇ ಇರುವ ಜಗದ್ವಿಖ್ಯಾತ ಕೆ.ಆರ್.ಎಸ್. ಹಾಗೂ ಬೃಂದಾವನ ಗಾರ್ಡನ್‌ನಿಂದ ಪ್ರವಾಸಿಗರ ಸ್ವರ್ಗ ಎನಿಸಿದೆ. ಇದಕ್ಕೆ ತಂಪಾದ ಮೈಸೂರು ಹವೆಯೂ ಪುಷ್ಟಿ ನೀಡಿದೆ.

ದಕ್ಷಿಣ ಭಾರತದ ಇತಿಹಾಸದಲ್ಲಿ ಮೈಸೂರಿಗೆ ವಿಶಿಷ್ಠ ಸ್ಥಾನವಿದೆ. ಮೈಸೂರು ದಸರ ವಿಶ್ವ ವಿಖ್ಯಾತವಾಗಿದೆ. ವಿಜಯನಗರದರಸರು, ಮೈಸೂರು ಒಡೆಯರು, ಟಿಪ್ಪು ಆಳಿದ ಮೈಸೂರಿಗೆ ಇತಿಹಾಸದಲ್ಲೂ ಪ್ರಾಮುಖ್ಯತೆ ಇದೆ. ಪ್ರವಾಸ ದೃಷ್ಟಿಯಿಂದ ಹೇಳುವುದಾದರೆ ಮೈಸೂರು ನೋಡಲೇಬೇಕಾದ ಸ್ಥಳ.

Mysore Palaceಮೈಸೂರು ಅರಮನೆ: ಇಂಡೋ ಸಾರ್‌ಸಾನಿಕ್ ಶೈಲಿಯಲ್ಲಿ 1897-1912ರ ಅವಧಿಯಲ್ಲಿ ನಿರ್ಮಾಣವಾದ ಭವ್ಯವಾದ ಅರಮನೆ ಮೈಸೂರಿನ ಪ್ರಧಾನ ಆಕರ್ಷಣೆಗಳಲ್ಲಿ ಮೊದಲನೆಯದು. ಮೈಸೂರಿಗೆ ಅರಮನೆಗಳ ನಗರಿ ಎಂದು ಹೆಸರು ಬರಲು ಮೂರು ಅಂತಸ್ತಿನ ಈ ಭವ್ಯ ಸೌಧದ ಕೊಡುಗೆ ಅಪಾರ. ಚಚ್ಚೌಕದ ಕಂಬಗಳು, ಮೇಲೆ ಸುಂದರ ವಿನ್ಯಾಸದ ಗೋಪುರ, ವಿಶಾಲವಾದ ಮೈದಾನ, ಸುಂದರ ಹಾಗೂ ಮನಮೋಹಕ ಶಿಲ್ಪಗಳಿಂದ, ನುಣುಪಾದ ನೆಲಹಾಸು, ಗಾಜಿನ ಅಲಂಕಾರಿಕ ವಿನ್ಯಾಸದಿಂದ ಕೂಡಿದ ದರ್ಬಾರ್ ಹಾಲ್, ಅರಮನೆಯ ಸುತ್ತ ಇರುವ ಸಿಂಹ ಲಾಂಛನಗಳು, ಸುಂದರ ಶಿಲ್ಪದ ಪ್ರವೇಶದ್ವಾರದ ನೋಟವೇ ಒಂದು ಸೊಬಗು. ಈ ಸೊಬಗು, ದಸರೆಯ ಕಾಲದಲ್ಲಿ, ಸರ್ಕಾರಿ ರಜಾದಿನಗಳಂದು ಹಾಗೂ ಭಾನುವಾರ ಸಂಜೆ 7ರಿಂದ 8 ಗಂಟೆ ಅವಧಿಯಲ್ಲಿ ನೂರ್ಮಡಿಯಾಗುತ್ತದೆ. ಆಗ ಮೈಸೂರು ಅರಮನೆಯ 97ಸಾವಿರಕ್ಕೂ ಹೆಚ್ಚು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ಅಂದ ಹಾಗೆ ಮೈಸೂರು ಅರಮನೆಯ ವೀಕ್ಷಣೆಗೆ ಅವಕಾಶವುಂಟು. ಇದಕ್ಕೆ ಪ್ರವೇಶದರವೂ ಇದೆ.

Mahishasura , chamundi hillsಚಾಮುಂಡಿ ಬೆಟ್ಟ: ಮೈಸೂರು ಒಡೆಯರ ಅಧಿದೇವತೆ ಚಾಮುಂಡೇಶ್ವರಿ. ತಾಯಿ ಚಾಮುಂಡಿ ನೆಲೆಸಿಹ ಬೆಟ್ಟ ಚಾಮುಂಡಿ ಬೆಟ್ಟ ಎಂದೇ ಹೆಸರಾಗಿದೆ. ಮೈಸೂರಿನಿಂದ 13 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ವಾಹನ ಸೌಕರ್ಯವಿದೆ. ಜೊತೆಗೆ ಊರಿನಿಂದ ನಡೆದು ಹೋಗಲು ಒಡೆಯರು ನಿರ್ಮಿಸಿದ 1000 ಮೆಟ್ಟಿಲುಗಳೂ ಇವೆ. ಇಲ್ಲಿ 11ನೆ ಶತಮಾನದಲ್ಲೇ ದೇವಾಲಯವಿತ್ತು. ಬೆಟ್ಟದಲ್ಲಿ ದುರ್ಗೆಯಿಂದ ಹತನಾದ ರಕ್ಕಸ ಮಹಿಷಾಸುರನ ಸುಂದರ ಮೂರ್ತಿಯಿದೆ. ಬೆಟ್ಟ ಇಳಿಯುವ ಹಾದಿಯಲ್ಲಿ 4.8 ಮೀಟರ್ ಎತ್ತರದ ಬೃಹತ್ ನಂದಿಯ ವಿಗ್ರಹವಿದೆ.

ಮೈಸೂರು ಮೃಗಾಲಯ: ಮೈಸೂರಿನ ಆಕರ್ಷಣೆಗಳಲ್ಲಿ ಮತ್ತೊಂದು ಪ್ರಮುಖ ಸ್ಥಳ ಜಯಚಾಮರಾಜೇಂದ್ರ ಮೃಗಾಲಯ, 1892ರಲ್ಲಿ ಸ್ಥಾಪನೆಯಾದ ಈ ಮೃಗಾಲಯದಲ್ಲಿ ಆಫ್ರಿಕಾ ಆನೆ, ಭಾರತೀಯ ಆನೆ, ಸಿಂಹ, ಕರಡಿ, ಹುಲಿ, ಒಂಟೆ, ಹೇಸರಗತ್ತೆ, ಜಿರಾಫೆ, ನೀರಾನೆ, ಖೇಂಡಾಮೃಗ, ಬಿಳಿ ನವಿಲು, ಬಿಳಿ ಕಾಗೆಯೇ ಮೊದಲಾದ ನೂರಾರು ಪ್ರಬೇಧದ ಪ್ರಾಣಿಗಳು, ಪಕ್ಷಿಗಳಿವೆ. ಇಲ್ಲಿರುವ ಹಲವು ಪ್ರಾಣಿಗಳು ಸಂತಾನೋತ್ಪತ್ತಿ ಮಾಡುವುದು ಈ ಮೃಗಾಲಯದ ವಿಶೇಷ.

Jaganmohona Palaceಜಗನ್ಮೋಹನ ಅರಮನೆ: 1861ರಲ್ಲಿ ಕೃಷ್ಣರಾಜ ಒಡೆಯರು ನಿರ್ಮಿಸಿದ ಜಗನ್ಮೋಹನ ಅರಮನೆ ಜಗತ್ತನ್ನೇ ಸನ್ಮೋಹನಗೊಳಿಸುವಂತ ಸುಂದರ ಕಲಾಕೃತಿಗಳಿಂದ ಕೂಡಿದ ಒಂದು ವಸ್ತು ಸಂಗ್ರಹಾಲಯ. ಮೂರು ಅಂಸ್ತುಗಳ ಈ ಭವ್ಯ ಬಂಗಲೆಯಲ್ಲಿ ನೂರಾರು ಕಲಾತ್ಮಕ ಕೃತಿಗಳು, ಸೈನಿಕರು ಪಥಸಂಚಲನ ಮಾಡುವ ಗಂಟೆ ಹೊಡೆಯುವ ಗಡಿಯಾರ, ರಾಜಾ ರವಿವರ್ಮನ ಹಲವಾರು ಕಲಾತ್ಮಕ ತೈಲವರ್ಣಚಿತ್ರಗಳು ಇವೆ.

ಲಲಿತ ಮಹಲ್: ಮೈಸೂರು ಅರಮನೆಯಿಂದ 7 ಕಿ.ಮೀ. ದೂರದಲ್ಲಿರುವ ಲಲಿತ ಮಹಲ್ ಅರಮನೆ ಐರೋಪ್ಯ ಶೈಲಿಯ ಎರಡು ಅಂತಸ್ತಿನ ಭವ್ಯ ಕಟ್ಟಡ. 1931ರಲ್ಲಿ ಒಡೆಯರು ನಿರ್ಮಿಸಿದ ಶ್ವೇತವರ್ಣದ ಈ ಸೌಧ ಹೊರ ದೇಶದಿಂದ ಬರುವ ಅತಿಥಿಗಳ ಬಿಡಾರಕ್ಕಾಗಿಯೇ ನಿರ್ಮಿಸಿದ ಸೌಧ. ಇಂದು ಇದು ಪಾರಂಪರಿಕ ತಾಣದ ಜೊತೆಗೆ ವೈಭವದ ಹೊಟೆಲ್ ಆಗಿದ್ದು ಇಲ್ಲಿ ತಂಗಲೂ ಅವಕಾಶವಿದೆ.

St. philomina Cherchಸೇಂಟ್ ಫಿಲೋಮಿನಾ ಚರ್ಚ್: 175 ಅಡಿ ಎತ್ತರದ ಎರಡು ಸುಂದರ ಗೋಪುರಗಳಿಂದ ಕೂಡಿದ ಸುಂದರ ಚರ್ಚ್. ಇದನ್ನು ಫ್ರೆಂಚ್ ಶಿಲ್ಪಿಗಳು ಸುಂದರವಾಗಿ ವಿನ್ಯಾಸಗೊಳಿಸಿದ್ದು, ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರು ಇದಕ್ಕೆ ಶಿಲಾನ್ಯಾಸ ಮಾಡಿದ್ದರು.

ಇದಲ್ಲದೆ ಮೈಸೂರಿನಲ್ಲಿ ನೋಡಬೇಕಾದ ಹಲವಾರು ತಾಣಗಳಿದ್ದು ಇವುಗಳಲ್ಲಿ ಮೈಸೂರು ವಿಶ್ವವಿದ್ಯಾಲಯ, ವಿ.ವಿ. ಆವರಣದಲ್ಲಿರುವ ಜನಪದ ಸಂಗ್ರಹಾಲಯ, ರೈಲ್ವೆ ಮ್ಯೂಸಿಯಂ, ಕಾರಂಜಿ ಕೆರೆ, ಕುವೆಂಪು ಅವರ ಸೂರ್ತಿ ತಾಣ ಕುಕ್ಕರಹಳ್ಳಿ ಕೆರೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಮುಖಪುಟ /ಪ್ರವಾಸಿತಾಣ