ಮುಖಪುಟ /ಪ್ರವಾಸಿತಾಣ  

ಮಂತ್ರಾಲಯಕೆ ಹೋಗೋಣ.. ಗುರುರಾಯರ ದರುಶನ ಮಾಡೋಣ...
ಪ್ರಹ್ಲಾದರಾಗಿ - ವ್ಯಾಸರಾಜರಾಗಿ ನಂತರ ರಾಘವೇಂದ್ರ ಯತಿರಾಜರಾದ
ಕಲಿಯುಗದ ಕಾಮಧೇನು ಶ್ರೀಗುರುರಾಯರು..

*ಶೋಭಾ ಸತೀಶ್

ಮಂತ್ರಾಲಯದ ಗುರುರಾಘವೇಂದ್ರರಾಯರೇ ನರಸಿಂಹಾವತಾರಕ್ಕೆ ಸಹಕಾರಿಯಾದ ಪ್ರಹ್ಲಾದರು. ಪೂರ್ವದಲ್ಲಿ ಸೃಷ್ಟಿಕರ್ತ ಬ್ರಹ್ಮದೇವನ ದೇವಗಣಗಳಲ್ಲಿ ಶಂಕುಕರ್ಣರಾಗಿದ್ದ ರಾಯರು ಬ್ರಹ್ಮದೇವನ ಶಾಪದಿಂದ ಭಕ್ತಪ್ರಹ್ಲಾದರಾಗಿ ಭೂಲೋಕದಲ್ಲಿ ಹುಟ್ಟಿ, ಲೋಕಕಲ್ಯಾಣದ ಬಳಿಕ ತಮ್ಮ ಮುಂದಿನ ಜನ್ಮದಲ್ಲಿ ವ್ಯಾಸರಾಗಿ ಜನಿಸಿದರು. ವ್ಯಾಸರವತಾರದ ಬಳಿಕ ರಾಘವೇಂದ್ರ ತೀರ್ಥ ಯತಿರಾಜರಾಗಿ ಮಂತ್ರಾಲಯದಲ್ಲಿ ನೆಲೆಸಿ, ತಮ್ಮ ಬಳಿಗೆ ಬರುವ ಭಕ್ತಕೋಟಿಯ ಸಂಕಷ್ಟವನ್ನು ಪರಿಹರಿಸುತಿಹರು. ಅದಕ್ಕೆ ಭಕ್ತರು ರಾಯರನ್ನು ಪ್ರಹ್ಲಾದ - ವ್ಯಾಸಮುನಿಯೇ - ರಾಘವೇಂದ್ರ ಯತಿಯೇ ಎಂದು ಆರಾಧಿಸುವುದು.

ಗುರುರಾಯರು : 16ನೇ ಶತಮಾನದಲ್ಲಿ ತಿಮ್ಮಣ್ಣ ಭಟ್ಟರು ಹಾಗೂ ಗೋಪಮ್ಮ ಎಂಬ ಸಾಧ್ವಿ ದಂಪತಿಗೆ ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಜನಿಸಿದ ಶಿಶುವೇ ಗುರು ರಾಘವೇಂದ್ರ ತೀರ್ಥರು. ರಾಯರ ಪೂರ್ವಾಶ್ರಮದ ಹೆಸರು ವೆಂಕಟನಾಥ ಅಥವಾ ವೀಣಾ ವೆಂಕಣ್ಣಭಟ್ಟ. ಎಲ್ಲ ಮಕ್ಕಳಂತೆ ವೆಂಕಟನಾಥರೂ ತಮ್ಮ ಬಾಲ್ಯವನ್ನು ಕಳೆದರು. ಸಮಗ್ರ ಬ್ರಹ್ಮ ಮೀಮಾಂಸಾ ಶಾಸ್ತ್ರವನ್ನು ಅಭ್ಯಸಿಸಿ ಪ್ರಖಾಂಡ ಪಾಂಡಿತ್ಯ ಗಳಿಸಿದರು. ಶ್ರೀಸುಂದ್ರತೀರ್ಥರಿಂದ ಸರ್ವಜ್ಞಪೀಠವನ್ನು ಅಲಂಕರಿಸಿದ ಬಳಿಕ ಹಗಲಿರುಳು ಸಂಚರಿಸಿ ದೀನದಲಿತರ ಉದ್ಧಾರಕ್ಕೆ ಕಾರಣರಾದರು. ತಮ್ಮ ಅಪೂರ್ವ ತಪೋಬಲದಿಂದ ದೇಹೀ ಎಂದು ಬರುವ ಭಕ್ತರ ಮನೋಕಾಮನೆಯನ್ನು ಈಡೇರಿಸುವ ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರರಾದರು.

ರಾಯರು ಕೇವಲ ಯತಿಗಳಷ್ಟೇ ಅಲ್ಲ. ಸಾಹಿತ್ಯ ಸರಸ್ವತಿ ಮತ್ತು ಸಂಗೀತ ಸರಸ್ವತಿಯ ವರಪುತ್ರರು. ಸಂಸ್ಕೃತದಲ್ಲಿ ಪರಿಮಳ , ನ್ಯಾಯಮುಕ್ತಾವಳಿ , ತತ್ವಮಂಜಿರಿ, ಸೂತ್ರಭಾಷ್ಯ, ಭಾರದೀಪ, ತಾತ್ಪರ್ಯ ನಿರ್ಣಯವೇ ಮುಂತಾದ ಅಮೂಲ್ಯ ಕೃತಿಗಳನ್ನು ಬರೆದಿರುವ ಗುರು ರಾಘವೇಂದ್ರ ತೀರ್ಥರು ಮಹಾಭಾರತವೇ ಮೊದಲಾದ ಕೃತಿಗಳಿಗೆ ಅರ್ಥವಿವರಣೆ ಹಾಗೂ ಭಾಷ್ಯಗಳನ್ನೂ ಬರೆದಿದ್ದಾರೆ. ಗುರುರಾಯರು ಕನ್ನಡದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ಆದರೆ, ಈವರೆಗೆ ದೊರೆತಿರುವುದು ಇಂದು ಎನಗೆ ಗೋವಿಂದ..... ಎಂಬ ಕೃತಿ ರತ್ನ ಮಾತ್ರ.

ಆರಾಧನೆ: ಪ್ರತಿವರ್ಷ ಶ್ರಾವಣ ಮಾಸದಲ್ಲಿ ಗುರುರಾಯರ ಆರಾಧನೆ ನಡೆಯುತ್ತದೆ. ಗುರುರಾಯರು ಸಶರೀರಿಗಳಾಗಿ ಬೃಂದಾವನಸ್ಥರಾದ ದಿನವನ್ನು ಭಕ್ತರು, ಗುರುರಾಯರ ಆರಾಧನೆ ಎಂದು ಆಚರಿಸುತ್ತಾರೆ. ಈ ಆರಾಧನೆ ಮೂರು ದಿನಗಳ ಕಾಲ ನಡೆಯುತ್ತದೆ. ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಎಂದು ಎಂದು ಆಚರಿಸಲಾಗುವ ಈ ಮೂರೂ ದಿನಗಳಂದು, ದೇಶಾದ್ಯಂತ ಇರುವ ಎಲ್ಲ ರಾಯರ ಮಠದಲ್ಲಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಗುರುರಾಘವೇಂದ್ರರ ವೈಭವ, ರಾಯರ ಚರಿತ್ರೆಯ ಪಠಣ, ರಾಯರ ಪವಾಡಗಳ ಪ್ರವಚನ ನಡೆಯುತ್ತದೆ. ಮೂರೂ ದಿನವೂ ಅನ್ನ ಸಂತರ್ಪಣೆ ಜರುಗುತ್ತದೆ.

ಮಂತ್ರಾಲಯ ಶ್ರೀಗಳ ಮೂಲ ಬೃಂದಾವನ, Mantralaya Brindavana, Sri Raghavendra swamiji, Andhrapradesh, Manchale, kannadaratna.com, Turuvekere satish, T.M.Satishಗುರುರಾಯರು ಸಶರೀರದೊಂದಿಗೆ ಬೃಂದಾವನಸ್ಥರಾಗಿ 344 ವರ್ಷಗಳು ಉರುಳಿವೆ. ಆದರೆ, ಕಲಿಯುಗದ ಕಾಮಧೇನು ಗುರುರಾಯರು ಬೃಂದಾವನದಲ್ಲಿಯೇ ಇನ್ನೂ 356 ವರ್ಷಗಳ ಕಾಲ ಇದ್ದು, ಸರ್ವರನ್ನೂ ಸಲಹುತ್ತಾರೆ ಎಂಬ ನಂಬಿಕೆ ಭಕ್ತರದು. ರಾಯರು ಬೃಂದಾವನ ಪ್ರವೇಶಿಸುವ ಮೊದಲು ತಾವು ಒಟ್ಟು 7೦೦ ವರ್ಷಗಳ ಕಾಲ ಸಶರೀರದೊಂದಿಗೆ ಬೃಂದಾವನದಲ್ಲಿದ್ದು, ಭಕ್ತರ ಸಂಕಷ್ಟ ಪರಿಹರಿಸುವುದಾಗಿ ವಚನವಿತ್ತಿದ್ದರಂತೆ.

ಆದರಂತೆಯೇ ರಾಯರು ಭಕ್ತರನ್ನು ಕಾಪಾಡುತ್ತಿದ್ದಾರೆ. ಅವರು ಇನ್ನೂ ಬೃಂದಾವನದಲ್ಲೇ ಇದ್ದಾರೆ ಎಂಬುದಕ್ಕೆ ಕೆಲವು ದುಷ್ಟಾಂತಗಳೂ ಇವೆ. ರಾಯರು ಬೃಂದಾವನಸ್ಥರಾದ 2೦೦ ವರ್ಷಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಉದಾಹರಣೆಗಳೂ ಉಂಟು. ಈಗ್ಗೆ ಒಂದೂವರೆ ದಶಕಗಳ ಬ್ರಿಟಿಷ್ ಚಕ್ರಾಪತ್ಯದ ಕಲೆಕ್ಟರಾಗಿದ್ದ, ಸರ್ ಥಾಮಸ್ ಮನ್ರೋ ಅವರಿಗೆ ರಾಯರು ದರ್ಶನನೀಡಿದ್ದರು ಎನ್ನುತ್ತದೆ ಇತಿಹಾಸ. ರಾಯರು ಇನ್ನೂ ಸಶರಿರೀಗಳಾಗಿ ಬೃಂದಾವನದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ.

ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿನ ತುಂಗಭದ್ರ ತಟದಲ್ಲಿ ಉತ್ತರ ಭಾರತದ ಕುಂಭ ಮೇಳ ಮಾದರಿಯಲ್ಲಿ ಪುಷ್ಕರ ಉತ್ಸವ ನಡೆಯುತ್ತದೆ. 

ಕಲಿಯುಗದ ಕಾಮಧೇನು ಗುರುರಾಯರು ನೆಲೆಸಿಹ ಮಂತ್ರಾಲಯ
 

ಮುಖಪುಟ /ಪ್ರವಾಸಿತಾಣ