ಮುಖಪುಟ /ಪ್ರವಾಸಿತಾಣ  

ಜೋಗದ ಸಿರಿಬೆಳಕಿನಲ್ಲಿ
ರಾಜಾ
, ರೋರರ್, ರಾಣಿ, ರಾಕೆಟ್ ಚೆಲುವನ್ನು ಕಾಣಲು ಬರುವಿರಲ್ಲವೇ...?

*ಟಿ.ಎಂ. ಸತೀಶ್

Jog fallsಕವಿ ನಿಸಾರ್ ಅಹ್ಮದ್, ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗವನ್ನು ತಮ್ಮ ಕಾವ್ಯದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ನಿತ್ಯೋತ್ಸವ ಧ್ವನಿಸುರುಳಿಯ ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ... ಗೀತೆ ಕರುನಾಡ ಹೆಮ್ಮೆಯ ಜೋಗದ ರಮಣೀಯತೆಯನ್ನು ವೈಭವವನ್ನು, ಸೌಂದರ್ಯವನ್ನು ಕನ್ನಡಿಗರ ಹೃನ್ಮನಗಳಲ್ಲಿ ಮೂಡಿಸುತ್ತದೆ.

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯದ್ರಲ್ಲಿ ಒಮ್ಮೆ ನೋಡು ಜೋಗದ ಗುಂಡಿ ಎಂಬ ನಟ ಗಾಯಕ ಡಾ. ರಾಜ್ ಹಾಡಿದ ಗೀತೆ ಪ್ರತಿಯೊಬ್ಬ ಕನ್ನಡಿಗನೂ ಜೋಗವನ್ನು ತಪ್ಪದೆ ನೋಡಲೇಬೇಕು ಎಂದು ತಾಕೀತು ಮಾಡುತ್ತದೆ. ಹೌದು ಜೋಗದಲ್ಲೇನು ಅಂಥ ವಿಶೇಷ?

ಜೋಗ ಜಲಪಾತ ಪಶ್ಚಿಮಘಟ್ಟದ ರುದ್ರ ರಮಣೀಯ ಪ್ರಕೃತಿಯ ಸಿರಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿರುವ ರಮ್ಯತಾಣ. ೭೩೦ ಮೀಟರ್ ಎತ್ತರದ ಅಂಬುತೀರ್ಥದಲ್ಲಿ ಹುಟ್ಟಿ ಮೈದುಂಬಿ ಹರಿವ ಕನ್ನಡ ನಾಡ ಭಾಗೀರಥಿ ಎಂದೇ ಖ್ಯಾತವಾದ ಶರಾವತಿ ನದಿ ಗಿರಿಶಿಖರಗಳ ನಡುವೆ ಹೊಸನಗರ ಮೂಲಕ ಸಾಗಿ ೮೦ನೇ ಕಿ.ಮೀ. ತಿರುವಿನಲ್ಲಿ ೨೯೨ ಮೀಟರ್ ಪ್ರಪಾತಕ್ಕೆ ಧುಮ್ಮಿಕ್ಕುವ ನೋಟ ನಯನ ಮನೋಹರ. ರಾಜ ಗಾಂಭೀರ್ಯದಿಂದ ಪ್ರಪಾತಕ್ಕೆ ಜಿಗಿಯುವ ರಾಜ, ಒಮ್ಮೆ ನೋಡಿದರೆ ಸಾಲದು ಎಂಬ ಭಾವನೆ ಮೂಡಿಸುತ್ತ ಭೋರ್ಗರೆದು ಧುಮ್ಮಿಕ್ಕುವ ರೋರರ್, ಬಳ್ಳಿಯಂತೆ ಬಳುಕುತ್ತಾ ತನ್ನ ಚೆಲುವಿಂದ ಆಕರ್ಷಿಸುವ ರಾಣಿ, ಸ್ಪುಟ್ನಿಕ್‌ನಂತೆ ಶರವೇಗದಲ್ಲಿ ಧರೆಮುಟ್ಟುವ ರಾಕೆಟ್ ಎಂಬ ನಾಲ್ಕು ಕವಲುಗಳ ಸೌಂದರ್ಯ ವರ್ಣನಾತೀತ. ಹೀಗಾಗೇ ಜೋಗ ಜಲಪಾತಗಳ ರಾಜ. ಈ ಸುಂದರ ತಾಣದಲ್ಲಿ ಪ್ರತಿವರ್ಷ ಜೂನ್ ತಿಂಗಳಿನಿಂದ ಅಕ್ಟೋಬರ್‌ವರೆಗೆ ೩೦೦೦ ಮಿ.ಮೀಟರ್‌ನಷ್ಟು ಮಳೆ ಆಗುತ್ತದೆ. ಯಥೇಚ್ಛವಾದ ನೀರಿನ ಹರಿವಿನಿಂದ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಮಳೆಗಾಲದಲ್ಲಿ ಧುಮ್ಮಿಕ್ಕುವ ಶರಾವತಿಯ ಮನಮೋಹಕ ದೃಶ್ಯವನ್ನು ನೋಡುವುದೇ ಒಂದು ಸೊಬಗು. ಸುರಿಯುವ ಮಳೆಯ ನಡುವೆ ಕೊಡೆ ಹಿಡಿದು ಜೋಗದ ರುದ್ರ ನರ್ತನ ನೋಡುವಾಗ ಸಿಗುವ ಅಮಿತಾನಂದ ಊಹಿಸಲಸಾಧ್ಯ. ವರ್ಣಿಸಲಸದಳ.

ವಿಶ್ವೇಶ್ವರಯ್ಯನವರ ಕೊಡುಗೆ: ಒಂದು ಕಾಲದಲ್ಲಿ ಕಾಡಾನೆಗಳಿಂದ ಕೂಡಿ ಕಾಲಿಡಲೂ ಜನ ಹೆದರುತ್ತಿದ್ದ ದುರ್ಗಮ ಅರಣ್ಯ ಇಂದು ಲಕ್ಷಾಂತರ ಪ್ರವಾಸಿಗರನ್ನು ಕೈಬೀಸಿ ಕರೆವ ವಿಶ್ವಖ್ಯಾತ ಜೋಗವಾಗಲು ಸರ್.ಎಂ. ವಿಶ್ವೇಶ್ವರಯ್ಯನವರೇ ಕಾರಣ.

ಈ ಪ್ರದೇಶಕ್ಕೆ ಒಮ್ಮೆ ಭೇಟಿಕೊಟ್ಟ ಸರ್.ಎಂ.ವಿ. ಅಯ್ಯೋ ಎಷ್ಟೊಂದು ವ್ಯರ್ಥ, ತುಂಬಲಾರದ ನಷ್ಟ ಎಂದು ಉದ್ಗರಿಸಿ, ವ್ಯಥೆಪಟ್ಟರು. ಇಂಥ ಸೌಂದರ್ಯವನ್ನು ಆಸ್ವಾದಿಸದೆ ವ್ಯಥೆ ಪಟ್ಟ ಸರ್.ಎಂ.ವಿ. ಯತ್ತ ಜೊತೆಯಲಿದ್ದವರು ಕಣ್ಣು ನೆಟ್ಟರು. ಆಗ ಸರ್.ಎಂ.ವಿ. ಇಂತಹ ಪ್ರಕೃತಿ ದತ್ತ ಅಗಾಧ ಸಂಪತ್ತು ವ್ಯರ್ಥವಾಗಿ ಹಾಳಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಅಂಬುತೀರ್ಥದಿಂದ ಅರಬ್ಬಿಸಮುದ್ರದವರೆಗೆ ೧೩ ಜಲಪಾತಗಳನ್ನು ಸೃಷ್ಟಿಸುವ ಶರಾವತಿಗೆ ಅಡ್ಡಲಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಿಸಲಾಗಿದ್ದು, ಇದು ಪ್ರಮುಖ ಜಲವಿದ್ಯುತ್ ಸ್ಥಾವರಗಳಲ್ಲಿ ಒಂದಾಗಿದೆ. ಈ ಘಟಕ ಸ್ಥಾಪನೆಯಾದದ್ದು ೧೯೪೯ರಲ್ಲಿ. ೧೨೦೦ ಮೆಗಾ ವ್ಯಾಟ್ ಸಾಮರ್ಥ್ಯದ ಇದು ಅತಿ ಹೆಚ್ಚು ಜಲವಿದ್ಯುತ್ ಉತ್ಪಾದಿಸುವ ದೇಶದ ಸ್ಥಾವರಗಳಲ್ಲಿ ಒಂದೆನಿಸಿದೆ. ಶರಾವತಿಯ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುತ್ತಿರುವ ಕಾರಣ, ಜಲಪಾತಕ್ಕೆ ಹರಿದು ಬರುವ ನೀರಿನ ಪ್ರಮಾಣ ಸಹಜವಾಗೇ ಕಡಿಮೆಯಾಗಿದೆ. ಕಳೆದ ವರ್ಷ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಜಲಪಾತಕ್ಕೆ ೨೦೦ಕ್ಯೂಸೆಕ್ಸ್ ನೀರು ಬಿಡಬೇಕೆಂಬ ನಿರ್ಧಾರವಾಗಿತ್ತು. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ. ಜೋಗ ಎಷ್ಟು ಖ್ಯಾತಿಯೋ ಇಲ್ಲಿನ ಪ್ರವಾಸಿ ಸೌಲಭ್ಯ ಅಷ್ಟೇ ಕುಖ್ಯಾತ. ಈ ರಮ್ಯತಾಣ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ ಎಂಬುದು ಪ್ರವಾಸಿಗರ ಅನಿಸಿಕೆ. ಆ ಆಪಾದನೆಗಳೂ ಸರ್ಕಾರದ ಕಿವಿಗೂ ಮುಟ್ಟಿವೆ. ಹೀಗಾಗಿ ವರ್ಷದ ೩೬೫ ದಿನವೂ ನೀರು ಧುಮ್ಮಿಕ್ಕುವಂತೆ ಮಾಡುವ ಮೂಲಕ ಜೋಗದ ಖ್ಯಾತಿಯನ್ನು ಉಳಿಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಕಳೆದ ೧೬ ವರ್ಷಗಳವರೆಗೆ ಲೋಕೋಪಯೋಗಿ ಹಾಗೂ ವಿದ್ಯುತ್ ಕಂಪನಿ ಆಡಳಿತಕ್ಕೊಳಪಟ್ಟಿದ್ದ ಜೋಗ ಈಗ ಜೋಗ ಅಭಿವೃದ್ಧಿಪ್ರಾಧಿಕಾರದ ವ್ಯಾಪ್ತಿಯಲ್ಲಿದೆ. ಜಲಪಾತದ ಅಕ್ಕಪಕ್ಕದಲ್ಲಿ ಕೆ.ಆರ್.ಎಸ್. ಪಕ್ಕದ ಬೃಂದಾವನ ಉದ್ಯಾನ ಮಾದರಿಯಲ್ಲಿ ಉದ್ಯಾನವನ, ದೋಣಿ ವಿಹಾರ ಕೇಂದ್ರ, ಈಜುಕೊಳ, ವನ್ಯಜೀವಿ ಧಾಮ, ಪಕ್ಷಿ ಧಾಮಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯೂ ಇದೆ.ಅದು ಆದಷ್ಟು ಬೇಗ ಕೈಗೂಡಲಿ ಎಂದು ಹಾರೈಸೋಣ.

ಜೋಗಕ್ಕೆ ಹೋಗುವುದು ಹೇಗೆ ?

ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಜೋಗ್ ಜಲಪಾತಕ್ಕೆ ೩೭೯ಕಿ.ಮೀ. ಶಿವಮೊಗ್ಗದಿಂದ ಜೋಗಕ್ಕೆ ಕೇವಲ ೧೦೫ ಕಿ.ಮೀ. ಸಾಗರದಿಂದ ೩೨ ಕಿ.ಮೀ. ರಾಜ ಪ್ರವಾಸೋದ್ಯಮ ಇಲಾಖೆಯ ಪ್ರವಾಸ ಸೇವೆಯೂ ಇದೆ. ಜೊತೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಕರ್ಯವೂ ಇಲ್ಲಿಗುಂಟು. 

ಪ್ರವಾಸ ಮಾಹಿತಿ:  ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in ಸಂಪರ್ಕಿಸಬಹುದು.

ಮುಖಪುಟ /ಪ್ರವಾಸಿತಾಣ