ಮುಖಪುಟ /ಪ್ರವಾಸಿತಾಣ    

ನಂದನವನವೀ ಬ್ಯೂಗಲ್ ರಾಕ್
ದೊಡ್ಡಬಸವನ ಗುಡಿಗೆ ಕಳೆತಂದ ಪಾರ್ಕ್

*ಟಿ.ಎಂ.ಸತೀಶ್  

ರಂಗು ರಂಗಿನ ನೀರನು ಚುಮ್ಮುತ, ಸಂಗೀತದ ತಾಳಕ್ಕೆ ತಕ್ಕಂತೆ ನರ್ತಿಸುವ ಸಂಗೀತ ಕಾರಂಜಿಯ ಕಾಣಲು ಮೈಸೂರು ಬಳಿಯ ಬೃಂದಾವನ ಗಾರ್ಡನ್ಸ್‌ಗೆ ಹೋಗುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರೂ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್.ನಲ್ಲಿ ಈ ಸೊಬಗು ಸವಿಯುತ್ತಾರೆ.

ಬೆಂಗಳೂರು ನಿವಾಸಿಗಳು ಕೂಡ ಇಷ್ಟು ದಿನ ಸಂಗೀತ ಕಾರಂಜಿಯ ಕಾಣಲು ಮೈಸೂರಿಗೆ ಹೋಗುತ್ತಿದ್ದರು. ಈಗ ಬೆಂಗಳೂರಿಗೇ ಸಂಗೀತ ಕಾರಂಜಿಗಳು ಬಂದಿವೆ. ಉದ್ಯಾನ ನಗರವಾಸಿಗಳಿಗೆ ಉದ್ಯಾನದಲ್ಲೇ ಉಚಿತವಾಗಿ ಈ ರಸದೌತಣ ನೀಡುತ್ತಿವೆ.

ಬೆಂಗಳೂರಿನ ಮಾಜಿ ಮೇಯರ್ ಹಾಲಿ ಶಾಸಕ ಚಂದ್ರಶೇಖರ್ ಹನುಮಂತನಗರದಲ್ಲಿ ತಿಮ್ಮೇಶಪ್ರಭು ಉದ್ಯಾನದಲ್ಲಿ ಮೊದಲಿಗೆ ಈ ಸಂಗೀತ ಕಾರಂಜಿಯನ್ನು ಮಾಡಿದ್ದಾರೆ. ಪ್ರತಿ ಭಾನುವಾರ ಬೆಂಗಳೂರಿನ ಮೂಲೆ ಮೂಲೆಯಿಂದ ಅಷ್ಟೇಕೆ ನೆರೆಯೂರಿನಿಂದಲೂ ಜನ ತಂಡೋಪತಂಡವಾಗಿ ಆಗಮಿಸಿ ಈ ಆನಂದ ಸವಿಯುತ್ತಿದ್ದಾರೆ. ಈಗ ಈ ಉದ್ಯಾನಕ್ಕೆ ಸನಿಹದಲ್ಲೇ ಇರುವ ಕಹಳೆ ಬಂಡೆ ಅರ್ಥಾತ್ ಬ್ಯೂಗಲ್‌ರಾಕ್‌ನಲ್ಲಿಯೂ ಈ ಅವಕಾಶ ಉಂಟು. ಬ್ಯೂಗಲ್‌ರಾಕ್ ಎಂದೊಡನೆ ನೆನಪಾಗುವುದು ಕಡಲೆಕಾಯಿ ಪರಿಷೆಯ ದೊಡ್ಡ ಬಸವಣ್ಣ, ಬೆಣ್ಣೆ ಅಲಂಕಾರದಿಂದ ಕಂಗೊಳಿಸುವ ದೊಡ್ಡ ಗಣಪನ ದೇಗುಲ. ಈ ದೇಗುಲದ ಹಿಂದೆ ಹಲವು ನೈಸರ್ಗಿಕ ಬಂಡೆಗಳ ಸುತ್ತ ಆಳೆತ್ತರ ಬೆಳೆದ ಮರ ಗಿಡ. ಹಚ್ಚ ಹಸುರಿನಿಂದ ಕೂಡಿದ ಉದ್ಯಾನ.

ಈ ಉದ್ಯಾನ ಒಂದು ಕಾಲದಲ್ಲಿ ಉಚ್ಛ್ರಾಯದಲ್ಲಿತ್ತು. ವಿರಕ್ತ ರಾಷ್ಟ್ರಕ ಡಿ.ವಿ.ಗುಂಡಪ್ಪ (ಡಿವಿಜಿ) ಮೊದಲಾದ ಸಾಹಿತ್ಯ ಶ್ರೇಷ್ಠರಿಗೆ ಸ್ಫೂರ್ತಿಯ ತಾಣವೂ ಆಗಿತ್ತು. ಇಷ್ಟು ಐತಿಹಾಸಿಕ ಮಹತ್ವದ ಉದ್ಯಾನ, ಬಹುಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಅನೈತಿಕ ವ್ಯವಹಾರಗಳ ತಾಣವಾಗಿತ್ತು. ಆದರೀಗ ಹೊಸ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿದೆ. ಹಚ್ಚ ಹಸುರಿನಿಂದ, ಝಗಮಗಿಸುವ ಬೆಳಕಿಂದ ಕಂಗೊಳಿಸುತ್ತಿದೆ. ನಂದನವನವನ್ನೂ ನಾಚಿಸುವಂತೆ ನಳನಳಿಸುತ್ತಿದೆ. ಈ ಸಾಧನೆಯ ಹಿಂದೆ ಇದೇ ವಾರ್ಡ್‌ನ ನಗರಪಾಲಿಕೆ ಸದಸ್ಯ ಕಟ್ಟೆಬಳಗದ ಸತ್ಯನಾರಾಯಣ್ ಶ್ರಮವಿದೆ. ಕೋಟಿ ರುಪಾಯಿ ವೆಚ್ಚದಲ್ಲಿ ಈ ಉದ್ಯಾನವನ್ನೀಗ ಅಭಿವೃದ್ಧಿಗೊಳಿಸಲಾಗಿದೆ.

ಹಗಲು ಹೊತ್ತಿನಲ್ಲೇ ಇಲ್ಲಿಗೆ ಬರಲು ಹಿಂಜರಿಯುತ್ತಿದ್ದ ಜನ ಈಗ ಈಗ ರಾತ್ರಿ ಹತ್ತರವರೆಗೂ ಈ ಉದ್ಯಾನದಲ್ಲಿ ವಾಯು ವಿಹಾರದಲ್ಲಿ ತೊಡಗುತ್ತಾರೆ. ಉದ್ಯಾನದ ಸ್ವರೂಪವೇ ಈಗ ಬದಲಾಗಿದೆ.  

ಉದ್ಯಾನದ ಒಳಭಾಗದಲ್ಲಿರುವ ೯೦ ವರ್ಷಗಳಷ್ಟು ಹಳೆಯದಾದ ನೀರಿನ ಟ್ಯಾಂಕ್‌ನ್ನು ನವೀಕರಿಸಲಾಗಿದೆ. ಟ್ಯಾಂಕ್‌ನ ಹೊರಗೋಡೆಯ ಸುತ್ತ ಫೈಬರ್‌ನೆರವಿನಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಉಬ್ಬು ಚಿತ್ರಗಳನ್ನು ನಿರ್ಮಿಸಲಾಗಿದೆ. ಟ್ಯಾಂಕ್ ಪಕ್ಕದಲ್ಲಿ ಮಂಕುತಿಮ್ಮನ ಕಗ್ಗದ ಖ್ಯಾತಿಯ ಡಿ.ವಿ.ಜಿ. ಅವರ ಪುತ್ಥಳಿ ಸ್ಥಾಪಿಸಲಾಗಿದೆ. ಪಕ್ಕದಲ್ಲೇ ಸುಂದರ ವೇದಿಕೆಯುಳ್ಳ ಬಯಲು ರಂಗ ಮಂದಿರವನ್ನೇ ನಿರ್ಮಿಸಲಾಗಿದೆ.

ಉದ್ಯಾನದ ದ್ವಾರವನ್ನು ವಿಶೇಷವಾಗಿ ಸಿಂಗರಿಸಲಾಗಿದೆ. ಸನ್ನಿ ರಸ್ತೆಯ ದ್ವಾರ ಫೈಬರ್ ಗ್ಲಾಸ್‌ನ ಕಲ್ಲುಬಂಡೆಗಳ ಜೋಡಣೆಯಿಂದ ಕಂಗೊಳಿಸುತ್ತಿದ್ದರೆ, ಗಣೇಶನ ಗುಡಿಯ ಪಕ್ಕದಲ್ಲಿ ಬಸವಣ್ಣನ ಕೊಂಬಿನಾಕಾರದ ದ್ವಾರ ಗಮನ ಸೆಳೆಯುತ್ತದೆ. ಉದ್ಯಾನಕ್ಕೆ ಒಟ್ಟು ಐದು ದ್ವಾರಗಳಿದ್ದು, ಬಸವನಗುಡಿ ಅಭಿವೃದ್ಧಿಗೆ, ಖ್ಯಾತಿಗೆ ಕಾರಣರಾದ ಟಿ.ಆರ್.ಶಾಮಣ್ಣ, ಬೆಳ್ಳಾವೆ ವೆಂಕಟನಾರಾಯಣಪ್ಪ, ಟಿ.ಪಿ.ಕೈಲಾಸಂ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿಡಲಾಗಿದೆ.

ಬಸವಣ್ಣನ ಗುಡಿಯ ಮುಂದಿನ ದ್ವಾರಕ್ಕೆ ಬಸವದ್ವಾರವೆಂದೇ ನಾಮಕರಣ ಮಾಡಲಾಗಿದೆ. ಬಣ್ಣ ಬಣ್ಣದ ನೀರಿನ ಕಾರಂಜಿ, ಸಂಗೀತ ಕಾರಂಜಿ ನಿರ್ಮಿಸಿ ಉದ್ಯಾನಕ್ಕೆ ಹೊಸ ಕಳೆ ನೀಡಲಾಗಿದೆ. ಬಹುವರ್ಷಗಳಿಂದ ಉದ್ಯಾನದಲ್ಲಿರುವ ಬಂಡೆಯ ಮೇಲಿನ ಗೋಪುರ ಸುಣ್ಣ ಬಣ್ಣಗಳಿಂದ ರಂಗಾಗಿದೆ. ಪಕ್ಕದಲ್ಲೊಂದು ಕೃತಕ ಕೊಳ ನಿರ್ಮಿಸಲಾಗಿದ್ದು, ಈ ಕೊಳ ತುಂಬಿದಾಗ ಆಳೆತ್ತರದಿಂದ ಧುಮ್ಮಿಕ್ಕುವ ನೀರು ಕೃತಕ ಜಲಪಾತವನ್ನೇ ಸೃಷ್ಟಿಸಿದೆ. ಉದ್ಯಾನದಲ್ಲಿ ನೀರಿನ ಕೊರತೆ ಬಾರದಿರಲೆಂದು ಮಳೆಯ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಆಬಾಲ ವೃದ್ಧರಾದಿಯಾಗಿ ಎಲ್ಲ ವರ್ಗದವರನ್ನೂ ಆಕರ್ಷಿಸುವಲ್ಲಿ ಈ ಉದ್ಯಾನ ಯಶಸ್ವಿಯಾಗಿದೆ.

ಮಕ್ಕಳಿಗೆ ಆಟವಾಡಲು ವಿವಿಧ ಆಟಿಕೆಗಳು, ಜಾರುವ ಬಂಡೆ, ಏತಪೋತ, ಉಯ್ಯಾಲೆ... ಒಂದೇ ಎರಡೇ.. ವಯೋವೃದ್ಧರಿಗೆ ಸಂಜೆಯ ಹೊತ್ತಿನಲ್ಲೂ ನಿರಾತಂಕವಾಗಿ ವಾಯುವಿಹಾರ ನಡೆಸಲು ಸಮತಟ್ಟಾದ ಪಾದಚಾರಿ ರಸ್ತೆ, ಬೆಳದಿಂಗಳೋಪಾದಿಯ ಹಾಲು ಬೆಳಕು ಉದ್ಯಾನದ ಅಂದವನ್ನು ಹೆಚ್ಚಿಸಿದೆ.

ಈಗೇನೋ ಉದ್ಯಾನ ಸುಂದರವಾಗಿದೆ. ಮುಂದೆಯೂ ಇದರ ಅಂದ ಹೀಗೇ ಇರುತ್ತದೆಯೇ? ಇಷ್ಟು ಸುಂದರ ಉದ್ಯಾನದ ನಿರ್ವಹಣೆ ಎಂತು?ಎಂಬ ಪ್ರಶ್ನೆ ಎದುರಾಗದಿರದು. ಇದಕ್ಕೂ ವ್ಯವಸ್ಥೆ ಮಾಡಲಾಗಿದೆ. ಖಾಸಗಿಯವರ ನೆರವಿನಿಂದ ಉದ್ಯಾನದ ನಿರ್ವಹಣೆಗೆ ಒತ್ತು ನೀಡಲಾಗಿದೆ. ಉದ್ಯಾನದ ಸ್ವಚ್ಛತೆ ಕಾಪಾಡಲು ಒಂದು ಕಾರ್ಯಪಡೆಯನ್ನೇ ರಚಿಸಲಾಗಿದೆ. ಉದ್ಯಾನಕ್ಕೆ ಬರುವವರಿಗಾಗಿಯೇ ಬಯಲು ರಂಗ ಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲೂ ವ್ಯವಸ್ಥೆ ಮಾಡಲಾಗಿದೆ.  

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಮುಖಪುಟ /ಪ್ರವಾಸಿತಾಣ