ಮುಖಪುಟ /ಪ್ರವಾಸಿತಾಣ   

ಅರಬ್ಬೀ ಹಿಂದೂ ಸಂಸ್ಕೃತಿಗಳ ಸಮ್ಮಿಲನ
ಪಿಸುಮಾತನ್ನೂ ಮಾರ್ದನಿಸುವ ಗೋಳ ಗೊಮ್ಮಟ...

*ಟಿ.ಎಂ.ಸತೀಶ್

Bijapura Gol gumbazಅರಬ್ಬೀ ಮತ್ತು ಹಿಂದೂ ಸಂಸ್ಕೃತಿಗಳು ಪರಸ್ಪರ ಮೇಳೈಸಿದ ನಾಡು ಬಿಜಾಪುರ. ಆದಿಲ್‌ಶಾಹಿ ಸಂಸ್ಥಾನದ ರಾಜಧಾನಿಯಾಗಿ (1489-1686) ಮೆರೆದ ನಾಡು. 1627-1756ರ ಅವಧಿಯಲ್ಲಿ ಮಹಮದ್ ತನಗಾಗಿ ಕಟ್ಟಿಸಿಕೊಂಡ ಸ್ಮಾರಕ ಗೋಳಗುಮ್ಮಟದಿಂದಾಗಿ ಹಾಗೂ ಇಲ್ಲಿರುವ 300ಕ್ಕೂ ಹೆಚ್ಚು ಪ್ರಾಚೀನ ಸುಂದರ ಕಟ್ಟಡ ಮತ್ತು ಪ್ರೇಕ್ಷಣೀಯ ಸ್ಥಳಗಳಿಂದ ಬಿಜಾಪುರ ವಿಶ್ವವಿಖ್ಯಾತವಾಗಿದೆ.

ಗೋಳಗುಮ್ಮಟ: ಗೋಳಗುಮ್ಮಟ ವಿಶ್ವದ ಎರಡನೇ ಅತಿ ದೊಡ್ಡ ಗೊಮ್ಮಟ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ವ್ಯಾಸ 44 ಮೀ. ಇಲ್ಲಿನ ವಿಶಾಲವಾದ ಆಚ್ಛಾದನ (ಮೇಲ್ಛಾವಣಿ ಹೊದಿಕೆ) ಗುಮ್ಮಟದಿಂದ ಶಬ್ದತರಂಗಗಳು ಪ್ರತಿಧ್ವನಿಸಿ ವಿಶಿಷ್ಟ ಪರಿಣಾಮ ಉಂಟು ಮಾಡುತ್ತವೆ. ಪಿಸುಮಾತು, ಚಪ್ಪಾಳೆ, ಸಿಳ್ಳೆ ಏನೇ ಮಾಡಿದರೂ ಅದು ಏಳಕ್ಕೂ ಹೆಚ್ಚುಬಾರಿ ಮಾರ್ದನಿಸುತ್ತದೆ. ಜೊತೆಗೆ ಒಂದೆಡೆ ಮಾಡುವ ಸಣ್ಣ ಸದ್ದು ಈ ಗ್ಯಾಲರಿಯ ಯಾವುದೇ ಭಾಗದಲ್ಲಿ ಅಂದರೆ ೧೨೫ ಅಡಿ ದೂರದಲ್ಲಿ ಸ್ಪಷ್ಟವಾಗಿ ಕೇಳುತ್ತದೆ. ಹೀಗಾಗೆ ಇದಕ್ಕೆ ಪಿಸುಗುಟ್ಟುವ ಗ್ಯಾಲರಿ ಎಂದು ಹೆಸರು.

ಇತಿಹಾಸ: ಬಿಜಾಪುರ ಮಟ್ಟಸವಾದ ಫಲವತ್ತಾದ ಮಣ್ಣಿನ ನಾಡು. ಅದಕ್ಕಾಗಿಯೇ ಈ ಪ್ರದೇಶವನ್ನು ಆದಿಲ್‌ಶಾಹೀ ದೊರೆಗಳು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಬಿಜಾಪುರದ ಮೊದಲ ಹೆಸರು ವಿಜಯಪುರ ಎಂದು ಹಲವು ಶಾಸನಗಳು ಸಾರುತ್ತವೆ. ಬಹಮನಿ ಸುಲ್ತಾನರು 1347ರಲ್ಲಿ ರಾಜ್ಯ ಸ್ಥಾಪಿಸಿದಾಗ ಬಿಜಾಪುರ ಒಂದು ಮುಖ್ಯ ಕೇಂದ್ರವಾಗಿತ್ತು. ಆದರೆ ಅದಕ್ಕೂ ಮೊದಲು ಇಲ್ಲಿ ವಿಜಯಪುರ ಎಂಬ ಊರಿತ್ತು. ಈ ಪ್ರಾಂತ್ಯದ ಅಕಾರಿ ಯೂಸುಫ್ ಆದಿಲ್ ಖಾನ್ ಸ್ವತಂತ್ರ್ಯವಾಗಿ ಆದಿಲ್‌ಶಾಹೀ ಸಾಮ್ರಾಜ್ಯ ಕಟ್ಟಿದ, ನಂತರ ಔರಂಗಜೇಬ್ ವಶಪಡಿಸಿಕೊಂಡ. ಬಿಜಾಪುರವನ್ನು ಮೊಗಲರು, ಹೈದ್ರಾಬಾದ್ ನಿಜಾಮರು, ಪೇಶವೆಗಳು ಆಳಿದರು.

ಕೋಟೆ: ಬಿಜಾಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.

ನೋಡಬೇಕಾದ ಸ್ಥಳಗಳು: ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್‌ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್‌ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಇಬ್ರಾಹಿಂ ರೋಜಾ, ರುಕ್ಮಾಂಗದ ಪಂಡಿತರ ಸಮಾಧಿ ಹಾಗೂ ಕೆಲವೇ ವರ್ಷಗಳ ಹಿಂದೆ ಅನಾವರಣಗೊಂಡ ಬೃಹತ್ ಶಿವನ ವಿಗ್ರಹ.

ಬೆಂಗಳೂರಿನಿಂದ ಸುಮಾರು 580 ಕಿ.ಮೀ. ದೂರದಲ್ಲಿರುವ ಬಿಜಾಪುರಕ್ಕೆ ನೇರ ಬಸ್ ಸೌಕರ್ಯವೂ ಇದೆ. ಪ್ರವಾಸೋದ್ಯಮ ನಿಗಮದ ಟೂರ್ ಪ್ಯಾಕೇಜ್ ಸಹ ಉಂಟು.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಮುಖಪುಟ /ಪ್ರವಾಸಿತಾಣ