ಮುಖಪುಟ /ಪ್ರವಾಸಿತಾಣ  

ಬೆಂಗಳೂರು ಬಳಿಯ ಪ್ರಾಣಿ ಪ್ರಪಂಚ
ಪಶುಪಕ್ಷಿಗಳ ಲೋಕ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

*ಟಿ.ಎಂ. ಸತೀಶ್

Tiger, Bannerughattaರಾಜ್ಯದ ರಾಜಧಾನಿ ಬೆಂಗಳೂರಿಗೆ 20-25 ಕಿಲೋಮೀಟರ್ ದೂರದಲ್ಲಿ ದಟ್ಟವಾದ ನೈಸರ್ಗಿಕ ಅರಣ್ಯವಿದೆ. ಇದರಲ್ಲಿ ನೂರಾರು ಕಾಡಾನೆಗಳಿವೆ ಎಂದು ಯಾರಾದರೂ ಹೇಳಿದರೆ ನಿಮಗೆ ಅಚ್ಚರಿ ಎನಿಸಬಹುದು. ಆದರೂ ಇದು ಸತ್ಯ. ಬನ್ನೇರುಘಟ್ಟ - ಆನೇಕಲ್ ವಲಯದಲ್ಲಿ ವಿಶಾಲವಾದ ನೈಸರ್ಗಿಕ ಕಾನನವಿದೆ. ಇಲ್ಲಿ ನೂರಾರು ಸಂಖ್ಯೆಯಲ್ಲಿ ಕಾಡಾನೆಗಳೂ ಇವೆ. ಕಾಡು ಪ್ರಾಣಿಗಳೂ ಇವೆ. ಒಮ್ಮೊಮ್ಮೆ ಈ ಕಾಡುಪ್ರಾಣಿಗಳು ಮತ್ತು ಕಾಡಾನೆಗಳು ನೀರು, ಆಹಾರ ಹುಡುಕಿ ಬೆಂಗಳೂರು ಪುರ ಪ್ರವೇಶ ಮಾಡುತ್ತವೆ.

ಹೀಗೆ ಆನೆಗಳು ಕೋಣನಕುಂಟೆಗೋ, ಜೆಪಿನಗರಕ್ಕೋ ಬಂದರೆ ಅದು ದೊಡ್ಡ ಸುದ್ದಿಯಾಗುತ್ತದೆ. ಬೆಂಗಳೂರು ಬೆಳೆದಂತೆ ಕಾನನದ ಒತ್ತುವರಿ ಅವ್ಯಾಹತವಾಗಿ ನಡೆದಿದೆ. ಕಾನನ ಸದ್ದಿಲ್ಲದೆ ಕಮರಿಹೋಗುತ್ತದೆ. ಹೀಗಾಗೆ ಬೆಂಗಳೂರು ಬಳಿಯ ಈ ಅರಣ್ಯವನ್ನು ನಗರೀಕರಣದಿಂದ ಕಾಪಾಡಲು 1974ರಲ್ಲಿ ಬನ್ನೇರುಘಟ್ಟ ಅರಣ್ಯವನ್ನು ಅಭಯಾರಣ್ಯ ಎಂದು ಘೋಷಿಸಲಾಯಿತು. ವನ್ಯಜೀವಿ ಸಂರಕ್ಷಣೆ, ಜೈವಿಕ ಶಿಕ್ಷಣ, ಜೈವಿಕ ಮನರಂಜನೆ ಮತ್ತು ವನ್ಯಪ್ರಾಣಿ ಪುನರ್ವಸತಿಗಾಗಿ 739 ಹೆಕ್ಟೇರ್ ಪ್ರದೇಶದಲ್ಲಿ ಬನ್ನೇರುಘಟ್ಟದಲ್ಲಿ ರಾಷ್ಟ್ರೀಯ ಉದ್ಯಾನವನ್ನೂ ಸ್ಥಾಪಿಸಲಾಯಿತು. ಈಗ ಈ ಉದ್ಯಾನ ಪ್ರಾಣಿ ಪ್ರಪಂಚವಾಗಿ ಮಾರ್ಪಟ್ಟಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಈ ಹಿಂದೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದ ಉದ್ಯಾನ ಈಗ ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರದ ಆಡಳಿತ ವ್ಯಾಪ್ತಿಗೆ ಬನ್ನೇರುಘಟ್ಟ ಕರಡಿಗಳುಒಳಪಟ್ಟಿದೆ. ಬೆಂಗಳೂರಿನಿಂದ ಕೇವಲ 21 ಕಿಲೋ ಮೀಟರ್ ದೂರದಲ್ಲಿರುವ ಈ ರಮಣೀಯ ತಾಣ ಬಿಳಿ ಹುಲಿ, ಪಟ್ಟೆಹುಲಿಗಳ ಬೀಡು. ಆನೆಗಳಿರುವ ನೈಸರ್ಗಿಕ ಕಾಡು. ಬೃಹದಾಕಾರವಾದ ಕಲ್ಲುಬಂಡೆಗಳು, ಗಿರಿ ಶಿಖರಗಳ ನಡುವೆ ತಂತಾನೇ ಮುಗಿಲೆತ್ತರ ಬೆಳೆದು ನಿಂತ ಸಹಸ್ರಾರು ಗಿಡ ಮರಗಳ ಸ್ವಾಭಾವಿಕ ಕಾನನದ ನಡುವೆ ಸಹಜವಾಗಿ ನಿರ್ಮಿಸಿರುವ ಈ ಜೈವಿಕ ಉದ್ಯಾನದಲ್ಲಿ ಭಾರತದ ಪಟ್ಟೆ ಹುಲಿ, ಬಿಳಿ ಹುಲಿ, ಸೈಬೀರಿಯನ್ ಹುಲಿ, ಸಿಂಹ, ಜಿಂಕೆ, ಕಡವೆ, ಕಾಡೆಮ್ಮೆ, ಹಿಪೊಪೊಟಮಸ್ (ನೀರಾನೆ), ಜೀಬ್ರಾ, ಚಿರತೆ, ಕತ್ತೆಕಿರುಬ, ನರಿ, ತೋಳ, ಮೊಸಳೆ, ಕರಡಿ, ಹದ್ದು, ಪಾರಿವಾಳ, ಕಾಡುಕೋಳಿ, ಗೂಬೆ, ವರ್ಣ ಗಿಳಿ, ಮುಳ್ಳುಹಂದಿ, ಹಂಸ, ಕೊಕ್ಕರೆ, ವಿವಿಧ ಬಗೆಯ ಮೀನುಗಳು, ಹೆಬ್ಬಾವು, ಕಾಳಿಂಗಸರ್ಪ, ನಾಗರಹಾವು, ದಾಸರಹಾವು, ಮಂಡಲದ ಹಾವು, ಇಗ್ವಾನಾ ಸೇರಿದಂತೆ 70 ಪ್ರಬೇಧದ 1200ಕ್ಕೂ ಹೆಚ್ಚು ವನ್ಯಮೃಗ, ದೊಡ್ಡ ದೊಡ್ಡ ಪಂಜರದಲ್ಲಿರುವ ಪಂಚವರ್ಣದ ಗಿಣಿ, ಗೂಬೆ, ಗರುಡ, ಹದ್ದು, ನೀಲಕಂಠ, ನವಿಲು, ಕೊಕ್ಕರೆ, ಹಂಸ, ಕೃಷ್ಣ ಹಂಸ ಸೇರಿದಂತೆ ನೂರಾರು ಬಗೆಯ ಪಕ್ಷಿಗಳೂ ಪ್ರವಾಸಿಗರ ಮನಸೆಳೆಯುತ್ತವೆ.

Lion Bannerughattaಸ್ಯಹಾರಿ ಮತ್ತು ಮಾಂಸಹಾರಿ ಪ್ರಾಣಿಗಳ ಸಫಾರಿ ಇಲ್ಲಿನ  ಪ್ರಮುಖ ಆಕರ್ಷಣೆ.  ಸಫಾರಿ ಮತ್ತು ಪ್ರಾಣಿ ಸಂಗ್ರಹಾಲಯದ ವೀಕ್ಷಣೆಗೆ ಟಿಕೆಟ್ ಖರೀದಿಸಿದರೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸುರಕ್ಷಿತ ವಾಹನದಲ್ಲಿ ನೈಸರ್ಗಿಕ ಅರಣ್ಯದಲ್ಲಿ ಸಫಾರಿ ವೀಕ್ಷಿಸಬಹುದು.

ಕಾಡೆಮ್ಮೆ, ಜಿಂಕೆ, ಕಡವೆ, ಕೃಷ್ಣ ಮೃಗಗಳು, ಹತ್ತಾರು ಸಂಖ್ಯೆಯ ಕರಡಿಗಳು, ಸ್ವೇಚ್ಛೆಯಾಗಿ ವಿಹರಿಸುವ ಬಿಳಿ ಹುಲಿ, ಬಂಗಾಳದ ಪಟ್ಟೆ ಹುಲಿ, ಘರ್ಜಿಸುವ ಸಿಂಹಗಳು ಈ ಸಫಾರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈ ಎಲ್ಲ ಪ್ರಾಣಿಗಳನ್ನು ತಮ್ಮ ಕೆಮರಾದಲ್ಲಿ, ಮೊಬೈಲ್ ನಲ್ಲಿ ಸೆರೆ ಹಿಡಿಯಲು ಪ್ರತಿಯೊಬ್ಬರೂ ಹಾತೊರೆಯುತ್ತಾರೆ. ಪ್ರಾಣಿಗಳನ್ನು ಕಣ್ತುಂಬ ನೋಡಿ, ಅವುಗಳ ಛಾಯಾಚಿತ್ರವನ್ನೂ ಸೆರೆ ಹಿಡಿದು ಬೇರೆಯವರಿಗೂ ತೋರಿಸಿ ಸಂತೋಷ ಪಡುತ್ತಾರೆ.

Bhannerughatta Elephantsಈ ಸಫಾರಿಯಲ್ಲಿ ಎಲ್ಲರ ಮನಸೆಳೆಯುವ ಮತ್ತೊಂದು ಪ್ರಾಣಿ ಆನೆ. ಇಲ್ಲಿ ಹತ್ತಾರು ಆನೆಗಳು ಗುಂಪಾಗಿ ಓಡಾಡುತ್ತವೆ. ಆನೆಗಳು ವಾಹನ ಓಡಾಡುವ ರಸ್ತೆಗೆ ಬಾರದಿರಲಿ ಎಂದು ಸೌರ ವಿದ್ಯುತ್ ತಂತಿ ಬೇಲಿ ಹಾಕಲಾಗಿದೆ. ಕೆಲವು ತುಂಟ ಆನೆಗಳ ಕಾಲಿಗೆ ಸರಪಣಿಯನ್ನೂ ಹಾಕಲಾಗಿದೆ. ಮರಿಯಾನೆಗಳ ಜೊತೆ ಸ್ವಚ್ಛಂದವಾಗಿ ಓಡಾಡುವ ಈ ಆನೆಗಳ ಸಮೂಹ ನೋಡುವುದು ಒಂದು ಅವಿಸ್ಮರಣೀಯ ಅನುಭವ.  ಮೃಗಾಲಯದ ಮತ್ತೊಂದು ಆಕರ್ಷಣೆ ಸತ್ತ ಪ್ರಾಣಿಗಳ ವಸ್ತು ಸಂಗ್ರಹಾಲಯ. ಇಲ್ಲಿ ಜೀವಂತವಾಗೇ ನಿಂತಿರುವಂತೆ ಭಾಸವಾಗುವ ಹುಲ್ಲು ತುಂಬಿದ ಹುಲಿ, ಸಿಂಹ, ಕಾಡೆಮ್ಮೆ, ಜಿಂಕೆ ಮೊದಲಾದ ಪ್ರಾಣಿಗಳನ್ನೂ ನೋಡಬಹುದು. ಇಲ್ಲಿ ಪ್ರಾಣಿ ಹವ್ಯಾಸ ಅಧ್ಯಯನಿಗಳಿಗಾಗಿ ಹಲವು ಮಾಹಿತಿಗಳನ್ನು ಪ್ರಕಟಿಸಲಾಗಿದೆ.

colourful  Birds Bannerughattaಮಕ್ಕಳಿಗೆ ಆಟ ಆಡಲೆಂದು ಜೋಕಾಲಿ, ಏತಪೋತ, ಜಾರುವ ಬಂಡೆ ಮೊದಲಾದ ಆಟಿಕೆಗಳೂ ಇವೆ. ಈ ಉದ್ಯಾನಕ್ಕೆ ಪ್ರತಿ ವರ್ಷ ಸುಮಾರು 10 ಲಕ್ಷ ಪ್ರವಾಸಿಗರು ಭೇಟಿ ಕೊಡುತ್ತಾರೆ.  ಬೇಸಿಗೆ ರಜೆ, ದಸರಾ ರಜೆ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಸುಮಾರು 15 ರಿಂದ ಇಪ್ಪತ್ತು ಸಾವಿರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಾಮಾನ್ಯ ದಿನಗಳಲ್ಲಿ ನಾಲ್ಕಾರು  ಸಾವಿರ ಪ್ರವಾಸಿಗರಿಗೆ ಕೊರತೆ ಇಲ್ಲ.

ಅರಣ್ಯ ಇಲಾಖೆಯಿಂದ ಬೇರ್ಪಟ್ಟು ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬಂದಿರುವ ಉದ್ಯಾನ, ಮುಂದಿನ ವರ್ಷಗಳಲ್ಲಿ ತನ್ನ ಖರ್swanಚು ವೆಚ್ಚಕ್ಕೆ ತಾನೇ ಸಂಪನ್ಮೂಲ ಕ್ರೋಡೀಕರಿಸಿಕೊಳ್ಳಬೇಕಾಗಿರುವುದರಿಂದ ಪ್ರವೇಶ ದರ ಹೆಚ್ಚಿಸುವ ಇರಾದೆಯೂ ಪ್ರಾಧಿಕಾರಕ್ಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪಶು ಪಕ್ಷಿಗಳನ್ನು ದತ್ತು ಪಡೆಯಲೂ ಇಲ್ಲಿ ಅವಕಾಶವಿದೆ. ದಾನಿಗಳು ಪ್ರಾಣಿ ಪಕ್ಷಿಗಳ ನಿರ್ವಹಣೆಗೆ ಹಣ ನೀಡಿದರೆ, ಅವರ ಹೆಸರನ್ನು ಆಯಾ ಪ್ರಾಣಿಯ ಪಂಜರದ ಮುಂದೆ ಹಾಕಲಾಗುತ್ತದೆ.

ನಗರ ಪ್ರದೇಶದ ಮಕ್ಕಳಿಗೆ ಹತ್ತಿರದಲ್ಲೇ ವನ್ಯಪ್ರಾಣಿಗಳ ದರ್ಶನ ಮಾಡಿಸಲು, ಪ್ರಾಣಿಗಳ ಲಕ್ಷಣ, ಆಹಾರ, ವರ್ತನೆಯ ಬಗ್ಗೆ ಅರಿವು ಮೂಡಿಸುವುದು. ಈ ಪಟ್ಟಣದ ಸದ್ದು ಗದ್ದಲದಿಂದ ದೂರವಾಗಿ ಪ್ರಶಾಂತ ತಾಣದಲ್ಲಿ ವಿಹರಿಸ ಬಯಸುವವರಿಗೆ ಇದು ನಿಜಕ್ಕೂ ಒಂದು ಸುಂದರ ತಾಣ.

Butterflyparkಚಿಟ್ಟೆಗಳ ಪಾರ್ಕ್: ಕಳೆದ ಕೆಲವು ವರ್ಷಗಳ ಹಿಂದಷ್ಟೇ ಇಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಚಿಟ್ಟೆಗಳ ಪಾರ್ಕ್ ಕೂಡ ನಿರ್ಮಿಸಲಾಗಿದೆ. ಚಿಟ್ಟೆಯ ಆಕಾರದಲ್ಲೇ ನಿರ್ಮಿಸಲಾಗಿರುವ ಈ ವಿಹಾರ ತಾಣವನ್ನು ಸಂಪೂರ್ಣ ಗಾಜಿನಿಂದ ನಿರ್ಮಿಸಲಾಗಿದ್ದು, ಒಳಗೆ ಪುಷ್ಪ ಸಸ್ಯಗಳನ್ನು ಬೆಳೆಸಲಾಗಿದೆ.

ಈ ಹೂ ಗಿಡಗಳ ಮೇಲೆ ಬಣ್ಣಬಣ್ಣದ ಚಿಟ್ಟೆಗಳು ಹಾರಾಡುವುದನ್ನು ನೋಡುವುದೇ ಒಂದು ಸೊಗಸು, ಮಕ್ಕಳಂತೂ ವಿವಿಧ ವರ್ಣದ, ವಿವಿಧ ಆಕಾರದ ಚಿಟ್ಟೆಗಳನ್ನು ನೋಡಿ ಆನಂದ ತುಂದೀಲರಾಗುತ್ತಾರೆ.

white Tigerಮೊಟ್ಟೆ, ಗೂಡು, ಕಂಬಳಿ ಹುಳುವಿನ ರೂಪದಿಂದ ಚಿಟ್ಟೆ ಹೇಗಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಮಕ್ಕಳು ಇಲ್ಲಿ ಪಡೆಯಲು ಸಾಧ್ಯ. ಅಲ್ಪಾಯುಷಿಗಳಾದ ಚಿಟ್ಟೆಗಳ ಸಮಗ್ರ ಮಾಹಿತಿ ನೀಡುವ ವಸ್ತು ಪ್ರದರ್ಶನ ಮತ್ತು  ಚಲನಚಿತ್ರ ಪ್ರದರ್ಶನವೂ ಇಲ್ಲಿದೆ.

ಸಾರಿಗೆ: ಬೆಂಗಳೂರಿನ ಶಿವಾಜಿನಗರ, ಕಳಾಸಿಪಾಳ್ಯಂ ಹಾಗೂ ಬಸ್ ನಿಲ್ದಾಣದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ನೇರ ಬಸ್ ಸೌಕರ್ಯ ಇದೆ. ರಜಾ ದಿನಗಳಂದು ಹಾಗೂ ಭಾನುವಾರ ಹೆಚ್ಚುವರಿ ಬಸ್ ಸೌಕರ್ಯವನ್ನೂ ಕಲ್ಪಿಸಲಾಗಿದೆ.

ನಗರದಿಂದ ಹೊರಗೆ ಕಾನನ ಪ್ರದೇಶದಲ್ಲಿರುವ ಈ ಉದ್ಯಾನಕ್ಕೆ ಮಕ್ಕಳೊಂದಿಗೆ ಹೋದರೆ ದೊರಕುವ ಆನಂದ ಅಪರಿಮಿತ. ಆದರೆ, ಮನೆಯಿಂದ ಸಾಕಷ್ಟು ನೀರು, ಆಹಾರ ಕೊಂಡೊಯ್ಯುವುದು ಉತ್ತಮ.

ಇಲ್ಲಿ ಮಯೂರ ವನಶ್ರೀ ಹೊಟೆಲ್ ಹಾಗೂ ಅಂಗಡಿ ಇದೆ. ದರ ತುಸು ದುಬಾರಿ. ಡೇಟ್ ಎಕ್ಸ್‌ಪೈರ್ ಆದ ಖಾದ್ಯ - ಪೇಯಗಳೂ ಇಲ್ಲಿ ಮಾರಾಟಕ್ಕಿರುವ ಕಾರಣ ಪ್ರವಾಸಿಗರು ಎಚ್ಚರದಿಂದಿರುವುದು ಉತ್ತಮ.

ವೀಕ್ಷಣಾ ಸಮಯ: ಬೆಳಗ್ಗೆ 9-3೦ರಿಂದ ಸಂಜೆ 5-3೦ರವರೆಗೆ ಉದ್ಯಾನ ಸಾರ್ವಜನಿಕ ವೀಕ್ಷಣೆಗೆ ಮುಕ್ತ. ಪ್ರಾಣಿಗಳಿಗೆ ಆಹಾರ ನೀಡುವುದು, ರೇಗಿಸುವುದು ನಿಷಿದ್ಧ.

ಪ್ಲಾಸ್ಟಿಕ್ ಬಳಕೆ ನಿಷಿದ್ಧ:ಅಂದಹಾಗೆ ಈ ಉದ್ಯಾನ ಪ್ಲಾಸ್ಟಿಕ್ ಮುಕ್ತ ಪ್ರದೇಶ. ಇಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕಾರಣ ಏನು ಗೊತ್ತೆ..? ಪ್ರವಾಸಿಗರು ತಿಂಡಿ ತಿಂದು ಬಿಸಾಡಿದ ಪ್ಲಾಸ್ಟಿಕ್ ಬ್ಯಾಗ್ ತಿಂದ ಜಿಂಕೆಗಳು ಇಲ್ಲಿ ಸಾವನ್ನಪ್ಪಿವೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಜಿರಾಫೆ, ಚಿಂಪಾಂಜಿ ಮೊದಲಾದ ಪ್ರಾಣಿಗಳನ್ನು ಪ್ರದರ್ಶನಕ್ಕಿಟ್ಟು, ಪ್ರವಾಸಿಗರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಹಾಗೂ ಅನುಕೂಲತೆ ಕಲ್ಪಿಸಿದರೆ ಈ ಉದ್ಯಾನ ಮೈಸೂರು ಚಾಮರಾಜೇಂದ್ರ ಮೃಗಾಲಯದಂತೆಯೇ ವಿಶ್ವಖ್ಯಾತಿ ಪಡೆಯುವುದರಲ್ಲಿ ಸಂದೇಹವಿಲ್ಲ.

elephantಚಂಪಕಧಾಮ: ರಾಷ್ಟ್ರೀಯ ಉದ್ಯಾನಕ್ಕೆ ಒಂದು ಕಿಲೋ ಮೀಟರ್ ದೂರದಲ್ಲಿ ಚಾಲುಕ್ಯರ ಕಾಲದ ಚಂಪಕಧಾಮ ಸ್ವಾಮಿ ದೇವಾಲಯವಿದೆ. ಅತ್ಯಂತ ಪುರಾತನವಾದ ಈ ದೇವಾಲಯದಲ್ಲಿ ಸುಂದರವಾದ ಚಂಪಕಧಾಮಸ್ವಾಮಿ ವಿಗ್ರಹ, ಲಕ್ಷೀ ದೇವಾಲಯವಿದೆ. ಸುಂದರ ಕೆತ್ತನೆಯ ಗರುಡಗಂಭ, ಪ್ರಾಚೀನ ಉತ್ಸವ ಮೂರ್ತಿಗಳು ಇಲ್ಲಿವೆ.

ಬೆಟ್ಟದ ಮೇಲೆ ಪುರಾತನವಾದ ಲಕ್ಷೀನರಸಿಂಹ ಸ್ವಾಮಿ ದೇವಾಲಯವೂ ಇದೆ. ಬೆಟ್ಟವನ್ನೇರಿ ಹೋಗಲು ಮಟ್ಟಿಲುಗಳನ್ನೂ ನಿರ್ಮಿಸಲಾಗಿದೆ. ಹವ್ಯಾಸಿ ಛಾಯಾಗ್ರಾಹಕರಿಗಿದು ಸುಂದರ ತಾಣ.

ಮೀನಾಕ್ಷಿ ಸುಂದರೇಶ್ವರ ದೇವಾಲಯ: ಉದ್ಯಾನದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಹುಳಿಮಾವಿನ ಬಳಿ ಸುಂದರವಾದ ಮೀನಾಕ್ಷಿ ಸುಂದರೇಶ್ವರ ದೇವಾಲಯವಿದೆ. ಹತ್ತಿರದಲ್ಲೇ ಆದಿಚುಂಚನಗಿರಿ ಮಠಕ್ಕೆ ಸೇರಿದ ಗುಹಾಂತರ ರಾಮಲಿಂಗೇಶ್ವರ ಸ್ವಾಮಿ ದೇವಾಲಯವಿದೆ. ಲಿಂಗಾಕಾರದಲ್ಲೇ ನಿರ್ಮಿಸಿರುವ ಬ್ರಹ್ಮಕುಮಾರಿ ಈಶ್ವರೀಯ ಕೇಂದ್ರವೂ ಇದೆ.  

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಮುಖಪುಟ /ಪ್ರವಾಸಿತಾಣ