ಮುಖಪುಟ /ಪ್ರವಾಸಿತಾಣ  /ನಮ್ಮದೇವಾಲಯಗಳು

ಅದ್ಭುತ ಶಿಲ್ಪಕಲೆಯ ಬೀಡು ಅರಳುಗುಪ್ಪೆ

ಅರಳುಗುಪ್ಪೆ ದೇವಾಲಯ, Araluguppe keshava templeಕರ್ನಾಟಕ ಶಿಲ್ಪಕಲೆಗಳ ತವರು. ಸೋಮನಾಥಪುರ, ಬೇಲೂರು ಹಳೆಬೀಡಿನ ದೇವಾಲಯಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ. ಬೇಲೂರು ಹಳೇಬೀಡಿನ ದೇವಾಲಯಗಳ ಸೂಕ್ಷ್ಮ ಕಲಾ ಶ್ರೀಮಂತಿಕೆಯನ್ನೇ ತಮ್ಮಲ್ಲೂ ಅಡಗಿಸಿಕೊಂಡ ನೂರಾರು ದೇವಾಲಯಗಳು ಕರ್ನಾಟಕದಲ್ಲಿವೆ. ಆದರೆ ಅವುಗಳಲ್ಲಿ ಬಹಳಷ್ಟು ದೇವಾಲಯಗಳು ಹೆಚ್ಚಿನ ಪ್ರವಾಸಿಗರ ಗಮನಕ್ಕೆ ಬಾರದೆ ಎಲೆಮರೆಯ ಕಾಯಿಯಂತೆ, ವನಸುಮದಂತಿವೆ. ಇಂಥ ಶಿಲ್ಪಕಲಾವೈಭವವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಹೆಚ್ಚು ಜನರ ಗಮನಕ್ಕೆ ಬಾರದ ತಾಣವೇ ತುರುವೇಕೆರೆ, ಬಾಣಸಂದ್ರ ಬಳಿ ಇರುವ ತಿಪಟೂರು ತಾಲೂಕಿಗೆ ಸೇರಿದ ಅರಳುಗುಪ್ಪೆ.

Araluguppe temple, ವಿರೂಪಗೊಂಡಿರುವ ಸುಂರರ ಶಿಲ್ಪಗಳು, ಅರಳುಗುಪ್ಪೆಅರಳುಗುಪ್ಪೆಯಲ್ಲಿರುವ ಕೇಶವ ದೇವಾಲಯ ಬೇಲೂರು ದೇವಾಲಯಗಳಷ್ಟು ದೊಡ್ಡದಲ್ಲದಿದ್ದರೂ ಶಿಲ್ಪಕಲಾವೈಭವದಲ್ಲಿ ಬೇಲೂರಿಗೇನೂ ಕಡಿಮೆ ಇಲ್ಲ. ಅರಳುಗುಪ್ಪೆ ಒಂದು ಪುಟ್ಟ ಗ್ರಾಮ. ಇಲ್ಲಿ 13ನೇ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಿಸಿದ ಸುಂದರ ದೇವಾಲಯವಿದೆ. ಹೊನ್ನೊಜನನೆಂಬ ಶಿಲ್ಪಿ ಈ ದೇವಾಲಯ ನಿರ್ಮಾಣದ ರೂವಾರಿ ಎನ್ನುತ್ತದೆ ಇತಿಹಾಸ.

ಈ ದೇವಾಲಯದ ಒಂದೊಂದೂ ಭಿತ್ತಿಯೂ ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ ಕಣ್ಮನ ಸೆಳೆಯುತ್ತವೆ. ವಿಷ್ಣುವಿನ ದಶಾವತಾರದ ಕೆತ್ತನೆಗಳು ಇಲ್ಲಿವೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ದೇವಾಲಯವನ್ನು ಪ್ರಮುಖ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದ್ದರೂ ಸೂಕ್ತ, ಸಂರಕ್ಷಣೆ ಇಲ್ಲದ ಕಾರಣ ಸುಂದರ ವಿಗ್ರಹಗಳ ಮುಖ ವಿರೂಪಗೊಂಡಿದೆ. ತುಂಟು ಹುಡುಗರು ಕಲ್ಲಿನಿಂದ ಅತ್ಯಂತ ಮನೋಹರವಾದ ಶಿಲ್ಪಗಳ ಮುಖವನ್ನು ಜಜ್ಜಿ ಹಾಳು ಮಾಡಿದ್ದಾರೆ.

ಅರಳುಗುಪ್ಪೆ ದೇವಾಲuಯ, Araluguppeಹಿಂಬದಿಯಲ್ಲಿರುವ ಗೋಪುರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೋಮನಾಥಪುರದಲ್ಲಿಯೇ ನಾವಿದ್ದೇವೇನೋ ಎಂಬ ಭ್ರಮೆ ಮೂಡುತ್ತದೆ.  ಏಕಕೂಟದ ಈ ದೇವಾಲಯಕ್ಕೆ ಪೂರ್ವದಿಂದ ಪ್ರವೇಶದ್ವಾರವಿದೆ. ನಕ್ಷತ್ರಾಕಾರದ ಜಗತಿಯ ಮೇಲೆ ನಿಂತಿರುವ ದೇವಾಲಯದಲ್ಲಿ ಎಲ್ಲ ದೇವಾಲಯಗಳಂತೆ ಇಲ್ಲಿಯೂ ಗರ್ಭಗುಡಿ, ಸುಕನಾಸಿ, ನವರಂಗಗಳಿವೆ. ದೇವಾಲಯದ ಒಳ ಭಾಗದಲ್ಲಿ 9 ಸೂಕ್ಷ್ಮ ಕೆತ್ತನೆಯಿಂದ ಕೂಡಿದ ಕಂಬಗಳಿದ್ದು, ತೂಗಾಡುವ ಹೂಮೊಗ್ಗನ್ನು ಶಿಲ್ಪಿ ಅತ್ಯಂತ ಕಲಾತ್ಮಕವಾಗಿ  ಕೆತ್ತಿದ್ದಾನೆ. ಗರ್ಭಗುಡಿಯಲ್ಲಿ ಅತ್ಯಂತ ಮನಮೋಹಕವಾದ ಕೇಶವನ ವಿಗ್ರಹವಿದೆ.

transport art, Araluguppe, ಅರಳುಗುಪ್ಪೆಯ ಸಾರಿಗೆ ವಾಹನದ ಶಿಲ್ಪರಾಮಾಯಣದ ಕಥಾನಕಗಳನ್ನು ಶಿಲ್ಪಿ ಪೂರ್ವದ ಭಿತ್ತಿಯಲ್ಲಿ ಚಿತ್ರಿಸಿದ್ದಾನೆ. ಇಲ್ಲಿರುವ ಪಟ್ಟಿಕೆಗಳಲ್ಲಿ ಕಾಲ್ಪನಿಕ ಮೃಗ, ಮಕರ, ಹಂಸ, ಆನೆ, ಕುದುರೆಗಳ ಶಿಲ್ಪಗಳಿವೆ. ಇಂದು ಸರಕು ಸಾಗಣೆಗೆ ಅತ್ಯಗತ್ಯ ಹಾಗೂ ಅವಶ್ಯಕವಾದ ಲಾರಿಯ ಕಲ್ಪನೆ ನಮ್ಮ ಪೂರ್ವಕರಿಗೆ ಬಹಳ ಹಿಂದೆಯೇ ಇತ್ತೆಂಬುದು ಇಲ್ಲಿನ ಭಿತ್ತಿಯಲ್ಲಿರುವ ಕುದುರೆಗಳು ಎಳೆಯುತ್ತಿರುವ ನಾಲ್ಕು ಚಕ್ರದ ಉದ್ದದ ಸರಕು ಸಾಗಣೆ ಶಿಲ್ಪದಿಂದ ವೇದ್ಯವಾಗುತ್ತದೆ.

ದೇವಾಲಯದ ಎಲ್ಲ ಭಿತ್ತಿಗಳೂ ಕಲಾನೈಪುಣ್ಯತೆಗೆ ಸಾಕ್ಷಿಯಾಗಿದ್ದು, ಹಿರಣ್ಯಕಶುಪಿವಿನ ಕರುಳು ಬಗೆದು ಮಾಲೆ ಹಾಕಿಕೊಳ್ಳುತ್ತಿರುವ ಉಗ್ರನರಸಿಂಹನ ಕೆತ್ತನೆಯಂತೂ ಮನಮೋಹಕವಾಗಿದೆ. ಬಾಲಕೃಷ್ಣನ ಲೀಲೆಗಳು, ಯಕ್ಷ, ಕಿನ್ನರ, ಉಗ್ರನರಸಿಂಹ ಅರಳುಗುಪುಪೆ, Ugranarasimha Araluguppeಗಾಂಧರ್ವರ ಕೆತ್ತನೆಗಳು, ನಾಟ್ಯ ಗಣಪ, ಲಕ್ಷ್ಮಿ ಹಾಗೂ 6ಭುಜಗಳ ಸರಸ್ವತಿಯ ಮೂರ್ತಿಗಳು ಮನಸೂರೆಗೊಳ್ಳುತ್ತವೆ. ಶಿಲ್ಪಿ ಇಲ್ಲಿ ನವರಸಗಳನ್ನು ತನ್ನ ಶಿಲ್ಪದಲ್ಲಿ ಒಡಮೂಡಿಸಿದ್ದಾನೆ.

ಇಷ್ಟೆಲ್ಲಾ ಕಲಾ ವೈಭವವಿದ್ದರೂ ಈ ದೇವಾಲಯ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗದಿರುವುದು ದುರ್ದೈವವೇ ಸರಿ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಊರಿಗೆ ತಲುಪಲು ರಸ್ತೆ ಸಂಪರ್ಕವೂ ಚೆನ್ನಾಗಿಲ್ಲ. ಈ ದೇವಾಲಯವೇನಾದರೂ ಬೇಲೂರು, ಹಳೆಬೀಡು, ಶ್ರವಣಬೆಳಗೊಳದ ಸುತ್ತಮುತ್ತ ಇದ್ದಿದ್ದರೆ ಇದರ ಸ್ವರೂಪವೇ ಬದಲಾಗುತ್ತಿತ್ತು.

ಹೋಗುವುದು ಹೇಗೆ ಅರಳುಗುಪ್ಪೆಗೆ ಹೋಗಬೇಕೆಂದರೆ ರೈಲು ಪ್ರಯಾಣವೇ ಸೂಕ್ತ. ಬೆಂಗಳೂರು ಶಿವಮೊಗ್ಗ ಪ್ಯಾಸೆಂಜರ್ ರೈಲು ಅರಳುಗುಪ್ಪೆಯಲ್ಲಿ ನಿಲ್ಲುತ್ತದೆ. ಬೆಂಗಳೂರಿನಿಂದ ಬೆಳಗ್ಗೆ 6-30ಕ್ಕೆ ಹೊರಡುತ್ತದೆ. ಬೆಂಗಳೂರು ತಿಪಟೂರು ನಡುವೆ ಕಿಬ್ಬನಹಳ್ಳಿ (ಕೆ.ಬಿ) ಕ್ರಾಸ್ ನಲ್ಲಿ ಇಳಿದು, ಆಟೋ ಮಾಡಿಕೊಂಡು ಅರಳುಗುಪ್ಪೆಗೆ ಹೋಗಬಹುದು.

ಮುಖಪುಟ /ಪ್ರವಾಸಿತಾಣ /ನಮ್ಮ ದೇವಾಲಯಗಳು