ಮುಖಪುಟ /ಸಾಹಿತ್ಯ

ಸಾಹಿತ್ಯ ಸಮ್ಮೇಳನಗಳಿಂದ ಜನರ ಬದುಕು ಹಸನಾಗಬೇಕು
- ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

Narahalli Balasubramanyamಬೆಂಗಳೂರು, ಜ.೧೦ - ಯಾವುದೇ ಶ್ರೇಷ್ಠ ಸಾಹಿತ್ಯದ ಮೂಲ ಉದ್ದೇಶ ಜನರ ಬದುಕು ಹಸನಾಗಬೇಕು ಎಂಬುದೇ ಆಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಜನರ ಬದುಕನ್ನು ಹಸನಾಗಿಸುವಂಥ ವಿಷಯಗಳ ಬಗ್ಗೆ ಗಮನ ಹರಿಸುವುದೂ ಅತ್ಯಗತ್ಯ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ.

ಕೆಂಗೇರಿಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಕುಂಬಳಗೋಡು ನಂಜಾಚಾರ್ಯರ ವೇದಿಕೆಯಲ್ಲಿ ಶನಿವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದ ಅತ್ಯುತ್ತಮ ಕೃತಿಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡುವ ಮೂಲಕ ನಮ್ಮ ನಾಡು ನುಡಿಯ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಬೇಕು ಎಂದರು.

ಸಸಿಗೆ ನೀರೆರೆಯುವ ಮೂಲಕ ವಿನೂತನವಾಗಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಚಂದ್ರಶೇಖರ ಕಂಬಾರ, ಇಂದಿನ ಕನ್ನಡ ಮನಸ್ಸುಗಳಿಗೆ ಹಿಡಿಸುವಂಥ ಸಾಹಿತ್ಯವನ್ನು ನೀಡುವ ಕೆಲಸ ಆಗಬೇಕು. ಕನ್ನಡವನ್ನು ಬೇರುಮಟ್ಟದಿಂದ ಗಟ್ಟಿಗೊಳಿಸುವ ಕಾರ್ಯ ತುರ್ತಾಗಿ ಆಗಬೇಕು ಎಂದು ಹೇಳಿದರು.

ಪರಿಚಯ ಭಾಷಣ ಮಾಡಿದ ಯಶವಂತಪುರ ಕ.ಸಾ.ಪ. ಅಧ್ಯಕ್ಷ ಎಚ್.ಎಸ್. ಸುಧೀಂದ್ರ ಕುಮಾರ್, ಕೆಂಗೇರಿಯ ಸುತ್ತಮುತ್ತಲ ಪ್ರದೇಶವನ್ನೂ ಒಳಗೊಂಡ ಯಶವಂತಪುರ ಕ್ಷೇತ್ರದಲ್ಲಿ ಕನ್ನಡ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ನಗರ ಪ್ರದೇಶದಿಂದ ತುಸು ದೂರವೇ ಉಳಿದಿರುವ ಕೆಂಗೇರಿಯಲ್ಲಿ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ನಿರ್ಮಿಸಲು ನಿವೇಶನ ನೀಡುವಂತೆ ಶಾಸಕರಾದ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಅರ್ಪಿಸಿದರು.

ಸಮ್ಮೇಳನದ ಸ್ಮರಣ ಸಂಚಿಕೆ ಕಲ್ಪಶ್ರೀ ಬಿಡುಗಡೆ ಮಾಡಿದ ಮಾಜಿ ಸಚಿವ ಶೋಭಾ ಕರಂದ್ಲಾಜೆ ಮಾತನಾಡಿ, ಕೆಂಗೇರಿಯಲ್ಲಿದ್ದ ಗುರುಕುಲ ಸೇವಾ ಸಂಘದಲ್ಲಿ ಮಹಾತ್ಮಾ ಗಾಂಧೀಜಿ ತಂಗಿದ್ದರೆಂಬ ವಿಷಯ ತಿಳಿದು ಸಂತೋಷವಾಗಿದೆ. ತಮ್ಮ ಕ್ಷೇತ್ರದಲ್ಲಿನ ಈ ಮಹತ್ವದ ಸ್ಥಳವನ್ನು ಸ್ಮಾರಕವಾಗಿ ಮಾಡುವ ಬಗ್ಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ತಮ್ಮ ಕ್ಷೇತ್ರದ ಕ.ಸಾ.ಪ. ಘಟಕಕ್ಕೆ ನಿವೇಶನ ಕೊಡಿಸುವ ಆಶ್ವಾಸನೆ ನೀಡಿದರು.

ಹಣ ಕೊಟ್ಟು ಪುಸ್ತಕ ಖರೀದಿಸುವ ಮೂಲಕ ಪುಸ್ತಕ ಪ್ರದರ್ಶನ ಉದ್ಘಾಟಿಸಿದ ಸಚಿವ ರಾಮಚಂದ್ರಗೌಡ ಕನ್ನಡ ನಾಡು ನುಡಿ ಪರಂಪರೆಗೆ ಭವ್ಯ ಇತಿಹಾಸವಿದ್ದು, ಭಾಷೆಯ ಬೆಳವಣಿಗೆಗೆ ಸಮಸ್ತರೂ ಕಟಿಬದ್ಧರಾಗಬೇಕು ಎಂದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಡಿ.ಬಿ. ಚಂದ್ರೇಗೌಡ ಕುವೆಂಪು ಅವರಿಗೆ ನೊಬೆಲ್ ಪ್ರಶಸ್ತಿಯೇ ಬರಬೇಕಿತ್ತು. ಆದರೆ, ಕನ್ನಡದ ಮಹತ್ ಕಾವ್ಯಗಳನ್ನು ಜಗತ್ತಿಗೇ ತಲುಪಿಸುವ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎಂದರು.

ಕೆಂಗೇರಿ ಸಾಂಸ್ಕೃತಿಕ ಪರಂಪರೆ, ಕ್ಯಾತನ ಕಚಗುಳಿ ಪುಸ್ತಕ ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆ. ಉದ್ಯೋಗವರಸಿ ನಾಡಿಗೆ ಬರುವ ಸಮಸ್ತರೂ ಈ ಭಾಷೆಯ ಸಂಸ್ಕೃತಿ, ಭಾಷೆಯನ್ನು ಗೌರವಿಸಬೇಕು. ಅದರಂತೆ ನಡೆಯಬೇಕು ಎಂದರು. ಅತ್ಯಂತ ಯಶಸ್ವಿಯಾಗಿ ಪ್ರಥಮ ಸಮ್ಮೇಳನ ಆಯೋಜಿಸಿದ ಯಶವಂತಪುರ ಕ.ಸಾ.ಪ. ಪದಾಧಿಕಾರಿಗಳನ್ನು ಅಭಿನಂದಿಸಿದರು.

ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಸಿ.ಕೆ. ರಾಮೇಗೌಡ, ಕೆಂಗೇರಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಜಾನಪದ ಕಲಾ ತಂಡಗಳ ಸಹಿತವಾದ ಸಮ್ಮೇಳನಾಧ್ಯಕ್ಷರು ವಿರಾಜಮಾನರಾಗಿದ್ದ ಸರೋಟಿನ ಭವ್ಯ ಮೆರವಣಿಗೆ, ಮಯೂರ ನೃತ್ಯ ಶಾಲೆಯ ಮಕ್ಕಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಮನಸೆಳೆಯಿತು.

ಸಮಾರೋಪ ಸಮಾರಂಭ

ಎರಡು ದಿನಗಳ ಸಮ್ಮೇಳನದ ಅಂಗವಾಗಿ ಭಾನುವಾರ ಬೆಳಗ್ಗೆ ಸಾಂಸ್ಕೃತಿಕ ವೈಭವ ನೃತ್ಯ ಪ್ರದರ್ಶನ, ವಿಚಾರ ಗೋಷ್ಠಿ ಹಾಗೂ ಜಾನಪದ ಗೋಷ್ಠಿ, ಮಹಿಳಾಗೋಷ್ಠಿ ನಡೆಯಿತು. ನಗೀನ್ ಅಹಮದ್, ವೀಣಾ ಅರುಣ್, ಆಶಾ ಹೆಗಡೆ ಅವರು ವಿಚಾರ ಮಂಡಿಸಿದರು. ಚಂದ್ರಿಕಾ ಭಜನಾ ಮಂಡಳಿ ತಂಡದಿಂದ ದಾಸ ಗಾಯನ, ಅಕ್ಕನ ಬಳಗದಿಂದ ವಚನ ಗಾಯನ ಹಾಗೂ ಮೈಸೂರು ರಮಾನಂದ ನೇತೃತ್ವದಲ್ಲಿ ಗೆಜ್ಜೆ ಹೆಜ್ಜೆ ತಂಡದಿಂದ ಹಾಸ್ಯ ಗೋಷ್ಠಿ ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ, ಕನ್ನಡ ನಾಡು, ನುಡಿಗೆ ೨೦೦೦ ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಕನ್ನಡ ನಾಡು ಸಾವಿರ ವರ್ಷಗಳ ಹಿಂದೆ ಕರ್ನಾಟಕದ ಆಚೆ ಈಗಿನ ನಾಸಿಕ್ ವರೆಗೂ ಹಬ್ಬಿತ್ತು. ದೇಶದ ಆಚೆಯ ನೇಪಾಳದಲ್ಲಿ ಕನ್ನಡ ತನ್ನ ಬೇರು ಬಿಟ್ಟಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಪುಂಡಲೀಕ ಹಾಲಂಬಿ ಈ ನಾಡಿಗೆ ಉದ್ಯೋಗವರಸಿ ಬರುವ ಪ್ರತಿಯೊಬ್ಬ ಕನ್ನಡಿಗರೂ ಕನ್ನಡ ಕಲಿಯಬೇಕು, ಎಲ್ಲ ಕ್ಷೇತ್ರ ಮಟ್ಟದಲ್ಲೂ ವರ್ಷಕ್ಕೊಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಕನ್ನಡ ಜಾಗೃತಿ ಸಾಧ್ಯ ಎಂದರು.

ಖ್ಯಾತ ಚಿತ್ರನಟಿ ಹಾಗೂ ಕಿರುತೆರೆ ಕಲಾವಿದೆ ಮಾಳವಿಕಾ ಅವಿನಾಶ್, ವಾಹಿನಿಗಳಲ್ಲಿ ಹಾಗೂ ಎಫ್.ಎಂ. ಚಾನೆಲ್ ಗಳಲ್ಲಿ ಕನ್ನಡವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ಕನ್ನಡದ ಜೊತೆ ಇಂಗ್ಲಿಷ್ ಬಳಸಿ ಕಂಗ್ಲೀಷ್ ಸಂಸ್ಕೃತಿ ಹುಟ್ಟುಹಾಕಲಾಗುತ್ತಿದೆ. ವಾಹಿನಿಗಳಲ್ಲಿ ಕನ್ನಡ ತಪ್ಪಾಗಿ ಉಚ್ಚಾರಣೆ ಆದರೆ, ಅತಿಯಾದ ಇಂಗ್ಲಿಷ್ ಬಳಕೆಯಾದಾಗ ಸಾರ್ವಜನಿಕರೆ ಪತ್ರ ಮುಖೇನ, ದೂರವಾಣಿ ಮುಖೇನ ಎಚ್ಚರಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಮಳಲಿಗೌಡ, ಕನ್ನಡಿಗರೆಲ್ಲರೂ ಕಾವ್ಯ ಬರೆಯಬಲ್ಲವರಾಗಿದ್ದಾರೆ. ನಮ್ಮ ನೆಲದ ಗುಣವೇ ಅಂಥದ್ದು, ಎಲ್ಲರಲ್ಲೂ ಸುಪ್ತವಾಗಿರುವ ಕಾವ್ಯವನ್ನು ಬಡಿದೆಬ್ಬಿಸುವ ಕೆಲಸ ಆಗಬೇಕೆಂದರು. 

ಸಮ್ಮೇಳನಾಧ್ಯಕ್ಷರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ಹಾಗೂ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ದುಡಿದವರನ್ನು ಸತ್ಕರಿಸಲಾಯಿತು.

ಸ್ಥಳೀಯ ಮುಖಂಡರಾದ ಎಂ. ರಾಜಕುಮಾರ್, ಬಿ. ಕೃಷ್ಣಪ್ಪ, ಜಿ. ಮುನಿರಾಜು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

 ರಾಗಿ ಮುದ್ದೆ, ಹಿದಕವರೆಬೇಳೆ ಸಾರಿನ ಸವಿ....

ಯಶವಂತಪುರ ವಿಧಾನಸಭಾ ಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನವರಿ ೯ ಹಾಗೂ ೧೦ರಂದು ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಕ್ಷೇತ್ರವಾರು ಮಟ್ಟದಲ್ಲಿ ನಡೆದ ಸಮ್ಮೇಳನಗಳ ಪೈಕಿ ಅಭೂತಪೂರ್ವವಾಗಿತ್ತೆಂಬುದರಲ್ಲಿ ಸಂದೇಹವೇ ಇಲ್ಲ.

ಸಮ್ಮೇಳನ ಎಷ್ಟು ಅಚ್ಚುಕಟ್ಟಾಗಿತ್ತೋ, ಊಟದ ವ್ಯವಸ್ಥೆಯೂ ಅಷ್ಟೇ ಅಚ್ಚುಕಟ್ಟಾಗಿತ್ತು. ಮೊದಲ ದಿನ ಸಂಜೆ ಉದ್ಘಾಟನಾ ಸಮಾರಂಭದ ನಂತರ ನಗರ ಪ್ರದೇಶದ ಜನ ಮೆಚ್ಚುವ ಬಿಸಿಬೇಳೆ ಬಾತ್ ಊಟ ಹಾಕಿಸಿದರೆ, ಮಾರನೆ ದಿನ ಬೆಳಗ್ಗೆ ಕೆಂಗೇರಿ ಖ್ಯಾತಿಯ ತಟ್ಟೆ ಇಡ್ಲಿ ಚಟ್ನಿ, ಮಧ್ಯಾಹ್ನ ರಾಗಿ ಮುದ್ದೆ ಮತ್ತು ಹಿದಕವರೆಬೇಳೆ ಸಾರು ಎಲ್ಲ ಸಾಹಿತ್ಯಾಭಿಮಾನಿಗಳ ಹೊಟ್ಟೆ ತುಂಬಿಸುವುದರ ಜೊತೆಗೆ ನಾಲಿಗೆಗೆ ಸವಿ ನೀಡುವಲ್ಲಿ ಯಶಸ್ವಿಯಾಯ್ತು.

ಎರಡೂ ದಿನವೂ ಸಭಾ ಭವನದಲ್ಲಿ ಕಿಕ್ಕಿರಿದು ತುಂಬಿದ್ದು ೬೦೦ಕ್ಕೂ ಹೆಚ್ಚು ಜನರಿಗೆ ಯಾವುದೇ ಕೊರತೆ ಆಗದಂತೆ ಊಟದ ವ್ಯವಸ್ಥೆ ಮಾಡಿದ ಕ.ಸಾ.ಪ. ಇತರರಿಗೆ ಮಾದರಿಯಾಗಿತ್ತು.

 ಹಾರ, ತುರಾಯಿ ಇಲ್ಲದ ಪುಸ್ತಕ ಸ್ವಾಗತ

ಯಶವಂತಪುರ ಕನ್ನಡ ಸಾಹಿತ್ಯ ಪರಿಷತ್ತು ಮೊಟ್ಟ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ವಿಶೇಷಗಳಿಂದ ಕೂಡಿತ್ತು. ಈ ಸಮ್ಮೇಳನಕ್ಕೆ ಆಗಮಿಸಿದ್ದ ಎಲ್ಲ ಆಹ್ವಾನಿತರಿಗೆ, ಗಣ್ಯರಿಗೆ ಹಾರ, ತುರಾಯಿ ಹಾಕುವ ಬದಲು ಪುಸ್ತಕ ನೀಡಿ ಸ್ವಾಗತಿಸಿದ್ದು ವಿಶೇಷವಾದರೆ, ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸುವಾಗ ನೆನಪಿನ ಕಾಣಿಕೆಗಳ ಬದಲು ಎಲ್ಲರಿಗೂ ಕನ್ನಡದ ಸಸಿಯನ್ನು ನೀಡಿದ್ದು ಎಲ್ಲರ ಗಮನ ಸೆಳೆಯಿತು. ಹಸಿರೇ ಉಸಿರು ಎಂಬ ಸಂದೇಶ ಸಾರಿದ ಈ ಸಮ್ಮೇಳನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ರೂವಾರಿಗಳಿಗೆ ಅಭಿನಂದನೆ

ಕ್ಷೇತ್ರವಾರು ಮಟ್ಟದಲ್ಲಿ ಅಚ್ಚುಕಟ್ಟಾದ ಸಮ್ಮೇಳನ ಆಯೋಜಿಸಿದ ಯಶವಂತಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್.ಎಸ್. ಸುಧೀಂದ್ರಕುಮಾರ್, ಗೌ.ಕಾರ್ಯದರ್ಶಿಗಳಾದ ವಾದಿರಾಜ್, ವೆಂಕಟಪ್ಪ, ಗೌ.ಕೋಶಾಧ್ಯಕ್ಷರಾದ ವಿ.ವಿ.ಸತ್ಯನಾರಾಯಣ, ಪದಾಧಿಕಾರಿಗಳಾದ ಎ.ಎನ್. ಶಿವಸ್ವಾಮಿ, ಎನ್. ನಾಗೇಶ್, ರತ್ನಾ ರಾಘವನ್ ಹಾಗೂ ಪುಟ್ಟಮಾರಯ್ಯ ಅವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಗೌರವಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಪುಂಡಲೀಕ ಹಾಲಂಬಿ, ಕೆಂಗೇರಿಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಎಲ್ಲ  ಪದಾಧಿಕಾರಿಗಳೂ ಅಭಿನಂದನೆಗೆ ಪಾತ್ರರು ಎಂದರು.

ಮುಖಪುಟ /ಸಾಹಿತ್ಯ