ಮುಖಪುಟ /ಸಾಹಿತ್ಯ

ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಜಿ.ವಿ. ಆಯ್ಕೆ

ಪ್ರೊ.ಜಿ. ವೆಂಕಟಸುಬ್ಬಯ್ಯಬೆಂಗಳೂರು, .೧೦: ಕನ್ನಡ ಭಾಷೆಯನ್ನು ಸಮೃದ್ಧ ಹಾಗೂ ಶ್ರೀಮಂತಗೊಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ಹಿರಿಯ ಸಾಹಿತಿ ನಿಘಂಟು ತಜ್ಞ ಪ್ರೋ: ಜಿ. ವೆಂಕಟಸುಬ್ಬಯ್ಯ ಅವರನ್ನು ೭೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ  ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

ನಗರದಲ್ಲಿಂದು ಬೆಳಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ಚಿಂತಕ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.  

ಡಿಸೆಂಬರ್ ೨೪ ರಿಂದ ೨೭ ರ ವರೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ೭೭ನೇ ಸಾಹಿತ್ಯ ಸಮ್ಮೇಳನದಲ್ಲಿ ನಿಘಂಟು ತಜ್ಞ ಪ್ರೋ: ಜಿ. ವೆಂಕಟಸುಬ್ಬಯ್ಯ ಅವರು ಕನ್ನಡದ ಹಬ್ಬದ ಗೌರವ ಪಡೆಯಲಿದ್ದಾರೆ.

ಸಮ್ಮೇಳನಾಧ್ಯಕ್ಷತೆಗಾಗಿ  ಹಿರಿಯ ಸಾಹಿತಿಗಳಾದ ಹಂಪ ನಾಗರಾಜಯ್ಯ, ಸಿ.ಪಿ. ಕೃಷ್ಣಕುಮಾರ್, ಡಾ.ಎಂ. ಚಿದಾನಂದಮೂರ್ತಿ ಅವರ ಹೆಸರುಗಳು ಕಾರ್ಯಕಾರಿ ಸಮಿತಿ ಸಭೆಯ ಮುಂದೆ ಪ್ರಸ್ತಾಪವಾದವು.  ಅಂತಿಮವಾಗಿ ಹಿರಿಯರಾದ ವೆಂಕಟಸುಬ್ಬಯ್ಯ ಅವರನ್ನು ಎಲ್ಲ ಜಿಲ್ಲಾಧ್ಯಕ್ಷರು ಮತ್ತು ನಾಮನಿರ್ದೇಶಿತ ಸದಸ್ಯರು  ಒಮ್ಮತದಿಂದ ಅನುಮೋದಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ಡಾ|| ನಲ್ಲೂರು ಪ್ರಸಾದ್ ಹೇಳಿದರು.

೧೯೧೩ ರ ಆಗಸ್ಟ್ ೨೧ ರಂದು ಮಂಡ್ಯ ಜಿಲ್ಲೆಯ ಕೈಗೋನ ಹಳ್ಳಿಯಲ್ಲಿ ಜನಿಸಿದ ವೆಂಕಟಸುಬ್ಬಯ್ಯ, ಮೂಲತ: ಸಂಸ್ಕೃತ ಮತ್ತು ಕನ್ನಡ ವಿದ್ವಾಂಸರು. ತಮ್ಮ ವಿದ್ಯಾಭ್ಯಾಸದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಉಪನ್ಯಾಸಕ ಪ್ರಾಧ್ಯಾಪಕರಾಗಿ ಆನಂತರ ಪ್ರಾಂಶುಪಾಲರಾಗಿ ೪೮ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಸಂಶೋಧನೆ, ಅನುವಾದ, ವಿಮರ್ಶೆ, ಗ್ರಂಥ ಸಂಪಾದನೆ, ನಿಘಂಟು  ರಚನೆ ಮೊದಲಾದ ಕ್ಷೇತ್ರಗಳಲ್ಲಿ ದುಡಿದಿರುವ ಅವರು ತಮ್ಮ ಈ ಇಳಿ ವಯಸ್ಸಿನಲ್ಲೂ ಸಕ್ರಿಯವಾಗಿ ಕನ್ನಡ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರೋ: ಜಿ.ವಿ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ. ಇಂಗ್ಲಿಷ್ - ಕನ್ನಡ ನಿಘಂಟು, ಕ್ಲಿಷ್ಟ ಪದಕೋಶ, ಕನ್ನಡ- ಕನ್ನಡ ನಿಘಂಟು, ಹೋಯ್ಸಳ ಕರ್ನಾಟಕ ರಜತೋತ್ಸವ ಸಂಪುಟ, ಮುದ್ದಣ ಭಂಡಾರ ಭಾಗ ೧ ಮತ್ತು ೨, ಹಾಗೂ ಕಾವ್ಯಲಹರಿ ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಲವು ಸಂಶೋಧನೆ ಹಾಗೂ ವಿಮರ್ಶಾತ್ಮಕ ಲೇಖನಗಳನ್ನೂ ಬರೆದಿದ್ದಾರೆ.

ಇವರು ರಚಿಸಿದ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಸಾಮಾಜಿಕ ನಿಘಂಟು, ಅಂಕಣ ಬರಹ ಸಂಗ್ರಹ ಇಗೋ ಕನ್ನಡ ಕನ್ನಡ ಭಾಷೆಗೆ ಇವರ ವಿಶಿಷ್ಟ ಕೊಡುಗೆಯಾಗಿದ್ದು ಪ್ರಪ್ರಥಮ ಹಾಗೂ ವಿನೂತನ ಪ್ರಯತ್ನವಾಗಿದೆ.

ಕನ್ನಡ ಭಾಷೆಯಲ್ಲಿ ಹೇರಳ ಪದ ಸಂಪತ್ತಿದ್ದು, ಇನ್ನೂ ಹತ್ತು ಸಾವಿರ ಪದಗಳ ಬೃಹತ್ ನಿಘಂಟು ಸಿದ್ಧಪಡಿಸಬಹುದಾಗಿದ್ದು, ಈ ಕಾರ್ಯಕ್ಕೆ ಯಾರೇ ಮುಂದಾದರೂ ತಾವು ಸಂಭಾವನೆಯನ್ನೂ ಪಡೆಯದೇ ಕೆಲಸ ಮಾಡಲು ಸಿದ್ಧ ಎಂದು ಇತ್ತೀಚೆಗೆ ಘೋಷಿಸಿದ್ದ ಅವರ ಕನ್ನಡದ ಕಳಕಳಿ ಎಲ್ಲರಿಗೂ ಅನುಕರಣೀಯ.

ನಿಘಂಟು ಸಾರ್ವಭೌಮ, ಪದಬ್ರಹ್ಮ, ಶಬ್ದಗಾರುಡಿಗ ಎಂಬೆಲ್ಲಾ ಬಿರುದುಗಳಿಗೆ ಪಾತ್ರರಾಗಿರುವ ಪ್ರೋ.ಜಿ.ವಿ. ನೇರ, ನಿಷ್ಠುರವಾದಿ. ಕನ್ನಡದ ವಿಚಾರ ಬಂದಾಗ ಎಂದೂ ರಾಜಿಗೆ ಒಪ್ಪಿಕೊಳ್ಳದ ಅವರು, ಕನ್ನಡ ಕೈಂಕರ್ಯಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ೧೯೭೩ ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರವೂ ಸೃಜನಶೀಲ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ

ಮುಖಪುಟ /ಸಾಹಿತ್ಯ