ಮುಖಪುಟ /ಸಾಹಿತ್ಯ

ನಾಲಿಗೆಯಂತಿರಬೇಕು

*ಶೋಭಾ.ಎನ್.

ಅಂದು ರಾತ್ರಿ  ಬಹಳ ಬಿಡುವಾಗಿ ರಾತ್ರಿ ಮನೆಯಲ್ಲಿ  ವಿಶ್ರಮಿಸಿಕೊಳ್ಳುತ್ತಿದ್ದೆ. ಮಗ ಋತ್ವಿಕ ಎಂದಿನಂತೆ ಕಥೆ ಕೇಳುವ ಸಲುವಾಗಿಯೇ ಬಂದು ಪಕ್ಕದಲ್ಲಿ ಕುಳಿತಿದ್ದ.

 ನಾನು ಕಳೆದ ಸಂಚಿಕೆಯಲ್ಲಿ  ಬರೆದಿದ್ದ  ಮಾತೇ ಮುತ್ತು ಮಾತೇ ಮೃತ್ಯ ಕಥೆಯನ್ನು ಮೆಲುಕು ಹಾಕುತ್ತಾ ಚರ್ಚೆಗಿಳಿಯುವ ಮೂಲಕ... ಕಥೆ ಕೇಳಲು ಪೀಠಿಕೆ ಹಾಕಿದ.

 ಅಮ್ಮ ... ಮಾತು ಎಷ್ಟೊಂದು ಮಹತ್ವ  ಅಲ್ಲವೇ. ನಾವು ಎಚ್ಚರ ತಪ್ಪಿ ಮಾತಾಡಿದರೆ ಅನಾಹುತ ಆಗುತ್ತದೆ ಅಲ್ಲವೇ? ಹಾಗಾದರೆ ನಾವು ಹೇಗೆ ಮಾತನಾಡಬೇಕು. ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು? ಎಂಬುದೂ ಮುಖ್ಯ. ಆದರೆ, ಕೆಲವರು ಏನೂ ಗೊತ್ತಿಲ್ಲದಿದ್ದರೂ ತಮಗೆ ಎಲ್ಲ ಗೊತ್ತು ಎಂಬಂತೆ ಮಾತನಾಡುತ್ತಾರೆ.  ನಾವೇ  ಶ್ರೇಷ್ಠರು, ನಾವೇ ಬಲಿಷ್ಠರು ಎಂದು ಹೇಳಿಕೊಂಡು ಜನರನ್ನು ಮೋಸಗೊಳಿಸಲು ಹೋಗಿ ತಾವೇ ಸಿಕ್ಕಿಹಾಕಿಕೊಳ್ಳುತ್ತಾರೆ. ಅಲ್ಲವೇ ಎಂದಾಗ. ಹೌದಲ್ಲವೇ ಎಂದು ಕೆಲ ಕಾಲ ನಾನೇ ಚಿಂತೆಯಲ್ಲಿ ಮುಳುಗಿದೆ.

 ಅಮ್ಮ ಏಕೆ ಸುಮ್ಮನಾದೆ... ಹೌದೋ ಅಲ್ಲವೋ ಹೇಳು.. ಎಂದು ಮಗ ಮತ್ತೆ ದುಂಬಾಲು ಬಿದ್ದಾಗ.. ಹೌದು ಅದಕ್ಕೇ ಹಿರಿಯರು ಹೇಳುವುದು ಮಾತೇ ಮುತ್ತು ಮಾತೇ ಮೃತ್ಯು ಎಂದು. ನಿನ್ನ ಮಾತು ನಿಜ ಎಂದು ಒಪ್ಪಿಕೊಂಡೆ. ಆದರೆ, ನಾವೇ ಶ್ರೇಷ್ಠ ಎಂದು ಹೇಳಿಕೊಳ್ಳುವ ಇಂಥ ವಂಚಕ ಶ್ರೇಷ್ಠರು ಬಹುಕಾಲ ಬಾಳಲಾರರು. ಇದು ಕೇವಲ ನೀರಿನ ಮೇಲಿನ ಗುಳ್ಳೆಯಂತೆ. ಎಂದಿಗೂ ಗೆಲ್ಲುವುದು ನಿಜ ಪ್ರತಿಭೆ ಮಾತ್ರ ಎಂದು ಹೇಳಿದೆ.

 ಅದು ಹೇಗೆ? ಎಂಬ ಮಗನ ಪೂರಕ ಪ್ರಶ್ನೆಗೆ ಕಥೆಯೊಂದರ ಮೂಲಕವೇ ಉತ್ತರ ನೀಡಲು ಮುಂದಾದೆ. ಆ ಕಥೆ ಏನು ಗೊತ್ತೆ..?

ಆಗ ಸೀತಾಪಹರಣವಾಗಿತ್ತು. ಶ್ರೀರಾಮನ ಆಣತಿಯಂತೆ ಸೀತೆಯನ್ನು ಹುಡುಕುತ್ತಾ ಬಂದ ಹನುಮಂತ ಲಂಕೆಯನ್ನು ಪ್ರವೇಶಿಸಿದ. ಸೀತಾ ಮಾತೆ ಎಲ್ಲಿದ್ದಾರೆ ಎಂದು ಹುಡುಕತೊಡಗಿದ. ದೊಡ್ಡ ದೊಡ್ಡ ಕಟ್ಟಡಗಳನ್ನೆಲ್ಲಾ ಹುಡುಕಿದ. ರಾತ್ರಿಯಾದರೂ ಸೀತಾ ಮಾತೆಯನ್ನು ನೋಡಲಾರದೆ ಹತಾಶನಾದ. ಆಗ ಅವಗೆ ಉಪ್ಪರಿಗೆಯ ಮೇಲಿಂದ ರಾಮನಾಮ ಕೇಳಿಸಿತು. ಲಂಕೆಯಲ್ಲಿ ರಾಮ ನಾಮವೇ ಎಂದು ಆಶ್ಚರ್ಯ ಚಕಿತನಾಗಿ ಅಲ್ಲಿ ಹೋಗಿ ನೋಡಿದ. ರಾವಣನ ಸೋದರ ವಿಭೀಷಣ ರಾಮನಾಮ ಜಪಿಸುತ್ತಿದ್ದ. ವಿಭೀಷಣನನ್ನು ಎಚ್ಚರಿಸಿದ ಹನುಮಂತ ತನ್ನ ಪರಿಚಯ ಹೇಳಿಕೊಂಡ. ತಾನು ಬಂದ ಕಾರಣವೇನು ಎಂಬುದನ್ನೂ ತಿಳಿಸಿದ. ಆಗ ವಿಭೀಷಣ ರಾವಣ ಸೀತಾಮಾತೆಯನ್ನು ಅಶೋಕವನದಲ್ಲಿ ಬಂಧಿಸಿಟ್ಟಿರುವ ವಿಷಯ ತಿಳಿಸಿದ. ಕೃತಜ್ಞತೆ ಹೇಳಿ ಹನುಮಂತ ಹೊರಡಲು ಸಿದ್ಧನಾದ. ಆದರೆ ಅವನಿಗೆ ಒಂದು ಪ್ರಶ್ನೆ ಕಾಡಿತು. ಮತ್ತೆ ಹಿಂತಿರುಗಿ ಬಂದು. ವಿಭೀಷಣನನ್ನು ಕೇಳಿದ. ಅಯ್ಯಾ ನು ಸದ್ಗುಣಗಳಿಂದ ಕೂಡಿದವನಾಗಿದ್ದೀಯೇ. ಈ ರಾಕ್ಷಸರ ನಡುವೆ ನೀನು ಹೇಗೆ ಇದ್ದೀಯೇ? ಆಗ ವಿಭೀಷಣ ಹೇಳಿದ. ನಾನು ಹಲ್ಲುಗಳ ನಡುವೆ ನಾಲಿಗೆಯಂತೆ ಇದ್ದೇನೆ. ಈ ಮಾತು ಹನುಮಂತಗೆ ಅರ್ಥವಾಗಲಿಲ್ಲ. ಈಗ ವಿಭೀಷಣನನ್ನೇ ವಿವರವಾಗಿ ಹೇಳುವಂತೆ ಕೋರಿದ. ವಿಭೀಷಣ ಹೀಗೆ ವಿವರಿಸಿದ. ಹಲ್ಲುಗಳು ಗಟ್ಟಿ - ಕಠಿಣ ಹೃದಯದ ರಾಕ್ಷಸರಂತೆ. ನಾಲಿಗೆ ಮೃದು ಕರುಣಾರಸದಿಂದ ಕೂಡಿದ ರಾಮಭಕ್ತನಂತೆ. ನಾನು ಈ ರಾಕ್ಷಸರ ನಡುವೆ ನಾಲಿಗೆಯಂತೆ ರಾಮಭಕ್ತನಾಗಿರುವೆ ಎಂದ. ಆಗ ಹನುಮಂತ ದುಷ್ಟರ ನಡುವೆ ಸಜ್ಜನರು ಇರುವುದು ಕಷ್ಟವಲ್ಲವೇ ಎಂದು ಕೇಳಿದ. ಆಗ ವಿಭೀಷಣ ಒಂದು ಕಥೆ ಹೇಳಿದ. ಒಮ್ಮೆ ಹಲ್ಲು ಹಾಗೂ ನಾಲಿಗೆಗೆ ಜಗಳವಾಯಿತು. ನಾವು ೩೨ ಜನ ಇದ್ದೇವೆ. ನೀನೇನಾದರೂ ನಮ್ಮ ತಂಟೆಗೆ ಬಂದರೆ ಕಚ್ಚಿ ಹಾಕುತ್ತೇವೆ ಎಂದಿತು. ಆಗ ನಾಲಿಗೆ ಹೇಳಿತು. ನಾನು ನಿಮಗಿಂತ ಅಪಾಯಕಾರಿ. ನಾನು ತುಸು ಎಚ್ಚರ ತಪ್ಪಿ ಮಾತನಾಡಿದರೂ ನಿಮಗೇ ಆಪತ್ತು. ಆ ಮಾತು ಕೇಳಿ ಹಲ್ಲುಗಳು ನಕ್ಕವು. ನಾಲಿಗೆಯನ್ನು ಹೀಯಾಳಿಸಿದವು. ಆಗ ನಾಲಿಗೆ ಹೇಳಿತು. ನಾನು ಬಲಶಾಲಿಯಾದ ವ್ಯಕ್ತಿಯೊಬ್ಬನಿಗೆ ಕೆಟ್ಟ ಮಾತುಗಳಿಂದ ಬೈದರೆ ಅವನು ಕಪಾಳ ಮೋಕ್ಷ ಮಾಡುತ್ತಾನೆ. ಆಗ ಉದುರಿ ಬೀಳುವುದು ನೀವೇ ಹೊರತು ನಾನಲ್ಲ. ಆ ಮಾತು ಕೇಳಿ ಹಲ್ಲುಗಳು ಹೆದರಿದವು. ತಮ್ಮ ತಪ್ಪು ಅರಿವಾಗಿ ತಪ್ಪಾಯ್ತು ಎಂದವು. ಈ ಕಥೆ ಹೇಳಿದ ವಿಭೀಷಣ ಹೇಳಿದ ನಾಲಿಗೆ ಮೃದು ನಿಜ. ಆದರೆ ಹೇಡಿಯಲ್ಲ. ನಾನೂ ಕೂಡ ಸಾತ್ವಿಕ ಆದರೆ ಹೇಡಿಯಲ್ಲ. ಈ ಮಾತು ಕೇಳಿ ಹನುಮ ಸಾತ್ವಿಕನ ಶಕ್ತಿಯನ್ನು ಅರಿತ. ಅದಕ್ಕೇ ನಾವೂ ನಾಲಿಗೆಯಂತಿರಬೇಕು ಎಂದು ಹೇಳುವ ಹೊತ್ತಿಗೆ ಮಗ ನಿದ್ರಾದೇವಿಗೆ ಶರಣಾಗಿದ್ದ. 

ಮುಖಪುಟ /ಸಾಹಿತ್ಯ