ಮುಖಪುಟ /ಸಾಹಿತ್ಯ

 

ಸಾಹಿತ್ಯ ಸಮ್ಮೇಳನಗಳೂ ನಿರ್ಣಯಗಳೂ 

kasapa kannada sahitya parishadಸಾಹಿತ್ಯ ಸಮ್ಮೇಳನ ಎಂದರೆ ಅದು ಕನ್ನಡದ ಹಬ್ಬ. ಕನ್ನಡದ ಜಾತ್ರೆ, ಅಕ್ಷರ ಜಾತ್ರೆ. ಕನ್ನಡ ತೇರು ಎಳೆಯಲು ಪ್ರತಿವರ್ಷ ಲಕ್ಷಾಂತರ ಕನ್ನಡಾಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಲೆಯುತ್ತಾರೆ. ಕನ್ನಡ ನಾಡು ನುಡಿ ಪರಂಪರೆ, ಕನ್ನಡದ ಇಂದಿನ ಸ್ಥಿತಿಗತಿ, ಮುಂದಿನ ಗತಿಯ ಬಗ್ಗೆಯೂ ಚಿಂತಿಸುತ್ತಾರೆ. ಚರ್ಚಿಸುತ್ತಾರೆ. ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸಗಳು, ಸಾಹಿತ್ಯ ಗೋಷ್ಠಿಗಳು, ಸಾಹಿತ್ಯ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ. ಸ್ಥಳೀಯ ಸಾಧಕರಿಗೆ ಸನ್ಮಾನ ಬಹಿರಂಗ ಅಧಿವೇಶನ, ಪುಸ್ತಕ ಪ್ರದರ್ಶನ, ಮಾರಾಟ, ಕನ್ನಡ ಹಿತರಕ್ಷಿಸುವ ಹಲವು ನಿರ್ಣಯಗಳ ಸ್ವೀಕಾರ. ಮುಂದಿನ ಸಮ್ಮೇಳನ ನಡೆಯುವ ಸ್ಥಳದ ನಿಗದಿ ಇತ್ಯಾದಿ ಕಾರ್ಯಕ್ರಮ ನಡೆಯುತ್ತದೆ.

ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಕನ್ನಡಾಸಕ್ತರಿಗೆ ಸಂತೃಪ್ತಿಯಾಗುವಂತೆ ಊಟೋಪಚಾರ, ಆತಿಥ್ಯದ ಏರ್ಪಾಟೂ ಇರುತ್ತದೆ. ಪ್ರತಿವರ್ಷ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರು ಕನ್ನಡದ ಸ್ಥಿತಿ, ಕನ್ನಡದ ಹಿರಿಮೆ, ಕನ್ನಡಭಾಷೆಯ ಬೆಳವಣಿಗೆಗೆ ಆಗಬೇಕಿರುವ ಕೆಲಸಗಳ ಬಗ್ಗೆ ತಮ್ಮ ವಿಚಾರಧಾರೆ ಹರಿಸುತ್ತಾರೆ. ಪತ್ರಿಕೋದ್ಯಮ, ಜನಪದ, ಶಿಕ್ಷಣ, ಕಲೆ, ಸಂಸ್ಕೃತಿ, ಹೀಗೆ ವಿವಿಧ ಮಜಲುಗಳ ಕ್ಷೇತ್ರಗಳ ಸ್ಥಿತಿಗತಿಯ ಬಗ್ಗೆಯೂ ವಿಚಾರ ವಿನಿಮಯ ನಡೆಯುತ್ತದೆ. ಕಾರ್ಯಕ್ರಮದ ಬಹುತೇಕ ಎಲ್ಲ ಗೋಷ್ಠಿಗಳಲ್ಲೂ ಕನ್ನಡದ ಅವನತಿಯ ಬಗ್ಗೆ ಆತಂಕ ವ್ಯಕ್ತವಾಗುತ್ತದೆ. ಕನ್ನಡ ಭಾಷೆ ತನ್ನ ಸ್ಥಾನ, ಔನ್ನತ್ಯ ಉಳಿಸಿ ಬೆಳೆಸಿಕೊಳ್ಳುವಲ್ಲಿ ಪ್ರಭುತ್ವದ ಜೊತೆಗೆ ಕೆಲವು ಕುತ್ತುಗಳನ್ನು ನಿರ್ಮಿಸಿಕೊಳ್ಳುತ್ತಿದ್ದು ಬರುವ ದಿನಗಳಲ್ಲಿ ಅದು ಕನ್ನಡಕ್ಕೆ ಪರಿಣಮಿಸೀತೆಂಬ ಎಚ್ಚರಿಕೆಯೂ ಮೊಳಗುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆಗೆ ಶಿಕ್ಷಣ ಹಾಗೂ ಅಧಿಕಾರ, ಆಡಳಿತದಲ್ಲಿ ಸಿಂಹಾಸನ ಸ್ಥಾನವಿರಬೇಕು ಎಂಬ ಕೂಗು ಬರುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ಸಂಪ್ರದಾಯದಂತೆ ನಿರ್ಣಯಗಳ ಸ್ವೀಕಾರವೂ ಆಗುತ್ತದೆ. ಆದರೆ, ಆ ನಿರ್ಣಯಗಳು ಏನಾಗುತ್ತವೆ. ಜಾರಿಗೆ ಬರುತ್ತವೆಯೇ. ಬಂದರೆ ಎಷ್ಟು ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.

ಬರುವ ಶೈಕ್ಷಣಿಕ ವರ್ಷದಿಂದಲೇ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ಕಟ್ಟು ನಿಟ್ಟಾದ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಗೋಕಾಕ್ ಮಾದರಿಯ ಹೋರಾಟ ಅನಿವಾರ್ಯ ಎಂಬ ನಿರ್ಣಯವನ್ನು ೬೩ನೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನೆನಪು. ಆದರೆ ಇದು ಈ ವರೆಗೆ ಜಾರಿಗೆ ಬಂದಿಲ್ಲ.

ಅಂತಾರಾಜ್ಯ ವಲಸೆ, ಕಾವೇರಿ - ಕೃಷ್ಣ ಜಲವಿವಾದ, ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ, ಹೈದ್ರಾಬಾದ್ ಕರ್ನಾಟಕಕ್ಕೆ ಸಂವಿಧಾನದ ೩೭೧ನೇ ವಿಧಿಯನ್ವಯ ವಿಶೇಷ ಸ್ಥಾನಮಾನ ನೀಡಬೇಕು ಎಂಬಿತ್ಯಾದಿ ಹಲವು ಹತ್ತು ನಿರ್ಣಯಗಳನ್ನು ಹಿಂದಿನ ಸಮ್ಮೇಳನಗಳಲ್ಲಿ ಸಮಸ್ತ ಕನ್ನಡಿಗರ ಪರವಾಗಿ ಕೈಗೊಳ್ಳಲಾಗಿದೆ. ಎಲ್ಲ ಕನ್ನಡಿಗರ ಆಶಯವೂ ಈ ನಿರ್ಣಯಗಳ ಜಾರಿ ಆಗಬೇಕು ಎಂಬುದೇ ಆಗಿದೆ. ಆದರೆ ಆಗಿದೆಯೇ

ಪ್ರಾದೇಶಿಕ ಅಸಮತೋಲನ, ಉನ್ನತ ಶಿಕ್ಷಣದಲ್ಲಿ ಕೂಡ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವ ಬಗ್ಗೆ, ವೃತ್ತಿ ಶಿಕ್ಷಣದಲ್ಲಿ ಕನ್ನಡ ಭಾಷೆಯ ವಿಷಯ ಕೇವಲ ಔಪಚಾರಿಕವಾಗದೆ, ಕಡ್ಡಾಯ ಮಾಡುವ ವಿಷಯ ಹಾಗೂ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಹಾಜನ್ ವರದಿ ಜಾರಿಗೆ ತರುವಂತೆ ಬಹುತೇಕ ಎಲ್ಲ ಸಮ್ಮೇಳನಗಳಲ್ಲೂ ಒತ್ತಾಯಿಸಲಾಗಿದೆ. ಇಷ್ಟೆಲ್ಲಾ ಆದಾಗ್ಯೂ ನಿರ್ಣಯಗಳು ಏನಾದವು. ಎಷ್ಟರ ಮಟ್ಟಿಗೆ ಜಾರಿಯಾದವು ಎಂಬ ವಿಚಾರಗಳು ನೆನಪಿಗೆ ಬರುವುದೇ ಸಮ್ಮೇಳನ ಸಮಯದಲ್ಲಿ. ಈ ನಿಟ್ಟಿನಲ್ಲಿ ತೀರಾ ಅತ್ಯಗತ್ಯವಾಗಿ ಆಗಲೇಬೇಕಿರುವ ವಿಚಾರಗಳ ಬಗ್ಗೆ ಮಾತ್ರ ನಿರ್ಣಯ ಕೈಗೊಂಡು ಆ ನಿರ್ಣಯಗಳು ಯಥಾವತ್ತಾಗಿ ಜಾರಿಯಾಗುವವರೆಗೆ ಪಟ್ಟು ಬಿಡದೆ ಕೆಲಸ ಮಾಡುವ ಪಣ ತೊಡುವುದು ಇಂದಿನ ಅಗತ್ಯವಾಗಿದೆ. 

ಮುಖಪುಟ /ಸಾಹಿತ್ಯ