ಮುಖಪುಟ /ಸಾಹಿತ್ಯ

ಯಂತ್ರೋಪಕರಣದ ಏಕಾತನತೆಯನ್ನು
ಪುಸ್ತಕ ಸಂಸ್ಕೃತಿ ಭೇದಿಸಬೇಕು - ಕಿ.ರಂ

Mukundraj Book Release Function photoಬೆಂಗಳೂರು, ಜ.4: ಇಂದಿನ ಆಧುನಿಕ ಯುಗದಲ್ಲಿ ಉದ್ಭವವಾಗಿರುವ ಟಿ.ವಿ. ಕಂಪ್ಯೂಟರ್ ಮೊದಲಾದ ಯಂತ್ರೋಪಕರಣಗಳ ಏಕಾತಾನತೆಯನ್ನು ಪುಸ್ತಕ ಸಂಸ್ಕೃತಿಯೇ ಭೇದಿಸಬೇಕು ಎಂದು ಹಿರಿಯ ಚಿಂತಕ ಪ್ರೊ. ಕಿ.ರಂ.ನಾಗರಾಜ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಾಲ್ಕುರಿಕೆ ಥಿಯೇಟರ್ ಮಿರರ್ ಹಾಗೂ ಭಾರತ ಯಾತ್ರಾ ಕೇಂದ್ರ ಆಶ್ರಯದಲ್ಲಿ ನಡೆದ ಕವಿ ಎಲ್.ಎನ್. ಮುಕುಂದರಾಜ್ ಅವರ ಪುಸ್ತಕ ಮತ್ತು ಸಿ.ಡಿ. ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕವಿ ಎಂದೂ ವಿಮರ್ಶಕನಿಗೆ ಹೆದರುವ ಅಗತ್ಯವಿಲ್ಲ, ಕಾವ್ಯದಲ್ಲಿ ಕವಿತ್ವದಲ್ಲಿ ಮಾತು ಅತಿಯಾದರೂ ಅದು ವೈಫಲ್ಯವೇನಲ್ಲ, ಕಾವ್ಯದಲ್ಲಿ ಅಡಗಿದ ಮಾತು ಸತ್ವಯುತವಾಗಿರಬೇಕಷ್ಟೇ ಎಂದು ಹೇಳಿದರು.

ಮುಕುಂದರಾಜ್ ವಿರಚಿತ ವಿಲೋಮ ಚರಿತೆ ಕವನ ಸಂಕಲನ ಹಾಗೂ ವಿಯತ್ತಳ ವಿಹಾರಿ ಗದ್ಯ ಕೃತಿ ಲೋಕಾರ್ಪಣೆ ಮಾಡಿದ ಸಾಹಿತಿ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಚಂದ್ರಶೇಖರ ಕಂಬಾರ ಇಂದು ಕವಿತೆಗಳಲ್ಲಿ ಕೇವಲ ಶಬ್ದಗಳ ಆಲೋಚನೆಯೇ ಅಡಕವಾಗುತ್ತಿದೆ. ಇದು ಅಪಾಯಕಾರಿ ಎಂದರು.

ಕಾವ್ಯಗಳು ವಿಮರ್ಶಕನ ಮೆಚ್ಚುಗೆಗೆ ಪಾತ್ರವಾಗುವ ಅಗತ್ಯವಿಲ್ಲ, ಓದುವ ಪ್ರತಿಯೊಬ್ಬರಿಗೂ ಹೃದಯ ಮುಟ್ಟಿದರೆ ಅದು ಸಾರ್ಥಕ ಕಾವ್ಯ ಎಂದರು.

ನನ್ನೊಳಗಿನ ಹಾಡು ಸಿಡಿಯನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ಎಂ. ನಾಗರಾಜ್ ಬಿಡುಗಡೆ ಮಾಡಿದರು.

ಕೃತಿ ಕುರಿತು ಮಾತನಾಡಿದ ಸಾಹಿತಿ ಡಾ. ಎಲ್. ಹನುಮಂತಯ್ಯ ಗ್ರಾಮೀಣ ಹಿನ್ನೆಲೆಯಲ್ಲಿ ಬಂದ ಮುಕುಂದರಾಜ್ ಅವರಂಥ ಕವಿಗಳಿಂದ ನಮ್ಮ ಭಾಷಾ ಸಂಪತ್ತು ಔನ್ನತ್ಯ ಸಾಧಿಸುತ್ತಿದೆ ಎಂದರು.

ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಸಾಹಿತ್ಯ ಪರಿಚಾರಕರಾಗಿ, ಕವಿಯಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಮುಕುಂದರಾಜ್ ಮೊದಲ ಗದ್ಯ ಕೃತಿಯಲ್ಲೇ ಭರವಸೆ ಮೂಡಿಸಿದ್ದಾರೆ ಎಂದರು.

ಕವಿ ಮುಕುಂದರಾಜ್ ತಮ್ಮೊಳಗೆ ಕವಿತ್ವ ಹುಟ್ಟಲು ಪ್ರೇರೇಪಣೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್. ಮಾರಪ್ಪ, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು. ಕನ್ನಡ ಗೀತೆ ಗಾಯನ ಹಾಗೂ ಕವಿಮೇಳ ನಡೆಯಿತು.

 

ಮುಖಪುಟ /ಸಾಹಿತ್ಯ