ಮುಖಪುಟ /ಸಾಹಿತ್ಯ

ರಿಷತ್ತಿನ ಅಧಿಕೃತ ಅಂತರ್ಜಾಲ ತಾಣಕ್ಕೆ ಚಾಲನೆ

ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣ ಉದ್ಘಾಟನೆ ಸಮಾರಂಭ. ಚಿತ್ರದಲ್ಲಿ ಮನು ಬಳಿಗಾರ್, ನಲ್ಲೂರು ಪ್ರಸಾದ್, ಮಳಲಿಗೌಡ ಹಾಗೂ ಟಿ.ಎಂ. ಸತೀಶ್ ಇದ್ದಾರೆ.ಬೆಂಗಳೂರು, ಫೆ.೧೬: ಆಧುನಿಕ ಯುಗಮಾನದ ಅಗತ್ಯಗಳಿಗೆ ಸ್ಪಂದಿಸಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದ್ದು, ಇಂದು ಪರಿಷತ್ತಿನ ಅಧಿಕೃತ ಅಂತರ್ಜಾಲ ತಾಣ www.kasapa.kar.nic.in  ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಾಳಿಗಾರ್ ಬೆಂಗಳೂರಿನಲ್ಲಿಂದು ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಹಾಗೂ ಅದರ ಕಾರ್ಯಚಟುವಟಿಕೆ ವಿಶ್ವಕ್ಕೇ ತಿಳಿಯಲು ಈ ತಾಣ ಸಾಧನವಾಗಲಿದೆ ಎಂದರು. ಈ ಹಿಂದೆಯೂ ಅಂತರ್ಜಾಲ ವಿಶ್ವದಲ್ಲಿ ಹಲವು ಉತ್ತಮ ಕಾರ್ಯಮಾಡಿ ಜನಮೆಚ್ಚುಗೆಗೆ ಪಾತ್ರವಾಗಿರುವ ಕನ್ನಡರತ್ನ.ಕಾಂನ ಸಂಪಾದಕರಾದ ಟಿ.ಎಂ.ಸತೀಶ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ವೆಬ್ ತಾಣದ ನಿರ್ವಹಣೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ತಾಣ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಇತಿಹಾಸ, ಸಾಹಿತ್ಯ ತಿಳಿಸುವ ತಾಣವಾಗಲಿ ಎಂದು ಹಾರೈಸಿದರು.

ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಮಾತನಾಡಿ,ಈ ತಾಣದಲ್ಲಿ, ಅಧ್ಯಕ್ಷರು, ಪದಾಧಿಕಾರಿಗಳು, ಪರಿಷತ್ತಿನ ಪ್ರಕಟಣೆಗಳು, ಸಂಶೋಧನೆ ಇತ್ಯಾದಿ ಹತ್ತು ಹಲವು ವಿಷಯಗಳನ್ನು ಜಗತ್ತಿನಾದ್ಯಂತ ನೆಲೆಸಿರುವ ಕನ್ನಡಿಗರೆಲ್ಲರಿಗೂ ತಲುಪಿಸಲು ಎಂಬ ಹೆಸರಿನ ಪರಿಷತ್ತಿನ ಅಧಿಕೃತ ಅಂತರ್ಜಾಲ ತಾಣವನ್ನು ನಿರ್ಮಿಸಲಾಗಿದೆ.

ka.sa.pa. web siteಈ ತಾಣದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದ ಸ್ಥಳ, ವರ್ಷ, ಅಧ್ಯಕ್ಷರು ಮೊದಲಾದ ವಿವರಗಳನ್ನು ನೀಡಲಾಗಿದೆ. ಗದಗ್‌ನಲ್ಲಿ ನಡೆಯಲಿರುವ ೭೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾಳನಾಧ್ಯಕ್ಷರು ತಮ್ಮ ಭಾಷಣ ಮಾಡಿದ ತರುವಾಯ ಅವರ ಭಾಷಣದ ಪೂರ್ಣ ಲಿಖಿತ ರೂಪವನ್ನು ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ. ಅದೇ ರೀತಿ ಪರಿಷತ್ತಿನ ಅಧ್ಯಕ್ಷರ ಪ್ರಾಸ್ತಾವಿಕ ನುಡಿಯನ್ನು ಸಹ ಭಾಷಣಾನಂತರ ಪ್ರಕಟಿಸಲಾಗುತ್ತದೆ.

ಈ ಹಿಂದೆ ನಿರ್ಮಿಸಲಾಗಿದ್ದ ಅಂತರ್ಜಾಲ ತಾಣ ಹೊಸ ವಿಚಾಗಳಿಂದ ಕೂಡಿಲ್ಲ ಎಂಬುದನ್ನು ಮನಗಂಡು ಪರಿಷತ್ತಿನ ಕಾರ್ಯಚಟುವಟಿಕೆಗಳ ಬಗ್ಗೆ ಆಗಿಂದ್ದಾಗ್ಗೆ ಮಾಹಿತಿ ನೀಡುವ ಸಲುವಾಗಿ ಪರಿಷತ್ತಿನ ಆವರಣದಲ್ಲೇ ಅಂತರ್ಜಾಲ ತಾಣ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ.

ಈ ನಾಡು ಮತ್ತು ಹೊರ ನಾಡ ಕನ್ನಡಿಗರ ನಡುವೆ ಸ್ನೇಹಸೇತುವಾಗಿ ಕಳೆದ ೮ ವರ್ಷಗಳಿಂದಲೂ ಕನ್ನಡರತ್ನ.ಕಾಂ ಅಂತರ್ಜಾಲ ಸುದ್ದಿವಾಹಿನಿಯ ಸಂಪಾದಕರಾಗಿರುವ ಪತ್ರಕರ್ತ ಟಿ.ಎಂ. ಸತೀಶ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ವೆಬ್‌ತಾಣದ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ.

ಮುಂದಿನ ದಿನಗಳಲ್ಲಿ ಪರಿಷತ್ತಿನ ಅಧಿಕೃತ ವೆಬ್‌ತಾಣದಲ್ಲಿ ಪರಿಷತ್ತಿನ ಮುಖವಾಣಿ ಕನ್ನಡ ನುಡಿಯ ಆಯಾ ತಿಂಗಳ ಸಂಚಿಕೆಗಳನ್ನೂ ಪ್ರಕಟಿಸಲಾಗುತ್ತದೆ, ಜೊತೆಗೆ, ಪಂಪ ಮಹಾಕವಿಯಿಂದ ಹಿಡಿದು, ಇತ್ತೀಚಿನ ಸಾಹಿತಿಗಳವರೆಗೆ ಎಲ್ಲ ಕವಿವರೇಣ್ಯರ, ಸಾಹಿತ್ಯ ಸಾಧಕರ, ಸಾಹಿತ್ಯ ಸಂಘಟನೆಗಳ ರೂವಾರಿಗಳ ಮಾಹಿತಿಯನ್ನು ಸಂಕ್ಷಿಪ್ತವಾಗಿ ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಅಳವಡಿಸಿ ಇದನ್ನು ಒಂದು ಆಕರ ತಾಣವಾಗಿ ರೂಪಿಸುವ ಯೋಜನೆ ನಮ್ಮ ಮುಂದಿದೆ ಎಂದರು.

ಐ.ಟಿ.ನಗರಿ ಎಂದು ಖ್ಯಾತವಾದ ಬೆಂಗಳೂರಿನ ವಿವಿಧ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಹ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿ ಮಾಡಿಕೊಳ್ಳುವ ಸಲುವಾಗಿ ಪರಿಷತ್ತಿನ ವೆಬ್ ತಾಣದಲ್ಲಿ ಆನ್‌ಲೈನ್ ಸದಸ್ಯತ್ವ ಅಭಿಯಾನ ಆರಂಭಿಸುವ ಯೋಜನೆಯೂ ಇದೆ.

ಸಾಹಿತ್ಯ ಪರಿಷತ್ತಿನ ಎಲ್ಲ ಜಿಲ್ಲಾ, ತಾಲೂಕು ಮತ್ತು ವಲಯವಾರು ಘಟಕಗಳ ವಿಳಾಸ, ಪದಾಧಿಕಾರಿಗಳ ವಿವರ, ಅಲ್ಲಿ ನಡೆಯುವ ಸಾಹಿತ್ಯಿಕ ಚಟುವಟಿಕೆಗಳ ಸಚಿತ್ರ ವರದಿ, ಪರಿಷತ್ತು ನಡೆಸುವ ವಿವಿಧ ಸಾಹಿತ್ಯಿಕ ಪರೀಕ್ಷೆಗಳು, ಕಾರ್ಯಕ್ರಮಗಳ ವರದಿಯನ್ನು ತಾಣದ ಮೂಲಕ ಜಗತ್ತಿಗೇ ತಿಳಿಯಪಡಿಸಿ, ಎಲ್ಲರಲ್ಲೂ ಕನ್ನಡಾಭಿಮಾನ ಮೂಡಿಸುವ ಪ್ರಯತ್ನ ಮಾಡುವುದೇ ಈ ತಾಣದ ಮುಖ್ಯ ಉದ್ದೇಶವಾಗಿದೆ ಎಂದರು.

ಮುಖಪುಟ /ಸಾಹಿತ್ಯ