ಮುಖಪುಟ /ಸಾಹಿತ್ಯ

ಪ್ರಶಸ್ತಿಗಾಗಿ ಕೃತಿ ರಚನೆ:ಎಚ್.ಎಸ್.ವಿ. ವಿಷಾದ

Hakki Challida beejaಬೆಂಗಳೂರು, ಡಿ. ೨೫:  ತಮ್ಮ ಕೃತಿ ಚಲನಚಿತ್ರ ಅಥವಾ ಕಿರುತೆರೆ ಧಾರಾವಾಹಿ ಆಗಬೇಕು, ತಮಗೆ ಜನಪ್ರಿಯತೆ ಸಿಗಬೇಕು ಇಲ್ಲವೇ ಅಕಾಡಮಿ, ಜ್ಞಾನಪೀಠ ಪ್ರಶಸ್ತಿ ಪಡೆಯಬೇಕು ಎಂದೇ ಕೆಲವರು ಕಥೆ, ಕಾವ್ಯ, ಕಾದಂಬರಿ ಬರೆಯುತ್ತಿದ್ದಾರೆ ಎಂದು ಹಿರಿಯ ಕವಿ, ಚಿಂತಕ ಎಚ್.ಎಸ್. ವೆಂಕಟೇಶ ಮೂರ್ತಿ ವಿಷಾದಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ನಿನ್ನೆ ಬೆಂಗಳೂರು ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಹಾಗೂ ಜನಪ್ರಿಯ ಕಥೆಗಾರ ಸಿ.ಎನ್. ರಾಮಚಂದ್ರ ಅವರ ಹಕ್ಕಿ ಚೆಲ್ಲಿದ ಬೀಜ ಕಥಾ ಸಂಕಲನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿ, ಫಲಾಪೇಕ್ಷೆ ಇಲ್ಲದ ಬರಹ ಓದುಗರ ಮನಗೆಲ್ಲುತ್ತದೆ ಎಂದರು.

ರಾಮಚಂದ್ರ ಅವರು ಸಹ ಇಂಥ ಯಾವುದೇ ಫಲಾಪೇಕ್ಷೆ ಇಲ್ಲದೆ, ತಮ್ಮ ತಲ್ಲಣಗಳನ್ನು, ಸಮಕಾಲೀನ ಬದುಕನ್ನು ತಮ್ಮ ಕಥೆಗಳಲ್ಲಿ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. ನಾವು ಯಾವುದನ್ನು ಸುಖ ಅಂದುಕೊಳ್ಳುತ್ತೇವೋ ಅದು ದುಃಖವಾಗುತ್ತದೆ, ನಾವು ಯಾವುದನ್ನು ದುಃಖ ಅಂದು ಕೊಳ್ಳುತ್ತೇವೋ ಅದು ಸುಖಾಂತ್ಯವಾಗುತ್ತದೆ. ಇದು ಅದ್ಭುತ ಅಭಿವ್ಯಕ್ತಿ ಎಂದರು.

ರಾಮಚಂದ್ರ ಅವರ ಕಥೆಗಳಿಗೆ  ನಾವು ಗುಂಪಿನಲ್ಲಿದ್ದಾಗಲೂ ಏಕಾಂಗಿಯಾಗಿ ಚಿಂತಿಸುವಂತೆ ಮಾಡುವ, ಏಕಾಂಗಿಯಾಗಿದ್ದಾಗಲೂ ಕಥೆಗಳ ಆಂತರ್ಯದ ಬಗ್ಗೆ ಸಾಹಿತ್ಯಾಸಕ್ತರನ್ನು ಗುಂಪು ಸೇರಿಸಿ ಚರ್ಚಿಸುವಂತೆ  ಪ್ರಚೋದಿಸುವ ಶಕ್ತಿ ಇದೆ ಎಂದು ಹೇಳಿದರು. 

ಕಥಾ ಸಂಕಲನ ಬಿಡುಗಡೆ ಮಾಡಿದ ಚಿಂತಕ, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ೨೦ನೇ ಶತಮಾನ ಕನ್ನಡ ಸಾಹಿತ್ಯ ರಂಗದ ಅವಿಸ್ಮರಣೀಯ ಘಟ್ಟ. ಕನ್ನಡ ಸಾಹಿತ್ಯಕ್ಕೆ ಮರೆಯಲಾರದ ಕಾಣಿಕೆ ಕೊಟ್ಟ ಹಲವು ಸಾಹಿತ್ಯ ದಿಗ್ಗಜಗಳು ಜನಿಸಿದ ಕಾಲವದು ಎಂದು ಹೇಳಿದರು. 

ನವೋದಯ, ನವ್ಯ ಸಾಹಿತ್ಯದ ಉಗಮ ಹಾಗೂ ಅದು ಆಳವಾಗಿ ಬೇರುಬಿಟ್ಟ ಬಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ ಅವರು, ಸಿ.ಎನ್. ರಾಮಚಂದ್ರ ಅವರ ಕೆಲವು ಕಥೆಗಳು ನಾಡಿನ ಶ್ರೇಷ್ಠ ಕಥೆಗಳ ಸಾಲಿನಲ್ಲಿ ಚರ್ಚಿಸಬಹುದಾದಂಥ ಸತ್ವವನ್ನು ಹೊಂದಿವೆ ಎಂದು ಅಭಿಪ್ರಾಯಪಟ್ಟರು. ನಿಕ್ಷೇಪ ಇಂತಹ ಕಥೆಗಳಲ್ಲಿ ಒಂದು ಎಂದರು. 

C.N.Ramachandra, Asst. Station Director, Doordarshan, kannadaratna.comರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ, ಪತ್ರಕರ್ತ ಪಿ.ಶೇಷಾದ್ರಿ ಮಾತನಾಡಿ, ರಾಮಚಂದ್ರ ಅವರ ಕಥೆಗಳು ಚಿತ್ರಕಥೆಯ ಸ್ವರೂಪದಲ್ಲೇ ಇದ್ದು ಇವುಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವುದು ಕಷ್ಟವೇನಲ್ಲ. ಕನ್ನಡದಲ್ಲಿ ಕಥೆಗಳ ಕೊರತೆ ಇದೆ ಅದಕ್ಕೇ ರೀಮೇಕ್ ಮಾಡುತ್ತೇವೆ ಎನ್ನುವ ನಿರ್ದೇಶಕರು ಈ ಕಥಾ ಸಂಕಲನ ಓದಬೇಕೆಂದರು. 

ರಾಮಚಂದ್ರ ಅವರ ಒಂದೊಂದು  ಕಥೆ ಓದಿದಾಗಲೂ ಅದರ ಬಗ್ಗೆ ನಾವೇ ನಮ್ಮೊಳಗೆ ಚರ್ಚಿಸುವಂತೆ, ಚಿಂತಿಸುವಂತೆ ಮಾಡುತ್ತದೆ. ಹೀಗಾಗಿ ಪ್ರತಿ ಕತೆಯ ಅಂತ್ಯವೂ ಒಂದು ಆರಂಭವಾಗೇ ತೋರುತ್ತದೆ ಎಂದು ಹೇಳಿದರು.  

ಸಿ.ಎನ್. ರಾಮಚಂದ್ರ ತಾವು ಕಥೆ ಬರೆಯಲು ಪ್ರೇರಣೆ ನೀಡಿದ ಗೆಳೆಯರಿಗೆ, ಪ್ರೋತ್ಸಾಹಿಸಿದ ಕುಟುಂಬವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು. ಪತ್ರಕರ್ತ ಟಿ.ಎಂ. ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶಕ ನಾರಾಯಣ ಮಾಲ್ಕೋಡ್ ಮತ್ತಿತರರು ಪಾಲ್ಗೊಂಡಿದ್ದರು.

ಮುಖಪುಟ /ಸಾಹಿತ್ಯ