ಮುಖಪುಟ /ಸಾಹಿತ್ಯ

ಬಹುಮುಖ ಪ್ರತಿಭೆಯ ವಿರಳ ವ್ಯಕ್ತಿ ಡಾ.ಎಲ್. ಬಸವರಾಜು

ಕನ್ನಡಕ್ಕೆ ತಡವಾಗಿಯಾದರೂ ಶಾಸ್ತ್ರೀಯ ಭಾಷೆಯ ಸ್ಥಾನ ದೊರಕಿರುವ ಸಂತಸದ ಸಮಯದಲ್ಲಿಯೇ ಮುಂದಿನ ತಿಂಗಳು ಚಿತ್ರದುರ್ಗದಲ್ಲಿ ನಡೆಯಲಿರುವ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ವಿಶೇಷ ಪ್ರಾಮುಖ್ಯತೆ ಇದೆ.

ಅಮೃತ ಮಹೋತ್ಸವ ಸಮ್ಮೇಳನದ ಅಧ್ಯಕ್ಷತೆಗೆ ಬಹುಮುಖ ಪ್ರತಿಭೆಯ ಹಾಗೂ ವಿರಳ ವ್ಯಕ್ತಿತ್ವದ ಡಾ.ಎಲ್. ಬಸವರಾಜು ಅವರನ್ನು ಆಯ್ಕೆ ಮಾಡಲಾಗಿದೆ.

50ಕ್ಕೂ ಹೆಚ್ಚು ಕೃತಿ ರಚಿಸಿ ಕನ್ನಡ ಸಾರಸ್ವತ ಭಂಡಾರವನ್ನು ಶ್ರೀಮಂತಗೊಳಿಸಿರುವ ಬಸವರಾಜು ಅವರು ಹುಟ್ಟಿದ್ದು 1919ರ ಅಕ್ಟೋಬರ್ 5ರಂದು ಕೋಲಾರ ಜಿಲ್ಲೆಯ ಇಡಗೂರಿನಲ್ಲಿ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿ, ಸಿದ್ಧಗಂಗೆಯಲ್ಲಿ ಪ್ರೌಢಶಿಕ್ಷಣ ಪಡೆದು, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಓದಿ ನಂತರ ಮೈಸೂರಿನಲ್ಲಿ ಎಂ.ಎ. ಶಿಕ್ಷಣ ಪೂರೈಸಿ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.

ಕನ್ನಡದ ಆದಿ ಕವಿ ಪಂಪನ ಆದಿ ಪುರಾಣ, ವಿಕ್ರಮಾರ್ಜುನ ವಿಜಯಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಅವುಗಳನ್ನು ಶಾಸ್ತ್ರೀಯ ರೀತಿಯಲ್ಲಿ ಸಂಪಾದಿಸಿಕೊಟ್ಟಿದ್ದಾರೆ.

ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಸಂಶೋಧನೆಗಳು ಮೌಲಿಕ ಸ್ಥಾನ ಪಡೆದಿವೆ. ವಿದ್ವತ್ ಪೂರ್ಣ ಬರಹಗಾರಿಕೆ ಬಸವರಾಜು ಅವರ ವೈಶಿಷ್ಟ್ಯತೆ. ಇವರ ಕವನಗಳಲ್ಲಿ ಸಮಕಾಲೀನ ಪ್ರಜ್ಞೆ, ಸಾಮಾಜಿಕ ಕಳಕಳಿ ವ್ಯಂಗ್ಯ, ವಿಡಂಬನೆ ಎಲ್ಲವೂ ಇವೆ.

ಸಮರ್ಪಣಾ ಮನೋಭಾವದ ನಿರಂತರ ಅಧ್ಯಯನಶೀಲತೆ,  ಸತ್ಯಪರತೆ, ನಿಷ್ಠುರತೆಗಳಲ್ಲಿ ಪ್ರೊ.ಬಸವರಾಜು ಅವರ ಬರಹ ಬದುಕು ವಿಕಾಸಗೊಂಡಿವೆ. ಬಸವರಾಜು ಅವರ ಸಾಧನೆ ಅಚಲವಾದ ತಪಸ್ಸೇ ಸರಿ. ಬಹುಶ್ರುತ ಪ್ರತಿಭೆಯ ಬಸವರಾಜು ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಔಚಿತ್ಯಪೂರ್ಣವಾಗಿದೆ.

ಬಸವರಾಜು ಅವರಿಗೆ ಕರ್ನಾಟ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ, ಭಾಷಾ ಸಮ್ಮಾನ್ ಮೊದಲಾದ ಗೌರವಗಳು ಲಭಿಸಿವೆ.

ಮುಖಪುಟ /ಸಾಹಿತ್ಯ