ಮುಖಪುಟ /ಸಾಹಿತ್ಯ

ಸಮಸ್ತ ಕನ್ನಡಿಗರ ಬದುಕನ್ನು ಸಮಗ್ರವಾಗಿ
ಪ್ರತಿನಿಧಿಸುವ ಮಾಂತ್ರಿಕ ಶಕ್ತಿಯೇ ಕನ್ನಡ - ನಲ್ಲೂರು

ನಲ್ಲೂರರಿಗೆ ನಾಲ್ಕು ಸಮ್ಮೇಳನ ನಡೆಸಿದ ತೃಪ್ತಿ

Nallur Prasad

ಕನ್ನಡವೆನ್ನುವುದು ಕೇವಲ ಭಾಷೆಯಾಗಲೀ, ಸಾಹಿತ್ಯವಾಗಲೀ ಅಲ್ಲ; ಅದು  ಸಮಸ್ತ ಕನ್ನಡಿಗರ ಬದುಕನ್ನು ಸಮಗ್ರವಾಗಿ ಪ್ರತಿನಿಧಿಸುವಂಥ ಮಾಂತ್ರಿಕ ಶಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ  ಡಾ. ನಲ್ಲೂರು ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.  

ಕನ್ನಡ ರತ್ನ.ಕಾಂ ಗೌರವಸಂಪಾದಕ ಟಿ.ಎಂ. ಸತೀಶ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು,  ಕನ್ನಡದಲ್ಲಿ ಇಂಥ ಮಾಂತ್ರಿಕ ಶಕ್ತಿ ಇದೆ ಎನ್ನುವ ಪ್ರಜ್ಞೆಯನ್ನು ಎಲ್ಲರಲ್ಲೂ ಮೂಡಿಸಲು ಸಾಹಿತ್ಯ ಸಮ್ಮೇಳನಗಳು ಅತ್ಯಂತ ಸಹಕಾರಿ ಎಂದರು.

ಸಾಹಿತ್ಯ ಸಮ್ಮೇಳನಗಳು ಎಲ್ಲರಲ್ಲೂ  ಕನ್ನಡದ ಅಭಿಮಾನವನ್ನು ಜಾಗೃತಗೊಳಿಸುತ್ತವೆ. ಪ್ರತಿಯೊಂದು ಮನೆ ಮನದಲ್ಲೂ ಕನ್ನಡ ಪ್ರೇಮ ಹುಟ್ಟುಹಾಕುವಂಥ ಅದ್ಭುತ ಕಾರ್ಯ ಮಾಡುತ್ತವೆ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷನಾಗಿ  ಇಂಥ 4 ಸಮ್ಮೇಳನಗಳನ್ನು ನಡೆಸಿದ ಸಂತೃಪ್ತಿ ನನಗಿದೆ.  ಇಂಥ ಒಂದು ಅವಕಾಶ ನನಗೆ ಸಿಕ್ಕಿದ್ದು ನಿಜಕ್ಕೂ ನನ್ನ ಸೌಭಾಗ್ಯಎಂದರು.

ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಮೊದಲನೆಯ ಸಮ್ಮೇಳನವನ್ನು ಚಿತ್ರದುರ್ಗದಲ್ಲೂ ಎರಡನೆಯ ಸಮ್ಮೇಳನವನ್ನು ಗದಗದಲ್ಲೂ, ಮೂರನೇ ಸಮ್ಮೇಳನವನ್ನು ಬೆಂಗಳೂರಿನಲ್ಲೂ ಜನ ಮೆಚ್ಚುವಂತೆ ನಡೆಸಿ ಈಗ ನಾಲ್ಕನೇ ಸಮ್ಮೇಳನವನ್ನು ಕರುನಾಡ ಅಕ್ಕಿಯ ಕಣಜ ಗಂಗಾವತಿಯಲ್ಲಿ ಸಂಘಟಿಸಿರುವುದು ನನ್ನ ಆತ್ಮವಿಶ್ವಾಸ ಹಚ್ಚಿಸಿದೆ ಎಂದರು.

ಪ್ರತಿಯೊಂದು ಸಮ್ಮೇಳನಕ್ಕೆ ಸಜ್ಜಾಗುವಾಗಲೂ ನಾನು ಅದು  ಹಿಂದಿನ ಸಮ್ಮೇಳನಕ್ಕಿಂತ ಭಿನ್ನವಾಗಿರಬೇಕು ಹೊಸ ರೂಪದಲ್ಲಿರಬೇಕು. ಅದಕ್ಕೆ  ಸಾರ್ಥಕ ಸ್ವರೂಪವೊಂದನ್ನು ಕೊಡಬೇಕೆನ್ನುವ ತೀವ್ರ ಹಂಬಲ ಇಟ್ಟುಕೊಳ್ಳುತ್ತೇನೆ. ಅದಕ್ಕಾಗಿಯೇ ನಾಡಿನ ಖ್ಯಾತ ಸಾಹಿತಿಗಳನ್ನು, ವಿಮರ್ಶಕರನ್ನು, ವಿಚಾರವಂತರನ್ನು, ಸಂಸ್ಕೃತಿ ಚಿಂತಕರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಿ ಗೋಷ್ಠಿಗಳಿಗೆ ಮುಖ್ಯ ಶೀರ್ಷಿಕೆ ಕೊಡುವುದು, ವಿಚಾರ ಮಂಡನೆಗೆ ಸೂಕ್ತವಾದ ಶೀರ್ಷಿಕೆಗಳನ್ನು ಕೊಡುವುದು, ವಿಚಾರಗಳಿಗೆ ನ್ಯಾಯ ಸಲ್ಲಿಸುವಂತೆ ಮಾತಾಡಬಲ್ಲ ಸಮರ್ಥರನ್ನು ಆಯ್ಕೆ ಮಾಡುವ ಕೆಲಸ ಮಾಡುತ್ತೇನೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಆದರೂ ಕೆಲವರು ಇದಕ್ಕೆ ಅಪಸ್ವರ ಎತ್ತುತ್ತಾರೆ. ಶೀರ್ಷಿಕೆ ಸರಿಇಲ್ಲ. ಪ್ರಸಕ್ತ ಸನ್ನಿವೇಶಕ್ಕೆ ಇದು ಅಪ್ರಸ್ತುತ ಎನ್ನುತ್ತಾರೆ. ಅವರು ಗೋಷ್ಠಿಗಳಲ್ಲಿ ಪಾಲ್ಗೊಂಡು ಉಪನ್ಯಾಸ, ವಿಚಾರಧಾರೆಯನ್ನು ಆಲಿಸಿದರೆ ಅವರಿಗೆ ಪ್ರಸ್ತುತವೋ ಅಪ್ರಸ್ತುತವೋ ಎಂಬುದು ಅರಿವಾಗುತ್ತದೆ.  ಇದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನನ್ನ ನಿಲುವು ಒಲವು ಧ್ಯೇಯ ಎಲ್ಲವೂ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಯಬೇಕು ಎನ್ನುವುದೇ ಆಗಿರುತ್ತದೆ ಎಂದರು.

ಸಮ್ಮೇಳನದ ವಿಚಾರಗೋಷ್ಠಿ, ಕವಿಗೋಷ್ಠಿ ಎನ್ನುವುದೇ ಹೊಸತು ಹಳತರ ಸಮ್ಮಿಶ್ರಣ, ಹೂವು ಬೇರುಗಳ ಸಂಗಮ. ಹೀಗಾಗೆ ಕವಿಗೋಷ್ಠಿಗಳಲ್ಲಿ ನಾಡಿನ ಎಲ್ಲ ಭಾಗಗಳನ್ನೂ ಪ್ರತಿನಿಧಿಸುವ ನತವತ್ತಕ್ಕೂ ಹೆಚ್ಚು ಕವಿಗಳಿಗೆ ಕವಿತಾ ವಾಚನಕ್ಕೆ ಅವಕಾಶ ಕಲ್ಪಿಸಲಾಗಿದೆ.  ಕವಿಗೋಷ್ಠಿಗೆ ವೈವಿಧ್ಯತೆ ತರುವ ಸಲುವಾಗಿ, ಸಂತೋಷ-ಸಂಭ್ರಮಗಳನ್ನು ತುಂಬುವ ಉದ್ದೇಶದಿಂದ ಹಿರಿಯ ಕವಿಗಳು ಅವರ ಕವಿತೆಗಳನ್ನು ಅವರೇ ವಾಚನ ಮಾಡುವ, ಅವರ ಕವಿತೆಗಳಿಗೆ ರಾಗಸಂಯೋಜನೆ ಮಾಡಿ ನಾಡಿನ ಸುಪ್ರಸಿದ್ಧ ಗಾಯಕ-ಗಾಯಕಿಯರಿಂದ ಹಾಡಿಸುವ ಸುಂದರ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ ಎಂದರು.

ಬೆಳಗಾವಿ ನಿರ್ಣಯ: ಎಲ್ಲ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ವಿಚಾರದಲ್ಲಿ ತನ್ನ ಸಾರ್ವಭೌಮತೆಯನ್ನು ಎಂದೆಂದಿನಿಂದಲೂ  ಉಳಿಸಿಕೊಂಡು ಬಂದಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿಯ ವಿಚಾರದಲ್ಲಿ ಕಾಲಕಾಲಕ್ಕೆ ತನ್ನ ನಿಲುವುಗಳನ್ನು ದಿಟ್ಟವಾಗಿ ಪ್ರತಿಪಾದಿಸುತ್ತ, ಅವುಗಳನ್ನು ಸಮರ್ಥಿಸಿಕೊಳ್ಳುತ್ತ ಬರುತ್ತಿದೆ. ಕನ್ನಡವನ್ನು ನಿರ್ಲಕ್ಷಿಸಿದಾಗ, ಕನ್ನಡತನಕ್ಕೆ ಅಗೌರವ ತೋರಿಸಿದಾಗ ಅದು ಉಗ್ರವಾಗಿ ಪ್ರತಿಭಟಿಸಿದೆ. ಈಗಲೂ ಬೆಳಗಾವಿಯ ವಿದ್ಯಮಾನಗಳ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಆತಂಕ ವ್ಯಕ್ತಪಡಿಸಿದೆ. ಠಾಕ್ರೆ ಹೇಳಿಕೆ ಖಂಡಿಸಿದೆ. ಸಮ್ಮೇಳನದಲ್ಲೂ ಈ ವಿಚಾರದ ಬಗ್ಗೆ ನಿರ್ಣಯ ಕೈಗೊಳ್ಳುವ ಬಗ್ಗೆ ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕ ಏಕೀಕರಣವಾಗಿ ರಾಜ್ಯಕ್ಕೆ ಕರ್ನಾಟಕವೆಂಬ ಹೆಸರು ಬಂದು ಹಲವು ದಶಕಗಳೇ ಕಳೆದರೂ ಕನ್ನಡಿಗರ ಭಾವನೆಗಳನ್ನು ಏಕತ್ರಗೊಳಿಸುವ, ಭಾವೈಕ್ಯತೆ ಸಾಧಿಸುವ ಸಂಕೇತವಾದ ಕನ್ನಡ ಧ್ವಜವೊಂದನ್ನು ಅಧಿಕೃತಗೊಳಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆ ಆಗಿದೆ. ಇಂದಿಗೂ ನಾವು ಕನ್ನಡ ಚಳವಳಿಯ ಹಳದಿ ಕೆಂಪಿನ ಬಾವುಟ ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ  ಸರ್ಕಾರದೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.

ಕಂಪ್ಯೂಟರ್ ಕನ್ನಡ: ಎಲ್ಲವೂ ಕನ್ನಡಮಯವಾಗಬೇಕು. ಕಂಪ್ಯೂಟರ್‌ನಲ್ಲಿ ಕೂಡ ಎಂಬ ನಿಮ್ಮ ಅಭಿಪ್ರಾಯ ನಿಜ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಹ ಗಂಭೀರ ಚಿಂತನೆ ನಡೆಸಿದ್ದು, ಯೂನಿಕೋಡ್ (ಏಕರೂಪ ತಂತ್ರಾಂಶ) ಜನಪ್ರಿಯತೆಯತ್ತಲೂ ಚಿಂತನೆ ಮಾಡಿದೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ೫೦ ಸಾವಿರಕ್ಕಿಂತ ಹೆಚ್ಚು ಕನ್ನಡಾಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಾರೆ. ಹಿಂದೆ ಯಾವಾಗಲೂ ಇಷ್ಟು ದೊಡ್ಡ ಸಂಖ್ಯೆಯ ಸದಸ್ಯತ್ವ ನೋಂದಣಿ ಆಗಿರಲಿಲ್ಲ. ಈಗ ಸಾಹಿತ್ಯ ಪರಿಷತ್ತಿನ ಸದಸ್ಯತ್ವದ ಸಂಖ್ಯೆ ೧ಲಕ್ಷ ೨೦ ಸಾವಿರ ಮೀರಿದೆ ಎಂದರು.

 ಕನ್ನಡಕ್ಕೆ ೮ನೇ ಜ್ಞಾನಪೀಠ ಪ್ರಶಸ್ತಿ ಲಭಿಸಿರುವಾಗ, ಸರಸ್ವತಿ ಸಮ್ಮಾನ್ ಗೌರವ ಬಂದಿರುವಾಗ ಹೆಮ್ಮೆಯಲ್ಲಿರುವ ನಾವು ಕನ್ನಡಕ್ಕೆ, ಕನ್ನಡಿಗರಿಗೆ ಒದಗಿರುವ ಗಂಡಾಂತರದಿಂದ ಪಾರಾಗಲು ಶ್ರಮಪಡಬೇಕಾದ ಅಗತ್ಯವನ್ನು ಸಹ ಮನಗಾಣುವ ಸ್ಥಿತಿ ಒದಗಿದೆ ಎಂಬ ಅರಿವು ನಮಗಿದೆ. ಈ ನಿಟ್ಟಿನಲ್ಲಿ ಕನ್ನಡ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ  ಬೆಳಗಾವಿ ಮಹಾನಗರ ಪಾಲಿಕೆಯನ್ನು ವಜಾ ಮಾಡಿ ಪಾಲಿಕೆ ಆಡಳಿತವನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು. 

ಸರ್ಕಾರದ ಹಂಗಲ್ಲ: ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದ ಬಳಿ ಕೈಚಾಚುವುದು ಎಂಬ ಪದಪ್ರಯೋಗವೇ ತಪ್ಪು. ಕನ್ನಡದ ಉಳಿವಿಗೆ, ಕನ್ನಡದ ಬೆಳವಣಿಗೆಗೆ, ಕನ್ನಡ ಜಾಗೃತಿ ಮೂಡಿಸುವ ಕನ್ನಡ ಹಿತ ರಕ್ಷಿಸುವ ಕಾರ್ಯ ಮಾಡುತ್ತಿರುವ ಸಮ್ಮೇಳನಗಳಿಗೆ ಹಣ ನೀಡುವುದು ಸರ್ಕಾರದ ಜವಾಬ್ದಾರಿ ಕೂಡ ಎಂದ ಅವರು, ಆದರೆ, ಪ್ರತಿಯೊಬ್ಬ ಕನ್ನಡಿಗರು, ಸಾಹಿತ್ಯ ಸಮ್ಮೇಳನಕ್ಕೆ ಬರುವ ಎಲ್ಲ ಕನ್ನಡಪ್ರೇಮಿಗಳು ಸ್ವಯಂ ಪ್ರೇರಿತರಾಗಿ ಸಾಹಿತ್ಯ ಪರಿಷತ್ತಿಗೆ ಕಾಣಿಕೆ, ದೇಣಿಗೆ ನೀಡಿದರೆ ಆಗ ನಾವೇ ಸ್ವತಂತ್ರವಾಗಿ ಸಮ್ಮೇಳನ ನಡೆಸಬಹುದು ಎಂದರು. 

ಪರಿಷತ್ತು ದಾಸ ಸಾಹಿತ್ಯ, ವಚನ ಸಾಹಿತ್ಯ ಸೇರಿದಂತೆ ೭ ಸಮ್ಮೇಳನಗಳನ್ನೂ ನಡೆಸಿದೆ. ಎಲ್ಲಾ ಜಿಲ್ಲೆಗಳಲ್ಲಿ  ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ಇದಲ್ಲದೆ ೪ ಹೊರರಾಜ್ಯ ಘಟಕಗಳಲ್ಲಿ ಸಮ್ಮೇಳನ ನಡೆಸಿ ಕರುನಾಡಿನ ಆಚೆಯೂ ಕನ್ನಡದ ಜ್ಯೋತಿ ಬೆಳಗಿಸಲಾಗಿದೆ ಎಂದು ಹೇಳಿದರು. 

ಮುಖಪುಟ /ಸಾಹಿತ್ಯ