ಮುಖಪುಟ /ಸಾಹಿತ್ಯ

ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಅವಸ್ಥೆ
ದಿನಾಂಕ ೧೦-೧೨-೧೧ರಂದು ಗಂಗಾವತಿಯ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ
 ಕನ್ನಡರತ್ನ.ಕಾಂ ಗೌ.ಪ್ರಧಾನ ಸಂಪಾದಕ ಟಿ.ಎಂ.ಸತೀಶ್ ಅವರು ಮಾಡಿದ ಭಾಷಣ

ಗಂಗಾವತಿಯಲ್ಲಿ ನಡೆದ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಕನ್ನಡರತ್ನ  ಸತೀಶ್, kannadaratna satish in Gangavathi 78th Kannada Sahitya Sammelana, ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಅವಸ್ಥೆಸಮ್ಮೇಳನಾಧ್ಯಕ್ಷರಾದ ಶ್ರೀ.ಸಿ.ಪಿ.ಕೃಷ್ಣ ಕುಮಾರ್ ಅವರೆ,   ವೇದಿಕೆಯ ಮೇಲಿರುವ ಗಣ್ಯರೆ, ಸಮಸ್ತ  ಕನ್ನಡಾಭಿಮಾನಿಗಳೇ ನಮಸ್ಕಾರ.

ನನಗೆ ಸಾಹಿತ್ಯ ಪರಿಷತ್ತಿನಿಂದ ಕರೆ ಮಾಡಿ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ವಿಚಾರ ಮಂಡಿಸುವಂತೆ ಕೇಳಿದಾಗ, ಸಹಜವಾಗೇ  ಆನಂದ ಆಗಿತ್ತು. ಹಿಂದೆ ಮುಂದೆ ನೋಡದೆ ಒಪ್ಪಿಕೊಂಡೆ. ಆದರೆ ಸಂಘಟಕರು, ಕನ್ನಡ ಮಾತು ತಲೆ ಎತ್ತುವ ಬಗೆ ಗೋಷ್ಠಿಯಲ್ಲಿ ನಾನು ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಅವಸ್ಥೆ ಬಗ್ಗೆ ಪ್ರಬಂಧ ಮಂಡಿಸಬೇಕೆಂದು ತಿಳಿಸಿದಾಗ, ಒಬ್ಬ ಪತ್ರಕರ್ತನಾಗಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ಕುರಿತು ಮಾತನಾಡುವುದು ತುಸು ಮುಜುಗರದ ವಿಷಯ ಎನಿಸಿತು.

ಒಪ್ಪಿಕೊಂಡಿದ್ದಾಗಿದೆ. ನೀರಿಗೆ ಇಳಿದ ಮೇಲೆ ಚಳಿಯೇನು ಮಳೆಯೇನು.. ಇದರಿಂದ ನನ್ನ ಕೆಲವು ಮಾಧ್ಯಮ ಮಿತ್ರರ ಕೆಂಗಣ್ಣಿಗೆ ಗುರಿಯಾಗುವುದಂತೂ ಖಂಡಿತಾ. ಸತ್ಯ ಹೇಳಲು ಸಂಕೋಚವೇಕೆ ಅಲ್ಲವೇ...

ಸಂಸ್ಕೃತದಲ್ಲಿ ಒಂದು ಮಾತಿದೆ. ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನಬ್ರೂಯಾತ್ ಸತ್ಯಮಪ್ರಿಯಃ ಎಂದು. ಅಂದರೆ ಸತ್ಯವನ್ನು ಹೇಳಬೇಕು. ಆದರೆ ಪ್ರಿಯವಾದ ಸತ್ಯವನ್ನು ಮಾತ್ರ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು ಎಂಬುದು ಇದರ ಅರ್ಥ. ಆದರೇನು ಮಾಡುವುದು ಸತ್ಯ ಯಾವಾಗಲೂ ಕಠೋರವಾಗೇ ಇರುತ್ತದೆ. ಹೀಗಾಗಿ ಕಠೋರವಾದ ಕೆಲವು ಸತ್ಯಗಳನ್ನು ನಿಮ್ಮ ಮುಂದಿಡುತ್ತೇನೆ. 

ಈ ಗೋಷ್ಠಿಯ ಶೀರ್ಷಿಕೆಯೇ ಕನ್ನಡ ಮಾತು ತಲೆ ಎತ್ತುವ ಬಗೆ. ಹಲವು ದಶಕಗಳ ಹಿಂದೆ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀ. ಅವರು ಹೇಳಿದ ಮಾತಿದು. ಆದರೂ ಇಂದಿಗೂ ಕನ್ನಡ ದಿಟ್ಟತನದಿಂದ ತಲೆ ಎತ್ತಿಲ್ಲ ಎನುವುದರಲ್ಲಿ ಅನುಮಾನವಿಲ್ಲ. ಗೆಳೆಯರೆ ಮನೆಗೊಂದು ಒಲೆ, ಮನುಷ್ಯನಿಗೆ ತಲೆ ಇರುವಂತೆ ನಾವಾಡುವ ಮಾತಿಗೆ ಬೆಲೆ ಇರಬೇಕು. ಅದಕ್ಕೇ ಸರ್ವಜ್ಞ ಕವಿ

ಮಾತಿನಿಂ ನಗೆ ನುಡಿಯೆ, ಮಾತಿನಿಂ
ಹಸೆ ಹೊಲೆಯೆ, ಮಾತಿನಿಂ ಸರ್ವ
ಸಂಪದವು ಲೋಕಕ್ಕೆ ಮಾತೇ ಮಾಣಿಕ್ಯ
ಸರ್ವಜ್ಞ ಎಂದದ್ದು.

ನನ್ನ ಮಾತು ಆರಂಭಿಸುವ ಮುನ್ನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಳೆದ ನವೆಂಬರ್ ೧ರಂದು ನಡೆದ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ನಾನು ವಾಚಿಸಿದ ನನ್ನ ಕವನದೊಂದಿಗೇ ನನ್ನ ಮಾತು ಆರಂಭಿಸುತ್ತೇನೆ.

ನನ್ನ ಕವನದ ಶೀರ್ಷಿಕೆ

ಕರ್ನಾಟಕ

ಕರ್ನಾಟಕ ಎಂದರೇನರ್ಥ ಎಂದಾಗ
ಸಶಬ್ದಾಃ
, ಸಗರ್ವಾಃ, ಠಂಕಾರೋತ್ತರ ಪಾಠಿನಾಃ
ಕರ್ಣೇನ ಅಟತಿ ಇತಿ ಕರ್ನಾಟಕ ಎಂದಿದ್ದರು
ನಮ್ಮ ಕನ್ನಡ ಪಂಡಿತರು

ಅಂದು ಕನ್ನಡವೋ ಸಂಸ್ಕೃತ ಬೂಯಿಷ್ಟ
ಹಾಲಲ್ಲಿ ನೀರು ಬೆರೆತಂತೆ ತತ್ಸಮ
, ತದ್ಭವಗಳ
ಮಿಲನ
, ವಿಲೀನ
ಆದರಿಂದು ಮೊಸರಲ್ಲಿ ನಿಜ ಕಲ್ಲು ಹುಡುಕುವವರಾರು
ಕನ್ನಡದಿ ಇಂಗ್ಲಿಷ್ ಬೆರಕೆ
, ಶ್ರುತಿಕಷ್ಟ. ವರ್ಣ ಸಂಕರ

ವರನಟ, ಹಾಸ್ಯಚಕ್ರವರ್ತಿ, ಅಭಿನಯ ಶಾರದೆ, ಕಲಾ ತಪಸ್ವಿ ಎಂಬ
ಪದಪ್ರಯೋಗಗಳು ಈಗಿಲ್ಲ
, ಕ್ರೇಜಿ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಸೂಪರ್‌ಸ್ಟಾರ್
ಕಾಮಿಡಿ ಕಿಂಗ್‌ಗಳೆಂಬ ಪದಗಳದ್ದೇ ಕಾರುಬಾರು.
ಕನ್ನಡ ಸುದ್ದಿ ಮಾಧ್ಯಮಗಳಲ್ಲೂ ಜೈಲು
, ಬೈಲು, ಸಿ.ಎಂ.,ಪಿ.ಎಂ.
ಟಾರ್ಗೆಟ್
, ವಾರೆಂಟ್‌ಗಳದ್ದೇ ದರ್ಬಾರು.

ಕನ್ನಡ ಕಂಪಲ್ಸರಿ ಕಲೀಬೇಕು
ಕನ್ನಡದಲ್ಲೇ ಸ್ಪೀಕ್ ಮಾಡಬೇಕು
ಕನ್ನಡ ಸೇವ್ ಮಾಡಲು ಏಮ್ ಇರಬೇಕೆನ್ನುವ
ಕನ್ನಡಿಗರ ನಡುವೆ ಉಳಿದೀತೆ ಪರಿಶುದ್ಧ ಕನ್ನಡ

ನಿಜ, ಬೆಳೆಯಬೇಕು ಭಾಷೆ ಇತರ ಭಾಷೆಗಳೊಡಗೂಡಿ
ಇದಕೆ ಸಂಶಯವಿಲ್ಲ. ಆದರೆ ಕನ್ನಡ - ಇಂಗ್ಲಿಷ್ ಬೆರೆತ ವಾಕ್ಯ ಅಸಹ್ಯ
ಅಪಹಾಸ್ಯ ಹಾಗೂ ಅನೂಹ್ಯ.
ಅಚ್ಚ ಕನ್ನಡಿಗರ ಮಕ್ಕಳಿಗೂ ಬೇಕು ಕಾನ್ವೆಂಟು ಶಿಕ್ಷಣ
ಹೀಗಾಗೆ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳು ಬಣಬಣ
ಇದೇ ಕಾರಣಕ್ಕೆ ಸರ್ಕಾರ ಮುಚ್ಚಲನುವಾಗಿದೆ ೨ ಸಾವಿರ ಶಾಲೆಗಳನ್ನ
ಇಂತಾದರೆ ಕಾಣದು ಕನ್ನಡ ಉಳಿವ ಲಕ್ಷಣ
ತೊಡೋಣ ನಾವಿಂದು ಪಣ
, ಬಳಸೋಣ ಕನ್ನಡ, ಉಳಿಸೋಣ ಕನ್ನಡ.

satish with CPK, Malagatti in 78th Kannada Sahitya sammelana, T.M.Satish, Kannada journalist, Kannadaratna satish, T.V. Anchor, ಕನ್ನಡರತ್ನ ಸತೀಶ್,  ಟಿ.ಎಂ. ಸತೀಶ್, ತುರುವೇಕೆರೆ ಸತೀಶ್, ಪತ್ರಕರ್ತಕನ್ನಡ ನಾಡಿನಲ್ಲಿ ಕನ್ನಡ ಉಳಿಸುವ ಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ನನ್ನೊಬ್ಬನ ಅಳಲಲ್ಲ. ಈ ಬಗ್ಗೆ ಕನ್ನಡದ ಬಗ್ಗೆ ಕಳಕಳಿ ಇರುವ ಪ್ರತಿಯೊಬ್ಬರೂ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮಹಾನಗರದಲ್ಲಿ 2011ರ ಫೆಬ್ರವರಿಯಲ್ಲಿ ನಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಭಾಷಣದಲ್ಲೇ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದರು.

ಕನ್ನಡ ಭಾಷೆ ಈಗ ನಿಜವಾಗಿ ಕಷ್ಟಕ್ಕೆ ಸಿಕ್ಕಿದೆ. ಅದರ ಮೇಲೆ ಇಂಗ್ಲಿಷಿನಂಥ ಕೊಲೆಗಡುಕ ಭಾಷೆಯ ಕಣ್ಣು ಬಿದ್ದಿದೆ. ಜಾಗತೀಕರಣದ ಪರಿಣಾಮವಾಗಿ ಕನ್ನಡವನ್ನು ಮಾತನಾಡುವ ಎಲ್ಲ ಪ್ರದೇಶಗಳಲ್ಲಿಯೂ ಇಂಗ್ಲಿಷ್ ನುಗ್ಗುತ್ತ ಇದೆ. ನಗರಪ್ರದೇಶಗಳಲ್ಲಿ ಕನ್ನಡದ ಪ್ರಯೋಗ ಕಡಿಮೆಯಾಗುತ್ತಾ ಇದೆ. ಕನ್ನಡವು ಎರಡನೆಯ ಸ್ಥಾನಕ್ಕೆ ತಳ್ಳಲ್ಪಡುವ ಅಪಾಯವಿದೆ. ಕನ್ನಡ ಸಾಯುವುದಿಲ್ಲ ಎಂಬುದು ನಿಜ. ಆದರೆ ಕರ್ನಾಟಕದಲ್ಲಿ ಅದು ತನ್ನ ಪ್ರಥಮ ಸ್ಥಾನವನ್ನು ಎಂದೂ ಕಳೆದುಕೊಳ್ಳಬಾರದು. ಕನ್ನಡ ನಾಡಿನ ಎಲ್ಲರೂ ಈ ಸ್ಥಿತಿಯನ್ನು ತೀವ್ರವಾಗಿ ಗಮನಿಸಬೇಕು. ಪತ್ರಿಕಾಕರ್ತರು, ಸಮೂಹಮಾಧ್ಯಮಗಳು ಮುಖ್ಯವಾಗಿ ಸಿನಿಮಾಲೋಕ ಇದನ್ನು ತಮ್ಮ ಕರ್ತವ್ಯಗಳಲ್ಲಿ ಒಂದಾಗಿ ಪರಿಗಣಿಸಬೇಕು.

ಕನ್ನಡದಲ್ಲಿ ಸೊಗಸಾದ ಶಬ್ದಗಳಿರುವಾಗ ಅವುಗಳನ್ನೇ ತಳ್ಳಿ ಚಿಲ್ಲೀಸ್, ರಾಡಿಶ್, ಬೀನ್ಸ್, ಕುಕುಂಬರ್ರು, ಕ್ಯಾಪ್ಸಿಕಮ್ಮು, ನೈಫು, ಆಯಿಲ್ಲು, ಬಟ್ಟರ್ರು, ಪೌಡರ್ರು, ಗ್ರೈಂಡು ಅಡುಗೆ ಮನೆಗೇ ನುಗ್ಗಿಬಿಟ್ಟಿವೆ. ಇದಕ್ಕೆ ಕಾರಣ ವಾಹಿನಿಗಳಲ್ಲಿ ಹೊಸರುಚಿಯ ಪ್ರದರ್ಶನ ಮಾಡುವ ಕನ್ನಡ ಮಹಿಳಾಮಣಿಗಳ ಸಂಭಾಷಣೆ. ಎಫ್.ಎಂ. ರೇಡಿಯೋ, ದೂರದರ್ಶನದ ಅನೇಕ ವಾಹಿನಿಗಳ ಪ್ರಭಾವ. ವರ್ತಮಾನ ಪತ್ರಿಕೆಗಳಲ್ಲಿಯೂ ದೂರದರ್ಶನದಲ್ಲಿಯೂ ಆಕಾಶವಾಣಿಯಲ್ಲಿಯೂ ಪ್ರಚಾರವಾಗುವ ಇಂಥ ಪ್ರಯೋಗಗಳನ್ನು ನಿಲ್ಲಿಸಿ ನಮ್ಮಲ್ಲಿ ಪ್ರಚಾರದಲ್ಲಿರುವ ಕನ್ನಡ ಶಬ್ದಗಳನ್ನು ಉಪಯೋಗಿಸುವಂತೆ ಆಯಾ ಕೇಂದ್ರಗಳ ಅಧಿಕಾರಿಗಳು ನಿರ್ದೇಶಿಸಬೇಕು. ಇಲ್ಲವಾದರೆ ನಮ್ಮ ಸ್ವಂತ ಶಬ್ದಸಂಪತ್ತು ಮಾಯವಾಗಿಬಿಡುತ್ತದೆ. ನಾವು ಅವುಗಳಿಲ್ಲದೆ ಕನ್ನಡ ಶಬ್ದದರಿದ್ರರಾಗಿಬಿಡುತ್ತೇವೆ! ಎಂದು ಎಚ್ಚರಿಸಿದ್ದರು. 

ಸಮ್ಮೇಳನಾಧ್ಯಕ್ಷರ ಈ ಸಾಲುಗಳನ್ನು ಸ್ವತಃ ತಮ್ಮ ವಾರ್ತಾ ಸಂಚಿಕೆಯಲ್ಲಿ ಪರಿಣಾಮಕಾರಿಯಾಗಿ ಬಿತ್ತರಿಸಿದ್ದ ವಾಹಿನಿಗಳು ಇಂದಿಗೂ ಅದೇ ಭಾಷೆಯನ್ನು ಮುಂದುವರಿಸಿಕೊಂಡು ಬಂದಿವೆ. ಇದರಿಂದಾಗಿ. ಇಂದಿನ ಯುವ ಜನರು ಕೂಡ ಅರ್ಧ ಕನ್ನಡ ಅರ್ಧ ಇಂಗ್ಲಿಷ್ ಸೇರಿಸಿ ಬೆರಕೆ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಇದಕ್ಕೊಂದು ಜ್ವಲಂತ ಉದಾಹರಣೆ. ಕಳೆದ ಸೆಪ್ಟೆಂಬರ್‌ನಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಕು. ವನಿತಾ ಸ್ಮಾರಕ ರಾಜ್ಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ. ಇಲ್ಲಿ ನಡೆದದ್ದು  ಅಕ್ಷರಶಃ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ. ಇಂಗ್ಲಿಷ್ ಚರ್ಚಾಸ್ಪರ್ಧೆಯಲ್ಲ. ಕರ್ನಾಟಕದ ಸುಮಾರು ೧೦೦ ಕಾಲೇಜುಗಳ ೨೦೦ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡ ಬೃಹತ್ ಸ್ಪರ್ಧೆ ಅದು. ಆದರೆ, ಸ್ಪರ್ಧೆಯಲ್ಲಿ ಮಾತನಾಡಿದ ಶೇಕಡ ೯೯ರಷ್ಟು ಯುವಕ, ಯುವತಿಯರು  ಆಂಗ್ಲ ಪದ ಬಳಸದೆ ೪ ನಿಮಿಷ ಸ್ವಚ್ಛ, ಅಚ್ಚ ಕನ್ನಡದಲ್ಲಿ ಮಾತನಾಡಲಿಲ್ಲ. ಕೆಲವರಂತೂ ಕನ್ನಡ - ಇಂಗ್ಲಿಷ್ ಬೆರೆಸಿದ ಕಂಗ್ಲಿಷ್‌ನಲ್ಲೇ ತಮ್ಮ ವಾದ ಮಂಡಿಸಿದರು.

ಆ ಸ್ಪರ್ಧೆಯಲ್ಲಿ ಮಾತನಾಡಿದ ಒಂದು ಹುಡುಗಿ ತನ್ನ ಚರ್ಚೆಯನ್ನು ಮಂಡಿಸಿದ್ದು ಹೀಗೆ.... ಅಧ್ಯಕ್ಷರೆ ತೀರ್ಪುಗಾರರೆ, ಇಂದು ವ್ಯಾಲ್ಯೂಯಬಲ್ ಅಂಡ್ ವ್ಯಾಲ್ಯೂ ಆಡೆಡ್ ಎಡ್ಯುಕೇಷನ್  ನಮಗೆ ಸಿಕ್ತಾ ಇಲ್ಲ. ಸೋ.. ವಿ ಆರ್ ಫೇಸಿಂಗ್ ಹಲವಾರು ಪ್ರಾಬ್ಲಂಸ್, ನಮ್ಮ ಕಂಟ್ರಿ ಇವತ್ತು ಕ್ರೂಷಿಯಲ್ ಸ್ಟೇಜ್‌ನಲ್ಲಿದೆ. ಹೀಗಾಗಿ ನಾವು ಗುಡ್ ಎಡ್ಯುಕೇಷನ್ ಬಗ್ಗೆ ಏಮ್ ಮಾಡಬೇಕು.  ಇಲ್ಲ ಅಂದ್ರೆ, ನಮ್ಮ ದೇಶ ಬಿಲ್‌ಕುಲ್ ಪ್ರೋಗ್ರೆಸ್ ಆಗಲ್ಲ. ತುಂಬಾ ಪ್ರಾಂಬ್ಲಂ ಫೇಸ್ ಮಾಡಬೇಕಾಗತ್ತೆ....

ನಾನು ಸ್ಪರ್ಧೆಯ ಬಳಿಕ ಮಾತನಾಡುವ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದೆ. ಕನ್ನಡಚರ್ಚಾಸ್ಪರ್ಧೆ ಕನ್ನಡದಲ್ಲೇ ಇರಲಿ, ಇಂಥ ಸ್ಪರ್ಧೆಗಳನ್ನು ನಡೆಸುವ ಉದ್ದೇಶವೇ ಭಾಷಾ ಬೆಳವಣಿಗೆ ಹಾಗೂ ವೈಚಾರಿಕ ಜಾಗೃತಿಗಾಗಿ, ಆದರೆ ಇಲ್ಲಿ ಉದ್ದೇಶವೇ ಸರ್ವನಾಶ ಆಗುತ್ತಿದೆ ಎಂದು ವಿಷಾದಿಸಿದೆ. ಬಳಿಕ ನನ್ನ ಬಳಿ ಬಂದು ಮಾತನಾಡಿಸಿದ ಆ ಯುವತಿ, ನಾನು ಡಿಬೇಟ್ ಮಾಡಿದ್ರಲ್ಲಿ ರಾಂಗ್ ಏನಿದೆ ಸಾರ್. ನಾನು ಸ್ಪೀಕ್ ಮಾಡಿದ್ದು ಕನ್ನಡದಲ್ಲೇ. ಟಿ.ವಿ. ನ್ಯೂಸ್ ರೀಡರ್ಸ್ ಎಲ್ಲಾ ಹೀಗೆ ಮಾತಾಡೋದು. ಅದಕ್ಕೆ ಅವರಿಗೆ ಟ್ರೈನಿಂಗ್ ಕೊಡ್ತಾರೆ, ನಾನೂ ಒಂದು ಚಾನಲ್‌ನಲ್ಲಿ ನ್ಯೂಸ್ ರೀಡರ್  ಟ್ರೈನಿಂಗ್‌ಗೆ ಹೋಗಿ ಬಂದಿದ್ದೀನಿ ಗೊತ್ತಾ ಎಂದಾಗ ನಾನು ಬೆಚ್ಚಿಬಿದ್ದೆ.

ಆ ಯುವತಿ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ನಿಜ ಇಂದು ನಮ್ಮ ವಾಹಿನಿಗಳಲ್ಲಿ ಕನ್ನಡ ಇರೋದೇ ಹೀಗೆ. ಇಲ್ಲದಿದ್ದರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂಥ ದೊಡ್ಡ ವೇದಿಕೆಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡದ ಅವಸ್ಥೆಯ ಬಗ್ಗೆ ಗೋಷ್ಠಿಯೊಂದು ನಡೆಯುವ ಅಗತ್ಯ ಖಂಡಿತಾ ಉದ್ಭವಸುತ್ತಿರಲಿಲ್ಲ. ಸ್ನೇಹಿತರೆ ಕನ್ನಡ ನಾಡು, ನುಡಿ, ಪರಂಪರೆಗೆ ಸುಮಾರು ೨ ಸಾವಿರ ವರ್ಷಗಳ ಇತಿಹಾಸ ಇದೆ. ಬಹುಭಾಷೀಯರ ಹಿಂದಿಗಿಂತಲೂ ಮಿಗಿಲಾಗಿ ೮ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಏಕೈಕ ಪ್ರಾದೇಶಿಕ ಭಾಷೆ. ಕನ್ನಡ ಇಷ್ಟು ಸಾಹಿತ್ಯಿಕವಾಗಿ ಶ್ರೀಮಂತವಾದ ಕನ್ನಡದಲ್ಲಿ ಕನ್ನಡ ಪತ್ರಿಕೋದ್ಯಮಕ್ಕೆ ೧೭೦ ವರ್ಷಗಳ ಇತಿಹಾಸ ಇದೆ. ಮಂಗಳೂರು ಸಮಾಚಾರ ಪತ್ರಿಕೆಯಿಂದ ಹಿಡಿದು ಇತ್ತೀಚಿನ ಕೆಲವು ಪತ್ರಿಕೆಗಳವರೆಗೆ ಕನ್ನಡ ಭಾಷೆಯ ಬೆಳವಣಿಗೆಗೆ ನೀಡಿರುವ ಕೊಡುಗೆಯೂ ಅನುಪಮ. ತೀತಾಶರ್ಮಾ, ಖಾದ್ರಿ ಶಾಮಣ್ಣ, ಸೀತಾರಾಮ ಶಾಸ್ತ್ರೀ, ಮೊಹರೆ ಹಣುಮಂತರಾಯರು, ಸುಬೋಧಾ ರಾಮರಾಯರು, ರಂಗನಾಥ ದಿವಾಕರ್, ಕೆ.ಶ್ಯಾಮರಾಯರು, ರಾಮಯ್ಯನವರೇ ಮೊದಲಾದವರು ನೀಡಿರುವ ಕೊಡುಗೆ ಅಪಾರವಾದ್ದು. ಖಾದ್ರಿ ಶಾಮಣ್ಣ ಮೊದಲಾದ ಹೆಸರಾಂತ ಪತ್ರಕರ್ತರು ಕನ್ನಡ ಭಾಷೆಯ ಅಪಾರವಾದ ಶಬ್ದ ಸಂಪತ್ತನ್ನು ಕಾಣಿಕೆಯಾಗಿ ನೀಡಿದ್ದಾರೆ. ಸಂದರ್ಭೋಚಿತವಾಗಿ ಹೊಸಹೊಸ ಶಬ್ದಗಳನ್ನು ಹುಟ್ಟು ಹಾಕಿದ್ದಾರೆ. ಆದರೆ ಇಂದಿನ ವಾಹಿನಿಗಳಲ್ಲಿ, ಎಫ್.ಎಂ. ವಾಹಿನಿ ಸೇರಿದಂತೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡ ದುರವಸ್ಥೆಯ ಹಂತವನ್ನು ತಲುಪಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಜನತೆನಾನು ಕನ್ನಡಪ್ರಭ ದಿನಪತ್ರಿಕೆ ಸೇರಿದ ಹೊಸತು. ಒಂದು ಲೇಖನದಲ್ಲಿ ಇಚ್ಛೆ ಎನ್ನುವ ಪದ ಪ್ರಯೋಗಿಸುವಾಗ ಇಚ್ಚೆ ಎಂದು ಬಳಸಿದ್ದೆ. ಪತ್ರಿಕೆಯಲ್ಲಿ ಅದು ಅಚ್ಚಾಗಿ ಹೋಗಿತ್ತು. ಖಾದ್ರಿ ಶಾಮಣ್ಣನವರು ನನ್ನನ್ನು ತಮ್ಮ ಕೊಠಡಿಗೆ ಕರೆದು, ನನ್ನ ತಪ್ಪು ತೋರಿಸಿದರು. ಆಗ ನಾನು ಸರ್ವಜ್ಞನ ವಚನದಲ್ಲಿ ಇಚ್ಚೆಯನರಿವ ಸತಿ ಇರಲು ಎನ್ನುವಾಗ ಹೀಗೇ ಒತ್ತಕ್ಷರ ಅಲ್ಪವೇ ಇದೆ ಎಂದು ವಾದಿಸಿದೆ. ಆಗ ಶಾಮಣ್ಣನವರು, ನೀವು ಭಾಷಾ ಕೋವಿದನೋ, ಭಾಷಾ ತಜ್ಞನೋ, ನಿಘಂಟಿಗಿಂತಲೂ ದೊಡ್ಡವನೋ, ಇಲ್ಲ ಸರ್ವಜ್ಞನ ಒಡನಾಡಿಯೋ.. ಎಂದು ಕೋಪಗೊಂಡರು. ಅವರಿಂದ ಬೈಗುಳ ತಿನ್ನುವುದೂ ಒಂದು ಸೊಗಸು. ಅದರಲ್ಲೂ ಭಾಷಾ ಪ್ರೌಢಿಮೆ ಇರುತ್ತಿತ್ತು. ಲಹರಿ ಇರುತ್ತಿತ್ತು. ಛಂದಸ್ಸು ಇರುತ್ತಿತ್ತು. ನಂತರ ಅವರು ಕಚೇರಿ ಸಹಾಯಕನನ್ನು ಕೂಗಿ ಕನ್ನಡ ಸಾಹಿತ್ಯ ಪರಿಷತ್ತು ಹೊರ ತಂದಿರುವ ೮ ಸಂಪುಟಗಳ ಬೃಹತ್ ಕನ್ನಡ ನಿಘಂಟು ತರಿಸಿ ನೋಡು ಇಚ್ಛೆ ಎನ್ನುವ ಪದ ಪ್ರಯೋಗ ಹೇಗಿದೆ ಎಂದು ತೋರಿಸಿದ್ದರು. ಇನ್ನು ಮುಂದೆ ಇಂಥ ತಪ್ಪು ಮಾಡಬೇಡ ಎಂದು ಎಚ್ಚರಿಕೆ ನೀಡಿದ್ದರು.

ಅಂದಿನ ಸಂಪಾದಕರುಗಳಿಗೆ ಒಂದೇ ಒಂದು ಪದವೂ ತಪ್ಪಾಗಿ ಅಚ್ಚಾಗಬಾರದು ಎಂಬ ಕಾಳಜಿ ಇತ್ತು. ಇಷ್ಟಾದರೂ ಸಮಯಾವಕಾಶದ ಅಭಾವದಿಂದ, ಒತ್ತಡದಲ್ಲಿ ಮುದ್ರಾರಾಕ್ಷಸನ ಹಾವಳಿ ನಡೆದೇ ಬಿಡುತ್ತಿತ್ತು. ಅದು ಅಚಾತುರ್ಯದಿಂದ, ಒತ್ತಡದಿಂದ, ಕಣ್ತಪ್ಪಿನಿಂದ ಆಗುತ್ತಿದ್ದ ಪ್ರಮಾದ. ಆದರೆ ಇಂದು ಕನ್ನಡದ ವ್ಯಾಕರಣ, ಕಾಗುಣಿತದ ಅರಿವಿಲ್ಲದೆ ಇಂಥ ತಪ್ಪುಗಳು ಪದೇ ಪದೇ ಆಗುತ್ತಿವೆ. ಜೊತೆಗೆ ವಾರ್ತಾ ವಾಚನದಲ್ಲಿ, ಸಂದರ್ಶನ ಆಧಾರಿತ ಕಾರ್ಯಕ್ರಮಗಳಲ್ಲಂತೂ ಒಂದು ಕನ್ನಡ ಪದಕ್ಕೆ ಮತ್ತೊಂದು ಇಂಗ್ಲಿಷ್ ಪದ ಸೇರಿಸಿ ವಾಕ್ಯ ರಚಿಸುವ ಪ್ರವೃತ್ತಿ ಬೆಳೆದಿದೆ. ಸುದ್ದಿ ಬರೆಯುವವರು ಉದ್ದೇಶಪೂರ್ವಕವಾಗಿಯೇ ಹೀಗೆ ಬರೆಯುತ್ತಿದ್ದಾರೆ. ಇದು ಕನ್ನಡ ಭಾಷೆಯಲ್ಲಿ ಪದ ಇಲ್ಲ ಎಂದಲ್ಲ, ಅದೊಂದು ಫ್ಯಾಷನ್ ಎನ್ನುತ್ತಾರೆ ಅವರು. ಜನ ಸಾಮಾನ್ಯರು ಬಳಸುವ ಪದ ಹಾಗೂ ಜನಸಾಮಾನ್ಯರು ಮಾತನಾಡುವ ರೀತಿ ಸುದ್ದಿ ಇದ್ದರೆ ಜನ ಮೆಚ್ಚುತ್ತಾರೆ ಎಂಬುದು ಅವರ ವಾದ. ಹೀಗಾಗೆ ಭಾಷಾ ವರ್ಣ ಸಂಕರಕ್ಕೆ ಇದು ನಾಂದಿ ಹಾಡಿದೆ. ಇಂದು ನಾನು ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಅವಸ್ಥೆ ಎಂಬ ವಿಷಯದ ಮೇಲೆ ವಿಚಾರ ಮಂಡಿಸುತ್ತಿರುವುದರಿಂದ ಉದಾಹರಣೆಗಾದರೂ ಇಂಥ ಕೆಲವು ಅವ್ಯವಸ್ಥೆಯ ಬಗ್ಗೆ ಹೇಳಲೇ ಬೇಕು.

ಕಳೆದ ತಿಂಗಳು ಅಂದರೆ ರಾಜ್ಯೋತ್ಸವ ದಿನದಂದು ಸುವರ್ಣ ವಾಹಿನಿಗೆ ತನ್ನ ತಪ್ಪಿನ ಅರಿವಾಗಿತ್ತು. ಹೀಗಾಗಿ ಅಚ್ಚ ಕನ್ನಡದಲ್ಲೇ ಸುದ್ದಿ ವಾಚನ ಮಾಡುವುದಾಗಿ ಅದುವೇ ಸ್ವಯಂ ಘೋಷಣೆ ಮಾಡಿತು. ಕಷ್ಟಪಟ್ಟು ಕೆಲವರು ಕನ್ನಡದಲ್ಲೇ ವಾರ್ತೆ ಓದುವ ಪ್ರಯತ್ನ ಮಾಡಿದರು. ಅಲ್ಲಲ್ಲಿ ಸೋತರು. ಮಾರನೆ ದಿನ ಅವರೇ ಆತ್ಮಾವಲೋಕನವನ್ನೂ ಮಾಡಿಕೊಂಡರು. ತಾವು ಎಷ್ಟು ಬಾರಿ ಎಷ್ಟು ಆಂಗ್ಲಪದ ಬಳಸಿದೆವೆಂಬುದನ್ನೂ ತಾವೇ ಹೇಳಿಕೊಂಡರು.

ತಮ್ಮಿಂದ ಸಂಪೂರ್ಣ ಕನ್ನಡದಲ್ಲಿ ಸುದ್ದಿ ವಾಚನ ಸಾಧ್ಯವೇ ಇಲ್ಲ ಎಂಬುದನ್ನೂ ಒಪ್ಪಿಕೊಂಡು ಬಿಟ್ಟರು. ಕನಿಷ್ಠ ತಮ್ಮ ತಪ್ಪನ್ನು ಅರಿತು ಇಂಥ ಒಂದು ಪ್ರಯತ್ನವಾದರೂ ನಡೆಯಿತು. ಜೊತೆಗೆ ಈಗ ಹಲವು ಇಂಗ್ಲಿಷ್ ಶೀರ್ಷಿಕೆಯ ಕಾರ್ಯಕ್ರಮಗಳಿಗೆ ಕನ್ನಡದ ಹೆಸರು ಇಡುವ ಪ್ರಯತ್ನ ನಡೆಯುತ್ತಿದೆ. ಇದು ನಿಜಕ್ಕೂ ಸ್ವಾಗತಾರ್ಹ. ಆದರೆ ಎಲ್ಲ ವಾಹಿನಿಗಳಲ್ಲೂ ಇಂಥ ಬದಲಾವಣೆಯ ಅಗತ್ಯ ಇದೆ.

ಇತ್ತೀಚಿನ ಕೆಲವು ಉದಾಹರಣೆಗಳು ಇಲ್ಲಿವೆ. ಈ ಟಿವಿ ಅಗ್ರವಾರ್ತೆ ಎಂದು ಹೇಳುತ್ತಾ ಕನ್ನಡದಲ್ಲಿ ವಾರ್ತೆ ಆರಂಭಿಸಿ ನಂತರ ಬಿಗ್ ನ್ಯೂಸ್ ಎಂದು ಇಂಗ್ಲಿಷ್‌ಗೆ ಶರಣಾಗುತ್ತದೆ. ಇನ್ನು ಮುಖ್ಯಾಂಶಗಳಲ್ಲಂತೂ ಸಿ.ಎಂ., ಪಿ.ಎಂ., ಡಿ.ಸಿ., ವಾರೆಂಟ್, ಪಿ.ಐ.ಎಲ್. ಜಾರ್ಜ್‌ಶೀಟ್ ಎಫ್.ಐ.ಆರ್. ಪದಗಳ ನಿರಂತರ ಬಳಕೆ ಆಗುತ್ತದೆ. ಹೀಗಾಗಿ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ, ದೋಷಾರೋಪ ಪಟ್ಟಿ, ಪ್ರಥಮ ಮಾಹಿತಿ ವರದಿ ಇತ್ಯಾದಿ ಪದಗಳು ಮರೆತೇ ಹೋಗುತ್ತವೆ. ಶ್ರೀಸಾಮಾನ್ಯರೂ ಇದೇ ಪದಗಳನ್ನು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಬಳಸುತ್ತಿದ್ದಾರೆ.

ಇನ್ನು ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೂಪರ್, ಸಿಟಿ ಪ್ಲಸ್, ಫುಲ್ ಹೌಸ್ ಇತ್ಯಾದಿ ಸೇರಿವೆ. ರಿಯಾಲಿಟಿ ಷೋ ಎಂದು ವಾಹಿನಿಗಳು ಹೇಳುವ ಸ್ಪರ್ಧೆ ಆಧಾರಿತ ಕಾರ್ಯಕ್ರಮಗಳಲ್ಲಂತೂ ಸುಲಿದ ಬಾಳೆಯ ಹಣ್ಣಿನಂದದಿ ಎಂಬ ಸುಂದರ ಕನ್ನಡವನ್ನು ಹುಡುಕುವ ಸ್ಥಿತಿ ನಿರ್ಮಾಣವಾಗದೆ.

ವಾಹಿನಿ ಒಂಬತ್ತು. ಟಿ.ವಿ. ನೈನ್ ಆಗಿದೆ. ಜೊತೆಗೆ ಇದರ ಕಾರ್ಯಕ್ರಮಗಳ ಪಟ್ಟಿಯಲ್ಲಿ ವಾರೆಂಟ್, ಲೇಡಿಸ್ ಕ್ಲಬ್, ನೇಷನ್ ಅಟ್ ನೈನ್, ಬೌಂಡರಿ ಲೇನ್, ಫಿಲ್ಮೀ ಫಂಡಾ, ಜಸ್ಟ್ ಬೆಂಗಳೂರು ಇತ್ಯಾದಿ ಇಂಗ್ಲಿಷ್ ಶೀರ್ಷಿಕೆಗಳೇ ಇವೆ. ಜೊತೆಗೆ ಸುದ್ದಿ ವಾಚನದ ವೇಳೆ ಹಿಂದಿ ಹಾಗೂ ಇಂಗ್ಲಿಷ್ ಪದಗಳು ಯಥೇಚ್ಛವಾಗಿ ಬಳಕೆ ಆಗುತ್ತವೆ. ಓನ್ಲಿ ಜಾನ್, ನೋ ಬಿಪ್ಸ್, ಬೆಂಗಾಳಿ ಬೆಡಗಿ ಇಲ್ಲದಿದ್ರೂ ನೋ ಪ್ರಾಬ್ಲಂ, ಲಾಂಗ್ ಹೇರ್ ಮಹಿ, ವರದಿ ಮತ್ತು ಸ್ಕ್ರಿಪ್ಟ್, ಟೀಂ ಇಂಡಿಯಾಗೆ ವಾರ್ನಿಂಗ್, ದಗಲ್ ಬಾಜಿ ಕಾಲೇಜ್, ಗೋಲ್ ಮಾಲ್, ದರ್ಶನ್ ಪ್ಯಾರಾಡೈಸ್, ದುನಿಯಾ, ಟಿ.ವಿ.೯ಎಫೆಕ್ಟ್, ಅವರಿಗೆ ಇವರ ಸಾಥ್, ಇತ್ಯಾದಿ ಪದಗಳು ಟಿವಿ ಪರದೆಯಲ್ಲಿ ರಾರಾಜಿಸುತ್ತವೆ. ಯಾವುದೇ ಒಂದು ಪದವನ್ನು ಕನಿಷ್ಠ ೬ ಬಾರಿ ಕೇಳಿದರೆ ಅದು ನಮ್ಮ ನೆನಪಿನಲ್ಲಿ ಉಳಿಯುತ್ತದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಹೀಗೆ ನಾವು ನಿರಂತರವಾಗಿ ಅನ್ಯ ಭಾಷಾ ಪದಗಳನ್ನು ಕೇಳುತ್ತಿದ್ದರೆ ಕನ್ನಡದಲ್ಲಿ ಮಾತನಾಡುವವರು ಕೂಡ ಅವರಿಗರಿವಿಲ್ಲದೆ ಅನ್ಯಭಾಷೆ ಪದವನ್ನು ಬಳಸುವಂಥ ಸ್ಥಿತಿ ನಿರ್ಮಾಣವಾಗುತ್ತದೆ.

ಇನ್ನು ನೇರ ಸಂದರ್ಶನ ಮಾಡುವವರು, ದೂರವಾಣಿ ಮೂಲಕ ಸಂಪರ್ಕಿಸುವ ಸಂದರ್ಭದಲ್ಲಿ ಇತ್ತ ಇಂಗ್ಲೀಷೂ ಅಲ್ಲದ, ಅತ್ತ ಕನ್ನಡವೂ ಅಲ್ಲದ ವಾಕ್ಯ ರಚನೆ. ಇದರಲ್ಲಿ ಕನ್ನಡ ಇಂಗ್ಲಿಷ್ ಎರಡೂ ಸೇರಿ ಶ್ರವಣಕಷ್ಟವಾಗುತ್ತದೆ. ಕೆಲವೊಮ್ಮೆ ಇಂಗ್ಲಿಷ್ ವಾಕ್ಯ ರಚನೆಯೂ ತಪ್ಪಾಗಿರುತ್ತದೆ.

ಇನ್ನು ಸುವರ್ಣ ನ್ಯೂಸ್ಟ್ವೆಂಟಿಫೋರ್ ಬಾರ್ ಸವೆನ್ ಎಂದೇ ಘೋಷಿಸಿಕೊಂಡಿದೆ. ಇದರಲ್ಲಿ ಕೂಡ ಬಿಗ್ ಫೈಟ್, ಕವರ್ ಸ್ಟೋರಿ ಇತ್ಯಾದಿ ಹಲವು ಇಂಗ್ಲಿಷ್ ಶೀರ್ಷಿಕೆಗಳ ಕಾರ್ಯಕ್ರಮಗಳಿವೆ.

ಸುದ್ದಿ ವಾಚನದ ವೇಳೆ  ಪೆನ್ಷನ್ ಪ್ರಾಬ್ಲಂ, ಅಜ್ಮಲ್ ಕಮಾಲ್, ಎಚ್.ಐ.ವಿ. ಪಾಸಿಟೀವ್ ಲೈಫ್, ಆರೆಂಜ್ ಬಾಯ್ ಎಂಗೇಜ್‌ಮೆಂಟ್, ರಿಲೀಫ್, ರಿಲ್ಯಾಕ್ಸ್, ಎಫ್.ಡಿ.ಐ ಚಿಲ್ಲರೆ ಪ್ರಾಬ್ಲಂ, ಯಮನ ಏಜೆಂಟ್, ಕಿಲ್ಲರ್ ಬಿಎಚಿಟಿಸಿ, ಸಿಲ್ಕ್ ಡರ್ಟಿ ಲೈಫ್, ಸೂಪರ್ ಫಾಸ್ಟ್, ಫಾರೆಸ್ಟ್ ಮಿನಿಸ್ಟರ್, ಕೋಕೋನಟ್ ಬಾತ್, ಫುಡ್, ಸುವರ್ಣ ನ್ಯೂಸ್ ಇಂಪ್ಯಾಕ್ಟ್ ಇತ್ಯಾದಿ ಪದ ಪ್ರಯೋಗಗಳು ಹೇರಳವಾಗಿವೆ.

ಇನ್ನು ಸಮಯ ವಾಹಿನಿಯಲ್ಲಿ ಜಿಲ್ಲಾ ಜರ್ನಿ, ಬ್ರೇಕಿಂಗ್ ನ್ಯೂಸ್, ಹೆಡ್‌ಲೈನ್ಸ್ ಎಂಬ ನೇರ ಇಂಗ್ಲಿಷ್ ಪದ ಬಳಕೆ ಇದೆ. ಜೊತೆಗೆ ಡಬಲ್ ದೋಖಾ, ಡಿಗ್ರಿ ಬೇಕಾ ಡಿಗ್ರಿ, ದಿಢೀರ್ ರೈಡ್, ಸೀನಿಯರ್ ಕಟ್ಟಾ, ಜೂನಿಯರ್ ಕಟ್ಟಾ ಬೈಲ್ ಅರ್ಜಿ ಹಿಯರಿಂಗ್, ಅಸೆಂಬ್ಲಿ, ಕೌನ್ಸಿಲ್ ಇಂದಿನಿಂದ ಆರಂಭ, ಸಿ.ಎಂ., ಪಿಎಂ, ಡಿ.ಸಿ, ಎ.ಸಿ. ಟೈಮ್‌ಬೌಂಡ್ ಇತ್ಯಾದಿ ಇಂಗ್ಲಿಷ್ ಪದಗಳನ್ನು ಬೆರೆಸಿ ಕನ್ನಡ ವಾಕ್ಯ ರಚಿಸಲಾಗುತ್ತಿದೆ.

ಜನಶ್ರೀ ವಾಹಿನಿಯಲ್ಲೂ ಹೆಡ್‌ಲೈನ್ಸ್ ಕಾಟ ಹೆಚ್ಚಾಗಿದೆ. ಕನ್ನಡ ಪ್ರೇಮಿ ಕಂಡಕ್ಟರ್ ಎಂದಾಗ ಆ ನಿರ್ವಾಹಕನಿಗಿರುವ ಕನ್ನಡ ಪ್ರೇಮ ಕಂಡಕ್ಟರ್ ಎಂಬ ಕಾರ್ಯಕ್ರಮ ಬಿತ್ತರಿಸಿ ವಾಹಿನಿ ಕನ್ನಡ ಪ್ರೇಮಿ ನಿರ್ವಾಹಕ ಎಂದಿದ್ದರೆ ಹೆಚ್ಚು ಅರ್ಥ ಬರುತ್ತಿತ್ತು.  ಇನ್ನು ಜಾಬ್ಸ್ ಜಂಕ್ಷನ್, ನಮ್ಮ ರಿಪೋರ್ಟರ್, ಓಕೆ, ನೆಕ್ಸ್‌ಟ್ ಎಂಬ ಪದಗಳಂತೂ ನಿರಾಯಾಸವಾಗಿ ವಾರ್ತಾವಾಚಕರ ಬಾಯಿಂದ ಹೊರಹೊಮ್ಮುತ್ತವೆ.

ಇಲ್ಲಿ ದಿನಾಂಕ ೬-೧೨-೧೧ರಂದು ಬೆಳಗ್ಗೆ ನಡೆದ ಸಂದರ್ಶನ ಆಧಾರಿತ ಕಾರ್ಯಕ್ರಮದ ಶೀರ್ಷಿಕೆಯೇ ರಾಜ್ಯ ರಾಜಕಾರಣದಲ್ಲಿ ಟರ್ನಿಂಗ್ ಪಾಯಿಂಟ್. ಇದರಲ್ಲಿ ಕಾರ್ಯಕ್ರಮ ನಡೆಸಿಕೊಟ್ಟವರು ನಾಟ್ ಇಮ್ಮಿಡಿಯಟ್ಲಿ, ಫೈನ್, ಫೈನ್ ಎಂಬ ಪದ ಪದೇಪದೇ ಬಳಸುತ್ತಿದ್ದರು. ಮೆಂಟರ್ ಅಗತ್ಯ ಇದೆ. ಇಮ್ಮೀಡಿಯಟ್ ಆಗಿ ಆತುರ ಪಡದೆ ಕ್ಯಾಲ್ಯುಕುಲೇಟಿವ್ ಆಗಿ ಸ್ಟ್ಯಾಂಡ್ ತಗಂಡ್ರೆ.. ಎಂದು ಹೇಳುತ್ತಿದ್ದರು.  

ಎಲ್ಲಕ್ಕಿಂತ ಹೆಚ್ಚು ಆತಂಕ ಮೂಡಿಸಿದ್ದು ದಿನಾಂಕ ೪-೧೨-೧೧ರಂದು ಉದಯ ಟಿ.ವಿಯಲ್ಲಿ ಬೆಳಗ್ಗೆ ೧೦ ಗಂಟೆ ಸುಮಾರಿನಲ್ಲಿ ಪ್ರಸಾರವಾದ ಚಿತ್ರನಟ ಸುದೀಪ್ ಸಂದರ್ಶನ. ಸಂದರ್ಶನ ಮಾಡಿದ ಯುವತಿ ಕೆಂಪೇಗೌಡ ಪವರ್‌ಫುಲ್ ಹೆಸರು, ಎಗೈನ್ ವೀರ ಮದಕರಿ ಟೂ. ವಾಟ್ ಎವರ್ ಇಟ್ ಈಸ್ ನಿಮಗೆ ಹೇಗೆ ಫೀಲ್ ಆಗತ್ತೆ. ಸುದೀಪ್ ಕೂಡ ಅದೇ ಧಾಟಿಯಲ್ಲಿ ಕನ್ನಡ ಇಂಗ್ಲಿಷ್ ಬೆರೆಸಿ ಉತ್ತರ ನೀಡಿದರು. ನಂತರ ಹಾನೆಸ್ಟ್‌ಲಿ ಲೆಟ್ ಅಸ್ ಎಂಜಾಯ್ ದಿ ಸಾಂಗ್ ಎಂದು ಚಿತ್ರಗೀತೆ ಹಾಕಿದರು. ನಿಮ್ಮ ಚಿತ್ರದ ಆಡಿಯೋ ಯಾವಾಗ ರಿಲೀಸ್ ಆಗತ್ತೆ ಅಂತ ಎಲ್ಲರಿಗೂ ಎಕ್ಸೈಟ್‌ಮೆಂಟ್ ಇತ್ತು. ಎಲ್ಲಾ ಎಕ್ಸೈಟ್ ಆಗಿದ್ರು. .., ಹ್ಯೂಮರಸ್ ಬೇಸ್ ಲೈನ್, ಫೋರ್ ಫೈವ್ ಡೇಸ್, ಹೌ ಈಸ್, ಐ ಮೀನ್ ಟು ಸೇ.. ಸಿಕ್ಸ್ ಫೀಟ್, ೩ ಫೀಟ್, ಆಲ್ ಪಾಸಿಬಸ್ ವೇಸ್, ಫಸ್ಟ್ ಟೈಮ್, ಯು ಬೀಯಿಂಗ್ ಎ ಡೈರೆಕ್ಟರ್  ಹೇಗೆ ವರ್ಕ್ ಮಾಡಿದ್ರಿ, ಎಕ್ಸೈಟಿಂಗ್ ಅಂಡ್ ಇನ್‌ಸ್ಪೈರಿಂಗ್, ವೆಲ್ ಸುದೀಪ್, ಫಿಲಂ ಈ ತಿಂಗಳ ಕೊನೇಲಿ ರಿಲೀಸ್ ಆಗತ್ತೆ. ಬೆಸ್ಟ್ ಆಫ್ ಲಕ್, ಟೇಕ್ ಕೇರ್ ಹೀಗೆ ಇಡೀ ಸಂದರ್ಶನದಲ್ಲಿ ಪ್ರತಿಶತ ೫೦ಕ್ಕಿಂತ ಹೆಚ್ಚು ಇಂಗ್ಲಿಷ್ ಪದಗಳೇ ತುಂಬಿತ್ತು. ಕನ್ನಡ ವಾಹಿನಿಗಳನ್ನು ಗ್ರಾಮೀಣ ಗೃಹಿಣಿಯರೂ ನೋಡುತ್ತಾರೆ, ಕನ್ನಡ ಬಾರದವರೂ ವೀಕ್ಷಿಸುತ್ತಾರೆ. ಹೀಗೆ ಇಂಗ್ಲಿಷ್ ಬೆರೆಸಿದರೆ ಅವರಿಗೆ ಅರ್ಥವಾಗುವುದಾದರೂ ಹೇಗೆ.

ಇನ್ನು ಅದೇ ದಿನ ಬೆಳಗ್ಗೆ ಉದಯಾ ನ್ಯೂಸ್‌ನಲ್ಲಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾರ್ಯಕ್ರಮ ಬರುತ್ತಿತ್ತು. ಅದರಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದವರು ಪೋಲಿಂಗ್ ೭೧ ಪರ್‌ಸೆಂಟ್ ಆಗಿತ್ತು. ಹೌ ಡು ಯು ಫೀಲಿಂಗ್ (ಫೀಲ್) ಎಬೌಟ್ ದಿಸ್ ರಿಸೆಲ್ಟ್ ಎಂದು ಪ್ರಶ್ನಿಸುತ್ತಿದ್ದರು.

ಇನ್ನು ಉದಯಾ ಮ್ಯೂಸಿಕ್ ಅಥವಾ ಯು.೨ನಲ್ಲಿ ಹೆಸರು ಮೆನ್‌ಷನ್ ಮಾಡಿ, ವಿಷ್ ಮಾಡಿ, ಗೆಸ್ ಮಾಡಿ, ಹಂಬಲದ ರಿಕ್ವೆಸ್ಟ್ ಮಾಡಿದ್ದಾರೆ ಹೀಗೆ ಕನ್ನಡ ಬಳಕೆ ಆಗುತ್ತಿದೆ. ಇಂಥ ಕಾರ್ಯಕ್ರಮ ನಿರೂಪಕರೊಂದಿಗೆ ದೂರವಾಣಿ ಮೂಲಕ ಮಾತನಾಡುವವರು ಕೂಡ ಅದೇ ರೀತಿ ಕನ್ನಡದಲ್ಲಿ ಮಾತನಾಡುವಂತಾಗಿರುವುದು ನಿಜಕ್ಕೂ ಕನ್ನಡದ ಅವಸ್ಥೆಗೆ ಹಿಡಿದ ಕನ್ನಡಿ ಆಗಿದೆ.

ಇನ್ನು ಸವಿರುಚಿ, ನಳಪಾಕ ಕಾರ್ಯಕ್ರಮಗಳಲ್ಲಿಯಂತೂ ಆಂಗ್ಲರ ಅಡುಗೆ ಮನೆಯೇ ಕನ್ನಡಿಗರ ಮನೆಗೆ ನುಗ್ಗಿ ಬಿಟ್ಟಿದೆ. ಇದಕ್ಕೆ ಜ್ವಲಂತ ಉದಾಹರಣೆ ದಿನಾಂಕ ೬-೧೨-೧೧ರಂದು ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾದ ನಳಪಾಕ ಕಾರ್ಯಕ್ರಮ.

ಇದರಲ್ಲಿ ಕಾರ್ಯಕ್ರಮ ನಡೆಸಿಕೊಟ್ಟ ಯುವತಿ ವೆಲ್‌ಕಮ್‌ಟು ನಳಪಾಕ ಎಂದೇ ಕಾರ್ಯಕ್ರಮ ಆರಂಭಿಸಿದ್ದು, ಒಂದು ಬಾರಿ ನಳಪಾಕ ಆಗಿದ್ದನ್ನು ಬಿಟ್ಟರೆ ಇಲ್ಲಿ ಮಾಡಿದ್ದೆಲ್ಲಾ ರೆಸಿಪಿಗಳೇ, ಮಾತು ಮಾತಿಗೂ ಈ ರೆಸಿಪಿ, ನೆಕ್ಸ್‌ಟ್ ರೆಸಿಪಿ, ಅವಲಕ್ಕಿ ವಾಂಗಿಬಾತ್ ರೆಸಿಪಿ, ಟಿಫಿನ್ ಐಟಮ್ ಮಾಡಿದ್ರು, ಇಂಪ್ರೆಸ್ ಆಗುವಂತೆ ಟೇಸ್ಟೀ ರೆಸಿಪಿ ಮಾಡಿದ್ರು, ನಾಳೆ ಮತ್ತೊಬ್ಬರು ಗೆಸ್ಟ್ ಜೊತೆಗೆ ಮತ್ತೊಂದು ರೆಸಿಪಿ ಮಾಡೋಣ ಎಂದೇ ಹೇಳುತ್ತಿದ್ದರು.

ಇನ್ನು ಕ್ರಿಸ್ಪಿ, ಸಾಫ್ಟ್, ವೈರೈಟಿ, ಸೋ ಮೆನಿ ಟೈಪ್ಸ್, ಟೇಸ್ಟೀ, ಪರ್‌ಫೆಕ್ಟ್ ರೆಸಿಪಿಗಳು, ಫುಲ್ ಮೀಲ್ಸ್‌ಗಳು ಬಂದು ಹೋದವು. ಕೊನೆಯಲ್ಲಿ ಪ್ರೊಸೀಜರ್ ಕೂಡ ತಿಳಿಸಲಾಯಿತು. ಒಟ್ಟಿನಲ್ಲಿ ಕನ್ನಡ ಕಸ್ತೂರಿಯಲ್ಲಿ ಇಂಗ್ಲಿಷ್ ಅಡುಗೆ ಮನೆಯಲ್ಲಿ ಕನ್ನಡದ ಅಡುಗೆ ಬೆಂದಿತ್ತು.

ಇತರ ಕಾರ್ಯಕ್ರಮಗಳಲ್ಲೂ ಇದೇ ಹಾಡು. ಇದೆ ಪಾಡು. ರಾಣಿ ಮಹಾರಾಣಿ ಸೀಸನ್ ಥ್ರೀ ಆಗಿದೆ. ಇದರಲ್ಲಿ ಸ್ವಲ್ಪ ಟೆನ್‌ಷನ್, ಸ್ವಲ್ಪ  ಕನ್‌ಫ್ಯೂಷನ್, ಹಾಯ್ ಹಲೋ, ವೆಲ್‌ಕಂ ಟು ನೆಕ್ಸ್‌ಟ್ ಪಾರ್ಟಿಸಿಪೆಂಟ್ ಪದಗಳಂತೂ ಹರಿದಾಡುತ್ತವೆ.  ಕಾರ್ಯಕ್ರಮ ನಡೆಸುವವರು ತಮ್ಮ ಇಂಗ್ಲಿಷ್ ಪಾಂಡಿತ್ಯ ಪ್ರದರ್ಶಿಸಲು ನೀಡುವ ಮುತುವರ್ಜಿಯನ್ನು ಕನ್ನಡ ಭಾಷಾ ಪಾಂಡಿತ್ಯ ಮೆರೆಯಲು ತೋರಿಸದಿರುವುದು ನಿಜಕ್ಕೂ ವಿಷಾದದ ಸಂಗತಿ.

ಜೀ ಕನ್ನಡ ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿಯೂ ಎಲ್ಲ ಕಾರ್ಯಕ್ರಮಗಳಲ್ಲೂ ಇಂಗ್ಲಿಷ್ ಪ್ರಾಬಲ್ಯ ಇದೆ. ಕುಣಿಯೋಣ ಬಾರಾದ ಬಗ್ಗೆ ಹೇಳುವುದಾದರೆ ನಿರೂಪಕರಿಂದ ಹಿಡಿದು ತೀರ್ಪುಗಾರರವರೆಗೆ ಎಲ್ಲರೂ ಕನ್ನಡ ಇಂಗ್ಲಿಷ್ ಬೆರೆಸೇ ಮಾತನಾಡುತ್ತಾರೆ. ಸೂಪರ್, ಆಸಮ್, ಕೋ ಆರ್ಡಿನೇಷನ್, ಕೆಮಿಸ್ಟ್ರೀ, ಟೆನ್‌ಷನ್, ಪ್ರಪರ್ಟಿ, ವೈಟ್ ಅಂಡ್ ವಾಚ್, ಪರ್‌ಫಾರ್ಮೆನ್ಸ್ ನೋಡಿದ್ರಲ್ಲಾ, ನನ್ನ ಫೇವರಿಟ್ ರೌಂಡ್, ನೆಕ್ಸ್‌ಟ್ ಯಾರು ಡ್ಯಾನ್ಸ್ ಮಾಡ್ತಾರೆ.. ಇತ್ಯಾದಿ.

ಇನ್ನು ಎಲ್ಲಾ ವಾಹಿನಿಗಳಲ್ಲೂ ಬ್ರೇಕಿಂಗ್ ನ್ಯೂಸ್ ಸಮಸ್ಯೆ ಇದೆ. ತೆವಳುವ ಸುದ್ದಿಗಳ (ಸ್ಕ್ರೊಲಿಂಗ್)ಲ್ಲಂತೂ ಕನ್ನಡದಲ್ಲಿ ನಿತ್ಯ ತಪ್ಪುಗಳು ಕಾಣಿಸುತ್ತವೆ. ಪೌಷ್ಟಿಕ, ಪೌಷ್ಠಿಕವಾಗಿರುತ್ತದೆ;, ಮತದಾನ ಮತಾದಾನವಾಗಿರುತ್ತದೆ, ಪ್ರಶಸ್ತಿ ಪ್ರದಾನ, ಪ್ರಶಸ್ತಿ ಪ್ರಧಾನವಾಗುತ್ತದೆ, ಹಲವು ಬಾರಿ ದೇಸ, ಬಾಸಾದೋಸವೂ (ಭಾಷಾ ದೋಷ) ಕಾಣ ಸಿಗುತ್ತದೆ. ಇನ್ನು ಅಕ್ಷರ ವಾರ್ತೆಗಳಲ್ಲಿ, , ತೆವಳುವ ಸುದ್ದಿಯಲ್ಲಿ ಇಂಥ ಹಲವಾರು ಪ್ರಮಾದಗಳಾಗುತ್ತಿವೆ. ಹಲವು ಬಾರಿ ಇದನ್ನು ತಿದ್ದಿಕೊಳ್ಳುವ ಪ್ರಯತ್ನವೂ ಆಗುತ್ತದೆ ಎನ್ನುವುದು ತುಸು ಸಮಾಧಾನದ ಸಂಗತಿ.

ಎಫ್.ಎಂ. ವಾಹಿನಿಗಳ ಬಗ್ಗೆ ಹೇಳದಿರುವುದೇ ಒಳಿತು. ಕನ್ನಡವನ್ನು ಗರಿಷ್ಠ ಕೊಲೆ ಮಾಡುತ್ತಿರುವವರು ರೇಡಿಯೋ ಜಾಕಿಗಳು. ಇವರ ಕನ್ನಡ ಆ ದೇವರಿಗೇ ಪ್ರೀತಿ. ಮಗಾ, ಮಚ್ಚಾ, ಸಕತ್ ಹಾಟ್‌ಮಗಾ ಎಂದೆಲ್ಲಾ ಹೇಳುವ ಇವರು ನಮ್ಮ ಕನ್ನಡದ ಜೊತೆಗೆ ಸಂಸ್ಕೃತಿಯನ್ನೂ ಹಾಳು ಮಾಡುತ್ತಿದ್ದಾರೆ. ಕೆಲವು ವಾಹಿನಿಗಳ ಕಾರ್ಯಕ್ರಮಗಳೂ ಇದಕ್ಕೆ ಹೊರತಾಗಿಲ್ಲ.

ವಾಹಿನಿಗಳು ಅತ್ಯಂತ ಪ್ರಭಾವಶಾಲೀ ಮಾಧ್ಯಮ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಲವು ದಶಕಗಳಿಂದ ಮಡೆ ಸ್ನಾನ ನಡೆಯುತ್ತಿದೆ. ಆದರೆ ಅದು ಅಮಾನವೀಯ, ಅನಾಗರಿಕ ಸಂಸ್ಕೃತಿ ಎಂಬುದು ಜಗಜ್ಜಾಹೀರಾಗಿದ್ದು ವಾಹಿನಿಗಳಿಂದ. ಇಷ್ಟು ಪ್ರಭಾವಶಾಲಿಯಾದ ಮಾಧ್ಯಮ ಬಲವಂತವಾಗಿಯಾದರೂ ಸುಂದರ, ಸುಲಲಿತ ಕನ್ನಡ ಪದಗಳನ್ನು ನಿರಂತರವಾಗಿ ಬಳಸಿದರೆ ಈ ವಾಹಿನಿಗಳ ವೀಕ್ಷಕರು, ಅದರಲ್ಲೂ ಪುಟ್ಟ ಮಕ್ಕಳು ಉತ್ತಮ ಕನ್ನಡ ಮಾತಾಡುವುದರಲ್ಲಿ ಸಂದೇಹವಿಲ್ಲ. ಕನ್ನಡ ಉಳಿಯುವುದರಲ್ಲೂ ಅನುಮಾನವಿಲ್ಲ.

ಇಂದು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡದ ಅವಸ್ಥೆ ವರ್ಣಿಸಲಸದಳವಾಗಿದೆ. ಪ್ರತಿಯೊಂದು ವಾಹಿನಿಯೂ ಕನ್ನಡ ಚೆನ್ನಾಗಿ ಬಲ್ಲವರನ್ನು ನೇಮಕ ಮಾಡಿಕೊಳ್ಳುವುದು ಉತ್ತಮ. ಜೊತೆಗೆ ತಮ್ಮ ವಾರ್ತಾ ವಾಚಕರಿಗೆ ಅಲ್ಪಪ್ರಾಣ, ಮಹಾಪ್ರಾಣಗಳ ದೋಷವಿಲ್ಲದೆ, ಅಲ್ಪವಿರಾಮ, ಪೂರ್ಣ ವಿರಾಮವಿದ್ದಾಗ ಹೇಗೆ ವಾರ್ತಾವಾಚನ ಮಾಡಬೇಕು ಎಂಬ ಬಗ್ಗೆ ಹಾಗೂ ನೇರವಾಗಿ ಕರೆ ಮಾಡಿ ಮಾತನಾಡುವ ಸಂದರ್ಭದಲ್ಲಿ ಸುಲಿದ ಬಾಳೆಯ ಹಣ್ಣಿನಂತ ಸುಂದರ ಕನ್ನಡವನ್ನು ಬಳಸುವ ಬಗ್ಗೆ ತರಬೇತಿ ಕೊಡಿಸುವುದೂ ಅಗತ್ಯವಾಗಿದೆ. ಹೀಗೆ ಮಾಡಿದರೆ ಕನ್ನಡ ಉಳಿಯುತ್ತದೆ. ವಿದ್ಯುನ್ಮಾನ ಮಾಧ್ಯಮಗಳು ಇಂಥ ಒಂದು ಉತ್ತಮ ಪ್ರಯತ್ನ ಮಾಡಿದರೆ ಜನರೂ ಸುಂದರ ಕನ್ನಡ ಬಳಸುತ್ತಾರೆ, ಕನ್ನಡ ಉಳಿಯುತ್ತದೆ. ಇಲ್ಲವಾದರೆ ಮುಂದೊಂದು ದಿನ ಕನ್ನಡ ಕಾರ್ಯಕ್ರಮ ನೋಡುವವರೆ ಇಲ್ಲದ ಸ್ಥಿತಿಯನ್ನೂ ಇವರೇ ಎದುರಿಸಬೇಕಾಗುತ್ತದೆ. ಇದು ಶ್ರೀಮಂತ ಕನ್ನಡ ಭಾಷೆಗೂ ಎರವಾಗುತ್ತದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಕನ್ನಡಕ್ಕೆ ನಾವು ಮಾಡಿದ ಅವಮಾನ ಆಗುತ್ತದೆ ಅಲ್ಲವೇ? ಈ ಬಗ್ಗೆ ವಾಹಿನಿಗಳ ಮುಖ್ಯಸ್ಥರು ಚಿಂತಿಸುವುದು ಅತ್ಯಗತ್ಯ. ಇದು ಒಬ್ಬ ಪತ್ರಕರ್ತನಾಗಿ, ಕನ್ನಡ ಪ್ರೇಮಿಯಾಗಿ ನನ್ನ ವಿನಮ್ರ ಮನವಿ.

ಜಯ ಹೇ ಕರ್ಣಾಟಕ ಮಾತೆ! 

ಮುಖಪುಟ /ಸಾಹಿತ್ಯ