ಮುಖಪುಟ /ಸಾಹಿತ್ಯ

ಯಶಸ್ವೀ ಕಾರ್ಯಕ್ರಮ - ನಲ್ಲೂರು ಸಂತೃಪ್ತಿ

Dr. Nallur prasadಬೆಂಗಳೂರು, ಫೆ.೫ - ಬೆಂಗಳೂರಿನಲ್ಲಿ ೪೦ ವರ್ಷಗಳ ಬಳಿಕ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ. ಜನರು ತೋರುತ್ತಿರುವ ಕನ್ನಡ ಪ್ರೀತಿಯಿಂದ ಹೃದಯ ತುಂಬಿಬಂದಿದೆ. ಅವರ ಅಭಿಮಾನಕ್ಕೆ ನಾನು ಚಿರಋಣಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಹೇಳಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಿನ್ನೆ ಮೆರವಣಿಗೆ ಹಾಗೂ ನಂತರ ಉದ್ಘಾಟನಾ ಸಮಾರಂಭಕ್ಕೆ ಲಕ್ಷಾಂತರ ಕನ್ನಡಿಗರು ದೂರದೂರದ ಊರುಗಳಿಂದ ಆಗಮಿಸಿದ್ದಾರೆ. ಇದು ಅವರಲ್ಲಿ ಸುಪ್ತವಾಗಿರುವ ಕನ್ನಡದ ಬಗೆಗಿನ ತುಡಿತವನ್ನು ಬಿಂಬಿಸಿದೆ ಎಂದು ಹೇಳಿದರು.

ಇಂದು ನಡೆದ ಗೋಷ್ಠಿಗಳಲ್ಲಿ ಕೂಡ ಬೆಂಗಳೂರಿಗರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ, ತಮ್ಮ ಪುಸ್ತಕ ಪ್ರೇಮ ಮೆರೆದಿದ್ದಾರೆ. ಇಷ್ಟು ದೊಡ್ಡ ಸಮ್ಮೇಳನ ನಡೆದಾಗ ಚಿಕ್ಕ ಪುಟ್ಟ ಲೋಪಗಳು ಸಹಜ, ಅದೆಲ್ಲವನ್ನೂ ಸ್ವೀಕರಿಸಿ, ಕಾರ್ಯಕ್ರಮ ಯಶಸ್ಸುಗೊಳಿಸುತ್ತಿರುವ ಪ್ರತಿಯೊಬ್ಬ ಕನ್ನಡಿಗರಿಗೂ, ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲ ಸಮಿತಿಯವರಿಗೂ ತಾವು ಆಭಾರಿ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸಮ್ಮೇಳನ ನಡೆಸುವ ಇರಾದೆ ವ್ಯಕ್ತಪಡಿಸಿದಾಗ ಎಲ್ಲರೂ ನನ್ನದು ಹುಚ್ಚು ನಿರ್ಧಾರ ಅಂದರು, ಯಾಂತ್ರಿಕತೆಯ ಬೆಂಗಳೂರಿನಲ್ಲಿ ಜನ ಬರುತ್ತಾರೆಯೇ ಎಂದು ಪ್ರಶ್ನಿಸಿದ್ದರು, ಆದರೆ ಜನರ ಸುಪ್ತ ಕನ್ನಡ ಪ್ರೇಮ ಇಂದು ಬಹಿರಂಗವಾಗಿದೆ. ಇಡೀ ಕಾರ್ಯಕ್ರಮ ಯಶಸ್ವಿಯಾಗಿದೆ. ನಾಳೆ ಭಾನುನಾರವಾಗಿರುವ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭಕ್ಕೆ ಇನ್ನೂ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದೆ.

ಮುಖಪುಟ /ಸಾಹಿತ್ಯ