ಮುಖಪುಟ /ಸಾಹಿತ್ಯ

76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರ ಭಾಷಣ
- ಗೀತಾ ನಾಗಭೂಷಣ

Geetha Nagabhushan, ಗೀತಾ ನಾಗಭೂಷಣ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ಬೆಳಗಾಗಿ ನಾನೆದ್ದು ಯಾರುಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳೆ ಭೂಮಿ ತಾಯಿ
ಎಳ್ಳು ಜೀರಿಗೆ ಬೆಳೆಯೋಳೆ ಭೂಮಿ
ತಾಯಿಯ ಎದ್ದೊಂದು ಘಳಿಗೆ ನೆನೆದೇನ.

ಬೆಳ್ಳಂಬೆಳಗಿನ ಎಳ್ಳು, ಔಷಧಿಯುಕ್ತ ಜೀರಿಗೆಯಂಥ ಅಪರೂಪದ ಧಾನ್ಯ ಬೆಳೆಯುವ ಕನ್ನಡದ ಈ ಭೂಮಿಗೆ ವಂದಿಸುವುದು ಎಂಥ ಭಾಗ್ಯದ ಕ್ಷಣವಲ್ಲವೆ? ಭೂಮಿ ತಾಯ್ತನದ ಸಂಕೇತ. ತಾಯಿ ಹೆಣ್ತನದ ಗೌರವ, ಹೆಣ್ಣು ಎಂದರೆ ಅವಳು ಮಗಳು, ತಂಗಿ, ಅಕ್ಕ, ಚಿಕ್ಕಮ್ಮ, ಅತ್ತೆ, ಸೊಸೆ, ಗೆಳತಿ ಮೇಲಾಗಿ "ಅವ್ವ" ಏನೆಲ್ಲವೂ ಆಗಬಹುದು. ಹೌದು ನಾನು ಕನ್ನಡವ್ವನ ಸಮೃದ್ಧ ವಾತ್ಸಲ್ಯ ಉಂಡು ಬೆಳೆದ ಈ ಮನೆಯ ಮಗಳು. ನಿಮ್ಮ ಮನೆಯ ಮಗಳಾದ ನನಗೆ ನುಡಿಹಬ್ಬದ ಅಧ್ಯಕ್ಷೀಯ ಪಟ್ಟ ಕಟ್ಟಿದ್ದೀರಿ. ನಾನಾದರೂ ಈ ಸಾಹಿತ್ಯಕ ಅಗ್ರಗಣ್ಯ ಪಟ್ಟವನ್ನು ಸಮಸ್ತ ಕನ್ನಡದ ಮಹಿಳಾ ಲೋಕಕ್ಕೆ ಸಂದ ಗೌರವವಾಗಿ ಸ್ವೀಕರಿಸುತ್ತೇನೆ. ನಿಮ್ಮ ಮಂಡೆಗೆ ಹೂವು ತಂದ ಅಗ್ಗಳಿಕೆಯ ಹರಕೆಯ ಸಂಕೇತವಾಗಿ ಇದಿರುಗೊಳ್ಳುತ್ತೇನೆ. ವಿಶ್ವವನ್ನು ಒಳಗೊಂಡಂತೆ ವಿಶಾಲ ಕನ್ನಡಮೆನಿಪ್ಪ ನಾಡೊಳು ಪಸರಿಸಿದ ಕುಲಕೋಟಿ ಬಾಂಧವರೇ ಶರಣು.

ಹಲಗೆ ಬಳಪ ಪಿಡಿಯದ, ಪದವಿಟ್ಟಳುಪದ, ಪ್ರಚಂಡ ಪ್ರತ್ಯುತ್ಪನ್ನಮತಿ ಕವಿ ಕುಮಾರವ್ಯಾಸನ ಈ ನೆಲ ಯಾವುದೇ ಕನ್ನಡಿಗರಿಗಾದರೂ ಪುಲಕಿತಗೊಳಿಸದೆ ಇರಲಾರದು.

ಕಲಿಯುಗವನ್ನು ದ್ವಾಪರಗೊಳಿಸುವ ಕುಮಾರವ್ಯಾಸನ "ಗದಗಿ"ನ ಈ ನೆಲದಿಂದ ಕನ್ನಡ ನಾಡು - ನುಡಿ, ಬದುಕು- ಬವಣೆ, ಚರಿತ್ರೆ, ವರ್ತಮಾನ ಕುರಿತು ಚಿಂತನೆ ಹರಿಸಲು ಅವಕಾಶ ಮಾಡಿಕೊಟ್ಟ ಕನ್ನಡ ಸಾಹಿತ್ಯ ಪರಿಷತ್ತಿಗೂ, ಪ್ರಸ್ತುತ ಸಮ್ಮೇಳನದ ಸ್ವಾಗತ ಸಮಿತಿಯ ಸರ್ವರಿಗೂ ತುಂಬು ಹೃದಯದ ಕೃತಜ್ಞತೆಗಳು.

ಅಕ್ಷರದಲಭ್ಯಾಸವ ಮಾಡಿ ಬರೆವ ತೊಡೆವ ಪರಿಯಿನ್ನೆಂತೊ ?
ಸ್ವರೂಪವೆಂಬುದಾವುದು ನಿರೂಪವೆಂಬುದಾವುದು ಅರಿಯರಾಗಿ
ಆದಿ ನಿರಾಳ ಮಧ್ಯ ನಿರಾಳ ಊರ್ಧ್ವ ನಿರಾಳ ಗುಹೇಶ್ವರ.

ಅಲ್ಲಮನ ಈ ವಚನವು ಅಕ್ಷರದ ಮೂಲಕ ತೆರೆದುಕೊಳ್ಳುವ ಪ್ರಪಂಚದ ಮಿತಿಯನ್ನು ಕುರಿತು ಮಾತಾಡುತ್ತದೆ. ಮಾನವ ಸಮುದಾಯ ಆಕಾರ ತಳೆದು ಎಷ್ಟೋ ವರುಷ ಗತಿಸಿದ ನಂತರ ಅಕ್ಷರವೆಂಬ ಧ್ವನಿ ಸಂಕೇತವನ್ನು ರೂಢಿಸಿಕೊಂಡಿದೆ. ಅಂದರೆ ಅಕ್ಷರ ಸಂಕೇತ, ಆ ಮೂಲಕ ಹದಗೊಂಡ ಭಾಷೆ ಎಂಬುದು ತೀರ ಇತ್ತೀಚಿನ ಅನ್ವೇಷಣೆಯಾಗಿದೆ. ಮೌಖಿಕ ಭಾಷೆಯು ಲಿಪಿ ಸಂಕೇತ ತಾಳಿ, ಲಿಪಿಯಲ್ಲಿ ಭಾವ - ಭಾವನೆಗಳನ್ನು ಹಿಡಿದಿಡುವ ಕಾಯಕ ಪ್ರಾರಂಭವಾದದ್ದಂತೂ ಮೊನ್ನೆ ಮೊನ್ನಿನ ವಿದ್ಯಮಾನವೇ ಹೌದು. ಇದರರ್ಥ ಅಕ್ಷರದ ವ್ಯವಹಾರ ಸುರುವಿಟ್ಟುಕೊಳ್ಳುವ ಮೊದಲಿನಿಂದಲೇ ಬದುಕು ಅಸ್ತಿತ್ವದಲ್ಲಿತ್ತು. ಭೂಮಿಯ ಮೇಲೆ ಮಾನವ ಸಮುದಾಯ ಸ್ಥಾಯಿಯಾದಂದಿನಿಂದಲೂ "ಬದುಕೆಂಬ" ಪರಿಕಲ್ಪನೆ ಘನೀಭವಿಸುತ್ತಲೆ ಸಾಗಿದೆ. ಇಂಥ ಆದಿಮ ಮತ್ತು ಅನನ್ಯವಾದ "ಬದುಕನ್ನು" ಅಕ್ಷರದಲ್ಲಿ ಹಿಡಿದಿಡುವ ಸಾಹಸವು ಅಕಾರಣವಾದುದೇನಲ್ಲ. ಆದಾಗ್ಯೂ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದಂತೆಲ್ಲ ಬದುಕು ಬಿಡಿಸಿಕೊಂಡು ಓಡುವ ಪರಿ ಇದೆಯಲ್ಲ, ಇದು ಅಲ್ಲಮನನ್ನು ಚಿಂತೆಗೀಡು ಮಾಡಿದಂತಿದೆ. ಅಂತೆಯೇ ನನಗೂ ನಿಮ್ಮೆಲ್ಲರಿಗೂ.

ಬದುಕಿನ ಈ ಭಿತ್ತಿಯನ್ನು, ಅದರ ವಿಶ್ವತೋರೂಹಾದ ಸಂಗತಿಯನ್ನು ಕುರಿತು ಪ್ರಭು ಆದಿ ನಿರಾಳ, ಮಧ್ಯವು ನಿರಾಳ, ಊರ್ಧ್ವವು ನಿರಾಳ ಎಂದು ಉದ್ಗರಿಸುತ್ತಾನೆ. ಬಾಳಿನ ವಿರಾಡ್ರೂಪ ಕಂಡು ಅಲ್ಲಮನಂಥ ಅಲ್ಲಮನೇ ಗಾಬರಿಯಾಗಿರಬೇಕಾದರೆ ಸಾಹಿತ್ಯವೆಂಬ ಪುಟ್ಟ ಉಪಲಬ್ಧಿ ಹಿಡಿದು ಹೊರಟಿರುವ ನಮ್ಮಂಥವರ ಪಾಡು ಏನಾಗಿರಬೇಡ ಹೇಳಿ?

ಬಂಧುಗಳೆ, ಒಟ್ಟಾರೆ ಸಾಹಿತ್ಯಕ್ಕಿಂತ "ಬದುಕು" ಬಹು ದೊಡ್ಡದು. ತಾತ್ವಿಕವಾಗಿ ಬದುಕು ಎಷ್ಟು ದೊಡ್ಡದೋ ವಾಸ್ತವವಾಗಿ ಅದು ಅಷ್ಟೇ ಸಂಘರ್ಷಮಯವಾದದ್ದೂ ಹೌದು. ಸಂಘರ್ಷಮಯವಾದ ಬದುಕಿನೊಂದಿಗೆ ಸಂಬಂಧ ಏರ್ಪಡಿಸಿಕೊಳ್ಳಬಯಸುವ ಸಾಹಿತ್ಯ ಸೃಷ್ಟಿಯು ಕೂಡಾ ಸೃಜನಶೀಲ ಸಂಘರ್ಷವಲ್ಲದೆ ಮತ್ತೇನೂ ಅಲ್ಲ. ಆದರೆ ಸೃಜನಶೀಲ ಸಂಘರ್ಷವು ಉಳಿದೆಲ್ಲ ಸಂಘರ್ಷಕ್ಕಿಂತ ಹೆಚ್ಚು ಆಪ್ಯಾಯಮಾನವೂ ಮೋಹಕವೂ ಆಗಿರುತ್ತದೆ. ಸಾಹತ್ಯದ ಈ ಮೋಹಕ ಗುಣವೇ ಮತ್ತೆ ಮತ್ತೆ ಇಂಥ ಸಮ್ಮೇಳನಗಳನ್ನು, ಅಕ್ಷರ ಜಾತ್ರೆಗಳನ್ನು, ನುಡಿಹಬ್ಬಗಳನ್ನು ಹಮ್ಮಿಕೊಳ್ಳುವಂತೆ ಮಾಡುತ್ತದೆ. ಸಾಹಿತ್ಯದೊಂದಿಗಿನ ಬಿಡಿಸಿಕೊಳ್ಳಲಾಗದ ಮೋಹಕತೆಯು ನನ್ನನ್ನು, ಅಂದರೆ ಚಾರಿತ್ರಿಕವಾಗಿ ಹಿಂದುಳಿದ ಪ್ರದೇಶವೆನಿಸಿಕೊಂಡಿರುವ ಹೈದ್ರಾಬಾದ ಕರ್ನಾಟಕದ ಕಗ್ಗ ಹಳ್ಳಿಯಾದ ಸಾವಳಗಿಯಿಂದ, ಅದೂ ಸಾಮಾನ್ಯ ವರ್ಗದಿಂದ ಬಂದ ಸಾಮಾನ್ಯ ಮಹಿಳೆಯೊಬ್ಬಳಾದ ನನ್ನನ್ನು "ಇಳೆಯ ಜಾಣರು ಮೆಚ್ಚುವಂತೆ ಕೃಷ್ಣಕಥೆಯನ್ನು ತಿಳಿಯ ಹೇಳಿದ" ನಾರಾಯಣಪ್ಪನ ಸನ್ನಿಧಿಗೆ ಎಳೆದು ತಂದಿದೆ. ಕರ್ನಾಟಕದ ಶರಣ ಪರಂಪರೆಯ ಮಠಗಳ ನಡುವೆ ಅಪ್ಪಟ ವೈಚಾರಿಕ ಮಠವೆಂದೇ ಕರೆಸಿಕೊಂಡಿರುವ ತೋಂಟದಾರ್ಯರ ಘೌಳಿಯವರೆಗೆ ಮಹಿಳೆಯೊಬ್ಬಳು ಸವೆಸಿದ ಸಾಹಿತ್ಯಕ ದಾರಿಯು ಕನ್ನಡ ಸಂಸ್ಕೃತಿಯ ವೈಶಿಷ್ಟ್ಯವೆಂದೇ ನನಗೆ ಅನಿಸಿದೆ. ಏಕೆಂದರೆ ಎರಡು ಸಾವಿರ ವರುಷಕ್ಕೂ ಮಿಕ್ಕ ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯದ ಹಿರಿಮೆ - ಗರಿಮೆಯನ್ನು ಎಷ್ಟೇ ಕೊಂಡಾಡಿದರೂ ಒಟ್ಟು ಸಾಹಿತ್ಯದಲ್ಲಿ ಮಹಿಳೆಯರ ಚಿತ್ರಣ ಮತ್ತು ಸಾಹಿತಿಯಾಗಿ ಮಹಿಳೆಯ ಪಾಲುದಾರಿಕೆ ನಗಣ್ಯವೇ ಸರಿ. ತೊಂಬತ್ತು ವರ್ಷ ಅಂದರೆ ಹತ್ತಿರ ಹತ್ತಿರವೆಂದರೂ ಒಂದು ಶತಮಾನ ಗತಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ನಂಥ ಗೌರವಾನ್ವಿತ ಸಂಸ್ಥೆಯಲ್ಲಿ, ಅದು ನಡೆಸಿಕೊಂಡು ಬಂದಿರುವ ಎಪ್ಪತ್ತಾರು ಸಮ್ಮೇಳನಗಳಲ್ಲಿ ಮಹಿಳೆಯರಿಗೆ ಸಂದ ಪಾಲು ಎಷ್ಟು? ಕೇವಲ ಮೂರು. ಈ ಹೊತ್ತು ನಾನು ನಾಲ್ಕನೆಯವಳು, ಸುದೀರ್ಘ ಸಾಹಿತ್ಯಕ ನಡೆಯಲ್ಲಿ ನನ್ನನ್ನು ನಾಲ್ಕನೆಯವಳಾಗಿ ಗುರುತಿಸಿರುವುದಕ್ಕೆ ಅಪಾರ ಖುಶಿ ಇದೆ. ಲಿಂಗಾತೀತ ನೆಲೆಯಲ್ಲಿಯೇ ನನ್ನನ್ನು ಗಣಿಸಿರುವ ಸಾಧ್ಯತೆಯ ಬಗೆಗೆ ಹೆಮ್ಮೆಯಿದೆಯಾದರೂ ಒಟ್ಟು ಮಹಿಳಾ ಸಮುದಾಯದ ಪ್ರತಿನಿಧಿತ್ವವನ್ನು ಇದಿರುಗೊಳಿಸಿಕೊಂಡಾಗ ಖಂಡಿತ ಒಂದು ನಿಟ್ಟುಸಿರು ಹೊರಬರದೆ ಇರದು.

          ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ (ಈಗ ಇಲ್ಲ) ಮಹಿಳೆಯರು ಸಾಹಿತ್ಯ ಸೃಷ್ಟಿಯಂಥ ಅನನ್ಯ ಸಾಂಸ್ಕೃತಿಕ ವಿದ್ಯಮಾನಗಳಲ್ಲಿ ಗೈರು ಹಾಜರಾದದ್ದು ಏಕೆ? ಹೆಣ್ಣೆಂಬ ಜೀವ ಭಾವದ ಪರಿಧಿಯೆಷ್ಟು? ಸೀಮಿತ ಪರಿಧಿಯನ್ನು ಸ್ಥಗಿತಗೊಳಿಸಿದವರು ಯಾರು? ಅನ್ಯ ನಿರ್ಮಿತ ಪರಿಧಿಗಳನ್ನು ದಾಟಿ ಬರದಂತೆ ಅವಳ ಕೈಕಾಲುಗಳಿಗೆ ಬಂಧನದ ಬೇಡಿ ಏಕೆ ತೊಡಿಸಲಾಯಿತು? ಒಂದು ಜೀವವನ್ನೇ ಹೊರಹಾಕಬಲ್ಲಂಥ ಸೃಷ್ಟಿಯ ಅದ್ಭುತ ಮತ್ತು ರಿಸ್ಕಿನ ಕಲಾಪಗಳಲ್ಲಿ ತೊಡಗುವ ಅವಳ ಆ ಅಸೀಮ ಸಾಮರ್ಥ್ಯವನ್ನು ಯಾರಿಗಾದರೂ ನಿಯಂತ್ರಿಸಲು ಅದು ಹೇಗೆ ಸಾಧ್ಯವಾಯಿತು ? ಎಂಬ ಪ್ರಶ್ನೆಗಳು ಪ್ರಜ್ಞಾವಂತರೆಲ್ಲರಿಗೂ ಕಾಡಿರಲಿಕ್ಕು ಸಾಕು. ಈ ತಥಾಕಥಿತ ಚರಿತ್ರೆಯ ಹಿಂದೆ ಲಿಂಗ ತಾರತಮ್ಯದ ದೊಡ್ಡ ಪುರಾಣವೆ ಇದೆ. ಅದೇನೆ ಇರಲಿ, ಶತಮಾನಗಳ ಲಿಂಗಭೇದ ನೀತಿಯ ತಾತ್ವಿಕ, ಧಾರ್ಮಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಕಾರಣಗಳನ್ನು ಆಧುನಿಕ ಸ್ತ್ರೀಲೋಕ ನಿಚ್ಚಳಗೊಳಿಸಿಕೊಂಡಿದೆ. ಲಿಂಗ ತಾರತಮ್ಯದ ಹಿಂದಿರುವ ದೃಷ್ಟಿ-ಧೋರಣೆಯನ್ನು ಬದಲಿಸುವ ನಿಟ್ಟಿನಲ್ಲಿ ಸಮಕಾಲೀನ ಸ್ತ್ರೀ ಸಮುದಾಯ ಸಂಚಲನಗೊಳ್ಳುತ್ತಿದೆ ಎಂಬುದೆ ಸಮಾಧಾನದ ಸಂಗತಿ. ಅಷ್ಟಕ್ಕೂ ನಾವು ನೀವೆಲ್ಲರೂ ವ್ಯವಸ್ಥೆಯ ಬಲಿಪಶುಗಳೇ ಅಲ್ಲವೇ? ಸನಾತನ ವ್ಯವಸ್ಥೆಯ ಆಳದ ಬೇರುಗಳನ್ನು ಕಿತ್ತೊಗೆಯಲು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ಸಹಸ್ರಮಾನದಷ್ಟು ಹಿಂದೆಯೇ ಅಕ್ಕಮಹಾದೇವಿಯಂಥ ದಿಟ್ಟ ಮಹಿಳೆ ಟೊಂಕ ಕಟ್ಟಿ ನಿಂತಳಲ್ಲ. ಆ ವಿದ್ಯಮಾನವೇ ಮಹಿಳಾ ಲೋಕದ ಮುಕ್ಕಾಗದ ಸ್ವಾಭಿಮಾನದ ಸಂಗತಿಯಾಗಿ ಇವತ್ತಿಗೂ ನಿಂತಿದೆ. ಅಕ್ಕನೊಟ್ಟಿಗೆ ಕಾಣಿಸಿಕೊಂಡ ಸತ್ಯಕ್ಕ, ಸೂಳೆ ಸಂಕವ್ವೆ, ಗೊಗ್ಗವ್ವೆ, ರೆಮ್ಮವ್ವೆಯಂಥ ದಲಿತ ವಚನಕಾರ್ತಿಯರು ಎತ್ತಿದ ಪ್ರಶ್ನೆಗಳು ಇವತ್ತಿಗೂ ವ್ಯವಸ್ಥೆಗೆ ನುಂಗಲಾರದ ತುತ್ತಾಗಿಯೇ ಪರಿಣಮಿಸಿವೆ. ಈ ಹೊತ್ತು ನಾನು ಅಖಂಡ ಕರ್ನಾಟಕದ ಮತ್ತು ಸುದೀರ್ಘ ಕನ್ನಡ ಸಾಹಿತ್ಯದ ಲಿಂಗಾತೀತ ಪ್ರತಿನಿಧಿಯಾಗಿಯೇ ಈ ಸ್ಥಾನವನ್ನು ನಿಭಾಯಿಸಬೇಕಾದ ಎಚ್ಚರವಿದ್ದಾಗ್ಯೂ, ನಾನು ನಡೆದು ಬಂದ ದಾರಿಯು ನನ್ನನ್ನು ಈ ಮೇಲಿನ ಕೆಲವು ಸ್ತ್ರೀಪರ ಮಾತುಗಳನ್ನಾಡಲು ಸತಾಯಿಸಿದೆ.

ಈವರೆಗೆ ನಡೆದು ಬಂದ ಬಹುತೇಕ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಒಟ್ಟು ಕನ್ನಡ ಸಾಹಿತ್ಯದ ಪರಂಪರೆ ಪ್ರಯೋಗ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. ಕೆಲವೊಮ್ಮೆಯಂತೂ ತೀರ ಚರ್ವಿತ ಚರ್ವಣ ಎನ್ನುವಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ನಾನಂತೂ ಅಖಂಡ ಕನ್ನಡ ಸಾಹಿತ್ಯವನ್ನು ಆಯಾ ಕಾಲಘಟ್ಟದ ಸೃಜನಶೀಲ ಸಂಘರ್ಷದ ಮೊತ್ತವಾಗಿಯೇ ಗ್ರಹಿಸುತ್ತೇನೆ. ಹಲ್ಮಿಡಿ ಶಾಸನ ಪೂರ್ವಘಟ್ಟದ ಚತ್ತಾಣ ಬೆದಂಡೆಯಂಥ ನಾಡವರ ನುಡಿಗಟ್ಟು ರೂಪಗಳಿಂದ ಹಿಡಿದು ಇವತ್ತಿನ ಆಧುನಿಕೋತ್ತರ ವರ್ತಮಾನದವರೆಗೆ ನಿಶ್ಚಲ ಸಂಸ್ಕೃತಿ ಮತ್ತು ಚಲನಶೀಲ ಸಂಸ್ಕೃತಿಗಳ ಮಧ್ಯ ನಿರಂತರ ಮುಖಾಮುಖಿ ನಡೆದುಕೊಂಡು ಬಂದಿದೆ. ರಾಜ್ಯಸತ್ಯೆ, ಧರ್ಮಸತ್ಯೆಗಳ ಅಬ್ಬರದ ಧ್ವನಿಯ ಇದಿರು ಜನಸತ್ತೆ ಹೊಸ ಹೊಸ ಸಾಹಿತ್ಯ ರೂಪಗಳನ್ನು ಸೃಷ್ಟಿಸಿಕೊಳ್ಳುವಲ್ಲಿಯೇ ತನ್ನ ಇರುವಿಕೆಯನ್ನು ದಾಖಲಿಸುತ್ತ ಬಂದಿದೆ.

ಕನ್ನಡ ಸಾಹಿತ್ಯದ ವಸ್ತು, ಭಾಷೆ, ರೀತಿ, ತಂತ್ರ ಮತ್ತು ಒಟ್ಟು ದೃಷ್ಟಿ - ಧೋರಣೆಗಳಲ್ಲಿ ಕಾಲದಿಂದ ಕಾಲಕ್ಕೆ ಅದೆಷ್ಟು ಪಲ್ಲಟಗಳು ಸಂಭವಿಸಿವೆಯೆಂದರೆ, ಸಾಹಿತ್ಯ ವಿಮರ್ಶಕರಿಗೆ ಈವರೆಗೂ ಅವೆಲ್ಲವುಗಳನ್ನು ಹಿಡಿದಿಡಲು ಸಾಧ್ಯವಾಗುತ್ತಿಲ್ಲ. ಇದು ಕನ್ನಡಿಗರ ಜೀವಂತಿಕೆಯ ಪ್ರತೀಕವೇ ಆಗಿದೆ. ಕೇವಲ ಆಧುನಿಕ ಸಾಹಿತ್ಯ ಘಟ್ಟವೊಂದನ್ನೇ ಕುರಿತು ಪ್ರಸ್ತಾಪಿಸುವುದಾದರೂ ಅದು ದೀರ್ಘ ಚರ್ಚೆಯನ್ನು ಹುಟ್ಟುಹಾಕದೆ ಇರಲಾರದು. ಒಂದು ಶತಮಾನದ ಅವಧಿಯಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಮತ್ತು ಈ ಕ್ಷಣಕ್ಕೆ ಬಂಡಾಯ ದಲಿತ್ತೋತ್ತರ ಎಂದು ಗುರುತಿಸಿದರೂ ಅದೆಷ್ಟು ವೈವಿಧ್ಯ, ವೈಶಿಷ್ಠ್ಯಗಳಿವೆ ಎಂಬುದನ್ನು ಗಮನಿಸಬಹುದು. ನಾವು ಬರೆಯುತ್ತಿರುವ ಹರೆಯದಲ್ಲಿ ಅಂದರೆ ದಲಿತ-ಬಂಡಾಯ ಸಾಹಿತ್ಯ ಉಚ್ಛ್ರಾಯದ ಹಂತದಲ್ಲಿ ಕಥೆ, ಕಾದಂಬರಿ, ಕಾವ್ಯಗಳಿಗೆ ಅದೆಂಥ ಉಕ್ಕು ಇತ್ತೆಂದರೆ ಅದೊಂದು ನಮೂನಿ ಸೃಜನಶೀಲ ರೂಪಗಳ ಸುಗ್ಗಿಯ ಕಾಲ ಎನ್ನಬಹುದು.

ಹಾಗೆ ನೋಡಿದರೆ, ನವೋದಯ ಕಾಲದಿಂದಲೇ ಭಾವಗೀತೆ, ಕಥೆ, ಕಾದಂಬರಿ, ನಾಟಕ, ಲಲಿತ ಪ್ರಬಂಧ, ಪ್ರವಾಸ ಕಥನ, ಆತ್ಮ ಚರಿತ್ರೆ ಮುಂತಾದ ಸಾಹಿತ್ಯ ರೂಪಗಳ ಸಮೃದ್ಧತೆ ಸುರುವಿಟ್ಟುಕೊಂಡಿತ್ತು. ಪ್ರಗತಿಶೀಲ ನವ್ಯರ ಕಾಲದಲ್ಲಿಯೂ ಬರವಣಿಗೆಯ ವಸ್ತು, ದೃಷ್ಟಿ ಧೋರಣೆಯಲ್ಲಿ ಪಲ್ಲಟವಾಗಿದ್ದರೂ ಸಾಹಿತ್ಯ ರೂಪಗಳು ಮಾತ್ರ ಹೆಚ್ಚು ಕಡಿಮೆ ಇವೇ ಮುಂಚೂಣಿಯಲ್ಲಿ ಇದ್ದವು. ದಲಿತ - ಬಂಡಾಯ ಕಾಲಘಟ್ಟದಲ್ಲಿ ಮಾತ್ರ ಸಾಹಿತ್ಯದ ಭಾಷೆ ಮತ್ತು ರೂಪಗಳೆರಡೂ ಹೋರಾಟಗಾರರ ಕೈಯಲ್ಲಿನ ಅಸ್ತ್ರದಂತಾದವು. "ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರ" ಎಂಬಂಥ ಘೋಷ ವಾಕ್ಯಗಳು ಸಾಹಿತ್ಯಕ ಅಕೆಡೆಮಿಕ್ ಶಿಸ್ತಿನಾಚೆ ಜಿಗಿದು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ ಪ್ರವಹಿಸತೊಡಗಿದವು. ಕಲೆಗಾಗಿ ಕಲೆ ಅಥವಾ ಬದುಕಿಗಾಗಿ ಕಲೆ ಎಂಬಂಥ ತೀರ ಪ್ರಾಚೀನ ವಾದಗಳು ಪರಸ್ಪರ ಡಿಕ್ಕಿ ಹೊಡೆದು ಕಲೆ ಅರ್ಥಾತ್ ಸಾಹಿತ್ಯ ಮತ್ತು ಬದುಕು ಎರಡೂ ಯಾರ ಅಂಕೆಗೂ ಸಿಗದಂತೆ ಓಡತೊಡಗಿದವು. ಹೀಗೆ ಓಡುತ್ತಿರುವಾಗಲೆ ನವ ವಸಾಹತುಶಾಹಿಯ ಆರ್ಥಿಕ ಮೂಲದ ಆಕ್ರಮಣಗಳು ಸಾಂಸ್ಕೃತಿಕ ಯಜಮಾನಿಕೆಯ ಪೋಷಾಕು ತೊಟ್ಟು ನಮ್ಮ ಧಾವಂತದ ದಿಕ್ಕನ್ನೇ ತಪ್ಪಿಸಿದವು.

ಬಂಧುಗಳೇ, ದಲಿತ - ಬಂಡಾಯ ಸಾಹಿತ್ಯ ಚಳುವಳಿಯ ಓಟದ ನೇತೃತ್ವವನ್ನು ನಮಗರಿಯದಂತೆ ಅದ್ಯಾವಾಗ ಈ ನವ ಉದಾರವಾದಿ ಪ್ರಭುಗಳು ವಹಿಸಿಕೊಂಡರೊ ಗೊತ್ತಾಗಲೇ ಇಲ್ಲ. ಖಾಸಗೀಕರಣ, ಉದಾರೀಕರಣ, ಜಾಗತೀಕರಣವೆಂಬ ಅರ್ಥಮೂಲದ ಪ್ರಳಯಗಳು, ಟಿ.ವಿ., ಇಂಟರನೆಟ್, ಖಾಸಗಿ ಚಾನಲ್ಲು, ಎಸ್.ಎಂ.ಎಸ್., ಎಂ.ಎಂ.ಎಸ್., ಮುಂತಾದ ಹಲವು ಬಗೆಯ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಂಸ್ಕೃತಿಕ ಲೋಕದ ಗುತ್ತಿಗೆದಾರರನ್ನು ಸೃಷ್ಟಿಸಿತು. ಈ ಹೊತ್ತು ಸಾಹಿತ್ಯವು ಓದುವುದಷ್ಟಕ್ಕೆ ಮೀಸಲಾಗಿಲ್ಲ. ನೋಡುವುದಕ್ಕೆ, ಕೇಳುವುದಕ್ಕೆ, ಅಷ್ಟೇ ಏಕೆ ನೇರಾನೇರ ಮುಖಾ-ಮುಖಿಯಾಗುವುದಕ್ಕೆ ಚಾಚಿಕೊಂಡಿದೆ. ಲಿಪಿ ಮಾಧ್ಯಮದಿಂದ ಶ್ರವ್ಯ, ದೃಶ್ಯ ಮಾಧ್ಯಮಕ್ಕೆ ನಮ್ಮ ಸೃಜನಶೀಲ ಚಟುವಟಿಕೆಗಳು ವಿಸ್ತರಿಸಿಕೊಂಡಿಲ್ಲವೆ? ಸಾಹಿತ್ಯವನ್ನು ಆಸ್ವಾದಿಸುವ ಸಹೃದಯರು ಎಲ್ಲೂ ಕಳೆದು ಹೋಗಿಲ್ಲ. ಅವರು ಯಾವತ್ತೂ ನಮ್ಮೊಂದಿಗೆ ಇದ್ದಾರೆ. ಮೊದಲಿಗಿಂತಲೂ ಸೂಕ್ಷ್ಮಾತಿಸೂಕ್ಷ್ಮ ಆಪ್ತ ಭಾವಕೋಶಗಳೊಂದಿಗೆ ಕಾದು ಕುಳಿತಿದ್ದಾರೆ. ಆದರೆ ಅವರ ನಿರೀಕ್ಷೆಗೆ ತಕ್ಕ ಅಥವಾ ಅವರ ಹಂಬಲ ತಣಿಸಬಲ್ಲ ಸಾಂಸ್ಕೃತಿಕ ಕಸುಬುದಾರರಾದ ನಾವು ಎಲ್ಲಿದ್ದೇವೆ? ಒಂದು ಕ್ಷಣ ಒಂದೇ ಒಂದು ಕ್ಷಣ, ನಾವು ನಮ್ಮೊಂದಿಗೆ ಸಂಭಾಷಣೆ ನಡೆಸಿ ಕೇಳಿಕೊಳ್ಳೋಣ. ಎಲ್ಲಿ? ಎಲ್ಲಿಗೆ ಹೊರಟಿದ್ದೇವೆ ನಾವು. ಉಳ್ಳವರ ಬದುಕನ್ನು ವೈಭವೀಕರಿಸುವ ಮೆಗಾ ಸಿರಿಯಲ್ಲುಗಳು, ಸಂಪದ್ಭರಿತರ ಮದೋನ್ಮತ್ತ ರಿಯಾಲಿಟಿ ಷೋಗಳು, ಸಂಗೀತ ಅಭಿರುಚಿ ಹೆಸರಿನಲ್ಲಿ ನಡೆಸುತ್ತಿರುವ ಅವೈಜ್ಞಾನಿಕ ಸ್ಪರ್ಧೆಗಳು, ದೈವಿಕತೆ ಹೆಸರಿನ ಮೌಢ್ಯ ತುಂಬುವ ಜ್ಯೋತಿಷ್ಯ, ವಾಸ್ತು, ಪುನರ್ಜನ್ಮ, ನಾನಾ ನಮೂನಿ ಬಾಬಾಗಳ ಚಮತ್ಕಾರಗಳು ಇಲ್ಲೆಲ್ಲಾ ನುಡಿಸಾಹಿತ್ಯ ಇಲ್ಲವೆ? ಈ ಎಲ್ಲವುಗಳು ಆಕಾರ ತಳೆಯುವುದು ಭಾಷೆಯಲ್ಲಿ ತಾನೆ? ಭಾಷೆಯ ಆಕರ್ಷಕ ರೂಪವೇ ಸಾಹಿತ್ಯದ ಜೀವಾಳವಲ್ಲವೆ?

ಈ ಎಲ್ಲ ಸಮೂಹ ಮಾಧ್ಯಮಗಳು ವ್ಯಾಪಾರಿ ಲೋಕದ ಕಪಿಮುಷ್ಠಿಯಲ್ಲಿ ಬಂಧಿತವಾಗಿ ತಮಗೆ ಬೇಕಾದ ಸರಕುಗಳನ್ನು ಸೃಷ್ಟಿಸಿಕೊಳ್ಳುತ್ತಿಲ್ಲವೆ ? ಆಧುನಿಕೋತ್ತರ ಮಾಹಿತಿ ತಂತ್ರಜ್ಞಾನದ ನಡುಮನೆಗೆ ಬಂದು ನಿಂತಿರುವ ನಾವು ಈ ಎಲ್ಲ ಮಾಧ್ಯಮಗಳಿಗೆ ವಿಮುಖರಾಗುವಂತಿಲ್ಲ. ವಿಮುಖರಾಗಬೇಕಾದ ಅವಶ್ಯಕತೆಯೂ ಇಲ್ಲ. ಆದರೆ ಈ ಮಾಧ್ಯಮಗಳು ತನ್ನ ಸರಕುಗಳಿಗೆ ಗ್ರಾಹಕರನ್ನು ಸೆಳೆಯುವ ಜಾಹಿರಾತು ಲೋಕದ ಹಣದ ಥೈಲಿಯಲ್ಲಿ ಬಂಧಿತವಾಗಿವೆ. ಜನ ಮಾನಸವನ್ನು ರೂಪಿಸಬೇಕಾದ ಸಾಂಸ್ಕೃತಿಕ ರೂವಾರಿಗಳು ವ್ಯಾಪಾರೀಲೋಕದ ನಿಯಂತ್ರಕರಾಗಬೇಕೇ ಹೊರತು ನಿಯಂತ್ರಿತ ಸರಕುಗಳಾಗಬಾರದು. ಕಾಲಕಾಲಕ್ಕೆ ಬದಲಾದ ಮಾಧ್ಯಮಗಳನ್ನು ದುಡಿಸಿಕೊಳ್ಳಬೇಕಾದ ಸೃಜನಶೀಲ ಪ್ರತಿಭೆಗಳು ತಾವು ಅಖಂಡ ಜನಪದರ ಪ್ರತಿನಿಧಿಗಳು ಎಂಬ ಎಚ್ಚರದಲ್ಲಿರುವುದು ಒಳಿತು. ಈ ಎಚ್ಚರವಿದ್ದರೆ ಮಾತ್ರ ಸಾಹಿತ್ಯಕ್ಕೆ ಸಾರ್ವಕಾಲಿಕ ಧಾರಣಶಕ್ತಿ ಬರುತ್ತದೆ.

ಹಾಗೆ ನೋಡಿದರೆ ಎಂದಿಗಿಂತಲೂ ಇಂದು ಬರೆಯುವವರ ಸಂಖ್ಯೆ, ಬರೆದುದನ್ನು ಪ್ರಕಟಿಸುವ ಸಂಘ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದೆ. ಪುಸ್ತಕ ಮಾರಾಟದಲ್ಲಿಯೂ ಕನ್ನಡ ಪುಸ್ತಕಗಳು ಹಿಂದೆ ಬಿದ್ದಿಲ್ಲ. ಪ್ರತಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಸಾಹಿತ್ಯಕ ಸಭೆ, ಸಮಾರಂಭಗಳು ವೆಗ್ಗಳವಾಗಿ ಜರುಗುತ್ತಿವೆ. ನಾವು ಚಿಕ್ಕವರಿದ್ದಾಗ ಜಿಲ್ಲಾ ಕೇಂದ್ರಗಳಲ್ಲಿ ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಎರಡು ಸಲ ಎಂಬಂತೆ ಸಾಹಿತ್ಯಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ; ಇಂದು ಒಂದೇ ಊರಲ್ಲಿ ದಿನವೊಂದಕ್ಕೆ ಹತ್ತಾರು ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ನಾವೆಲ್ಲ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇವೆ. ಸಾಹಿತ್ಯಕ ಚಟುವಟಿಕೆಗಳಿಗೆ ಕೊರೆತೆಯಿಲ್ಲ. ಆದರೆ ಎಪ್ಪತ್ತು ಎಂಬತ್ತರ ದಶಕದಂತೆ ಇಂದು ಸಾಹಿತ್ಯಕ ಪರಿಸರ, ಅಥವಾ ಸಾಹಿತ್ಯಕ ಸಂಚಲನವುಂಟಾಗುತ್ತಿಲ್ಲ. ಬಿಡಿ ಬಿಡಿ ಸಮೂಹಗಳು ನಡೆಸುತ್ತಿರುವ ಚಟುವಟಿಕೆಗಳಿಗೆ ಸರ್ವವ್ಯಾಪಿ ಪ್ರತಿಸ್ಪಂದನ ದೊರೆಯುತ್ತಿಲ್ಲ. ಒಂದೆಡೆ ಮಾಹಿತಿ ತಂತ್ರಜ್ಞಾನದ ಜಾಲ ವಿಶ್ವವನ್ನು ಹಳ್ಳಿಯಾಗಿ ನಿರ್ಮಿಸುತ್ತಿದ್ದರೆ, ಮಗದೊಂದೆಡೆ ಸಾಹಿತ್ಯದಂಥ ಸಶಕ್ತ ಮಾಧ್ಯಮವು ಅಲ್ಲಲ್ಲಿ ನಡುಗಡ್ಡೆಯಂತಾಗಿ ತಮ್ಮ ತಮ್ಮೊಳಗೆ ಹುತ್ತ ಕಟ್ಟಿಕೊಳ್ಳುತ್ತಿವೆ. ಹೆಚ್ಚೆಚ್ಚು ವಿಸ್ತಾರವಾದಷ್ಟು, ಸಾರ್ವತ್ರಿಕವಾದಷ್ಟು ಸಾಹಿತ್ಯಕ್ಕೆ ಬಲ ಮತ್ತು ಛಲ ಬರುತ್ತದೆ. ಹೀಗಾಗುತ್ತಿಲ್ಲವೆಂದಾದರೆ, ಹೀಗಾಗದಂತೆ ನೋಡಿಕೊಳ್ಳುವ ವ್ಯವಸ್ಥೆಯೊಂದು ಜನತೆಯ ಪ್ರಾಬಲ್ಯವನ್ನು ಮೀರಿ ಕ್ರಿಯಾಶೀಲವಾಗುತ್ತಿದೆ ಎಂದೇ ಅರ್ಥ.

ಈಗ ಕರ್ನಾಟಕವನ್ನು ಒಳಗೊಂಡಂತೆ ಭಾರತವನ್ನು ನಿಯಂತ್ರಿ ಸುತ್ತಿರುವುದು ಅಂತಾರಾಷ್ಟ್ರೀಯ ಬಂಡವಾಳ ಲೋಕ. ಈ ಲೋಕಕ್ಕೆ ಮಾನವರ ಬಿಡಿ ಬಿಡಿ ಗುಂಪುಗಳು ಬೇಕು. ಅಖಂಡ ಸಮುದಾಯವಲ್ಲ. ಎಪ್ಪತ್ತರ ಅಥವಾ ಆ ಪೂರ್ವದ ದಶಕಗಳಲ್ಲಿ "ವಿಷಯ" (ಇಸ್ಯೂ) ಕೇಂದ್ರಿತ ಹೋರಾಟಗಳು ಮುಂಚೂಣಿಯಲ್ಲಿದ್ದರೆ ಈಗ ನೋಡಿ ಹೇಗೆ ಜಾತಿಯಾಧಾರಿತ ಗುಂಪುಗಳು, ಪ್ರದೇಶ ಆಧಾರಿತ ಗುಂಪುಗಳು, ಉಪಭಾಷಾ ಆಧಾರಿತ ಗುಂಪುಗಳು ತುಂಡು ತುಂಡಾಗಿ ಹೋರಾಟದ ಕಾರ್ಯಕ್ರಮಕ್ಕೆ ಇಳಿಯುತ್ತಿವೆಯಲ್ಲವೆ? ಆಧುನಿಕೋತ್ತರದ ದೊಡ್ಡ ವ್ಯಂಗ್ಯವೆಂದರೆ ಹೋರಾಟವೆಂಬ ವಿದ್ಯಮಾನಗಳು ಕಾರ್ಯಕ್ರಮಗಳಾಗಿ ಸಂಪನ್ನವಾಗುತ್ತಿರುವುದು. ಇತ್ತೀಚಿನ ದಿನಗಳಲ್ಲಿ ಕನ್ನಡ  ನಾಡು - ನುಡಿಯ ಹೆಸರಿನ ಮೇಲೆ ಹುಟ್ಟಿಕೊಳ್ಳುತ್ತಿರುವ ಸಂಘಟನೆಗಳನ್ನು ನೋಡಿದರೆ ಯಾರಿಗಾದರೂ ಗಾಬರಿಯಾಗದೆ ಇರದು.

ಹೋರಾಟದ ಹೆಸರಿನಲ್ಲಿ ಅಲ್ಲಿ ನೆರೆಯುತ್ತಿರುವ ಯುವಕರು, ಅವರ ಉತ್ಸಾಹದಾಯಕ ಚಟುವಟಿಕೆಗಳು, ಘೋಷಣೆ ಹಾಕುವ ಆ ಕಂಠಗಳು ಇವೆಲ್ಲ ಅಲಕ್ಷಿಸುವಂತಿಲ್ಲ. ಅವರ ಅಪಾರ ಶಕ್ತಿ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ನಮ್ಮ ಕುವೆಂಪು ಆ ಹೊತ್ತು ಹೇಳಿರುವಂತೆ, ಇವತ್ತು ಮತ್ತೆ ಅವರಿಗೆ ಮುಂದೊಂದು ಗುರಿಯು ಇಲ್ಲ, ಹಿಂದೊಬ್ಬ ಗುರುವು ಇಲ್ಲ. ಹೋಗಲಿ ಅಕ್ಕಪಕ್ಕದಲ್ಲಿ ಅಪಾಯ ಬಂದಾಗಲಾದರೂ ಅವರನ್ನು ಎಚ್ಚರಿಸುವ ಒಬ್ಬ ಸ್ನೇಹಿತನೂ ಇಲ್ಲ. ಜಾತ್ರೆಯ ಗದ್ದಲದಲ್ಲಿ ಅಮ್ಮ - ಅಪ್ಪರಿಂದ ಕೈ ಬಿಡಿಸಿಕೊಂಡು ಕಳೆದುಕೊಂಡಿರುವಂಥ ಪುಟ್ಟಮಗು ಕಂಡವರ ಹಿಂದೆ ಅಳುತ್ತ ಬೆನ್ನುಹತ್ತುವಂತೆ ಅವರ ಸ್ಥಿತಿಯಾಗಿದೆ.

ಪ್ರಸ್ತುತ ಜಾಗತೀಕರಣದ ಜಾತ್ರೆಯಲ್ಲಿ ಮಕ್ಕಳು ಮಾತ್ರ ಕಳಕೊಂಡಿಲ್ಲ. ಮಕ್ಕಳನ್ನು ರಕ್ಷಿಸಬೇಕಾದ ಅಪ್ಪ ಅಮ್ಮಂದಿರಂಥ ಸಾಂಸ್ಕೃತಿಕ ರೂವಾರಿಗಳೂ ಕಳೆದುಕೊಂಡಿರುವುದೇ ದುರಂತದ ಸಂಗತಿ.

ವರ್ಷಕ್ಕೆ ಪ್ರಕಟವಾಗುತ್ತಿರುವ ಪುಸ್ತಕಗಳ ಸಂಖ್ಯೆ ಗಮನಿಸಿದರೆ ಈ ಮುಂಚಿನ ಹತ್ತಾರುಪಟ್ಟು, ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತಿವೆ ಮತ್ತು ಮಾರಾಟವಾಗುತ್ತಿವೆ. ಕನ್ನಡದಲ್ಲಿ ಪ್ರಕಾಶನ ಸಂಸ್ಥೆಗಳಂತೂ ಇನ್ನಿಲ್ಲದಂತೆ ಬೆಳೆಯುತ್ತಿವೆ. ಭಾಂಡಗೆ, ನವಕರ್ನಾಟಕ, ಅಂಕಿತ, ಅಭಿನಯ, ಲೋಹಿಯಾ, ಲಢಾಯಿ, ವಿದ್ಯಾನಿಧಿ, ಸಿದ್ಧಲಿಂಗೇಶ್ವರ ಪ್ರಕಾಶನ, ಸುಭದ್ರ ಪ್ರಕಾಶನ, ಸಾಹಿತ್ಯ ಭಂಡಾರ, ಸಂಕ್ರಮಣ ಪ್ರಕಾಶನ ಮತ್ತು ಅಭಿಮಾನಿ ಪ್ರಕಾಶನ ಈ ಪಟ್ಟಿ ಇನ್ನೂ ದೀರ್ಘವಾಗಿ ಬೆಳೆಸಬಹುದು. ಈ ಸಂಸ್ಥೆಗಳು ಮಾಡುತ್ತಿರುವ ನುಡಿಸೇವೆ ನಿಜಕ್ಕೂ ಉಲ್ಲೇಖನಾರ್ಹ. ಕನ್ನಡದಲ್ಲೂ ಪುಸ್ತಕೋದ್ಯಮವು ಗಟ್ಟಿಗೊಳ್ಳುತ್ತಿರುವ ಸಂಕೇತ. ಆದರೆ ಈ ಎಲ್ಲ ಪ್ರಕಾಶಕರಿಗೆ ಈಡಾಗಬಲ್ಲಂಥ ಸಾಹಿತ್ಯ ಕೃತಿಗಳನ್ನು ನೀಡುವಲ್ಲಿಯೇ ಪ್ರತಿಭಾಲೋಕ ಹಿಂದೆ ಬೀಳುತ್ತಿದೆ ಎಂಬ ಗುಮಾನಿ ಬರುತ್ತಿದೆ. ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಕಥೆ, ಕಾದಂಬರಿ, ಕವನಗಳಿಗಿಂತ ವೈಚಾರಿಕ, ವೈಜ್ಞಾನಿಕ, ಸಂಶೋಧನಾತ್ಮಕ ಲೇಖನಗಳ ಕಡೆ ಓದುಗಲೋಕ ಆಕರ್ಷಿತವಾದಂತಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಅಂಕಣಗಳು ನಿಜಕ್ಕೂ ಮೌಲಿಕವೂ, ಆಪ್ತವಾಗಿಯೂ ಬರುತ್ತಿವೆ. ಅಷ್ಟಕ್ಕೂ ಒಂದು ಕಾಲಮಾನ ತನಗೆ ಬೇಕಾದ ರೂಪವನ್ನು ತಾನೇ ಕಟ್ಟಿಕೊಳ್ಳುತ್ತದೆ. ಕಾದಂಬರಿ ರೂಪ ಒಂದಷ್ಟು ಹಿಂದೆ ಬಿದ್ದಿರಬಹುದಾದರೂ ಕಥೆ, ಕವನ ತಮ್ಮ ಎಂದಿನ "ಪ್ಯಾಷನ್" ಉಳಿಸಿಕೊಂಡು ಬರುತ್ತಿವೆ. ಆ ಕಾಲದಷ್ಟು ಕಥೆ, ಕವನಗಳ ಕ್ರೇಜ್ ಇರಲಿಕ್ಕಿಲ್ಲವಾದರೂ ಅವುಗಳನ್ನು ಇಷ್ಟಪಡುವ ವರ್ಗವೊಂದು ಇದ್ದೇ ಇದೆ. ಇತ್ತೀಚಿಗೆ ಕೆಲವರು ಕ್ಲುಪ್ತವಾದ, ಸಾಂದ್ರತೆಯುಳ್ಳ ಬರವಣಿಗೆಯತ್ತ ಧಾವಿಸುತ್ತಿದ್ದಾರೆ. ಬ್ಲಾಗು ಅಂಥದೊಂದು ತೀವ್ರವಾದ ಬರಹರೂಪವೇನೊ ಕಾದು ನೋಡಬೇಕಿದೆ. ಹೀಗೆಂದಾಗ ಕನ್ನಡದ ಪ್ರತಿಭಾ ಲೋಕ ಸ್ಥಗಿತವಾಗಿದೆ ಅಥವಾ ಮಂದವಾಗಿದೆ ಎಂತೇನೂ ಅಲ್ಲ. ಹಾಗೆ ನೋಡಿದರೆ ಇದು "ಬ್ಲಾಗು"ಗಳ ಯುಗ. ಕೆಂಡ ಸಂಪಿಗೆ, ಅವಧಿ, ಪುಸ್ತಕಪ್ರೀತಿ, ಅಂತರಂಗ, ಬುಕ್‌ಮಾರ್ಕ್, ಅನುಭವ ಮಂಟಪ, ಅನವರತ ಮತ್ತು ಅಭಿವ್ಯಕ್ತಿ ಬ್ಲಾಗುಗಳು ವಿವಿಧ ವೆಬ್‌ಸೈಟ್‌ಗಳಲ್ಲಿ ಬರುತ್ತಿರುವ ಬರಹಗಳ ಮೊನಚು, ಆಪ್ತತೆ ಎಂಥವರನ್ನೂ ದಂಗುಬಡಿಸದೆ ಇರಲಾರದು. ದಿನದ ಹೆಚ್ಚುಹೊತ್ತು ಕಂಪ್ಯೂಟರ್ ಇದಿರು ಕುಳಿತು ಎಲ್ಲದಕ್ಕೂ ಅದನ್ನೇ ಆಶ್ರಯಿಸಿಕೊಂಡಿರುವ ಹೈಟೆಕ್ ಸಿಟಿಗಳ ವಿದ್ಯಾವಂತರಿಗಂತೂ ಬ್ಲಾಗುಗಳ ಲೋಕ ತೀರ ಆಪ್ಯಾಯಮಾನವೆನಿಸುತ್ತಿದೆ. ಖಾಸಗಿಯಲ್ಲದ ಈ ಖಾಸಗಿ ಓದು ಸಾಫ್ಟ್‌ವೇರ್ ಜಗತ್ತಿಗೆ ಅನಿವಾರ‍್ಯ.

ಕರ್ನಾಟಕದ ಮೂಲೆ ಮೂಲೆಗಳಲ್ಲಿ ವಾಸಿಸುತ್ತಿರುವ ಮತ್ತು ಜೀವನವನ್ನರಸಿ ದಿನನಿತ್ಯ ಸಾವಿರ ಸಾವಿರ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವ ಸಾಮಾನ್ಯ ಕನ್ನಡಿಗನಿಗೂ ಈ ಬ್ಲಾಗುವಿಗೂ ಸಂಬಂಧ ಕಲ್ಪಿಸಲಾದೀತೆ? ಅಕ್ಷರ ಬಲ್ಲ ಲೋಕವೊಂದನ್ನೇ ಇಟ್ಟುಕೊಂಡು ಸಾಹಿತ್ಯದ ಸಾಧ್ಯತೆಯನ್ನು ಚರ್ಚಿಸುವುದು ಸಾಧುವೆ? ಸ್ವಾತಂತ್ರ್ಯ ದೊರೆತು ೬ ದಶಕ ದಾಟಿದ ಈ ಅವಧಿಯಲ್ಲಿಯೂ ಇನ್ನುವರೆಗೂ ರಾಜ್ಯದ ಪ್ರತಿಶತ ನಾಲ್ವತ್ತರಷ್ಟು ಜನತೆಗೆ ಅಕ್ಷರ ಕೊಡಲು ಸಾಧ್ಯವಾಗಿಲ್ಲ. ಶಾಲೆಯ ಮುಖವೇ ನೋಡದ ಕೋಟಿ ಕೋಟಿ ಜನರು ನಮ್ಮೊಟ್ಟಿಗೆ ಇದ್ದಾರೆ.

ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ತುಂಬು ಉತ್ಸುಕತೆಯಿಂದ ಕನ್ನಡ ಭಾಷೆ - ಸಂಸ್ಕೃತಿ ಬಗೆಗೆ ಮಾತಾಡಿದೆವು. ಅಂದಿನ ಜನಪ್ರತಿನಿಧಿಗಳ ಕಣ್ಣುಗಳಲ್ಲಿಯು ಹಲವು ಕನಸುಗಳು ಮೊಳೆತಿದ್ದವು. ಆದರೆ ನೋಡ ನೋಡುವಷ್ಟರಲ್ಲಿ ಆ ಕನಸುಗಳು ಕಮರಿ ಹೋದವು. ಅಷ್ಟೇ ಅಲ್ಲ ಇತ್ತೀಚೆಗಂತೂ ನಮ್ಮ ಜನ ಪ್ರತಿನಿಧಿಗಳಿಗೆ ಕಣ್ಣುಗಳೆ ಕಳೆದುಹೋಗಿವೆ. ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಕನ್ನಡ ಮಾಧ್ಯಮದ ನೀತಿ ಇವೆರಡನ್ನು ಕುರಿತು ಮಾತಾಡುವುದೇ ವೃಥಾಲಾಪ ಎಂಬಂತಾಗಿದೆ. ಸಂಪೂರ್ಣ ಶಿಕ್ಷಣ ವ್ಯವಸ್ಥೆಯೇ ಖಾಸಗಿಯವರಿಗೆ ಪರಭಾರೆಯಾಗಿ ವರ್ಷಗಳೇ ಸಂದಿರುವಾಗ ನಮ್ಮ ಪ್ರಭುತ್ವ ತುಂಬಾ ಆದರ್ಶವೆನಿಸುವಂಥ ಹೇಳಿಕೆಗಳನ್ನು ಕೊಡುತ್ತಲೆ ಇರುವುದು ರೇಜಿಗೆ ಬರಿಸುತ್ತಿದೆ. ಎಲ್ಲರಿಗೂ ಅಕ್ಷರ ಕೊಡಬೇಕಾದ ಪ್ರಭುತ್ವವೇ ಕೈ ಚಲ್ಲಿ ಕುಳಿತಿರುವಾಗ ಕನ್ನಡ ಸಾಹಿತಿಗಳ ಹೊಣೆಗಾರಿಕೆ ಏನು? ಭಾರಿ ಭಾರಿ ಖಾಸಗಿ ಶಾಲಾ, ಕಾಲೇಜು, ಸಂಘ - ಸಂಸ್ಥೆಯವರು ಕೊಡಮಾಡುತ್ತಿರುವ ಟಿ.ಎ., ಡಿ.ಎ., ಇನ್ನಿತರ ಕಾಣಿಕೆಗೆ ಆಕರ್ಷಿತರಾಗಿ ಹೋಗಿ ಅಲ್ಲಿ ಒಣ ಆದರ್ಶದ ಭಾರಿ ಭಾಷಣ ಬಿಗಿದು ಬರುವುದೆ? ಶಿಕ್ಷಣ ಮಾಫಿಯಾದವರು ಸೃಷ್ಟಿಸಿದ ಸಂದರ್ಶಕರ ಪುಸ್ತಕದಲ್ಲಿ ನಮ್ಮ ಭಾಷಾ ಪ್ರೌಢಿಮೆ ಬಳಸಿ ಹೊಗಳಿಕೆಯ ಷರಾ ಬರೆದು ಬರುವುದೆ? ಈ ಪ್ರಶ್ನೆಗಳು ನಮ್ಮನ್ನು ಕಾಡದಿದ್ದರೆ ಸಾಹಿತ್ಯವೆಂಬ ಮಹಾನ್ ಅಸ್ತ್ರವು ನಿಷ್ಕ್ರಿಯವಾಗದೆ ಇರದು.

ಅಷ್ಟಕ್ಕೂ ಸಾಹಿತ್ಯವೆಂದರೆ ಬದುಕು ತಾನೆ? ತೀರ ಸುರಕ್ಷಿತ ಸಮೃದ್ಧ ಹಿನ್ನೆಲೆಯಿಂದ ಬಂದ ಲೇಖಕರು ಸಾಹಿತ್ಯವೆಂದರೆ ಹೇಗೆ ಗ್ರಹಿಸುತ್ತಾರೊ ನನಗೆ ಗೊತ್ತಿಲ್ಲ. ಹೇಗೆ ಗ್ರಹಿಸಿದರೂ ಅದು ಅವರ ಹಕ್ಕು. ಆದರೆ ನನಗೆ ಅಂದರೆ, ತೀರ ಹಿಂದುಳಿದ ಭಾಗದ ತಳವರ್ಗದ ಅಲಕ್ಷಿತ ಸಮುದಾಯದಿಂದ ಬಂದ ನನಗೆ ಅಕ್ಷರವೆಂದರೆ ಬೆಳಕು, ಸಾಹಿತ್ಯವೆಂದರೆ ಹಿಲಾಲು (ಪಂಜು). ಈ ಹಿಲಾಲನ್ನು ಮತ್ತೆ ಮತ್ತೆ ಪ್ರಜ್ವಲಿಸಿ ಬದುಕಿನ ಸಮಗ್ರ ಆಯಾಮಗಳನ್ನು ನೋಡುವ ಉಪಕರಣ. ಕಗ್ಗತ್ತಲಿನ ಮೂಲೆ - ಮೊಡಕುಗಳಿಗೆ ಬೆಳಕಿನ ಕಿರಣ ಹಾಯಿಸಿ ಇಂಚು ಇಂಚನ್ನು ಪ್ರಕಾಶಮಯಗೊಳಿಸುವ ಸಾಧನ. ಹೇಳಿ ಕೇಳಿ ನಾನು ವಚನ, ಕೀರ್ತನೆ, ತತ್ವಪದಕಾರರ ನಾಡಿನಿಂದ ಬಂದವಳು.

ವಚನಕಾರರ ಸಾಹಿತ್ಯಕ್ಕೆ ಧಾತುವಾದ "ಹಸಿವು" ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ. ಸಹೃದಯ ಸಂಗಾತಿಗಳೇ, ಸಂವೇದನಾಶೀಲರಾದವರಿಗೆಲ್ಲ "ಹಸಿವು" ಈ ಹೊತ್ತು ಕಾಡಲೇಬೇಕಿದೆ. ಮುಕ್ತ ಮಾರುಕಟ್ಟೆ ವ್ಯವಸ್ಥೆಯು ಬಂಡವಾಳದ ಅಭಿವೃದ್ಧಿಯನ್ನೆ ದೇಶದ ಅಭಿವೃದ್ಧಿ ಎಂದು ಬಿಂಬಿಸುತ್ತಿರುವಾಗ ಅಭಿವೃದ್ಧಿಯ ಮಾನದಂಡಗಳೇ ತಲೆಕೆಳಗಾಗಿವೆ. ಅನಿಯಂತ್ರಿತ ಅಥವಾ ರೂಪಾಯಿ ಮೌಲ್ಯ ನಿಯಂತ್ರಿತ ಮಾರುಕಟ್ಟೆಯೂ ಒಂದೆಡೆ ಹಣದ ಗುಡ್ಡೆಯನ್ನೇ ಒಟ್ಟುತ್ತಿದ್ದರೆ, ಇನ್ನೊಂದೆಡೆ ರೈತರು ತಮ್ಮ ಬೆಳೆದ ಬೆಳೆಗೆ ಬೆಲೆ ಬರದೆ, ಮಾಡಿದ ಸಾಲ ತೀರಿಸಲಾಗದೆ, ತಮ್ಮೂರಿನಲ್ಲಿ ಆತ್ಮಹತ್ಯೆಯತ್ತ ಮೌನವಾಗಿ ದಂಡಿ ದಂಡಿಯಾಗಿ ಸಾಗುತ್ತಿದ್ದಾರೆ. ಕೂಲಿ ಕಾರ್ಮಿಕರಿಗೆ ಕೆಲಸ ಸಿಗದೆ ಗುಂಪು ಗುಂಪಾಗಿ ಗುಳೆ ಹೋಗುತ್ತಿದ್ದಾರೆ. ಮೊನ್ನೆ ನನ್ನದೆ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲ ಶಿರೂರು, ಜವಳಿ-ಡಿ ಗ್ರಾಮದ ಕಾರ್ಮಿಕರು ಪುಣೆಯ ಇಟ್ಟಂಗಿ ಭಟ್ಟಿಯಲ್ಲಿ, ದುಡಿಯಲೆಂದು ಹೋಗುವಾಗ ರಸ್ತೆ ಅಪಘಾತಕ್ಕೆ ಸಿಕ್ಕು ಪೂರಾ ಇಪ್ಪತ್ತು ಜೀವಗಳು ಅಂದರೆ ಕುಟುಂಬಕ್ಕೆ ಕುಟುಂಬವೇ ಸತ್ತದ್ದು. ಸಾಮೂಹಿಕ ಶವಸಂಸ್ಕಾರ ಮಾಡಿದ ಆ ಹೃದಯ ವಿದ್ರಾವಕ ದೃಶ ಟಿ.ವಿ. ಪರದೆ ಮೇಲೆ ನೋಡಿದ್ದನ್ನು ಮರೆಯಲು ಸಾಧ್ಯವೇ ಆಗುತ್ತಿಲ್ಲ.

ದೇಶದಲ್ಲಿರುವ ಕೆಲವು ಬೆರಳೆಣಿಕೆಯಷ್ಟು ಶ್ರೀಮಂತರ ಆದಾಯವು ನಭೋ ಮಂಡಲಕೆ ಏರಿ ಅವರ ಆದಾಯವನ್ನೇ ದೇಶದ ಸರಾಸರಿ ಆದಾಯವೆಂದು ಬಿಂಬಿಸಿ, ದೇಶವಾಸಿಗಳ ವಾರ್ಷಿಕ ತಲಾ ಆದಾಯದಲ್ಲಿ ಹೆಚ್ಚಳ ತೋರಿಸಿದರೆ ಇದೆಂಥ ಮೋಸ ಅಲ್ಲವೆ? ಈ ಎಲ್ಲ ಮಾತುಗಳನ್ನು ಹೇಳುತ್ತಿರುವಾಗಲೂ ನನ್ನ ತಲೆಯಲ್ಲಿ ಗಡಿಯಾರದ ಲಯದಂತೆ ಮತ್ತೆ ಮತ್ತೆ ಹೊಡೆದುಕೊಳ್ಳುತ್ತಿದೆ ಮೊನ್ನಿನ ಪ್ರವಾಹ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಈ ವರ್ಷದ ಅವಧಿಯಲ್ಲಿ "ಬರ ಮತ್ತು ನೆರೆ" ಎರಡರಿಂದಲೂ ತತ್ತರಿಸಿವೆ. ಜೂನ ಜುಲೈನಲ್ಲಿ ಮಳೆ ಬಾರದೆ ಬಿತ್ತನೆ ಮಾಡದೆ, ಬಿತ್ತನೆ ಮಾಡಿದರೂ ಕಾಳು ಮೊಳಕೆ ಒಡೆಯದೆ ರೈತರ ಬದುಕು ಹಾಳಾಗಿ ಹಳ್ಳ ಹಿಡಿಯುತ್ತಿರುವಾಗಲೇ, ಈ ಹತ್ತಿಪ್ಪತ್ತು ವರ್ಷದ ಅವಧಿಯಲ್ಲಿ ಕಂಡು ಕೇಳರಿಯದಷ್ಟು ಮಳೆ ಬಂದು, ಹಳ್ಳ, ನದಿ, ನಾಲಾ, ಕೆರೆ, ಕಾಲುವೆ ಎಲ್ಲವೂ ತುಂಬಿಬಂದು ಕಣ್ಣೆವೆ ಪಿಳಕಿಸುವಷ್ಟರಲ್ಲಿ ಇದ್ದಬದ್ದ ಬದುಕೆಲ್ಲವೂ ಜಲಸಮಾಧಿಯಾಗಿತ್ತು. ೧೫ ಜಿಲ್ಲೆಗಳ ಬಹುತೇಕ ಹಳ್ಳಿಗಳಲ್ಲಿ ರೈತ, ಕಾರ್ಮಿಕರಾದಿಯಾಗಿ ಎಲ್ಲರ ಮನೆಗಳು ಇಸ್ಪೀಟಿನ ಎಲೆಗಳಂತೆ ಉದುರಿ ಬಿದ್ದಿದ್ದವು. ಬಿದ್ದ ಮನೆಗಳ ಕರಾರುವಕ್ಕಾದ ಲೆಕ್ಕ ಇನ್ನೂ ಸಿಕ್ಕಿಲ್ಲ. ಅವರ ಹಾಳಾದ ಆಸ್ತಿ-ಪಾಸ್ತಿ, ಜಾನುವಾರುಗಳ ಲೆಕ್ಕ ಮಾಡುವಲ್ಲಿ ಪ್ರಭುತ್ವ ಅಸಹಾಯಕತೆ ತೋರುತ್ತಿರುವುದು ತೀರ ದುರಂತದ ಸಂಗತಿ. ನೆರೆ ಬಂದ ಅವಧಿಯಲ್ಲಿ ಸರಕಾರಿಯಂತ್ರ, ಜನಪ್ರತಿನಿಧಿಗಳು ಎಷ್ಟು ಮುತುವರ್ಜಿ ವಹಿಸಿ ರಕ್ಷಣೆ ನೀಡುವ ಕೆಲಸಗಳನ್ನು ಮಾಡಿದವೋ, ನಂತರದ ಪರಿಹಾರ ನೀಡುವ ಸಂದರ್ಭದಲ್ಲಿ ಅಷ್ಟೇ ಬೇಜವಾಬ್ದಾರಿತನ, ಅಸಡ್ಡೆ ಮಾಡಿರುವದು ಖಂಡಿತ ಕ್ಷಮಾರ್ಹವಲ್ಲ. ನೂರಾರು ಹಳ್ಳಿಗಳಲ್ಲಿ ಈ ಕ್ಷಣಕ್ಕೂ ಜನರು ಬಿದ್ದ ಮುರುಕಲು ಮನೆಗಳಲ್ಲಿ, ತಾತ್ಕಾಲಿಕ ಶೆಡ್ಡುಗಳಲ್ಲಿ, ಶಾಲೆ ಸಮುದಾಯ ಭವನದ ಕಟ್ಟಡಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಂಥ ವಿಶಾಲ ಸಮೃದ್ಧಿ ಹೊಂದಿರುವ ದೇಶದಲ್ಲಿ ೧೫ ಜಿಲ್ಲೆಗಳ ಹಾನಿ ಬಹು ದೊಡ್ಡದೇನಲ್ಲ. ಇಂಥ ಅವಘಡಗಳನ್ನು ಸಂಭವಿಸಿದಾಗಲೆಂದೇ ಭಾರತ ಬಹು ಹಿಂದೆಯೇ "ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ" ಮತ್ತು ಅದಕ್ಕಾಗಿ ಪ್ರತ್ಯೇಕ ನಿಧಿಯನ್ನು ನಿಗದಿಪಡಿಸಿದೆ. ಆಶ್ಚರ್ಯದ ಸಂಗತಿಯೆಂದರೆ, ಆ ನಿಯಮಾವಳಿಗಳು ಆದರ್ಶವಾಗಿ ಕಡತ ಮಟ್ಟದಲ್ಲಿಯೇ ಉಳಿದಿವೆ. ವಾಸ್ತವಿಕವಾಗಿ ವಿಪತ್ತು ನಿರ್ವಹಣಾ ಸಮಿತಿಯಾಗಲಿ, ಅವಶ್ಯಕ ಸಂಪನ್ಮೂಲವಾಗಲಿ ಇಲ್ಲವೆ ಇಲ್ಲ. ಅಷ್ಟಕ್ಕೂ ವಿಜ್ಞಾನ - ತಂತ್ರಜ್ಞಾನವು ದೇದೀಪ್ಯಮಾನವಾಗಿ ಬೆಳೆದಿರುವ ಈ ಯುಗದಲ್ಲಿ ಇಂಥ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವುದು, ಅಂಥವುಗಳಿಂದ ಜಾಸ್ತಿ ಹಾನಿಯಾಗದಂತೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಅಸಾಧ್ಯವೇನಲ್ಲ. ಪಕ್ಕದ ಜಪಾನ್, ಕ್ಯೂಬಾ, ಚೀನಾದಂಥ ದೇಶಗಳು ತಮ್ಮ ನಾಡನ್ನು ಕಟ್ಟಿರುವ ಪರಿಯನ್ನು ನಾವು ನೋಡಬೇಕಿದೆ.

ಬಂಧುಗಳೇ, ನಮ್ಮ ನಾಡಿನ ಅಸಂಖ್ಯರು ಇನ್ನೂ ಬೀದಿಯ ಮೇಲೆ ಕಾಲ ಕಳೆಯುತ್ತಿದ್ದು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿರುವಾಗ ಯಾವುದೇ ಅದ್ದೂರಿ ಸಭೆ, ಸಮಾರಂಭ, ಉತ್ಸವಗಳು ಜಿಗುಪ್ಸೆಯನ್ನು ಮೂಡಿಸುತ್ತವೆ ಅಲ್ಲವೆ? ಆದ್ದರಿಂದ ನಾನು ನಾಡಿನ ನುಡಿಹಬ್ಬದ ಜವಾಬ್ದಾರಿಯುತವಾದ ಈ ವೇದಿಕೆಯನ್ನು ಬರ-ನೆರೆಗಳಿಗೆ ಸಿಕ್ಕು ನಲುಗಿದವರ ಬದುಕನ್ನು ಎತ್ತರಿಸುವ ಚಿಂತನಾ ಕಾರ್ಯಾಗಾರವಾಗಬೇಕೆಂದು ಆಶಿಸುತ್ತೇನೆ.

ಕನ್ನಡ ಮಾತು ಬಲ್ಲ ಲೋಕ ಉಳಿದಾಗಲೆ ಕನ್ನಡ ಸಾಹಿತ್ಯ ಉಳಿದು ಬೆಳೆಯಬಲ್ಲದು ಅಲ್ಲವೆ? ಅಷ್ಟಕ್ಕೂ ಈ ಹೊತ್ತು ಕನ್ನಡವನ್ನು ಉಳಿಸಿಕೊಂಡು ಬರುತ್ತಿರುವವರು ಗ್ರಾಮೀಣ ಪ್ರದೇಶದ ಜನಸಾಮಾನ್ಯರೇ ಹೊರತು, ಐಟಿ, ಬಿಟಿ ಲೋಕದ ಶ್ರೀಮಂತ ಫಲಾನುಭವಿಗಳಲ್ಲ ಎಂಬುದನ್ನು ಮರೆಯದಿರೋಣ. ಆದ್ದರಿಂದಲೇ ಕರ್ನಾಟಕದ ಗ್ರಾಮೀಣ ಜನತೆಯ ಬದುಕು, ಅದರಲ್ಲೂ ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ಬದುಕಿನ ಬಗೆಗೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಬೇಕಿದೆ.

"ಹೆಣ್ಣಾಗಿ ಹುಟ್ಟುವುದಕ್ಕಿಂತ ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮೇಲೊಂದು ಮರವಾಗಿ ಹುಟ್ಟಿದರೆ
ಪುಣ್ಯವಂತರಿಗೆ ನೆರಳಾದೆ"

ಇಂಥ ಹತ್ತಾರು ಜಾನಪದ ತ್ರಿಪದಿಗಳು ಹೆಣ್ಣಿನ ಜನುಮದ ಬಗೆಗೆ ನಕಾರಾತ್ಮಕ ಪರಿಕಲ್ಪನೆಯನ್ನೇ ಕಟ್ಟಿಕೊಡುತ್ತವೆ. ಶೋಷಣೆಯ ಹಲವು ಮಜಲುಗಳಲ್ಲಿ ಬಿದ್ದು ಒದ್ದಾಡಿದ ಅಸಂಖ್ಯ ಸ್ತ್ರೀಯರು ಹೀಗಲ್ಲದೆ ಮತ್ಹೇಗೆ ಹಾಡಲು ಸಾಧ್ಯವಿತ್ತು ಎಂದು ಒಮ್ಮೆ ಅನಿಸಿದರೆ,

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ
ಗಂಡು ಗಂಡಾದಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದಡೆ ತನುವಿನ ಸೂತಕಕ್ಕೆ ತೆರಹುಂಟೆ
?
ಮುನ್ನಿಲ್ಲದ ಸೂತಕಕ್ಕೆ ಜಗ ಮರುಳಾಯಿತ್ತು ಚನ್ನ ಮಲ್ಲಿಕಾರ್ಜುನ

ಎಂದು ಅಕ್ಕನಂತೆ ಈ ಎಲ್ಲರೂ ಸಿಡಿದು ಏಳಲಿಲ್ಲವೇಕೆ ? ಎಂದು ಸಾತ್ವಿಕ ಕೋಪ ಬರದೆ ಇರದು. ಆದರೆ ಯಾವುದೇ ಒಂದು ಅಸಮಾನ ವ್ಯವಸ್ಥೆಯಲ್ಲಿ ತಲಸ್ಪರ್ಶಿ ಬದಲಾವಣೆ ತರದ ಹೊರತು ಶೋಷಣೆ ನಿಲ್ಲುವುದಿಲ್ಲ ಎಂಬ ಸತ್ಯವನ್ನು ಈಗ ಮನಗಂಡಿದ್ದೇವೆ. ಆಧುನಿಕ ಗಾಳಿಯೂ ಭಾರತದ ಜಿಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆ ತಂದಿರುವಂತೆ ಮಹಿಳೆಯರ ಬದುಕಿನಲ್ಲಿಯೂ ದೊಡ್ಡಮಟ್ಟದ ಬದಲಾವಣೆ ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಲಿಲ್ಲ ಎಂಬುದೆ ನೋವಿನ ಸಂಗತಿ. ಸ್ತ್ರೀಯರಿಗೆ ಸಂಬಂಧಿಸಿರುವಂತೆ ಒಟ್ಟು ಬದುಕು ಆಧುನಿಕವಾಗಿದೆ. ತತ್ಪರಿಣಾಮವಾಗಿ ಶೋಷಣೆಯ ಸ್ವರೂಪ ಮತ್ತು ಗಾತ್ರದಲ್ಲಿ ಬದಲಾವಣೆ ಆಗಿದೆ ಹೊರತು ಸಂಪೂರ್ಣ ಅವಳು ಬಂಧಮುಕ್ತಳಾಗಿಲ್ಲ. ಹೆಚ್ಚುತ್ತಿರುವ ವರದಕ್ಷಿಣೆ ಕಿರುಕುಳ, ಇನ್ನೂ ಜೀವಂತವಾಗಿರುವ ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಕೌಟುಂಬಿಕ ಹಿಂಸೆ ಇವೆಲ್ಲವೂ ರೋಗಗ್ರಸ್ತ ಸಮಾಜದ ಲಕ್ಷಣಗಳೇ ಆಗಿವೆ. ಸಮಾಜದ ನಂಬಿಕೆಗಳಲ್ಲಿ ಬದಲಾವಣೆ ತರದ ಹೊರತು, ಆಧುನಿಕ ಜೀವನ ಶೈಲಿಯಲ್ಲಾದ ಎಂಥ ಕ್ರಾಂತಿಕಾರಿ ಆವಿಷ್ಕಾರಗಳಾದರೂ ಸ್ತ್ರೀಯರ ಪರವಾಗಿರುವುದಿಲ್ಲ ಎಂಬುದಕ್ಕೆ ಹೆಣ್ಣು ಭ್ರೂಣ ಹತ್ಯೆಯೇ ಜ್ವಲಂತ ಸಾಕ್ಷಿಯಾಗಿದೆ. ಈ ನಡುವೆ ಶಹರುಗಳ ಕಾಲ್ ಸೆಂಟರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು, ಫ್ಯಾಕ್ಟರಿಗಳಲ್ಲಿ ದುಡಿಯುತ್ತಿರುವ ಮಹಿಳೆಯರು, ನೌಕರಸ್ತ ಮಹಿಳೆಯರು ಇನ್ನಿಲ್ಲದ ಸಂಕಟಗಳಿಗೆ ಬಲಿಯಾಗುತ್ತಿದ್ದಾರೆ. ಇತ್ತೀಚಿಗೆ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆಗಳು ಹೆಚ್ಚಾಗುತ್ತಿರುವುದು ತುಂಬಾ ಆತಂಕಕಾರಿ ಸಂಗತಿಯಾಗಿ ಪರಿಣಮಿಸುತ್ತಿದೆ. ಗ್ರಾಮೀಣ ಪ್ರದೇಶದ ರೈತಾಪಿ, ಕೃಷಿ, ಕಾರ್ಮಿಕ ಮಹಿಳೆಯರ ಸಮಸ್ಯೆಗಳು ಹೊಸ ಹೊಸ ರೂಪ ತೊಟ್ಟು ಎದುರಾಗುತ್ತಿವೆ. ಈ ದೇಶದಲ್ಲಿ ಮಹಿಳೆಯರಿಗೆ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ ಎಂಬ ಸಂಗತಿಯನ್ನು ಎಷ್ಟು ಸಲ ಅಂತ ಪ್ರಶ್ನಿಸುವುದು ಎಂಬಂತಾಗಿದೆ.

ಇನ್ನೊಂದೆಡೆ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಧನಿಕರ ದರ್ಬಾರಿನಲ್ಲಿ ಗಮನಕ್ಕೂ ಬರದಂತೆ ನೇಪಥ್ಯಕ್ಕೆ ಸರಿಯುತ್ತಿವೆ. ಖಾಸಗೀಕರಣದ ಸಂತೆಯಲ್ಲಿ ಮೀಸಲಾತಿಯಂಥ ಅವಕಾಶಗಳು ಹಿಂಬಾಗಿಲಿನಿಂದ ಪರಾರಿಯಾಗುತ್ತಿವೆ. ಮಗದೊಂದೆಡೆ ಕೋಮುದ್ವೇಷದ ದಂಗೆಗೆ ಬಲಿಯಾಗಿ ಜನ ಸಾಮಾನ್ಯರು ಸಹನಾ ಸಂಸ್ಕೃತಿಗೆ ತಿಲಾಂಜಲಿ ಕೊಡುತ್ತಿದ್ದಾರೆ. ದಿನ ಬೆಳಗಾದರೆ ನಡೆಯುತ್ತಿರುವ ಚರ್ಚ್ ಮೇಲಿನ ದಾಳಿಗಳು, ಭಾಷಾ ಹೆಸರಿನಿಂದ ನಡೆಯುತ್ತಿರುವ ಅನಾವಶ್ಯಕ ದೊಂಬಿ, ಗಲಭೆಗಳು, ಮತ್ತೊಂದು ಕಡೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಗಡಿ ಸಮಸ್ಯೆಗಳು, ರಾಜಕೀಯ ದುರಾಕ್ರಮಣಗಳು ಹೀಗೆ ಎಷ್ಟೊಂದು ಸಮಸ್ಯೆಗಳು ರಿಪಿಯಾಗಿ ಕಾಡುತ್ತಿವೆ. ಈ ಎಲ್ಲವುಗಳ ಪರಿಹಾರಕ್ಕಾಗಿ ಪ್ರಭುತ್ವಕ್ಕೆ ದೊಡ್ಡ ಇಚ್ಛಾಶಕ್ತಿ ಬೇಕು. ಇಂಥ ಇಚ್ಛಾಶಕ್ತಿಯ ಸಂಚಯಕ್ಕಾಗಿ ಸಾಂಸ್ಕೃತಿಕ ರೂವಾರಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಲೇಬೇಕಲ್ಲವೆ ? ಕನ್ನಡಕ್ಕಾಗಿ ನಾವು ಕನಸಿದ ಶಾಸ್ತ್ರೀಯ ಸ್ಥಾನಮಾನ ದೊರೆತಾಗಿದೆ. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ದಿಶೆಯಲ್ಲಿ ನಾವೆಲ್ಲ ಕಾರ್ಯಪ್ರವೃತ್ತವಾಗಬೇಕಿದೆ. ಒಂದು ವೇಳೆ ನಾವು ಈ ದಾರಿಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಧಾಪುಗಾಲು ಹಾಕದಿದ್ದರೆ ಮುಂದೊಂದು ದಿನ ಇಂಥದ್ದು ಬರುತ್ತದೆ. ಆಗ ಒಂದು ಕಡೆ ಶೋಷಕ ಇನ್ನೊಂದು ಕಡೆ ಶೋಷಿತರು, ಒಂದು ಕಡೆ ಇದ್ದವರು, ಇನ್ನೊಂದು ಕಡೆ ಇಲ್ಲದವರು, ವಿರುದ್ಧ ದಿಕ್ಕಿನಲ್ಲಿ ಎದುರುಬದಿರಾಗಿ ನಿಲ್ಲುವ ಈ ಎರಡರಲ್ಲಿ ನಾವು ಕೇವಲ ಒಂದನ್ನು ಆರಿಸಿಕೊಳ್ಳುವ ಪರಿಸ್ಥಿತಿ ಖಂಡಿತ ಬರುತ್ತದೆ. ಅಂಥ ನಿರ್ಣಾಯಕ ಹಂತದಲ್ಲಿ ಸಾಂಸ್ಕೃತಿಕ ಯಜಮಾನನಾದ ಸಾಹಿತಿ ಯಾರ ಪರ ನಿಲ್ಲಬೇಕು ? ಶೋಷಿತರ ಪರವೋ? ಅಥವಾ ಶೋಷಕರ ಪರವೊ? ನಿರ್ಧಾರ ನಿಮಗೇ ಬಿಟ್ಟಿದೆ. ಜನರು ಹಸಿವಿನಿಂದ ಸಾಯುತ್ತಿರುವಾಗ, ನಿರುದ್ಯೋಗಿಗಳು ನಿರ್ಗತಿಕ ಸ್ಥಿತಿಗೆ ದೂಡಲ್ಪಡುತ್ತಿರುವಾಗ, ನಮ್ಮೆಲ್ಲರಿಗೂ ಅನ್ನ ಹಾಕಿ ತಾನೇ ಅನ್ನಾನ್ನ ನಿರ್ಗತಿಕನಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಸಾಂಸ್ಕೃತಿಕ ವಕ್ತಾರರಾದ ಸಾಹಿತಿ, ಕಲಾವಿದ, ಬುದ್ಧಿಜೀವಿಗಳೇ ನಿಮ್ಮ ನಿಲುವು ಮತ್ತು ನೆಲೆಯನ್ನು ಖಚಿತಪಡಿಸಿಕೊಳ್ಳುವ ತುರ್ತು ಈಗ ಬಂದಿದೆ. ಹೇಳಿ ನೀವು ಯಾರ ಪರ? ಯಾಕೆಂದರೆ ನಿಮ್ಮ ನಿರ್ದಿಷ್ಟ ನಿಲುವೇ ಸಾಹಿತ್ಯ ಮತ್ತು ಸಮಾಜದ ಗತಿಯನ್ನು ನಿರ್ಧರಿಸಲಿದೆ.

ಒಟ್ಟಾರೆಯಾಗಿ ವಚನಕಾರರು, ಹರಿದಾಸರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ಸಾವಿರಾರು ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಜನಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತಕಾರ್ಯವನ್ನು ಇಂದಿನ ಸಾಹಿತಿಗಳೂ ಸಾಧಿಸಿ ತೋರಿಸಬೇಕಾಗಿದೆ. ಬರೀ ಶಬ್ದಾಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ, ಸಾಹಿತ್ಯ ಅದೊಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದ ಅಭ್ಯುದಯಕ್ಕಾಗಿ ದುಡಿಯುವಂತಾಗಬೇಕು.

ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ನಭೋಸ್ಪರ್ಶಿ ವ್ಯವಸ್ಥೆಗೆ ಏಣಿ ಕಟ್ಟಬೇಕಾಗಿದೆ.

ಜೈ ಕರ್ನಾಟಕ, ಜೈ ಹಿಂದ್

ಮುಖಪುಟ /ಸಾಹಿತ್ಯ