ಮುಖಪುಟ /ಪಾಕಶಾಲೆ

ವಡೆಗಳ ರಾಜ -ಉದ್ದಿನ ವಡೆ

vadaಇಡ್ಲಿ , ವಡೆ ಸಾಂಬರ್ ಒಳ್ಳೆ ಕಾಂಬಿನೇಷನ್. ಇಡ್ಲಿ ಜೊತೆ ಉದ್ದಿನ ವಡೆ ಇದ್ದರೆ ಅದರ ರುಚಿಯೇ ಬೇರೆ. ವಡೆಯಲ್ಲೂ ನಾನಾ ವಿಧ. ಉದ್ದಿನವಡೆ, ರವೆ ವಡೆ, ಮೊಸರು ವಡೆ, ಅಲಸಂದೆ ವಡೆ, ಮೆಂತೆ ಸೊಪ್ಪಿನ ವಡೆ, ಖರ್ಜೂರದ ಸಿಹಿ ವಡೆ, ಮದ್ದೂರು ವಡೆ.... ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗತ್ತೆ.

ಎಷ್ಟೇ ಬಗೆಯ ವಡೆ ಇದ್ದರೂ ಉದ್ದಿನ ವಡೆ, ವಡೆಗಳ ರಾಜ ಎಂದೇ ಖ್ಯಾತವಾಗಿದೆ. ತಡವೇಕೆ ಬನ್ನಿ ಉದ್ದಿನ ವಡೆ ಮಾಡೋಣ...

ಬೇಕಾಗುವ ಪದಾರ್ಥ : ಅರ್ಧ ಕೆಜಿ ಉದ್ದಿನ ಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ೧೦ ಕಾಳು ಮೆಣಸು, ಕರಿಯಲು ಎಣ್ಣೆ

ಮಾಡುವ ವಿಧಾನ : ಮೊದಲು ಉದ್ದಿನ ಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಆನಂತರ ಎರಡು ಮೂರು ಗಂಟೆ ಉದ್ದಿನ ಬೇಳೆ ನೆನೆಹಾಕಿ, ಮತ್ತೆ ತೊಳೆಯಿರಿ. (ತೊಳೆದ ನೀರನ್ನು ಮನೆಯ ಹೊರಗೆ ಚೆಲ್ಲಿ. ಉದ್ದಿನ ಬೇಳೆ ತೊಳೆದ ನೀರನ್ನು ಮನೆಯಲ್ಲಿ ಚೆಲ್ಲಿದರೆ ಅದು ದುರ್ಗಂಧ ಬೀರುತ್ತದೆ)

ನೀರು ಬಸಿದ ಬಳಿಕ ಉದ್ದಿನ ಬೇಳೆಗೆ ಉಪ್ಪು ಹಾಕಿ ರುಬ್ಬಿಕೊಳ್ಳಿ, ಹದವಾಗಿ ರುಬ್ಬಿದ ಹಿಟ್ಟಿಗೆ ಕರಿ ಮೆಣಸಿನ ಕಾಳನ್ನು ಕುಟ್ಟಿಹಾಕಿ. ಒಲೆಯ ಮೇಲೆ ಎಣ್ಣೆಯ ಬಾಣಲೆ ಇಟ್ಟು, ಎಣ್ಣೆ ಕಾದ ಬಳಿಕ ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು, ನಿಮ್ಮ ಅಗತ್ಯಕ್ಕನುಗುಣವಾದ ಗಾತ್ರದ ವಡೆ ಮಾಡಿ (ಮಧ್ಯ ರಂಧ್ರ ಕೂಡ ಮಾಡಬಹುದು) ನಂತರ ಅದನ್ನು ಕಾದ ಎಣ್ಣೆಯ ಬಾಣಲೆಯಲ್ಲಿ ಹಾಕಿ ಕರಿಯಿರಿ.

ವಡೆ ಕೆಂಪಾಗಿ ಬೆಂದ ಬಳಿಕ ಹೊರ ತೆಗೆದು, ರಂಧ್ರವಿರುವ ಪಾತ್ರೆಯಲ್ಲಿ ಹಾಕಿದರೆ, ಎಣ್ಣೆಯಲ್ಲಾ ಕೆಳಗಿಳಿಯುತ್ತದೆ. ವಡೆ ತಿನ್ನಲು ರೆಡಿಯಾಗುತ್ತದೆ. ವಡೆ ಜೊತೆ ಕಾಯಿಚೆಟ್ನಿ ಇದ್ದರಂತೂ ಅದರ ರುಚಿಯೇ ರುಚಿ..

ಮುಖಪುಟ /ಪಾಕಶಾಲೆ