ಮುಖಪುಟ /ಪಾಕಶಾಲೆ

ಮಸಾಲೆ ದೋಸೆ

Masaledoseದೊಸೆಗಳ ದೊರೆ ಮಸಾಲೆ ದೋಸೆ. ನಮ್ಮ ಪಾಕಶಾಲೆಯಲ್ಲಿ ದೋಸೆ ಏಕೆ ಮಾಡಬಾರದು. ಬನ್ನಿ ಮಾಡಿ ತಿಂದೇ ಬಿಡೋಣ...

ಬೇಕಾಗುವ ಪದಾರ್ಥ : ಅರ್ಧ ಕೆಜಿ ಅಕ್ಕಿ, ಒಂದು ಹಿಡಿ ಮೆಂತ್ಯ, ಮುಕ್ಕಾಲು ಪಾವಿನಷ್ಟು ಉದ್ದಿನಬೇಳೆ, ಒಂದು ಹಿಡಿ ಕಡಲೆ ಬೇಳೆ, ನಾಲ್ಕಾರು ಈರುಳ್ಳಿ ಹಾಗೂ ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಹಿಡಿಯಷ್ಟು ಅವಲಕ್ಕಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು , ಉದ್ದಿನಬೇಳೆ, ಕಡಲೇಬೇಳೆ, ಸಾಸಿವೆ ಹಾಗೂ ಒಂದು ಪುಟ್ಟ ಬಟ್ಟಲು ಎಣ್ಣೆ,

ತಯಾರಿಸುವ ವಿಧಾನ : ಅಕ್ಕಿ, ಮೆಂತ್ಯ, ಅವಲಕ್ಕಿ, ಕಡಲೆಬೇಳೆ, ಉದ್ದಿನಬೇಳೆಯನ್ನು ಚೆನ್ನಾಗಿ ನೀರಲ್ಲಿ ತೊಳೆದು ನಾಲ್ಕಾರು ಗಂಟೆ ನೀರಲ್ಲಿ ನೆನೆಸಿಡಿ. ಆನಂತರ ನೀರನ್ನು ಮನೆಯಿಂದ ಹೊರಗೆ ಚೆಲ್ಲಿ (ಉದ್ದಿನಬೇಳೆ ನೀರು ಕೆಟ್ಟ ವಾಸನೆ ಬೀರುತ್ತದೆ) ಮಿಕ್ಸರ್ ಅಥವಾ ಗ್ರೈಂಡರ್‌ನಲ್ಲಿ ನುಣುಪಾಗಿ ರುಬ್ಬಿ ಹಿಟ್ಟನ್ನು ತಯಾರಿಸಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಿಟಿಕೆ ಸಕ್ಕರೆ ಬೆರೆಸಿ ಮುಚ್ಚಿ ಒಂದು ಪಾತ್ರೆಯಲ್ಲಿಡಿ. (ಈ ಎಲ್ಲ ಕೆಲಸವನ್ನು ರಾತ್ರಿಯೇ ಮಾಡಿದರೆ ಬೆಳಗ್ಗೆ ಹೊತ್ತಿಗೆ ಚೆನ್ನಾಗಿ ಹುದುಗು ಬಂದಿರುತ್ತದೆ. ದೋಸೆ ಗರಿಗರಿಯಾಗಿ ಬರುತ್ತದೆ.)

ದೋಸೆ ಮಾಡುವ ಮುನ್ನ ಆಲೂಗಡ್ಡೆಯನ್ನು ಕುಕ್ಕರಿನಲ್ಲಿ ನೀರು ಹಾಕಿ ಬೇಯಿಸಿ, ಸಿಪ್ಪೆ ಸುಲಿದಿಡಿ ಅದಕ್ಕೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಸೇರಿಸಿ ಕಲೆಸಿ ಸಾಸಿವೆ ಒಗ್ಗರಣೆ ಹಾಕಿ. ಆನಂತರ ಚೆನ್ನಾಗಿ ಕಾದ ಕಾವಲಿಯ ಮೇಲೆ ದೋಸೆ ಬಿಟ್ಟು ಒಮ್ಮೆ ತಿರುವು ಹಾಕಿದ ಬಳಿಕ ಹದವಾಗಿ ಬೆಂದ ಮೇಲೆ ಅದರ ಮಧ್ಯೆ ಈರುಳ್ಳಿ ಆಲೂಗಡ್ಡೆ ಪಲ್ಯ ಇಟ್ಟು ಸುರುಳಿಯಾಗಿ ಮಡಿಚಿದರೆ ಗರ‍್ಮಾಗರಂ ಮಸಾಲೆ ದೋಸೆ ರೆಡಿ. ಅಗತ್ಯ ಇದ್ದರೆ ಬೆಳ್ಳುಳ್ಳಿ, ಕೆಂಪು ಮೆಣಸಿನ ಕಾಯಿಯ ಕೆಂಪು ಚೆಟ್ನಿಯನ್ನೂ ದೋಸೆಗೆ ಸವರಬಹುದು.

 

ಮುಖಪುಟ /ಪಾಕಶಾಲೆ