ಮುಖಪುಟ /ಪಾಕಶಾಲೆ

ರುಚಿರುಚಿ ಹುಳಿಯನ್ನ
ವಾರಾಂತ್ಯಕ್ಕೆ ಬಿಸಿಬಿಸಿ ಹುಳಿಯನ್ನ ಮಾಡೋಣ..

ಕಡಲೆಕಾಯಿ ಬೀಜ, ಹದವಾದ ಒಗ್ಗರಣೆ ಹಾಕಿದ ಹುಳಿಯನ್ನ ತಿನ್ನಲು ಬಲು ರುಚಿ. ಬನ್ನಿ ಮಾಡಿ ತಿನ್ನೋಣ..

ಬೇಕಾಗುವ ಪದಾರ್ಥ: ಅರ್ಧ ಕೆಜಿ ಅಕ್ಕಿ, ನೂರು ಗ್ರಾಂನಷ್ಟು ಹುಣಸೆಹಣ್ಣು, ಮೂರು ಚಮಚದಷ್ಟು ಎಳ್ಳು, ಅರ್ಧ ಅಚ್ಚು ಬೆಲ್ಲ, (2 ಉಂಡೆ ಬೆಲ್ಲ ಇದ್ದರೆ ಮತ್ತೂ ಒಳ್ಳೆಯದು) ತುಸು ಕಡಲೇಬೆಳೆ, ನಾಲ್ಕಾರು ಕರಿ ಮೆಣಸು, ೫೦ ಗ್ರಾಂನಷ್ಟು ಹಸಿ ಕಡಲೆಕಾಯಿಬೀಜ, ಕರಿಬೇವು, ಒಂದು ಬಟ್ಟಲು ಎಣ್ಣೆ, ಒಂದು ಹೋಳು ತೆಂಗಿನಕಾಯಿ, ೨ ಚಮಚ ಸಾಸಿವೆ, ಎರಡು ಚಮಚ ಮೆಣಸಿನಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಅಕ್ಕಿಯನ್ನು ಒಳ್ಳೆಯ ನೀರಿನಲ್ಲಿ ಮೂರು ಬಾರಿ ತೊಳೆದು, ಉದುರು ಉದುರಾಗಿ ಅನ್ನ ಮಾಡಿಕೊಳ್ಳಿ. ಹುಣಸೆ ಹಣ್ಣನ್ನು ಬಿಸಿ ನೀರಲ್ಲಿ ಹಾಕಿ ನೆನಸಿ ತೆಂಗಿನತುರಿ, ಸಾಸಿವೆ, ಮೆಣಸಿನಕಾಯಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಮತ್ತೆರಡು ಚಮಚ ಸಾಸಿವೆ ಹಾಕಿ ಸಿಡಿಸಿ, ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಬಾಡಿಸಿ, ಹುಣಸೆಹಣ್ಣಿನ ರಸವನ್ನೂ ಅದಕ್ಕೆ ಹಿಂಡಿ, ಎರಡು ಚಮಚ ಮೆಣಸಿನ ಪುಡಿ, ಉಪ್ಪು ಮತ್ತು ಚಚ್ಚಿದ ಉಂಡೆ ಬೆಲ್ಲವನ್ನು ಬೆರೆಸಿ ಮಿಶ್ರಣ ಮಾಡಿ, ಕುದಿಸಿ. ತಳ ಹಿಡಿಯದಂತೆ ಎಚ್ಚರ ವಹಿಸಿ.

ಅಗಲ ಬಾಯಿಯ ಪಾತ್ರೆಯಲ್ಲಿ ಉದುರು ಉದುರಾಗಿರುವ ಅನ್ನ ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಚೆನ್ನಾಗಿ ಕುಟ್ಟಿದ ಎಳ್ಳಿನ ಪುಡಿ ಬೆರೆಸಿ ಕಲೆಸಿ. ನಂತರ ಅದಕ್ಕೆ ಹದವಾಗಿ ಒಗ್ಗರಣೆ ಹಾಕಿ, ಮೇಲೆ ನಾಲ್ಕಾರು ಕೊಬ್ಬರಿ ತುರಿ ಉದುರಿಸಿದರೆ ರುಚಿ ರುಚಿ ಹುಳಿಯನ್ನ ಸಿದ್ದ.

(ಈ ಪಾಕವನ್ನು ಬರಹದಲ್ಲಿ ಬರೆದು ಕಳಿಸಿದವರು ನ್ಯೂಜರ್ಸಿಯ ಸುಮತಿ ಮೂರ್ತಿ) 

ಮುಖಪುಟ /ಪಾಕಶಾಲೆ