ಮುಖಪುಟ /ಹೊಸನಾಡ ಕನ್ನಡ ಧ್ವನಿ

ಅಮೆರಿಕೆಯಲ್ಲಿ ಪರಿಮಳಿಸುತ್ತಿರುವ ಮೈಸೂರು ಮಲ್ಲಿಗೆ
ಕಡಲಾಚೆ ಕಂಪು ಸೂಸುತ್ತಿರುವ ಮೈಸೂರು ಮಲ್ಲಿಗೆ ಕನ್ನಡ ಕೂಟ.

*ವಾಗ್ಮಿತ್ರ

Mysore Mallige Kannada Kootaಕನ್ನಡಕ್ಕೂ ಕಂಪಿಗೂ ಬಿಡಿಸಲಾರದ ನಂಟಿದೆ. ಕನ್ನಡ ಕಸ್ತೂರಿಯಂತೆ ಎಂದ ಹಿರಿಯ ಕವಿ ಮುದ್ದಣ. ಕಸ್ತೂರಿಯ ಪರಿಮಳ ಅಮೋಘ. ಇಂದು ಕನ್ನಡದ ಕಂಪು ವಿಶ್ವಾದ್ಯಂತ ಹಬ್ಬುತ್ತಿದೆ. ಪರಿಮಳಕ್ಕೂ ಕನ್ನಡಕ್ಕೂ ಅವಿನಾಭಾವ ಸಂಬಂಧವಿದೆ.

ಕನ್ನಡನಾಡಿಗೆ ಕಂನಾಡು ಎಂಬ ಹೆಸರೂ ಇದೆ. ಈ ಹೆಸರು ಬಂದಿದ್ದೇ ಕಂಪಿನಿಂದ. ಕಂ ಎಂದರೇ ಕಂಪು. ಕರ್ನಾಟಕದಲ್ಲಿ ಮೈಸೂರು ಮಲ್ಲಿಗೆ ಬಹು ಹೆಸರುವಾಸಿ. ಮಲ್ಲಿಗೆಯ ಪರಿಮಳ ಮನಕ್ಕೆ ಮುದನೀಡುತ್ತದೆ. ಮನಸ್ಸಿಗೆ ಉಲ್ಲಾಸ ನೀಡುತ್ತದೆ.

ಹಿರಿಯಕವಿಯೊಬ್ಬರು ಹೇಳಿದ ಮಾತು - ಮಲ್ಲಿಗೆ ಕಂಪು ಬೀರುವುದು ಕರ್ನಾಟಕ ಮಣ್ಣಲ್ಲಿ ಮಾತ್ರವಂತೆ. ಇದೇ ಮಲ್ಲಿಗೆಯ ಬಳ್ಳಿಯನ್ನು ದೂರದ ದೆಹಲಿಯಲ್ಲಿ ನೆಟ್ಟಾಗ ಅದರಲ್ಲಿ ಹೂಬಿಟ್ಟಿತೇ ಹೊರತು ಕಂಪು ಬೀರಲಿಲ್ಲ. ಕನ್ನಡದ ಕೆಂಪು ಹಾಗೂ ಕಪ್ಪು ಮಣ್ಣಿನಲ್ಲಿ ಸುವಾಸನೆ ಬೀರುವ ಶಕ್ತಿಯಿದೆ.

Mysore Mallige Kannada Kootaವೈಜ್ಞಾನಿಕವಾಗಿ ಇದು ಸರಿಯೋ ತಪ್ಪೋ.. ಆದರೆ.. ಕನ್ನಡದಲ್ಲಿ ಮನೋಲ್ಲಾಸವೀವ, ಮನಸ್ಸಿಗೆ ಮುದನೀಡುವ ಶಕ್ತಿ ಇರುವುದಂತೂ ನಿಜ. ಈ ಹೊತ್ತು ಕಡಲಾಚೆಯೂ ಕನ್ನಡದ ಕಂಪು ಪಸರಿಸುತ್ತಿದೆ. ಅಮೆರಿಕೆಯಲ್ಲಿರುವ ಹಲವು ಕನ್ನಡ ಕೂಟಗಳ ಹೆಸರೇ ಇದನ್ನು ಸಾಬೀತು ಪಡಿಸುತ್ತದೆ. ಶ್ರೀಗಂಧ ಕನ್ನಡಕೂಟ, ಮಲ್ಲಿಗೆ ಕನ್ನಡಕೂಟ, ವಿದ್ಯಾರಣ್ಯ, ಪಂಪ, ಅಕ್ಕ, ಕಾವೇರಿ, ನೃಪತುಂಗ... ಈ ಹೆಸರುಗಳೇ ಕನ್ನಡತನವನ್ನು, ಕನ್ನಡದ ಸೊಗಡನ್ನು, ಕನ್ನಡದ ಕಂಪನ್ನು ಪಸರಿಸುತ್ತಿವೆ.

ಕನ್ನಡ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಕಡಲಾಚೆ ಜೀವಂತವಾಗಿಟ್ಟಿರುವ ಕನ್ನಡ ಸಂಸ್ಥೆಗಳಲ್ಲಿ ಮಲ್ಲಿಗೆ ಕನ್ನಡಕೂಟವೂ ಒಂದು. ಅಮೆರಿಕೆಯ ಮಿಡ್‌ವೆಸ್ಟ್ ಪ್ರಾಂತದಲ್ಲಿರುವ ಮಲ್ಲಿಗೆ ಕನ್ನಡಕೂಟ.. ಕನ್ನಡ ಹಾಗೂ ಕನ್ನಡತನವನ್ನು ಪ್ರಚುರಪಡಿಸುತ್ತಾ, ಕನ್ನಡವನ್ನು ಜೀವಂತವಾಗಿಟ್ಟು, ಮುಂದಿನ ಪೀಳಿಗೆಗೆ ಉಳಿಸುವ ಪಣತೊಟ್ಟಿದೆ.

Mysore Mallige Kannada Koota೨೦೦೧ರ ಜನವರಿ ೧೭ರಂದು ಜನ್ಮತಳೆದ ಮೈಸೂರು ಮಲ್ಲಿಗೆ ಕನ್ನಡ ಕೂಟ ಇಲಿನಾಯ್ಸ್ ಹಾಗೂ ಮಿಡ್‌ವೆಸ್ಟ್ ಪ್ರಾಂತದ ಕನ್ನಡಿಗರ ಪ್ರಾತಿನಿಕ ಸಂಸ್ಥೆಯಾಗಿದೆ. ವರ್ಷಕ್ಕೆ ನಾಲ್ಕು ಬಾರಿ ಕನ್ನಡ ಸಂಸ್ಕೃತಿ ಹಾಗೂ ಪರಂಪರೆಗೆ ಎತ್ತಿಹಿಡಿಯುವ ಕಾರ್ಯಕ್ರಮಗಳನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಾ ಬಂದಿದೆ.

ಯುಗಾದಿ, ಸಂಕ್ರಾಂತಿ, ರಾಜ್ಯೋತ್ಸವಗಳ ಆಚರಣೆಯ ಜೊತೆಗೆ ಕನ್ನಡ ಸಿನಿಮಾ ಪ್ರದರ್ಶನ ಹಾಗೂ ಕನ್ನಡ ಕುಟುಂಬಗಳೆಲ್ಲವನ್ನೂ ಒಂದೆಡೆ ಸೇರಿಸಿ ಕನ್ನಡ ವಾತಾವರಣ ಸೃಷ್ಟಿಸಲು, ಅಮೆರಿಕೆಯಲ್ಲೇ ಬೆಳೆಯುತ್ತಿರುವ ಕನ್ನಡ ಮಕ್ಕಳಿಗೆ ಕನ್ನಡ ಭಾಷೆ ಮರೆಯದಂತೆ ಮಾಡಲು ಪಿಕ್‌ನಿಕ್‌ಗಳನ್ನೂ ಏರ್ಪಡಿಸುತ್ತಿದೆ.

Mysore Mallige Kannada Kootaನಿಗದಿತ ಕಾರ್ಯಕ್ರಮಗಳ ಜೊತೆಗೆ ಅಮೆರಿಕೆಗೆ ಕನ್ನಡನಾಡಿನಿಂದ ಸಾಹಿತಿ ಕಲಾವಿದರು ಬಂದಾಗ ಅವರನ್ನು ತಮ್ಮ ಸಂಘಕ್ಕೆ ಕರೆಸಿ ಸತ್ಕರಿಸುವ ಸತ್ಸಂಪ್ರದಾಯವನ್ನೂ ಕೂಟ ಹೊಂದಿದೆ. ಮಿಗಿಲಾಗಿ ಆಗಸ್ಟ್ ೧೫ರಂದು ಅಮೆರಿಕೆಯಲ್ಲಿ ಭಾರತೀಯ ಸಮುದಾಯ ಆಚರಿಸುವ ಇಂಡಿಯಾ ಮೇಳ, ಡಿಸ್ಕವರ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳಲ್ಲಿ ಕನ್ನಡ ಪ್ರತಿನಿಧಿಯಾಗಿ ಕೂಟ ಪಾಲ್ಗೊಳ್ಳುತ್ತಾ ಬಂದಿದೆ.

ಸುಗಂಧ: ನೂರಾರು ಸದಸ್ಯರನ್ನೊಳಗೊಂಡ ಮಲ್ಲಿಗೆ ಕನ್ನಡ ಕೂಟ, ತಮ್ಮ ಸದಸ್ಯರಲ್ಲಿ ಕನ್ನಡ ಬರವಣಿಗೆ ಹಾಗೂ ತಮ್ಮ ಅನುಭವಾನಿಸಿಕೆಗಳನ್ನು ಪರಸ್ಪರ ಹಂಚಿಕೊಳ್ಳಲು ನೆರವಾಗಲೆಂಬ ಕಾರಣದಿಂದ ಸುಗಂಧ ಎಂಬ ವಾರ್ತಾ ಸಂಚಿಕೆಯನ್ನೂ ಹೊರತರುತ್ತಿದೆ.

ಯುಗಾದಿ, ರಾಜ್ಯೋತ್ಸವ ಸಂದರ್ಭಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೂಡ ಕನ್ನಡದ ಹಿರಿಮೆಯನ್ನು ಸಾರುವಂತೆಯೇ ಕಾರ್ಯಕ್ರಮ ಆಯೋಜಿಸುವುದು ಮಲ್ಲಿಗೆ ಕನ್ನಡಕೂಟದ ಹೆಗ್ಗಳಿಕೆ. ಕನ್ನಡ ನಾಡಿನ ವಿವಿಧ ಪ್ರಾಂತಗಳಲ್ಲಿರುವ ವೇಷಭೂಷಣ, ಉಡುಗೆ ತೊಡುಗೆಗಳನ್ನು ಅಮೆರಿಕೆಯಲ್ಲಿ ನೆಲೆಸಿಹ ಕನ್ನಡ ಮಕ್ಕಳಿಗೆ ಹಾಗೂ ಕನ್ನಡೇತರರಿಗೂ ಪರಿಚಯಿಸುವ ಕಾರ್ಯವನ್ನು ಕನ್ನಡಕೂಟ ಮಾಡುತ್ತಿದೆ.

ಕೊಡಗಿನ ತೊಡುಗೆ, ಲಂಬಾಣಿ ಉಡುಗೆ, ಕೊರವಂಜಿಯ ನಡಿಗೆ ಹೀಗೆ ಎಲ್ಲ ವಿಧದ ವಸ್ತ್ರ ವಿನ್ಯಾಸಗಳು ಕೂಟದ ಕಾರ್‍ಯಕ್ರಮಗಳ ಪ್ರಧಾನ ಆಕರ್ಷಣೆ.

ಯೋಜನೆಗಳು: ಕಡಲಾಚೆ ಇದ್ದರೂ ಕನ್ನಡದ ಬಗ್ಗೆ ಭಾರೀ ಒಲವುಳ್ಳ ಕೂಟದ ಪದಾಕಾರಿಗಳು, ಸಂಪೂರ್ಣ ಕನ್ನಡದ ವಾರ್ತಾಪತ್ರ ಹೊರತರುವ, ಗಣನೀಯಸೇವೆ ಸಲ್ಲಿಸಿದ ಕನ್ನಡಿಗರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸುವ, ಕರ್ನಾಟಕದಲ್ಲಿರುವ ಅಂಧ, ಕಿವುಡು ಹಾಗೂ ಮೂಕ ಮಕ್ಕಳ ಶಾಲೆಗೆ ಆರ್ಥಿಕ ನೆರವು ನೀಡುವ ಹಾಗೂ ಸ್ಕಾಲರ್‌ಷಿಪ್ ನೀಡುವ ಯೋಜನೆಗಳನ್ನೂ ಹೊಂದಿದೆ.

ಮುಖಪುಟ /ಹೊರನಾಡ ಕನ್ನಡಧ್ವನಿ