ಮುಖಪುಟ /ಹೊಸನಾಡ ಕನ್ನಡ ಧ್ವನಿ

ಉತ್ತರ ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿ
ಸಾಹಿತ್ಯವೆಂಬ ಅಡುಗೆಯ ಮಾಡಿ
, ಸಂವಾದವೆಂಬ ಸೌಟಿನಿಂದ ಸಾರಸ್ವತ ಸತ್ವದ ಸುಗ್ರಾಸ ಉಣಬಡಿಸುತ್ತಿರುವ ಸಂಸ್ಥೆಯ ಸಾಧನೆಯ ಪಕ್ಷಿನೋಟ....

*ಟಿ.ಎಂ.ಸತೀಶ್

Vishwanatha Hulikal and Smt Hulikal, Sahitya gosti, Americaಸಾಹಿತ್ಯ ಕ್ಷೇತ್ರದ ಸಾವಿರಾರು ದಿಗ್ಗಜರಿರುವ ಕನ್ನಡ ನಾಡಿನಲ್ಲೇ, ಅನೇಕ ಕನ್ನಡ ಸಾಹಿತ್ಯ ಸಂಘಟನೆಗಳಿಗೆ ತಿಂಗಳಿಗೆರಡು ಸಾಹಿತ್ಯ ಗೋಷ್ಠಿ ನಡೆಸಲು ಸಾಧ್ಯವಾಗದಿರುವಾಗ, ಕಡಲಾಚೆ ಕಂಗೊಳಿಸುತಿಹ ಕನ್ನಡ ಸಾಹಿತ್ಯ ಸಂಘಟನೆ, ತಪ್ಪದೆ ತಿಂಗಳಿಗೆರಡು ಸಾಹಿತ್ಯ ಕಾರ್ಯಕ್ರಮ ಏರ್ಪಡಿಸುವ ಮೂಲಕ ಹೊರನಾಡಿನಲ್ಲಿ ಕನ್ನಡ ಡಿಂಡಿಮ ಮೊಳಗಿಸುತ್ತಿದೆ.  ಸಾಹಿತ್ಯವೆಂಬ ಅಡುಗೆಯ ಮಾಡಿ, ಸಂವಾದವೆಂಬ ಸೌಟಿನಿಂದ ಸಾರಸ್ವತ ಸತ್ವದ ಸುಗ್ರಾಸ ಭೋಜನವನ್ನು ಉಣಬಡಿಸುತ್ತಿರುವ ಈ ಸಾಹಿತ್ಯ ಸಂಘಟನೆಯ ಹೆಸರು ಸಾಹಿತ್ಯಗೋಷ್ಠಿ.

೨೦೦೧ರ ನವೆಂಬರ್ ೧೧ರಂದು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಜನ್ಮತಳೆದ ಈ ಸಂಸ್ಥೆ, ಅಲ್ಪಾವಧಿಯಲ್ಲೇ ಪ್ರತಿ ತಿಂಗಳೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಿಂಗಳಿಗೆರಡರಂತೆ, ಆಸಕ್ತಿಪೂರ್ಣ ಉಪನ್ಯಾಸ, ವಿಚಾರಸಂಕಿರಣ, ಕವಿಗೋಷ್ಠಿ ನಡೆಸುತ್ತಿದೆ.  ಕನ್ನಡನಾಡಿನಿಂದ ಯಾರಾದರೂ ಅಮೆರಿಕೆಗೆ ಬಂದರೆ ಅದು ತಮ್ಮ ಪುಣ್ಯ ವಿಶೇಷ ಎಂದು ತಿಳಿದು, ಅವರನ್ನು ಗೋಷ್ಠಿಗೆ ಆಹ್ವಾನಿಸಿ, ಸಾಂಪ್ರದಾಯಿಕವಾಗಿ ಆರತಿ ಬೆಳಗಿ ಸ್ವಾಗತ ಕೋರಿ, ಅವರ ವಿಚಾರಧಾರೆಯನ್ನು ಕಡಲಾಚೆಯ ಸಾಹಿತ್ಯಾಸಕ್ತ ಕನ್ನಡಿಗರಿಗೆ ನೀಡುವಲ್ಲಿ ಯಶಸ್ವಿಯಾಗಿದೆ.  ಸಾಹಿತ್ಯಗೋಷ್ಠಿ ಪ್ರತಿ ತಿಂಗಳ ಎರಡನೇ ಭಾನುವಾರ ಬೆಳಗ್ಗೆ ೧೦ಗಂಟೆಯಿಂದ ಮಧ್ಯಾಹ್ನ ೧ಗಂಟೆಯವರೆಗೆ ಸನ್ನಿವೇಲ್‌ನ ಕೊಪರ್ಟಿನೋ ನಗರಗಳ ವಾಚನಾಲಯದಲ್ಲಿ ಅಥವಾ ಸಾರ್ವಜನಿಕ ಸಭಾಂಗಣದಲ್ಲಿ ತಪ್ಪದೆ ಕನ್ನಡ ಸಾಹಿತ್ಯ ಕಾರ್‍ಯಕ್ರಮ ಏರ್ಪಡಿಸುತ್ತದೆ.  ಈ ಸಾಹಸೀ ಸಾಹಿತ್ಯ ಸಂಘಟನೆಯ ಹಿಂದಿರುವ ಚೇತನ ಹುಲಿಕಲ್ ವಿಶ್ವನಾಥ್ ಹಾಗೂ ಅನ್ನಪೂರ್ಣ ವಿಶ್ವನಾಥ್. ಈ ಇಬ್ಬರು ಸಾಹಿತ್ಯಾಸಕ್ತ ದಂಪತಿ, ಹುಟ್ಟುಹಾಕಿದ ಸಂಸ್ಥೆ ಕಡಲಾಚೆಯ ಕನ್ನಡಿಗರಲ್ಲಿ ಸಾಹಿತ್ಯ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಗೋಷ್ಠಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಈ ಭಾಗದ ಸಾಹಿತ್ಯಾಸಕ್ತ ಕನ್ನಡಿಗರು, ಗೋಷ್ಠಿಯಿಂದ ಪ್ರೇರಿತರಾಗಿ ಬರೆಯಲು ತೊಡಗಿದ್ದಾರೆ. ಸ್ಪಲ್ಪ ಮಾತ್ರ ಬರೆಯುತ್ತಿದ್ದವರು ಸಾಹಿತ್ಯ ಕೃಷಿಗೆ ಇಳಿದಿದ್ದಾರೆ.  ಶ್ರೀಮಂತವಾದ ಕನ್ನಡ ಸಾಹಿತ್ಯ ಪರಿಚಯದಿಂದ ಪ್ರತಿಯೊಬ್ಬರ ವ್ಯಕ್ತಿತ್ವವೂ ಸುಸಂಸ್ಕೃತವಾಗುತ್ತದೆ ಎಂದು ನಂಬಿರುವ ಈ ಸಂಸ್ಥೆಯ ಆಧಾರಸ್ತಂಬಗಳಾದ ವಿಶ್ವನಾಥ್ ಹಾಗೂ ಶ್ರೀಮತಿ ವಿಶ್ವನಾಥ್ ಅವರು, ಈವರೆಗೆ ನೂರಾರು ಕನ್ನಡ ಸಾಹಿತ್ಯ ಕಾರ್ಯಕ್ರಮ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.  ಕನ್ನಡನಾಡಿನಿಂದ ಅಮೆರಿಕೆಗೆ ಬರುವ ಸಾಹಿತಿಗಳನ್ನು ಆಹ್ವಾನಿಸುವುದಲ್ಲದೆ, ಸ್ಥಳೀಯ ಪ್ರತಿಭೆಗಳಿಗೂ ಮನ್ನಣೆ ನೀಡುತ್ತಿರುವ ಸಾಹಿತ್ಯ ಗೋಷ್ಠಿಯಲ್ಲಿ ಅಮೆರಿಕೆಯಲ್ಲೇ ನೆಲೆಸಿಹ ಹಲವಾರು ಕನ್ನಡಿಗರು, ವಿವಿಧ ವಿಷಯಗಳ ಮೇಲೆ ತಮ್ಮ ವಿಚಾರಧಾರೆ ಹರಿಸಿದ್ದಾರೆ.  ಜನ್ನನ ಯಶೋಧರ ಚರಿತೆ ಒಂದು ವಿಮರ್ಶಾತ್ಮಕ ಪರಿಚಯ (ವಿಶ್ವನಾಥ ಹುಲಿಕಲ್), ಕಾವ್ಯದಲ್ಲಿ ಕ್ರಿಯಾಶೀಲತೆ (ಡಾ.ಕೆ.ಆರ್.ಎಸ್.ಮೂರ್ತಿ), ಕಾವ್ಯದಲ್ಲಿ ಅನುವಾದಕನ ಸಮಸ್ಯೆಗಳು (ಎಂ.ಆರ್. ದತ್ತಾತ್ರೀ), ಬೇಂದ್ರಯವರ ನೀ ಹಿಂಗ ನೋಡಬೇಡ ನನ್ನ ಕವನ ವಿಮರ್ಶೆ (ಜ್ಯೋತಿ ಮಹದೇವ್), ಆಧುನಿಕ ದೃಷ್ಟಿಯಲ್ಲಿ ರಾಮಾಯಣ (ಎಂ.ವಿ. ನಾಗರಾಜರಾವ್), ನಾನೇಕ ಸಣ್ಣಕಥೆ ಬರೆಯುತ್ತೇನೆ?(ಕಡೂರು ರಾಮಸ್ವಾಮಿ), ಮಂಕುತಿಮ್ಮನ ಕಗ್ಗದಲ್ಲಿ ಮಾನವೀಯ ಮೌಲ್ಯಗಳು (ಪದ್ಮನಾಭರಾವ್), ಅಡಿಗರ ಕಾವ್ಯದಲ್ಲಿ ರಾಜಕೀಯ ವಿಡಂಬನೆ (ಪ್ರಕಾಶ್ ನಾಯಕ್), ಸಾಹಿತ್ಯದಲ್ಲಿ ಭಾಷೆಯ ಮಹತ್ವ ಮತ್ತು ಪ್ರಯೋಗ (ಮಹಾಬಲಶಾಸ್ತ್ರೀ), ಅನಂತ ಮೂರ್ತಿಯವರ ಕೆಲವು ಶ್ರೇಷ್ಠ ಸಣ್ಣ ಕಥೆಗಳು (ವಿಶ್ವನಾಥ ಹುಲಿಕಲ್), ಶ್ರೀರಾಮಾಯಣ ಮಹಾನ್ವೇಷಣಂ (ವೀರಪ್ಪಮೊಯ್ಲಿ), ನಾಟಕದ ಸಾಹಿತ್ಯ ಮತ್ತು ಭಾಷೆ (ಎಚ್.ಸಿ. ಶ್ರೀನಿವಾಸ್), ಭೈರಪ್ಪನವರ ಸಾರ್ಥ (ಯೋಗೀಶ್ ದೇವರಾಜ್), ಕನ್ನಡ ಓದುಗರು ಎಂತಹ ಲೇಖನ ಮೆಚ್ಚುತ್ತಾರೆ (ಶಾಮಸುಂದರ), ಭೈರಪ್ಪನವರ ಜಲಪಾತ ಒಂದು ವಿಮರ್ಶೆ (ಗಣೇಶ್ ಕಡಬ), ದಾಸ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳು (ಡಾ.ಕೆ.ಆರ್.ಎಸ್.ಮೂರ್ತಿ) ಮೊದಲಾದ ಅರ್ಥಪೂರ್ಣ ಸಾಹಿತ್ಯಿಕ ವಿಚಾರಗಳ ಬಗ್ಗೆ ಗೋಷ್ಠಿಯಲ್ಲಿ ಉಪನ್ಯಾಸಗಳು ಏರ್ಪಟ್ಟಿವೆ.  ಅಂದ ಹಾಗೆ ಈ ಎಲ್ಲ ಕಾರ್ಯಕ್ರಮಕ್ಕೆ ತಗುಲುವ ವೆಚ್ಚವನ್ನು ವಿಶ್ವನಾಥ್ ಸ್ವತಃ ತಮ್ಮ ಜೇಬಿನಿಂದಲೇ ಭರಿಸುತ್ತಿದ್ದಾರೆ. ಕಡಲಾಚೆಯ ಸಾಹಿತ್ಯಾಸಕ್ತರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಸದಭಿರುಚಿಯನ್ನು ಮೂಡಿಸಿ, ವೃದ್ಧಿಸಿ, ಪೋಷಿಸುವುದರ ಜೊತೆಗೆ ಕನ್ನಡ ಸಾಹಿತ್ಯದ ಪರಂಪರೆಯ ಬಗ್ಗೆ ಪ್ರಜ್ಞೆ ದಿಗಂತವನ್ನು ವಿಸ್ತರಿಸುವ ಮಹದಾಸೆಯೊಂದಿಗೆ ಇಂಥ ಒಂದು ಸಂಸ್ಥೆ ಹುಟ್ಟಿ ಹಾಕಿರುವ ವಿಶ್ವನಾಥ್ ದಂಪತಿಗಳು ಅಭಿನಂದನಾರ್ಹರು.

ಮುಖಪುಟ /ಹೊರನಾಡ ಕನ್ನಡಧ್ವನಿ