ಮುಖಪುಟ /ಹೊರನಾಡ ಕನ್ನಡ ಧ್ವನಿ

ಅಕ್ಕ ಹುಟ್ಟು ಹಾಗೂ ಬೆಳವಣಿಗೆ

Akka Logoಅಕ್ಕ ಅರ್ಥಾತ್ ಅಮೆರಿಕ ಕನ್ನಡ ಕೂಟಗಳ ಆಗರ,  ಕಡಲಾಚೆ ಕನ್ನಡ ತೇರು ಎಳೆಯುವ ಮೂಲಕ ದೇಶ ಹಾಗೂ ವಿದೇಶಗಳೆರಡರಲ್ಲೂ ಖ್ಯಾತಿ ಪಡೆದಿದೆ. ಹ್ಯೂಸ್ಟನ್‌ನಲ್ಲಿ ಸಹಸ್ರಮಾನದ ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನ-೨೦೦೦ ವನ್ನೂ ವಿಜೃಂಭಣೆಯಿಂದ ನಡೆಸಿ ಯಶಸ್ವಿಯಾದ ಅಕ್ಕ ಸ್ಥಾಪನೆಯಾದದ್ದು ೧೯೯೮ರಲ್ಲಿ. ಈ ಅಲ್ಪಾವಧಿಯಲ್ಲೇ ಅಕ್ಕ ಸಾಸಿರುವ ಸಾಧನೆ ಹತ್ತಾರು. ಅಕ್ಕ ಹುಟ್ಟು ಹಾಗೂ ಬೆಳವಣಿಗೆಯ ಬಗ್ಗೆ ಪುಟ್ಟದೊಂದು ಪರಿಚಯ :

ಕನ್ನಡಿಗರು ಅಮೆರಿಕೆಗೆ ಬಂದು ನೆಲೆಸಲು ಆರಂಭಿಸಿದ್ದು ೧೯೬೦ರಿಂದ. ಅಮೆರಿಕೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾದಂತೆಲ್ಲಾ ಅವರಿಗೆ ತಮ್ಮದೇ ಆದ ಸಂಘಟನೆಯೊಂದರ ಅಗತ್ಯ ಕಂಡುಬಂತು. ಕೆ.ಎಸ್. ಶ್ರೀಪಾದರಾಜು, ಎಸ್.ಎನ್. ಪ್ರಕಾಶ್, ಭಟ್ ಮತ್ತು ಎಂ. ಕೃಷ್ಣಪ್ಪ ಮೊದಲಾದವರ ಕನ್ನಡ ಸಂಘವೊಂದನ್ನು ಹುಟ್ಟು ಹಾಕಲು ಶ್ರಮಿಸಿದರು. ಅವರೆಲ್ಲರ ಪರಿಶ್ರಮದ ಫಲವಾಗಿ ಏಪ್ರಿಲ್ ೩, ೧೯೭೧ರಂದು ಪಂಪ ಕನ್ನಡ ಕೂಟ ಜನ್ಮ ತಳಿಯಿತು.

ತದನಂತರ ವಿದ್ಯಾರಣ್ಯ, ಕಾವೇರಿ ಮೊದಲಾದ ಹಲವಾರು ಸಂಘಟನೆಗಳು ಅಮೆರಿಕೆಯಲ್ಲಿ ಸ್ಥಾಪನೆಯಾಗಿ ಕನ್ನಡ ಕೈಂಕರ್ಯವನ್ನು ಆರಂಭಿಸಿದವು. ಅಮೆರಿಕೆಯಲ್ಲಿರುವ ಎಲ್ಲ ಸಂಘಟನೆಗಳಿಗೊಂದು ಕೇಂದ್ರ ಸಂಸ್ಥೆ ಬೇಕು ಎಂಬ ಅಭಿಪ್ರಾಯ ಈ ಹಂತದಲ್ಲಿ ಮೂಡಿತು. ೧೯೭೨ರಲ್ಲೇ ಈ ಅಭಿಪ್ರಾಯ ಕನ್ನಡಿಗರ ಮನದಾಳದಲ್ಲಿ ಪಲ್ಲವಿಸಿತಾದರೂ, ಇದು ಅರಳಿ ಹೂವಾದದ್ದು ೧೯೯೮ರಲ್ಲಿ.

ಆರಿಜೋನದ ಫೀನಿಕ್ಸ್‌ನಲ್ಲಿ ೧೯೯೮ರಲ್ಲಿ ನಡೆದ ಕನ್ನಡ ಸಮ್ಮೇಳನ ಆ ಮಹತ್ಕಾರ್ಯಕ್ಕೆ ವೇದಿಕೆಯಾಯ್ತು. ಈ ಸಮ್ಮೇಳನದಲ್ಲಿ ಪಾಲ್ಗೊಂಡ ಕನ್ನಡಿಗರು, ಅಮೆರಿಕೆಯಲ್ಲಿ ಕನ್ನಡ ಸಂಘಟನೆಗಳ ಕೇಂದ್ರ ಸಂಸ್ಥೆಯೊಂದನ್ನು ಹುಟ್ಟು ಹಾಕುವ ತಮ್ಮ ಬಹುದಿನಗಳ ಆಸೆಗೆ ಹಸಿರು ನಿಶಾನೆ ತೋರಿದರು. ಅಕ್ಕ ಅಲ್ಲೇ ಜನ್ಮತಳೆಯಿತು. ೯೮ರ ಸಮ್ಮೇಳಾನಾಧ್ಯಕ್ಷರಾದ ಸೀತಾ ವಿ ರಾಮಯ್ಯ ಅವರು ಸಮ್ಮೇಳನದ ಸಮಾರೋಪ ದಿನದಂದು ಈ ಘೋಷಣೆ ಮಾಡಿದರು. ಕನ್ನಡದ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರು ಅಕ್ಕ ವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಎಚ್.ಎಸ್. ಜಯಸ್ವಾಮಿ, ರೇಣುಕಾ ರಾಮಪ್ಪ, ಸೀತಾ ವಿ ರಾಮಯ್ಯ, ಹರೀಶ್ ಕುಮಾರ್, ಸುಪ್ರಿಯಾ ದೇಸಾಯಿ, ಎಚ್.ಕೆ. ರಾಮಚಂದ್ರ, ವಿ.ಎಂ. ಕುಮಾರಸ್ವಾಮಿ, ಎನ್.ಎಸ್. ಶ್ರೀನಿವಾಸ, ಕೌಶಿಕ್ ಗಂಜಾಮ್ ಅವರನ್ನೊಳಗೊಂಡ ಅಕ್ಕ ಸಂಸ್ಥಾಪಕ ಸಮಿತಿಯ ಸಂಚಾಲನಾ ಸಮಿತಿಯನ್ನೂ ರಚಿಸಲಾಯಿತು.

ಇದೇ ಸಂದರ್ಭದಲ್ಲಿ ಟೆಕ್ಸಾಸ್ ಕನ್ನಡ ಬಳಗದ ಸಹಕಾರದೊಂದಿಗೆ ಹೂಸ್ಟನ್‌ನಲ್ಲಿ ಸಹಸ್ರಮಾನದ ಪ್ರಥಮ ವಿಶ್ವಕನ್ನಡ ಸಮ್ಮೇಳನ ನಡೆಸಲೂ ತೀರ್ಮಾನಿಸಲಾಯಿತು. ತನ್ನ ತೀರ್ಮಾನದಂತೆ ಯಶಸ್ವಿಯಾಗಿ ಸಮ್ಮೇಳನವನ್ನೂ ನಡೆಸಿತು.

ಸ್ಥಾಪನೆಯಾದ ವರ್ಷವೇ (೧೯೯೮) ಫೀನಿಕ್ಸ್ ನಗರದಲ್ಲಿ ಕನ್ನಡಿಗರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಸಂಸ್ಥೆ, ಅಮೆರಿಕದ ವಿವಿಧೆಡೆ ಹಂಚಿಹೋಗಿರುವ ಕನ್ನಡಿಗರನ್ನು ಹಾಗೂ ಕನ್ನಡ ಸಂಘಟನೆಗಳನ್ನು ಏಕ ಛತ್ರಿಯಡಿ ಸೇರಿಸುವ ಮಹತ್ವದ ಕಾರ್ಯ ಮಾಡಿದೆ. ಈಹೊತ್ತು ಅಕ್ಕ ದಲ್ಲಿ ಅಮೇರಿಕಾದಲ್ಲಿರುವ ಕನ್ನಡಿಗರು, ಕನ್ನಡ ಸಂಘಟನೆಗಳಷ್ಟೇ ಅಲ್ಲದೆ, ಕೆನಡಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ ಬೆರೆತುಹೋಗಿದ್ದಾರೆ.

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರುವ ಎಂಬ ರಾಷ್ಟ್ರಕವಿ ಕುವೆಂಪು ಅವರ ವಾಣಿಯನ್ನು ಧ್ಯೇಯವಾಗಿಟ್ಟುಕೊಂಡಿರುವ ಅಕ್ಕ ಕನ್ನಡ ಹಾಗೂ ಕರ್ನಾಟಕದ ಏಳಿಗೆಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ.

ಕರ್ನಾಟಕದ ಗ್ರಾಮೀಣ ಶಾಲೆಗಳ ದತ್ತು ಸ್ವೀಕಾರ, ಹಿಂದುಳಿದ ಗ್ರಾಮಗಳ ದತ್ತು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಕ್ಕ ಧರ್ಮಾರ್ಥ ಪ್ರತಿಷ್ಠಾನ ಸ್ಥಾಪಿಸುವ ಉದ್ದೇಶವನ್ನೂ ಹೊಂದಿದೆ. ಹಂಪಿ ಕನ್ನಡ ವಿ.ವಿ. ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕಾವ್ಯ ಸಂಪುಟ ಪ್ರಕಟಣೆಗೂ ನೆರವಾಗಿದೆ.

ಇದಲ್ಲದೆ, ಅಕ್ಕ ಬಿಳಿಗಿರಿ ರಂಗನ ಬೆಟ್ಟದ ವ್ಯಾಪ್ತಿಯ ಗುಡ್ಡಗಾಡುಗಳಲ್ಲಿ ವಾಸವಾಗಿರುವ ಕನ್ನಡಿಗರ ಆರೋಗ್ಯ, ಶಿಕ್ಷಣಕ್ಕೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡನಾಡಿನ ಕಲಾವಿದರನ್ನು ಅಮೆರಿಕೆಗೆ ಬರಮಾಡಿಕೊಂಡು, ಅವರ ಪ್ರತಿಭೆಯ ಪ್ರಕಾಶಕ್ಕೂ ಕಾರಣವಾಗಿದೆ.

ಕಡಲಾಚೆ ಕನ್ನಡ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅಕ್ಕ ಸಂಸ್ಥೆಯ ಸಾಧನೆಗೆ ರಾಜ್ಯ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಗರಿಯೂ ದೊರೆತಿದೆ.

ಮುಖಪುಟ /ಹೊರನಾಡ ಕನ್ನಡಧ್ವನಿ