ಮುಖಪುಟ /ಸುದ್ದಿ ಸಮಾಚಾರ 

ಭಾರತದ ಬುದ್ಧಿಗೆ ಬಂಗಾರದ ಬೆಲೆ -ಸೂರ್ಯಪ್ರಕಾಶ್
ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿ.ವಿ. ಘಟಿಕೋತ್ಸವ

ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿಶ್ವವಿದ್ಯಾಲಯದ ಸಾಧಕ ವಿದ್ಯಾರ್ಥಿಗೆ ಡಾ.ಎ. ಸೂರ್ಯಪ್ರಕಾಶ್ ಚಿನ್ನದ ಪದಕ ಪ್ರದಾನ ಮಾಡಿದರುಬೆಂಗಳೂರು, ಸೆ.19 ಭಾರತದ ಬುದ್ಧಿಗೆ ವಿದೇಶದಲ್ಲಿ ಬಂಗಾರದ ಬೆಲೆ ಇದೆ, ಇದನ್ನು ಮೈಕ್ರೋಸಾಫ್ಟ್ ನ ಸಿ.ಇ.ಓ. ಸತ್ಯ ನಾಡೆಲ್ಲಾ, ಎಚ್.ಸಿ.ಎಲ್. ಸ್ಥಾಪಕ ಅಧ್ಯಕ್ಷ ಶಿವ ನಾಡಾರ್ ಹಾಗೂ ಗೂಗಲ್ ಸರ್ಚ್ ಇಂಜಿನ್ ನ ಸುಂದರ ಪಿಚ್ಚೈ ಸಾಬೀತು ಪಡಿಸಿದ್ದಾರೆ ಎಂದು ಪ್ರಸಾರ ಭಾರತಿ ಅಧ್ಯಕ್ಷ ಡಾ. ಎ ಸೂರ್ಯ ಪ್ರಕಾಶ್ ಹೇಳಿದ್ದಾರೆ.

ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಸಾಧಕ ಪದವೀಧರರಿಗೆ ಚಿನ್ನದ ಪದಕ ಹಾಗೂ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು ಭಾರತದಲ್ಲಿಂದು ನಾವು ಶೈಕ್ಷಣಿಕ ಔನ್ನತ್ಯ ಕಾಣುತ್ತಿದ್ದು, ದುರ್ಬಲ ವರ್ಗದವರಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂದು ಹೇಳಿದರು. ಶಿಕ್ಷಣದಲ್ಲಿ ಸಂವಾದಕ್ಕೆ ಆದ್ಯತೆ ನೀಡಬೇಕೆಂದು ಪ್ರತಿಪಾದಿಸಿದ
ಅವರು, ಇದರಿಂದ ಶಿಕ್ಷಣ ರಂಗದಲ್ಲಿ ಪ್ರಜಾಪ್ರಭುತ್ವದ ಖಾತ್ರಿಯ ಭರವಸೆ ದೊರೆಯುತ್ತದೆ ಎಂದು ಹೇಳಿದರು.

ಸರಳ ಜೀವನ ಹಾಗೂ ಉನ್ನತ ಚಿಂತನೆಗಿಂತ ಮಿಗಿಲಾದುದು ಯಾವುದೂ ಇಲ್ಲ. ಇದನ್ನು ಕರ್ನಾಟದಲ್ಲಿ ಅನೂಚಾನವಾಗಿ ಅನುಷ್ಠಾನಗೊಳಿಸುತ್ತಾ ಬರಲಾಗಿದೆ.  ರಾಜ್ಯ ಉನ್ನತ ಶಿಕ್ಷಣದ ತೊಟ್ಟಿಲಾಗಿದೆ ಎಂದು ತಿಳಿಸಿದರು.

ಭಾರತೀಯರ ಬದುಕಿನ ಮೇಲೆ ಬ್ರಿಟಿಷ್ ಆಳ್ವಿಕೆ ಮಹತ್ವದ ಪರಿಣಾಮಗಳನ್ನು ಬೀರಿದೆ. ಆಡಳಿತ, ಅಭಿವೃದ್ಧಿ ನಾಗರಿಕ ಸೌಲಭ್ಯಗಳು, ಕೈಗಾರಿಕೆ ಹಾಗೂ ಶಿಕ್ಷಣಗಳು ಬದಲಾವಣೆ ಕಂಡವು. ಶಿಕ್ಷಣದಲ್ಲಿ ಇಂಗ್ಲಿಷ್ ಭಾಷೆಯನ್ನು ಅಳವಡಿಸಿ ತನ್ಮೂಲಕ ಭಾರತೀಯರನ್ನು ಬ್ರಿಟಿಷ್ ಸಾಮ್ರಾಜ್ಯದ ಸೇವಕರನ್ನಾಗಿಸಲು ಮೆಕಾಲೆ ಕಂಡ ಕನಸೇ ಕಡ್ಡಾಯ ಇಂಗ್ಲಿಷ್ ಶಿಕ್ಷಣ. ಆದರೆ ಇಂದು ಅದೇ ತಿರುಗುಬಾಣವಾಗಿದೆ. ಈಗ ಭಾರತೀಯರು ತಮ್ಮ ಉನ್ನತ ಪರಂಪರೆಯನ್ನು ಇಂಗ್ಲಿಷ್ ಮುಖಾಂತರವೇ ಜಗತ್ತಿಗೆ ಮುಟ್ಟಿಸಿದ್ದಾರೆ. ನಮ್ಮ ಸಂಸ್ಕಾರವನ್ನು, ವೇದ ಉಪನಿಷತ್‌ಗಳ ಶ್ರೇಷ್ಠತೆಯನ್ನು, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳುವಂತೆ ಮಾಡುವುದು  ಶಿಕ್ಷಣ ಸಂಸ್ಥೆಗಳ ಹೊಣೆಯಾಗಿದೆ ಎಂದು ಹೇಳಿದರು.

ಬ್ರಿಟಿಷ್ ಆಳ್ವಿಕೆಗೆ ಮುನ್ನವೇ ಭಾರತದಲ್ಲಿ ಶಿಕ್ಷಣದ ಸದೃಢ ವ್ಯವಸ್ಥೆ ಇತ್ತು. ನಮ್ಮ ಗುರುಕುಲಗಳು ಅದ್ಭುತ ಕಾರ್ಯ ಮಾಡುತ್ತಿದ್ದವು. ಕ್ರಿಸ್ತಪೂರ್ವ ೩ ನೇ ಶತಮಾನದಲ್ಲಿಯೇ ಬೌದ್ಧರು ವಿಶ್ವವಿದ್ಯಾಲಯ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಿದ್ದರು. ಹೀಗೆ ಪ್ರಾಚೀನ ಭಾರತದಲ್ಲಿ ಅಧ್ಯಯನಾಕಾಂಕ್ಷಿಗಳಿಗೆ ಮಹತ್ವದ ಅವಕಾಶಗಳಿತ್ತು ಎಂದು ಹೇಳಿದರು. ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಅತ್ಯುತ್ತಮ ಅವಕಾಶವಿದೆ ಎಂದು ಅವರು ಪ್ರತಿಪಾದಿಸಿದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿಶ್ವ ವಿದ್ಯಾಲಯದ ಅಧ್ಯಕ್ಷ ಡಾ. ವಿನಯ್ ಹೆಗ್ಡೆ ಮಾತನಾಡಿ ಶೈಕ್ಷಣಿಕ ಸಾಧನೆ ಮತ್ತು ಜೀವನದ ಯಶಸ್ಸು ಎರಡೂ ಬೇರೆ ಬೇರೆಯಾಗಿದ್ದು, ಅವುಗಳನ್ನು ವಿದ್ಯಾರ್ಥಿಗಳು ತಮ್ಮ ಗುರಿಯಾಗಿಸಿಕೊಳ್ಳಬೇಕೆಂದು ಕರೆ ನೀಡಿದರು. ರಾಂಕ್ ಪಡೆದ ಪ್ರತಿಭಾವಂತರು ವಿಜ್ಞಾನಿಗಳಾಗಿ, ಸಂಶೋಧಕರಾಗಿ ಹಾಗೂ ಉಪನ್ಯಾಸಕರಾಗಿ ತಮ್ಮ ವೃತ್ತಿ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿಶ್ವವಿದ್ಯಾಲಯದ ಒಟ್ಟು 690 ವಿದ್ಯಾರ್ಥಿಗಳು ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳಲ್ಲಿ ಪದವಿ ಸ್ವೀಕರಿಸಿದರು. ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ನೇಪಾಳ ಮೂಲದ ಮಂದೀಪ್ ರಾಜ್ ಪಾಂಡೆ ಅವರಿಗೆ ನಿಟ್ಟೆ ಗುಲಾಬಿ ಶೆಟ್ಟಿ ಸ್ವರ್ಣ ಪದಕ ಪ್ರದಾನ ಮಾಡಲಾಯಿತು. ಅತ್ಯುತ್ತಮ ಸಾಧನೆಗೆ ನೀಡುವ ಕೆ.ಎಸ್. ಹೆಗ್ಡೆ ಸ್ಮಾರಕ ಚಿನ್ನದ ಪಲಕ ಬಾಲಕರ ವಿಭಾಗದಲ್ಲಿ ಎ.ವಿ. ಪವನ್‌ಕುಮಾರ್ ಅವರಿಗೆ ಹಾಗೂ ನಿಟ್ಟೆ ಮೀನಾಕ್ಷಿ ಹೆಗ್ಡೆ ಚಿನ್ನದ ಪದಕ ಬಾಲಕಿಯರ ವಿಭಾಗದಲ್ಲಿ ಭಾರತಿ ಅವರಿಗೆ ಲಭಿಸಿತು.  ನಿಟ್ಟೆ ಶಿಕ್ಷಣ ಸಂಸ್ಥೆಯ ಪ್ರಧಾನ ಸಲಹೆಗಾರರಾದ ಪ್ರೊ. ಎನ್. ಆರ್. ಶೆಟ್ಟಿ, ಡಿ.ಆರ್.ಡಿ.ಓ.ದ ನಿರ್ದೇಶಕ ನಾಯಕ್ ಮತ್ತಿತರರು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

 ಮುಖಪುಟ /ಸುದ್ದಿ ಸಮಾಚಾರ