ಮುಖಪುಟ /ಸುದ್ದಿ ಸಮಾಚಾರ 

ವ್ಯಕ್ತಿತ್ವದ ವಿಕಾಸಕ್ಕೆ ಚರ್ಚಾಸ್ಪರ್ಧೆ ಸಹಕಾರಿ- ಸತೀಶ್
ಹಿಮಾಂಶು ಜ್ಯೋತಿ ಕಲಾ ಪೀಠದಲ್ಲಿ ರಾಜ್ಯಮಟ್ಟದ ಕನ್ನಡ ಚರ್ಚಾಸ್ಪರ್ಧೆ

ಹಿಮಾಂಶು ಜ್ಯೋತಿ ಕಲಾ ಪೀಠದಲ್ಲಿ ನಡೆದ ರಾಜ್ಯಮಟ್ಟದ ಅಂತರ  ಕಾಲೇಜು ಕನ್ನಡ ಚರ್ಚಾಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಪತ್ರಕರ್ತ ಟಿ.ಎಂ. ಸತೀಶ್ ಪ್ರಶಸ್ತಿ ಪ್ರದಾನ ಮಾಡಿದರು.ಬೆಂಗಳೂರು, ಸೆ.10 ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸದಲ್ಲಿ ಚರ್ಚಾಸ್ಪರ್ಧೆಗಳ ಪಾತ್ರ ಮಹತ್ವವಾದದ್ದು ಎಂದು ಹಿರಿಯ ಚರ್ಚಾಪಟು ಹಾಗೂ ಪತ್ರಕರ್ತ ಟಿ.ಎಂ. ಸತೀಶ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಮಲ್ಲೇಶ್ವರದ ಹಿಮಾಂಶು ಜ್ಯೋತಿ ಕಲಾ ಪೀಠ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶ್ರೀಮತಿ ಸುಭದ್ರಮ್ಮ ಜಯರಾಂಗೌಡ ಸ್ಮಾರಕ ಅಂತರಕಾಲೇಜು ಕನ್ನಡ ಚರ್ಚಾಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಚರ್ಚಾಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಭಾಷಾ ಬೆಳವಣಿಗೆ ಹಾಗೂ ವೈಚಾರಿಕ ಪ್ರಜ್ಞೆಯನ್ನು ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಹೇಳಿದರು.
ಕೆಲವೇ ದಶಕಗಳ ಹಿಂದೆ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಪ್ರತಿವರ್ಷ 200ಕ್ಕೂ ಹೆಚ್ಚು ಕನ್ನಡ ಚರ್ಚಾಸ್ಪರ್ಧೆಗಳು ನಡೆಯುತ್ತಿದ್ದವು. ಆದರೆ ಇಂದು ಇದರ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ ಎಂದು ವಿಷಾದಿಸಿದರು.
ಸ್ಪರ್ಧಿಗಳಲ್ಲಿ ವೈಚಾರಿಕತೆ ಮತ್ತು ತರ್ಕಶೀಲತೆ ಬೆಳೆಸುವ ಚರ್ಚಾಸ್ಪರ್ಧೆ ನಾಯಕತ್ವದ ಗುಣವನ್ನೂ ಬೆಳೆಸುತ್ತದೆ ಎಂದ ಅವರು, ಮಾತುಗಾರಿಕೆಯ ಮಹತ್ವವನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿದರು.
ಹಿಮಾಂಶು ಜ್ಯೋತಿ ಕಲಾಪೀಠದಲ್ಲಿ ನಡೆದ ಚರ್ಚಾಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಪ್ರಶಸ್ತಿಯೊಂದಿಗೆಹಿಮಾಂಶು ಜ್ಯೋತಿ ಕಲಾ ಪೀಠದ ಸಾಂಸ್ಕೃತಿಕ ವಿಭಾಗದ ಸಲಹೆಗಾರರಾದ ಎಂ.ಜೆ. ಇಂದಿರಾಗೌಡ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಅಗತ್ಯ ಎಂದು ಪ್ರತಿಪಾದಿಸಿದರು.
ಸ್ಪರ್ಧೆಯಲ್ಲಿ 11 ಕಾಲೇಜುಗಳ 22 ವಿದ್ಯಾರ್ಥಿಗಳು ಅಪರಾಧಗಳನ್ನು ತಡೆಗಟ್ಟಲು ಗಲ್ಲುಶಿಕ್ಷೆ ಸೂಕ್ತವೇ ಎಂಬ ವಿಷಯದ ಪರ ಹಾಗೂ ವಿರೋಧವಾಗಿ ತಮ್ಮ ವಾದ ಮಂಡಿಸಿದರು. ಹಿಮಾಂಶು ಕಾಲೇಜಿನ ವಿದ್ಯಾರ್ಥಿಗಳಾದ ಆದಿತ್ಯ ನಾಗರಾಜ್ ಮತ್ತು ಮಂಜುನಾಥ್ ಎಲ್. ಪರ್ಯಾಯ ಪಾರಿತೋಷಕಕ್ಕೆ ಭಾಜನರಾದರೆ, ಪ್ರಥಮ ಮೂರು ಬಹುಮಾನ ಅನುಕ್ರಮವಾಗಿ, ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ವಿ., ಎಂ.ಎಲ್.ಎ. ಪಿ.ಯು. ಕಾಲೇಜಿನ ನಯನಾ ಹಾಗೂ ಎಂ.ಇ.ಎಸ್. ವಿದ್ಯಾಸಾಗರ ಪ್ರೊ.ಎಂ.ಪಿ.ಎಲ್. ಶಾಸ್ತ್ರೀ ಪ.ಪೂ. ಕಾಲೇಜಿನ ಜಿ. ಕಾವ್ಯಾ ಇವರ ಪಾಲಾಯಿತು.
ಪತ್ರಕರ್ತರಾದ ರಮೇಶ್, ಹುಣಸವಾಡಿ ಶ್ರೀಕಾಂತ್ ಹಾಗೂ ವೆಂಕೋಬರಾವ್ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದರು. ಕನ್ನಡ ವಿಭಾಗದ ಸಂಧ್ಯಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಡಾ. ರವಿ ಅಧ್ಯಕ್ಷತೆ ವಹಿಸಿದ್ದರು.

ದಾಸರ ಪದ ಗಾಯನ ಸ್ಪರ್ಧೆಯಲ್ಲಿ ವಿದ್ಯಾಮಂದಿರ ಪಿ.ಯು. ಕಾಲೇಜು ಪರ್ಯಾಯ ಪಾರಿತೋಷಕ ಪಡೆದರೆ, ಪ್ರಥಮ ಮೂರು ಬಹುಮಾನಗಳನ್ನು ವಿದ್ಯಾಮಂದಿರದ ಶ್ರೀದೇವಿ ಎಂ.ಕೆ ಹಾಗೂ ನರಸಿಂಹ ಎಂ.ಕೆ ಹಾಗೂ ಎಂ.ಇ.ಎಸ್. ಕಿಶೋರ ಕೇಂದ್ರದ ಕಾರ್ತಿಕೇಯನ್ ಎಚ್.ಎಸ್. ಪಡೆದರು.

ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು ಪ್ರಾಧ್ಯಾಪಕ ವೃಂದದೊಂದಿಗೆ

ಮುಖಪುಟ /ಸುದ್ದಿ ಸಮಾಚಾರ