ಮುಖಪುಟ /ಸುದ್ದಿ ಸಮಾಚಾರ 

ದಸರೆಯಲ್ಲಿ ಬಹುತೇಕ ಸಂಪುಟ ವಿಸ್ತರಣೆ
24ರಂದು ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ-ಸಿದ್ದರಾಮಯ್ಯ

ಸಂಪುಟ ವಿಸ್ತರಣೆಗೆ ಸಿಎಂ ಚಿಂತನೆಬೆಂಗಳೂರು, ಸೆ.18  ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬರುವ ಲಕ್ಷಣಗಳು ಕಾಣಿಸುತ್ತಿವೆ. ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ಪುನಾರಚನೆ ಮತ್ತು ವಿಸ್ತರಣೆಯನ್ನು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದು, ಬರುವ 24ರಂದು ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಕಳೆದ ಜನವರಿಯಲ್ಲಿ ನಡೆದ ಜಂಟಿ ಅಧಿವೇಶನ, ಆಷಾಢದ ಬಳಿಕ, ಬಜೆಟ್ ಅಧಿವೇಶನ, ಬೆಳಗಾವಿ, ಬೆಂಗಳೂರಿನಲ್ಲಿ ನಡೆದ ಮುಂಗಾರು ಅಧಿವೇಶನದ ಬಳಿಕ ಆನಂತರ ಬಿಬಿಎಂಪಿ ಚುನಾವಣೆ ಬಳಿಕ ಹೀಗೆ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಲೇ ಬಂದಿದ್ದ ಸಿದ್ದರಾಮಯ್ಯ ಅವರು ಬಿಬಿಎಂಪಿಯಲ್ಲಿ ಜೆಡಿಎಸ್ ನೆರವಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಈಗ ತಮ್ಮ ಸಂಪುಟ ವಿಸ್ತರಣೆ, ಪುನಾರಚನೆಗೆ ಕೈಹಾಕುವ ಗಟ್ಟಿ ಮನಸ್ಸು ಮಾಡಿದ್ದಾರೆ.

ಹೀಗಾಗಿ ಬರುವ 24ರಂದು ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷ ಸೋನಿಯಾಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಲಿದ್ದಾರೆ. ಎಲ್ಲವೂ ಅಂದುಕೊಂಡತೆ ನಡೆದರೆ ಪಕ್ಷ ಮಾಸದ ಬಳಿಕ ಬರುವ ಆಶ್ವಯುಜದಲ್ಲಿ ಅಂದರೆ ದಸರೆಯ ಆರಂಭದಲ್ಲೇ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆಯಲ್ಲಿ ವೈಯಕ್ತಿಕವಾಗಿ ತಾವು ಸೋತರೂ ರಾಜ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಡಾ.ಜಿ. ಪರಮೇಶ್ವರ್ ಅವರ ಉಪ ಮುಖ್ಯಮಂತ್ರಿ ಆಗುವ ಕನಸು ಕೂಡ ಈ ವಿಸ್ತರಣೆ ವೇಳೆ ಈಡೇರುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ವಿಸ್ತರಣೆ ಮತ್ತು ಪುನಾರಚನೆ ವೇಳೆ ತಮಗೆ ಕೊಟ್ಟ ಖಾತೆ ಸರಿಯಾಗಿ ನಿರ್ವಹಿಸದ, ಆರೋಗ್ಯದ ಸಮಸ್ಯೆ ಇರುವ, ವಯಸ್ಸಾಗಿರುವ ಕೆಲವು  ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ಲಭ್ಯ ಮಾಹಿತಿ ಪ್ರಕಾರ, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ,  ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪಾಟೀಲ್, ವಸತಿ ಸಚಿವ ಅಂಬರೀಷ್, ಪೌರಾಡಳಿತ ಸಚಿವ ಖಮರುಲ್‌ ಇಸ್ಲಾಂ, ಸಣ್ಣ ನೀರಾವರಿ ಸಚಿವ ಶಿವರಾಜ್‌ ತಂಗಡಗಿ, ಕ್ರೀಡಾ ಸಚಿವ ಅಭಯಚಂದ್ರಜೈನ್‌, ಕಾರ್ಮಿಕ ಸಚಿವ ಪರಮೇಶ್ವರ ನಾಯಕ್,  ಒಳನಾಡು ಸಾರಿಗೆ ಸಚಿವ ಬಾಬುರಾವ್‌ ಚಿಂಚನಸೂರ್‌ ಸಂಪುಟದಿಂದ ಹೊರ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲವೇ ಇವರ ಖಾತೆಗಳಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಿ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆತಲ್ಲಿ, ತೆರವಾಗುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅಥವಾ ಕೃಷ್ಣ ಬೈರೇಗೌಡ  ಇವರಲ್ಲಿ ಒಬ್ಬರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

 ಮುಖಪುಟ /ಸುದ್ದಿ ಸಮಾಚಾರ