ಮುಖಪುಟ /ಸುದ್ದಿ ಸಮಾಚಾರ

ಕಾರ್ನಾಡ್ ಅಭಿನಂದನೆ

karnadಬೆಂಗಳೂರು, ಸೆ. ೨೦: ಒಂದು ದಶಕದ ಬಳಿಕ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗೌರವ ತಂದುಕೊಟ್ಟಿರುವ ಡಾ. ಚಂದ್ರಶೇಖರ ಕಂಬಾರರಿಗೆ ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ ಅಭಿನಂದಿಸಿದ್ದಾರೆ.

ಕನ್ನಡರತ್ನ.ಕಾಂನೊಂದಿಗೆ ಮಾತನಾಡಿದ ಅವರು, ಕಂಬಾರರಿಗೆ ಬಹಳ ಹಿಂದೆಯೇ ಈ ಪ್ರಶಸ್ತಿ ಬರಬೇಕಿತ್ತು. ತಡವಾಗಿ ಬಂದಿದೆ. ತಮಗೆ ಪ್ರಶಸ್ತಿ ಬಂದಾಗಲೂ ತಾವು ಈ ಪ್ರಶಸ್ತಿಗೆ ಪಿ. ಲಂಕೇಶ್, ಪೂರ್ಣಚಂದ್ರತೇಜಸ್ವಿ ಹಾಗೂ ಕಂಬಾರರು ಅರ್ಹರಾಗಿದ್ದರು ಎಂದು ತಿಳಿಸಿದ್ದೆ ಎಂದು ನೆನಪಿಸಿಕೊಂಡರು.

ಕಂಬಾರರು ನಾಟಕಕಾರರಾಗಿ, ನಟರಾಗಿ, ಸಂಗೀತ ನಿರ್ದೇಶಕರಾಗಿ, ಕವಿಯಾಗಿ, ಕಾದಂಬರಿಕಾರರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೃಷಿ ಮಾಡಿದ್ದಾರೆ. ಜಾನಪದ ರಂಗಭೂಮಿಯನ್ನು ನಾಗರಿಕ ರಂಗಭೂಮಿಗೆ ತಂದ ಹಿರಿಮೆ ಅವರದು. ತಮ್ಮ ಮೇಲೆ ಕೂಡ ಕಂಬಾರರ ಪ್ರಭಾವ ಇದೆ ಎಂದು ಹೇಳಿದರು.

ಸಂಶೋಧಕ ಮನೋಧರ್ಮದ ಕಂಬಾರರಿಗೆ ಸೂಕ್ತ ಮನ್ನಣೆ ಸಿಕ್ಕಿದೆ ಎಂದು ಅವರು ಅಭಿನಂದಿಸಿದರು.

ಮುಖಪುಟ /ಸುದ್ದಿ ಸಮಾಚಾರ