ಮುಖಪುಟ /ಸುದ್ದಿ ಸಮಾಚಾರ   
 

ಸೆ.18ರಂದು ವಿಷ್ಣು ಜನ್ಮದಿನ - ಚಿತ್ರೋತ್ಸವ

Dr. Vishnuvardhanಬೆಂಗಳೂರು, ಸೆ.13 - ಕಳೆದ ವರ್ಷಾಂತ್ಯದಲ್ಲಿ ನಿಧನರಾದ ಕನ್ನಡದ ಹೆಸರಾಂತ ನಾಯಕ ನಟ ಡಾ. ವಿಷ್ಣುವರ್ಧನ್ ಅವರ 6೦ನೇ ಜನ್ಮದಿನದ ಅಂಗವಾಗಿ ಮೂರು ದಿನಗಳ ಚಿತ್ರೋತ್ಸವ ಹಮ್ಮಿಕೊಂಡಿರುವುದಾಗಿ ವಿಷ್ಣುವರ್ಧನ್ ಅವರ ಪತ್ನಿ ಹಾಗೂ ಚಿತ್ರನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ೧೮ರಂದು ವಿಷ್ಣುವರ್ಧನ್ ಅವರ ಸಮಾಧಿ ಸ್ಥಳ ಅಭಿಮಾನ್ ಸ್ಟುಡಿಯೋದಲ್ಲಿ ಹುಟ್ಟು ಹಬ್ಬ ಹಮ್ಮಿಕೊಳ್ಳಲಾಗಿದೆ.

ಸೆ.17ರಂದು ಬೆಂಗಳೂರಿನ ಗರುಡಾ ಮಾಲ್‌ನಲ್ಲಿರುವ ಐನಾಸ್ಕ್ ಚಿತ್ರ ಮಂದಿರದಲ್ಲಿ ನಾಗರಹಾವು, ಮಲಯಮಾರುತ, ಸುಪ್ರಭಾತ, ವೀರಪ್ಪನಾಯಕ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

18ರಂದು ಬಂಧನ, ಸಿಂಹಾದ್ರಿಯ ಸಿಂಹ, ದಿಗ್ಗಜರು, ಕರ್ಣ, ೧೯ರಂದು ಯಜಮಾನ, ಮುತ್ತಿನ ಹಾರ, ಬಂಗಾರದ ಜಿಂಕೆ, ಲಾಲಿ ಚಿತ್ರ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

೧೭ರಂದು ಬೆಳಗ್ಗೆ ಚಿತ್ರೋತ್ಸವ ನಾಗಲಕ್ಷ್ಮೀ, ಪುಟ್ಟಣ್ಣ ಕಣಗಾಲ್ ಹಾಗೂ ಐನಾಸ್ಕ್ ಚಿತ್ರಮಂದಿರಗಳಲ್ಲಿ ಆರಂಭವಾಗಲಿದ್ದು, ಸಂಸದ ಅನಂತ್ ಕುಮಾರ್, ಹಿರಿಯ ಕಲಾವಿದೆ ಬಿ. ಸರೋಜಾ ದೇವಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಚಿತ್ರಲೋಕಾ.ಕಾಂನ ವೀರೇಶ್ ನಿರ್ಮಿಸಿರುವ ವಿಷ್ಣುವರ್ಧನ್ ಕುರಿತ ವೆಬ್‌ಸೈಟ್‌ಗೆ ಭಾರತಿ ವಿಷ್ಣುವರ್ಧನ್ ಚಾಲನೆ ನೀಡಿದರು.

ಸಮಾಧಿ ಸ್ಥಳಕ್ಕೆ ಭೇಟಿ

ಇದಕ್ಕೂ ಮುನ್ನ ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳಕ್ಕೆ ಇಂದು ಶಾಸಕಿ ಹಾಗೂ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ ಭೇಟಿ ನೀಡಿದ ಭಾರತಿ ವಿಷ್ಣುವರ್ಧನ್, ವಿಷ್ಣು ಸ್ಮಾರಕದ ಕಾಮಗಾರಿಯನ್ನು ವೀಕ್ಷಿಸಿದರು.

 ಮುಖಪುಟ /ಸುದ್ದಿ ಸಮಾಚಾರ