ಮುಖಪುಟ /ಸುದ್ದಿ ಸಮಾಚಾರ   

ಡಿಸೆಂಬರ್ ನಲ್ಲಿ 77ನೇ ಕನ್ನಡ ಸಾಹಿತ್ಯ ಸಮ್ಮೇಳನ

kasapa logoಬೆಂಗಳೂರು, ಸೆ. ೨೪- ಅಖಿಲ ಭಾರತ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗುವುದು ಎಂದು ಎಂದು ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಮೂರು ದಿನಗಳ ಕಾಲ ನಡೆಯಲಿರುವ ಈ ಬಾರಿಯ ಸಮ್ಮೇಳನಕ್ಕೆ ೫ ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ ಎಂದರು.

ಪ್ರತಿ ಬಾರಿ ಸಾಹಿತ್ಯ ಸಮ್ಮೇಳನ ನಡೆದಾಗಲೂ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ನೀಡುತ್ತಿತ್ತು. ಈ ಬಾರಿ ಅದನ್ನು ೧.೫ ಕೋಟಿ ರೂಪಾಯಿಗೇರಿಸಲಾಗುವುದು, ಐ.ಟಿ.ಬಿ.ಟಿ ಜನರಿಂದ ಕೂಡ ಕನ್ನಡ ಹಬ್ಬಕ್ಕೆ ದೇಣಿಗೆ ಸಂಗ್ರಹಿಸಲಾಗುವುದು. ಸಮ್ಮೇಳನ ಮುಗಿದ ಬಳಿಕ ಉಳಿವ ಹಣದಿಂದ ಬೆಂಗಳೂರಿನಲ್ಲಿ ಶಾಶ್ವತವಾಗಿ ಸಮ್ಮೇಳನದ ನೆನಪಿನ ಸ್ಮಾರಕ ಭವನ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಬಿಬಿಎಂಪಿ ವತಿಯಿಂದ ೧ ಕೋಟಿ ರೂಪಾಯಿ, ಶಾಸಕರು, ಸಚಿವರು ತಿಂಗಳ ವೇತನ ದೇಣಿಗೆ ನೀಡಲಿದ್ದಾರೆ ಎಂದು ಅಶೋಕ್ ಸ್ಪಷ್ಟಪಡಿಸಿದರು.

ಎಲ್ಲ ೨೮ ವಿಧಾನಸಭೆ ಕ್ಷೇತ್ರದಲ್ಲಿ ನುಡಿ ತೇರು ಜಾಥಾ ಆಯೋಜಿಸಲಾಗುವುದು. ಈ ಬಾರಿಯ ಸಮ್ಮೇಳನದಲ್ಲಿ ಊಟೋಪಚಾರದ ಕಡೆಗೂ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಅಶೋಕ್ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರ್ ಪ್ರಸಾದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಚಿವರು, ಶಾಸಕರು ಸಭೆಯಲ್ಲಿ ಹಾಜರಿದ್ದರು.

ಮುಖಪುಟ; /ಸುದ್ದಿ ಸಮಾಚಾರ