ಮುಖಪುಟ /ಸುದ್ದಿ ಸಮಾಚಾರ   
 

ಕಾಂಗ್ರೆಸ್ ನಿರೀಕ್ಷೆ ಹುಸಿ, ಫಲಕೊಡದ ಪಾದಯಾತ್ರೆ

bjpಬೆಂಗಳೂರು, ಸೆ.೧೬- ಗಣಿ ಹಗರಣದ ವಿಚಾರದಲ್ಲಿ ಆಡಳಿತ ಪಕ್ಷದ ವಿರುದ್ಧ ಸಮರ ಸಾರಿ, ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡ ಹಿನ್ನೆಲೆಯಲ್ಲಿ ಪಕ್ಷ ಬೇರುಮಟ್ಟದಿಂದ ಬಲಗೊಂಡಿದೆ. ಈ ಹಿನ್ನೆಲೆಯಲ್ಲಿ ಕಡೂರು ಹಾಗೂ ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ ಎಂಬ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ.

ರಾಜ್ಯದ ಮತದಾರರು ಮೂರೂ ಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನಿಸುವ ರೀತಿಯಲ್ಲಿ ತಮ್ಮ ತೀರ್ಪು ನೀಡಿದ್ದಾರೆ.

ಅಧಿಕಾರ ಹಣದಿಂದ ಚುನಾವಣೆ ಗೆಲುವು ಸಾಧ್ಯವಿಲ್ಲ ಎಂಬುದನ್ನು ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಮತದಾರರು ಸ್ಪಷ್ಟಪಡಿಸಿದ್ದರೆ, ಆಂತರಿಕ ಒಡಕು ಪಕ್ಷವನ್ನು ಹೇಗೆ ನಾಶ ಮಾಡುತ್ತದೆ ಎಂಬ ಸಂದೇಶವನ್ನು ಕಾಂಗ್ರೆಸ್‌ಗೆ ಕಡೂರು ಹಾಗೂ ಗುಲ್ಬರ್ಗಾ ಕ್ಷೇತ್ರಗಳೆರಡರಲ್ಲೂ ಮತದಾರರು ಬಹಿರಂಗ ಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಪಾದಯಾತ್ರೆಯಿಂದ ರಾಜ್ಯದಲ್ಲಿ ಮತ್ತೆ ಗರಿಗೆದರಿದೆ. ಬಲಗೊಂಡಿದೆ. ಈ ಬಾರಿ ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಉಂಟುಮಾಡಲಿದೆ ಎಂಬ ಎಲ್ಲ ಊಹಾ ಪೋಹಗಳಿಗೂ ಅಂತಿಮ ತೆರೆ ಬಿದ್ದಂತಾಗಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ್ಯೂ, ಗುಲ್ಬರ್ಗಾ ಜಿಲ್ಲೆಯ ಮಲ್ಲಿಕಾರ್ಜುನ ಖರ್ಗೆ ಅವರೇ ಕೇಂದ್ರ ಸಂಪುಟದಲ್ಲಿ ಮಂತ್ರಿಗಳಾಗಿದ್ದು, ಅದೆಲ್ಲಕ್ಕಿಂತ ಮಿಗಿಲಾಗಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಕಣದಲ್ಲಿದ್ದರೂ ಕಾಂಗ್ರೆಸ್ ಗೆಲವು ಸಾಧಿಸಲಾಗದಿರುವುದು. ಪಕ್ಷದ ವರ್ಚಸ್ಸು ಕ್ಷೀಣಿಸಿದೆ ಎಂಬುದರ ಧ್ಯೋತಕವಾಗಿದೆ. ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಬಹುತೇಕ ಸಚಿವರು, ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿದ್ದರೂ ಪಕ್ಷ ಗಟ್ಟಿಗೊಳ್ಳದಿರುವುದು ಆ ಪಕ್ಷಕ್ಕೆ ತೀವ್ರ ಆತಂಕ ಉಂಟು ಮಾಡಿದೆ.

ಈ ನಿಟ್ಟಿನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್ ಮತ್ತಷ್ಟು ಹೆಚ್ಚಿನ ಶ್ರಮ ವಹಿಸಿ, ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕಾದ ಅಗತ್ಯವಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

ಈ ಮಧ್ಯೆ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ರಾಜಕಾರಣಿ ಹಾಗೂ ವಿಧಾನಪರಿಷತ್ ಸದಸ್ಯ ವೈ.ಎಸ್.ವಿ. ದತ್ತ ಭಾರೀ ಅಂತರದಿಂದ ಪರಾಭವಗೊಂಡಿರುವುದು ರಾಜಕೀಯ ವಲಯದಲ್ಲಿ ಅದರಲ್ಲೂ ಜೆಡಿಎಸ್‌ಗೆ ದಿಗ್ಭ್ರಮೆ ಮೂಡಿಸಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೆಲ್ಲರೂ ಒಗ್ಗೂಡಿ ಪ್ರಚಾರ ಮಾಡಿಯೂ ಪಕ್ಷ ಇಷ್ಟು ಅಂತರದಿಂದ ಸೋಲನುಭವಿಸಿರುವುದು ಹಲವರಲ್ಲಿ ಅಚ್ಚರಿ ತಂದಿದೆ.

ವಾಸ್ತವವಾಗಿ ಕಡೂರು ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದರೂ, ಹಾಸನ ಲೋಕಸಭಾ ಕ್ಷೇತ್ರದ ಭಾಗವೇ ಆಗಿದ್ದು, ಇಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವರ್ಚಸ್ಸು ಕೆಲಸ ಮಾಡಿಲ್ಲ. ಬಿಜೆಪಿ ಇದೇ ಮೊದಲ ಬಾರಿಗೆ ಈ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ.

ಗುಲ್ಬರ್ಗಾದಲ್ಲಿ ಅನುಕಂಪದ ಮತಗಳು ಜೆಡಿಎಸ್‌ಗೆ ವರದಾನವಾಗಿ ಪರಿಣಮಿಸಿದ್ದು, ಅಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡ ಆಡಳಿತಾರೂಢ ಬಿಜೆಪಿ ಕಡೂರಿನಲ್ಲಿ ಪಡೆದ ಹಿನ್ನೆಲೆಯಲ್ಲಿ ಆ ಪಕ್ಷಕ್ಕೆ ಯಾವುದೇ ನಷ್ಟವೂ ಲಾಭವೂ ಆಗಿಲ್ಲ. ಆದರೆ, ಜೆಡಿಎಸ್ ವಿಧಾನಸಭೆಯಲ್ಲಿ ತನ್ನ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿದ್ದಷ್ಟೇ ಅಲ್ಲದೆ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ತನ್ನ ನೆಲೆಯೊಂದನ್ನು ಭದ್ರಪಡಿಸಿಕೊಂಡಿದೆ. ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ೧೫ ಸಚಿವರು ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ಗಲ್ಲಿ ಗಲ್ಲಿ ಸುತ್ತಿ ಮತ ಯಾಚನೆ ಮಾಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಒಟ್ಟಾರೆಯಾಗಿ ರಾಜ್ಯ ರಾಜಕೀಯದಲ್ಲಿ ಅಂಥಹ ಬಿರುಗಾಳಿಯೇನೂ ಸಧ್ಯಕ್ಕೆ ಬೀಸುವ ಸಾಧ್ಯತೆ ಇಲ್ಲ ಎಂಬುದುನ್ನು ಈ ಫಲಿತಾಂಶ ಸ್ಪಷ್ಟಪಡಿಸಿದೆ.

 ಮುಖಪುಟ /ಸುದ್ದಿ ಸಮಾಚಾರ