ಮುಖಪುಟ /ಸುದ್ದಿ ಸಮಾಚಾರ   
 

ವೈಶಾಲಿ ಕಾಸರವಳ್ಳಿ ನಿಧನ

vishali Kasaravalliಬೆಂಗಳೂರು, ಸೆ.೨೭ - ಕನ್ನಡದ ಹೆಸರಾಂತ ನಟಿ, ನಿರ್ದೇಶಕಿ, ವಸ್ತ್ರವಿನ್ಯಾಸಗಾರ್ತಿ ವೈಶಾಲಿ ಕಾಸರವಳ್ಳಿ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನಹೊಂದಿದರು. ಅವರಿಗೆ ೫೮ ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲ ಕಾಣದೆ ವಿಧಿವಶರಾದರು.

೧೯೫೨ರ ಏಪ್ರಿಲ್ ೧೨ರಂದು ಗುಲ್ಬರ್ಗಾದಲ್ಲಿ ಹುಟ್ಟಿದ ವೈಶಾಲಿ ಅವರು, ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಪ್ರವೇಶಿಸಿದರು. ಯಾವ ಜನ್ಮದ ಮೈತ್ರಿ ಅವರು ನಟಿಸಿದ ಮೊದಲ ಚಿತ್ರ.

ನಂತರ ಭೂತಯ್ಯನ ಮಗ ಅಯ್ಯು, ಕಿಟ್ಟುಪುಟ್ಟು, ಮಮತೆಯ ಮಡಿಲಲ್ಲಿ, ಶಂಕರ್ ಗುರು, ಆಕ್ರಮಣ, ಯಾರಿಗೂ ಹೇಳಬೇಡಿ, ಅಪ್ಸರೆ, ಕ್ರೌರ್ಯ, ಗಣೇಶನ ಮದುವೆ, ಆಸೆಗೊಬ್ಬ ಮೀಸೆಗೊಬ್ಬ, ಮಹಾ ದಾಸೋಹಿ ಶರಣ ಬಸವೇಶ್ವರ, ಚಂದ್ರಮುಖಿ ಪ್ರಾಣಸಖಿ ಸೇರಿದಂತೆ ಸುಮಾರು ೭೫ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು.

ಶಂಕರ್ ಗುರು, ಹೊಂಬಿಸಿಲು ಚಿತ್ರಗಳಲ್ಲಿ ಪ್ರಧಾನ ಪಾತ್ರದಲ್ಲಿ ಅನುಕ್ರಮವಾಗಿ ಡಾ.ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರೊಂದಿಗೆ ವೈಶಾಲಿ ಕಾಸರವಳ್ಳಿ ನಟಿಸಿದ್ದರು.

ಆಕ್ರಮಣ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದ ಅವರು, ತಾಯಿ ಸಾಹೇಬ ಚಿತ್ರದ ವಸ್ತ್ರ ವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿಗೂ ಭಾಜನರಾಗಿದ್ದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

ಮಾಲ್ಗುಡಿ ಡೇಸ್ ಸೇರಿದಂತೆ ಹಲವು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಮುತ್ತಿನ ತೋರಣ ಧಾರಾವಾಹಿಯ ನಿರ್ದೇಶನವನ್ನೂ ಮಾಡಿದ್ದರು. ಅವರ ಪತಿ ಗಿರೀಶ್ ಕಾಸರವಳ್ಳಿ ಹೆಸರಾಂತ ನಿರ್ದೇಶಕರಾಗಿದ್ದು, ಅವರ ಪುತ್ರಿ ಅನನ್ಯ ಕಾಸರವಳ್ಳಿ ಹಾಗೂ ಮಗ ಅಪೂರ್ವ ಕಾಸರವಳ್ಳಿ ಸಹ ಚಿತ್ರರಂಗದಲ್ಲಿ ಮತ್ತು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ವೈಶಾಲಿ ಅವರ ನಿಧನಕ್ಕೆಕೇಂದ್ರ ಸಚಿವ ವೀರಪ್ಪಮೊಯ್ಲಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್, ಮಾಜಿ ಅಧ್ಯಕ್ಷೆ ಜಯಮಾಲಾ ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

 

 

 ಮುಖಪುಟ /ಸುದ್ದಿ ಸಮಾಚಾರ