ಮುಖಪುಟ /ಸುದ್ದಿ ಸಮಾಚಾರ   
 

ಕಾಂಗ್ರೆಸ್ ಕಡೂರಿನಿಂದ ಪಾದಯಾತ್ರೆ ಮಾಡಲಿ

K.S. Eswarappaಬೆಂಗಳೂರು, ಸೆ.16 -ಕಡೂರು ಹಾಗೂ ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅನ್ನು ರಾಜ್ಯದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದು, ರಾಜ್ಯದಲ್ಲಿ ಆ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಕಡೂರು ಚುನಾವಣೆಯಲ್ಲಿ ನಿರೀಕ್ಷೆಯಂತೆ ತಮ್ಮ ಪಕ್ಷ ಪ್ರಚಂಡ ಗೆಲವು ಸಾಧಿಸಿದೆ. ಗುಲ್ಬರ್ಗಾದಲ್ಲಿ ಅರುಣಾ ರೇವೂರು ಅವರು ಅನುಕಂಪದ ಮತಗಳಿಂದ ಜಯಸಾಧಿಸಿದ್ದಾರೆ. ಇದು ಜೆಡಿಎಸ್ ಗೆಲುವಲ್ಲ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಅವರು ಉಪ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಫತನವಾಗುತ್ತದೆ ಎಂಬ ಭವಿಷ್ಯ ನುಡಿದಿದ್ದರು. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಯಾವುದೇ ಚುನಾವಣೆ, ಉಪ ಚುನಾವಣೆ ಆದರೂ ಕಾಂಗ್ರೆಸ್ ಸರ್ಕಾರದ ಪತನದ ಕನಸು ಕಾಣುತ್ತಾರೆ. ಕೊನೆಗೆ ಅವರೇ ಭ್ರಮನಿರಸನ ಹೊಂದುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ನಾಯಕರು  ತೊಡೆ ತಟ್ಟಿ, ಪಂಚೆ ಮೇಲೆತ್ತಿಕಟ್ಟಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು, ಈಗ ಅವರು ಕಡೂರಿನಿಂದ ತೀರ್ಥಯಾತ್ರೆಗೆ ಹೋಗುವುದು ಉತ್ತಮ ಎಂದು ಈಶ್ವರಪ್ಪ ಕುಹಕವಾಡಿದರು.

ಖರ್ಗೆ ಮತ್ತು ಧರಂಸಿಂಗ್ ಗುಲ್ಬರ್ಗಾ ಜಿಲ್ಲೆಯ ಮಹಾ ದೊರೆಗಳಾಗಿ, ಕಳೆದ ೬ ದಶಕಗಳಿಂದ ಅಲ್ಲಿಯೇ ರಾಜಕೀಯ ಮಾಡುತ್ತಿದ್ದಾರೆ. ಚಿತ್ತಾಪೂರ, ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಚುನಾವಣೆಯಲ್ಲಿ ಅವರಿಬ್ಬರ ಮಕ್ಕಳೂ ಸೋಲನುಭವಿಸಿದ್ದು, ಅವರ ವರ್ಚಸ್ಸು ಸಂಪೂರ್ಣ ಆಕ್ಷೇತ್ರಗಳಲ್ಲಿ ಕುಂದಿದೆ ಎಂಬುದರ ಧ್ಯೋತಕವಾಗಿದೆ. ಇನ್ನು ಇಲ್ಲಿ ಇವರ ಆಟ ನಡೆಯುವುದಿಲ್ಲ ಎಂಬುದನ್ನು ಮತದಾರ ಸ್ಪಷ್ಟ ಪಡಿಸಿದ್ದಾರೆ ಎಂದು ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ