ಮುಖಪುಟ /ಸುದ್ದಿ ಸಮಾಚಾರ   
 

ಸಿದ್ದರಾಮಯ್ಯ ರಾಜೀನಾಮೆ ಅತುರದ ಕ್ರಮ - ದೇಶಪಾಂಡೆ

ಬೆಂಗಳೂರು, ಸೆ.೧೬ - ಉಪ ಚುನಾವಣೆ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ವಿಧಾನಸಭೆಯ ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ. ಇದು ಆತುರದ ಕ್ರಮ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೋಲಿಗೆ ತಾವೂ ಸೇರಿದಂತೆ ಎಲ್ಲರೂ ಹೊಣೆಗಾರರು. ಜನರು ನೀಡಿರುವ ಆದೇಶವನ್ನು ನಾವು ತಲೆ ಬಾಗಿ ಸ್ವೀಕರಿಸುತ್ತೇವೆ. ಆದರೆ, ಆಡಳಿತಾರೂಢ ಬಿಜೆಪಿ ಅಧಿಕಾರದ ದುರುಪಯೋಗದ ಜೊತೆಗೆ ಹಣಬಲ, ತೋಳ್ಬಲದ ಮೂಲಕ ಕಡೂರಿನಲ್ಲಿ ಜಯ ಸಾಧಿಸಿದೆ. ಇದು ಆ ಪಕ್ಷದ ಜಯವಲ್ಲ ಎಂದು ತಿರುಗೇಟು ನೀಡಿದರು.

ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್‌ನ ಅಭ್ಯರ್ಥಿ ಗೆಲುವಿಗೆ ಅನುಕಂಪದ ಮತಗಳು ಕಾರಣವಾಗಿದೆ ಎಂದು ವಿಶ್ಲೇಷಿಸಿದ ಅವರು, ಕಡೂರಿನಲ್ಲಿ ಕೃಷ್ಣಮೂರ್ತಿ ಅವರ ಪತ್ನಿ ಸುಜಾತಾ ಕೃಷ್ಣಮೂರ್ತಿ ಅವರು ಚುನಾವಣೆಯ ಕಣಕ್ಕಿಳಿಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಲ್ಲಿ ಆ ಅಲೆ ಏಳಲಿಲ್ಲ ಎಂದು ವ್ಯಾಖ್ಯಾನಿಸಿದರು.

ಪಕ್ಷದ ಸೋಲಿಗೆ ಕಾರಣಗಳೇನು ಎಂಬುದನ್ನು ಪರಾಮರ್ಶಿಸುತ್ತೇವೆ. ಕೇವಲ ಉಪ ಚುನಾವಣೆ ಸೋಲಿನಿಂದ ತತ್ತರಿಸಿ ಮೂಲೆಸೇರುವ ಪಕ್ಷ ಕಾಂಗ್ರೆಸ್ ಅಲ್ಲ. ಇದಕ್ಕೆ ಶತಮಾನಗಳ ಇತಿಹಾಸವಿದೆ. ನಾವು ಮತ್ತೆ ಗರಿಗೆದರುತ್ತೇವೆ. ಪಕ್ಷದಲ್ಲಿರುವ ಒಡಕನ್ನು ನಿವಾರಿಸಿಕೊಂಡು ಮುಂಬರುವ ಚುನಾವಣೆಗಳಿಗೆ ಅಣಿಯಾಗುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗುಲ್ಬರ್ಗಾ ದಕ್ಷಿಣ ಹಾಗೂ ಕಡೂರು ವಿಧಾನಸಭೆ ಸೋಲಿನ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಂದ ವರದಿ ತರಿಸಿಕೊಳ್ಳುವುದಾಗಿ ತಿಳಿಸಿದ ಅವರು, ಈ ಬಗ್ಗೆ ಎಲ್ಲ ಮಾಹಿತಿಯನ್ನು ಪಕ್ಷದ ಹೈಕಮಾಂಡ್‌ಗೆ ನೀಡುವುದಾಗಿ ತಿಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ