ಮುಖಪುಟ /ಸುದ್ದಿ ಸಮಾಚಾರ   
 

ಪಾಂಡವಪುರದಲ್ಲಿ 22ರಿಂದ 3ದಿನ ಭಾರತ ನಿರ್ಮಾಣ

Bharath Nirmanಮಂಡ್ಯ, ಸೆ.16 : ಭಾರತ ಸರ್ಕಾರದ ವಾರ್ತಾ ಶಾಖೆ, ಕೇಂದ್ರ ಸರ್ಕಾರದ ಸಮಾಚಾರ ಹಾಗೂ ಪ್ರಸಾರ ಸಚಿವಾಲಯದ ಇತರ ಮಾಧ್ಯಮ ಘಟಕ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮಂಡ್ಯ ಹಾಗೂ ಪಾಂಡವಪುರ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿಯ ಸಹಯೋಗದಲ್ಲಿ ಸಕ್ಕರೆಯ ನಾಡು ಪಾಂಡವಪುರದ ತಾಲೂಕು ಕ್ರೀಡಾಂಗಣದಲ್ಲಿ ಬರುವ ೨೨ರಿಂದ ಮೂರು ದಿನಗಳ ಕಾಲ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನವನ್ನು ಹಮ್ಮಿಕೊಂಡಿದೆ.

ಸಮಾಜದ ಎಲ್ಲರಿಗೂ ಆರೋಗ್ಯ, ಆಹಾರ, ಆಶ್ರಯ ಒದಗಿಸುವ ಭಾರತ ಸರ್ಕಾರದ ಸಂಕಲ್ಪ ಹಾಗೂ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಮೂರೂ ದಿನಗಳ ಕಾಲ ಮೈದಾನದಲ್ಲಿ ನಡೆಯಲಿರುವ ವಸ್ತು ಪ್ರದರ್ಶನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮಳಿಗೆಯನ್ನು ತೆರೆಯಲಿದ್ದು, ತಮ್ಮ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಸಚಿತ್ರ ಮಾಹಿತಿಯನ್ನು ಪೂರೈಸಲಿವೆ.

ಮೂರೂ ದಿನಗಳ ಕಾಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಡ ರೋಗಿಗಳ ಅನುಕೂಲಕ್ಕಾಗಿ ಬೆಳಗ್ಗೆ ೧೦ರಿಂದ ಸಂಜೆ ೫ಗಂಟೆಗಳ ವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.

ಸ್ವಾತಂತ್ರ್ಯದ ಹೊಸ ಹಾದಿಯಲ್ಲಿ ಸಾಗೋಣ ಎಂಬ ಘೋಷ ವಾಕ್ಯದೊಂದಿಗೆ ಯಲಹಂಕ, ಚಿಕ್ಕಬಳ್ಳಾಪುರ, ಮುಳಬಾಗಿಲು, ಯಾದಗಿರಿ, ಗುಂಡ್ಲುಪೇಟೆ, ಬಸವಕಲ್ಯಾಣ, ತಿಪಟೂರು ತಾಲೂಕು ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆದಿರುವ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನವನ್ನು ಪಾಂಡವಪುರದಲ್ಲಿ ಆಯೋಜಿಸಲಾಗಿದ್ದು, ಪಾಂಡವಪುರ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಕೇಂದ್ರ ಹಾಗೂ ರಾಜ್ಯಸರ್ಕಾರದ ವಿವಿಧ ಜನಪರ ಯೋಜನೆಗಳ ಮಾಹಿತಿಯನ್ನು ಒದಗಿಸಿ, ಆ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಪ್ರಯೋಜನ ದೊರಕುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

೨೨ರಂದು ಬುಧವಾರ ಬೆಳಗ್ಗೆ ೧೧ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದ್ದು, ೨೩ರಂದು ಮಹಿಳಾ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳು, ಕೌಟುಂಬಿಕ ಹಿಂಸಾಚಾರ ನಿಯಂತ್ರಣ ಕಾಯಿದೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಹಾಗೂ ಸಂಪೂರ್ಣ ಸ್ವಚ್ಛತಾ ಆಂದೋಲನ ಕುರಿತು ಗೋಷ್ಠಿಗಳು ನಡೆಯಲಿದ್ದು, ಆಯಾ ಇಲಾಖೆಯ ಉನ್ನತಾಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ.

ಮಧ್ಯಾಹ್ನ ಪ್ರಧಾನ ಮಂತ್ರಿಗಳ ಉದ್ಯೋಗ ಖಾತ್ರಿ ಯೋಜನೆ, ತಂಬಾಕು ದುಷ್ಪರಿಣಾಮಗಳು, ಯುವಜನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗೋಷ್ಠಿ ನಡೆಯಲಿದೆ.

೨೪ರಂದು ಬೆಳಗ್ಗೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ, ಮಾಹಿತಿ ಹಕ್ಕು ಕಾಯಿದೆ, ಕಂದಾಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಗೋಷ್ಠಿ ನಡೆಯಲಿದ್ದು, ಅದೇ ದಿನ ಮಧ್ಯಾಹ್ನ ಮಹಾತ್ಮಾಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸಾವಯವ ಕೃಷಿ, ರಾಷ್ಟ್ರೀಯ ತೋಟಗಾರಿಕಾ ಅಭಿಯಾನ ಕುರಿತ ವಿಚಾರ ಗೋಷ್ಠಿ ನಡೆಯಲಿದೆ.

ಎಲ್ಲ ಗೋಷ್ಠಿಗಳ ಅಂತ್ಯದಲ್ಲಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದು, ಸಾರ್ವಜನಿಕರಿಗೆ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಉನ್ನತಾಧಿಕಾರಿಗಳೊಂದಿಗೆ ತಮ್ಮ ದುಃಖ ದುಮ್ಮಾನ ತೋಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿಚಾರಗೋಷ್ಠಿಗಳ ಕೊನೆಯಲ್ಲಿ ಆಯಾ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮುಖ್ಯ ಅತಿಥಿಗಳಿಂದ ಸವಲತ್ತುಗಳನ್ನು ವಿತರಿಸಲಾಗುವುದು.

ಜೊತೆಗೆ ಪ್ರತಿ ದಿನ ಸಂಜೆ ಚಿತ್ರ ಪ್ರದರ್ಶನ ಹಾಗೂ ಜಾನಪದ ರಸಸಂಜೆ ಕಾರ್ಯಕ್ರಮಗಳು ನಡೆಯಲಿವೆ. ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದ ಉಪಯೋಗ ಪಡೆಯುವಂತೆ ಭಾರತ ಸರ್ಕಾರದ ವಾರ್ತಾ ಶಾಖೆ ಪಿಐಬಿ ಮನವಿ ಮಾಡಿದೆ.

 ಮುಖಪುಟ /ಸುದ್ದಿ ಸಮಾಚಾರ