ಮುಖಪುಟ /ಸುದ್ದಿ ಸಮಾಚಾರ   
 

ವಿದ್ಯಾರ್ಥಿಗಳು ವಿಚಾರವಂತರಾಗಬೇಕು
ನ್ಯಾಷನಲ್ ಕಾಲೇಜು ಬಸವನಗುಡಿಯಲ್ಲಿ ಕು|| ವನಿತಾ ಸ್ಮಾರಕ ಕನ್ನಡ ಚರ್ಚಾಸ್ಪರ್ಧೆ

ದಿವಂಗತ ವನಿತಾ, ಪ್ರತಿಭಾವಂತ ಚರ್ಚಾಪಟು, ಬೆಂಗಳೂರು, ಸೆ. ೨೩: ಇಂದು ವಿಶ್ವವಿದ್ಯಾಲಯಗಳಿಂದ ಹೊರಬರುವ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ವಿಚಾರವಂತರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಶನಿವಾರ ಬಸವನಗುಡಿ ನ್ಯಾಷನಲ್ ಕಾಲೇಜು ಹಾಗೂ ಕರ್ನಾಟಕ ಚರ್ಚಾ ವೇದಿಕೆ ಸಂಯುಕ್ತವಾಗಿ ಏರ್ಪಡಿಸಿದ್ದ ಕು. ಎಚ್.ಎಂ. ವನಿತಾ ಸ್ಮಾರಕ ರಾಜ್ಯಮಟ್ಟದ ೭ನೇ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚರ್ಚಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ, ಭಾಷಾ ಪ್ರೌಢಿಮೆ ಹಾಗೂ ಭಾಷಣ ಕಲೆಯನ್ನು ರೂಢಿಸುತ್ತವೆ ಎಂದು ಹೇಳಿದರು.

ಚರ್ಚಾವೇದಿಕೆಯ ಅಧ್ಯಕ್ಷ ಹಾಗೂ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಮಲ್ಲೇಶಯ್ಯ ಇಂದಿನ ಸ್ಪರ್ಧಾಯುಗದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಚರ್ಚಾಸ್ಪರ್ಧೆಗಳು ಬದುಕಿನಲ್ಲಿ ಕಟ್ಟಿಕೊಡುತ್ತವೆ ಎಂದರು.

ಬಸವನಗುಡಿ ನ್ಯಾಷನಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಲೀಲಾವತಿ ಚರ್ಚಾಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಗಳನ್ನು ಜನಪ್ರಿಯಗೊಳಿಸಲು ಕಳೆದ ೧೫ ವರ್ಷಗಳಿಂದ ಶ್ರಮಿಸುತ್ತಿರುವ ಕರ್ನಾಟಕ ಚರ್ಚಾವೇದಿಕೆಯ ಸಾಧನೆಯನ್ನು ಶ್ಲಾಘಿಸಿದರು.

ಸ್ಪರ್ಧಿಗಳ ಕೊರತೆಯಿಂದ ಚರ್ಚಾಸ್ಪರ್ಧೆಗಳನ್ನು ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ ಆದರೆ, ವನಿತಾ ಸ್ಮಾರಕ ಕನ್ನಡ ಚರ್ಚಾಸ್ಪರ್ಧೆಗೆ ರಾಜ್ಯದ ವಿವಿಧ ಮೂಲೆಗಳ ನೂರಕ್ಕೂ ಹೆಚ್ಚು ಕಾಲೇಜುಗಳ ೨೦೦ಕ್ಕೂ ಹೆಚ್ಚು ಸ್ಪರ್ಧಿಗಳು ಆಗಮಿಸಿರುವುದು ಇದರ ಜನಪ್ರಿಯತೆಯನ್ನು ತೋರಿಸುತ್ತದೆ ಎಂದರು.

ಪದವಿ ವಿಭಾಗದಲ್ಲಿ ಪರ್ಯಾಯ ಫಲಕವನ್ನು ಬಸವನಗುಡಿ ನ್ಯಾಷನಲ್ ಕಾಲೇಜು ಪಡೆದರೆ, ಪ್ರಥಮ ಮೂರು ಬಹುಮಾನಗಳನ್ನು ಅನುಕ್ರಮವಾಗಿ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಬಿ.ಕೆ. ರಮ್ಯಶ್ರೀ, ರೂರಲ್ ಕಾಲೇಜು ಕನಕಪುರದ ರಾಗಿಣಿ ಹಾಗೂ ತುಮಕೂರು ವಿದ್ಯೋದಯ ಕಾಲೇಜಿನ ನಿಕೇತ್ ರಾಜ್ ಪಡೆದರು.

ಪದವಿ ಪೂರ್ವ ವಿಭಾಗದಲ್ಲಿ ಪ್ರಥಮ ಮೂರು ಬಹುಮಾನಗಳು ಬಿ.ಎಂ.ಎಂ. ಕಾಲೇಜಿನ ಕೃಷ್ಣಕುಮಾರ್, ಸಿದ್ದಗಂಗಾ ಮಹಿಳಾ ಕಾಲೇಜಿನ ಚೈತ್ರ ಟಿ.ಎಂ ಹಾಗೂ ಜ್ಞಾನೋದಯ ಕಾಲೇಜಿನ ಶ್ರೀನಿಧಿ ಅವರ ಪಾಲಾಯಿತು. ಪರ್ಯಾಯ ಪಾರಿತೋಷಕವನ್ನು ಬೆಂಗಳೂರಿನ ಬಿ.ಎನ್.ಎಂ. ಕಾಲೇಜು ವಿದ್ಯಾರ್ಥಿಗಳು ಪಡೆದರು.

ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಆನಂದ್ ಹಾಗೂ ಹಿರಿಯ ವಕೀಲರಾದ ಜೈಕುಮಾರ್ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರೊ. ಎಚ್.ಕೆ. ಮೌಳೇಶ್, ಪ್ರೊ.ಪ್ರಮೋದ್ ಮುತಾಲಿಕ್, ಉಪ ಪ್ರಾಚಾರ್ಯರಾದ ಪ್ರೊ.ಎಚ್.ಕೆ. ಅಂಬಿಕಾ ಮತ್ತಿತರರು ಪಾಲ್ಗೊಂಡಿದ್ದರು.

 ಮುಖಪುಟ /ಸುದ್ದಿ ಸಮಾಚಾರ