ಮುಖಪುಟ /ಸುದ್ದಿ ಸಮಾಚಾರ

ಕನ್ನಡ ಸಾಹಿತ್ಯ ಸಮ್ಮೇಳನ ೧ ತಿಂಗಳು ಮುಂದೂಡಿಕೆ?

*ಟಿ.ಎಂ.ಸತೀಶ್

ಸಾಹಿತ್ಯ ಸಮ್ಮೇಳನಬೆಂಗಳೂರು, ಅ. ೧೬: ಬರುವ ನವೆಂಬರ್ ೧೮ರಿಂದ ಮೂರು ದಿನಗಳ ಕಾಲ ಕರ್ನಾಟಕದ ಅಕ್ಕಿಯ ಕಣಜ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಸಲುದ್ದೇಶಿಸಿರುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ತಿಂಗಳು ಮುಂದಕ್ಕೆ ಹೋಗುವುದು ಬಹುತೇಕ ಖಚಿತವಾಗಿದೆ.

ಸಮ್ಮೇಳನಕ್ಕೆ ಇನ್ನು ಕೇವಲ ಒಂದು ತಿಂಗಳಷ್ಟೇ ಬಾಕಿ ಇದ್ದುಸಿದ್ಧತೆಗಳು ಆಗಿರುವುದು ಕೇವಲ ಹಿಡಿಯಷ್ಟು. ಆಗಬೇಕಿರುವುದು ಬೆಟ್ಟದಷ್ಟು. ಕೊಪ್ಪಳ ಜಿಲ್ಲೆಯಲ್ಲೇ ಶ್ರೀಮಂತ ಪ್ರದೇಶವಾದ ಗಂಗಾವತಿಯಲ್ಲಿ ಸಂಪನ್ಮೂಲ ಸಂಗ್ರಹಣೆ ಸುಲಭ ಎಂದು ತಿಳಿದುಕೊಂಡಿದ್ದ ಸಾಹಿತ್ಯ ಪರಿಷತ್ತಿಗೆ ಈಗ ಪರಿಸ್ಥಿತಿಯ ಅರಿವಾಗುತ್ತಿದೆ.

ಸಮ್ಮೇಳನಕ್ಕೆ ದಿನ ಗಣನೆ ಆರಂಭವಾಗುವ ಕಾಲ ಹತ್ತಿರವಾಗಿದ್ದರೂ ಇನ್ನೂ ನಿಗದಿತ ಪ್ರಮಾಣದಲ್ಲಿ ಹಣ ಸಂಗ್ರಹಣೆ ಆಗಿಲ್ಲ. ಕೇವಲ ಸಮಿತಿಗಳನ್ನು ರಚಿಸಿಕೊಂಡು, ಕಾಗದ ಪತ್ರದಲ್ಲಿ ಪ್ರಗತಿ ತೋರಿಸುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊನೆ ಗಳಿಗೆಯಲ್ಲಿ ಕೈಚೆಲ್ಲುವ ಭೀತಿ ಎದುರಾಗಿದೆ.

ಕೊಪ್ಪಳ ವಿಧಾನಸಭೆಗೆ ಉಪ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುಂಠಿತಗೊಂಡಿದೆ ಎಂಬುದನ್ನು ಜಿಲ್ಲಾ ಸಚಿವರಾದ ಲಕ್ಷ್ಮಣ ಸವದಿ ಹಾಗೂ ಶಾಸಕ ಪರಣ್ಣ ಮನೋಳಿ ಒಪ್ಪಿಕೊಳ್ಳುತ್ತಾರೆ. ಮಿಗಿಲಾಗಿ ಸಮ್ಮೇಳನವನ್ನು ಕನಿಷ್ಠ ಒಂದು ತಿಂಗಳಾದರೂ ಮುಂದಕ್ಕೆ ಹಾಕಿ ಎಂದು ಈ ಇಬ್ಬರು ಪರಿಷತ್ತಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಕೆಲವರು ಸಮ್ಮೇಳನ ನಿಗದಿತ ಸಮಯಕ್ಕೇ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಗಂಗಾವತಿಯಲ್ಲಿ ಆಗಿರುವ ಸಿದ್ಧತೆ ನೋಡಿದರೆ ಸಮ್ಮೇಳನ ನವೆಂಬರ್ ೧೮ರಂದು ನಡೆಯುವುದು ಬಹುತೇಕ ಅನುಮಾನ.

ಈ ಹಿನ್ನೆಲೆಯಲ್ಲಿ  ಅ.18ರಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್  ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಿದ್ಧತೆಯ ಪರಾಮರ್ಶಾ ಸಭೆ ಸಮ್ಮೇಳನವನ್ನು ನಿಗದಿತ ದಿನಾಂಕದಂದೇ ನಡೆಸಬೇಕೋ ಅಥವಾ ಮುಂದಕ್ಕೆ ಹಾಕಬೇಕೋ ಎಂಬ ತೀರ್ಮಾನ ಕೈಗೊಳ್ಳಲಿದೆ.

ಮುಖಪುಟ /ಸುದ್ದಿ ಸಮಾಚಾರ