ಮುಖಪುಟ /ಸುದ್ದಿ ಸಮಾಚಾರ

ಮತ್ತೂರು ಪಂಚಭೂತಗಳಲ್ಲಿ ಲೀನ
ಹೆಸರಾಂತ ಗಮಕಿ, ವಿದ್ವಾಂಸ ಮತ್ತೂರು ಕೃಷ್ಣಮೂರ್ತಿ ಇನ್ನಿಲ್ಲ

Mattur Krishnamurthy, ಮತ್ತೂರು ಕೃಷ್ಣ ಮೂರ್ತಿ ವಿಧಿವಶಬೆಂಗಳೂರು, ಅ.೭: ನಿನ್ನೆ ಬೆಂಗಳೂರಿನಲ್ಲಿ ನಿಧನರಾದ ಹೆಸರಾಂತ ಸಂಸ್ಕೃತ ವಿದ್ವಾಂಸ, ಪ್ರಖ್ಯಾತ ಗಮಕಿ ಡಾ. ಮತ್ತೂರು ಕೃಷ್ಣಮೂರ್ತಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆ ಮತ್ತೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಇಂದು ಬೆಳಗ್ಗೆ ಮತ್ತೂರಿನ ಶಾರದಾ ಮಂದಿರದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು, ಅಭಿಮಾನಿಗಳು, ಬಂಧುಗಳು ಆಗಮಿಸಿ ಅಂತಿಮ ದರ್ಶನ ಪಡೆದರು.

ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಬಿ.ಜೆ.ಪಿ. ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಇಂದು ಅಗಲಿದ ಚೇತನದ ಅಂತಿಮ ದರ್ಶನ ಪಡೆದರು.

ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಅಂತಿಮ ನಮನ ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ನೀಡಲಾಯಿತು. ನಂತರ ಅವರ ಅಂತ್ಯ ಸಂಸ್ಕಾರ ಶಾಸ್ತ್ರೋಕ್ತವಾಗಿ ನೆರವೇರಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಕೃಷ್ಣಮೂರ್ತಿ ಅವರಿಗೆ  ಬುಧವಾರ ರಾತ್ರಿ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮಲ್ಲೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾಣದೆ ಅವರು ಗುರುವಾರ  ಬೆಳಗ್ಗೆ ೫.೩೦ರ ವೇಳೆಗೆ ಕೊನೆಯುಸಿರೆಳೆದಿದ್ದರು.

ಪ್ರತಿಷ್ಠಿತ ಪದ್ಮಶ್ರೀ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಮತ್ತೂರು ಕೃಷ್ಣಮೂರ್ತಿ ಭಾಜನರಾಗಿದ್ದರು. ತಮ್ಮ ಗೆಳೆಯ ಕೇಶವಮೂರ್ತಿ ಅವರೊಂದಿಗೆ ಸೇರಿ ಕುಮಾರವ್ಯಾಸ ಭಾರತದ ಅವರ ಗಮಕ ವಾಚನಕ್ಕೆ ವ್ಯಾಖ್ಯಾನಕಾರರಾಗಿ ಜನಪ್ರಿಯಗೊಳಿಸಿದ್ದರು.

ಅಂತಿಮ ನಮನ : ಕೃಷ್ಣಮೂರ್ತಿ ಅವರ ಪಾರ್ಥೀವ ಶರೀರವನ್ನು ಗುರವಾರ ದಿನವಿಡೀ ಭಾರತೀಯ ವಿದ್ಯಾಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರುಗಳಾದ ಆರ್. ಅಶೋಕ್, ಸುರೇಶ್‌ಕುಮಾರ್, ಸಂಸದ ಡಿ.ಬಿ. ಚಂದ್ರೇಗೌಡ, ರಾಜ್ಯಸಭಾ ಸದಸ್ಯ ನ್ಯಾ. ರಾಮಾಜೋಯಿಸ್, ವಿಧಾನಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, ವಿಧಾನ ಪರಿಷತ್ ಸದಸ್ಯ ನಟ ಶ್ರೀನಾಥ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಹಾಸನ ಜಿಲ್ಲೆಯ ಮದ್ಲೂರು ಗ್ರಾಮದಲ್ಲಿ ೧೯೨೯ರ ಆಗಸ್ಟ್ ೮ರಂದು ಜನಿಸಿದ ಕೃಷ್ಣಮೂರ್ತಿ ಅವರು, ಬಾಲ್ಯವನ್ನು ಕಳೆದದ್ದು ಶಿವಮೊಗ್ಗ ಜಿಲ್ಲೆ ಮತ್ತೂರಿನಲ್ಲಿ. ವಿದ್ಯಾಭ್ಯಾಸದ ಬಳಿಕ ಬೆಂಗಳೂರು ನಗರ ಸಾರಿಗೆಯಲ್ಲಿ ಕಂಡಕ್ಟರ್ ಆಗಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ  ಉಪ ಸಂಪಾದಕರಾಗಿ ನಂತರ, ೧೯೬೯ರಲ್ಲಿ ಭಾರತೀಯ ವಿದ್ಯಾಭವನದ ರಿಜಿಸ್ಟ್ರಾರ್ ಆಗಿ ಕೆಲಸಕ್ಕೆ ಸೇರಿದರು. ಬಳಿಕ ತಮ್ಮ ಇಡೀ ಜೀವನವನ್ನು ಭಾರತೀಯ ವಿದ್ಯಾಭವನದ ಏಳಿಗೆಗೆ ಮುಡಿಪಾಗಿಟ್ಟರು. 

ಅಲೈ ಒಷೈ, ದೀಪ ಧಾರಿಣಿ, ಹಿಮಾಲಯ ವೀರರು, ರಾಮಕಥಾಸಾರ, ನಮ್ಮೆಲ್ಲರ ಶ್ರೀರಾಮ, ಯೋಗಕ್ಷೇಮಂ ವಹಾಮ್ಯಹಂ, ಗಾಂಧಿ ಉಪನಿಷತ್ ಸೇರಿದಂತೆ ಸುಮಾರು ೪೦ ಪುಸ್ತಕಗಳನ್ನು ಮತ್ತೂರು ಕೃಷ್ಣಮೂರ್ತಿ ರಚಿಸಿದ್ದರು. 

 

 

ಮುಖಪುಟ /ಸುದ್ದಿ ಸಮಾಚಾರ