ಮುಖಪುಟ /ಸುದ್ದಿ ಸಮಾಚಾರ

ದಕ್ಷಿಣ ಗಂಗೆಯ ತೀರ್ಥೋದ್ಭವ

Talakaveriಮಡಿಕೇರಿ, ಅಕ್ಟೋಬರ್ ೧೭: ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮಸ್ಥಳ ತಲಕಾವೇರಿಯ  ಬ್ರಹ್ಮಕುಂಡಿಕೆಯಲ್ಲಿ ಅಕ್ಟೋಬರ್ ೧೭ರ ಸೋಮವಾರ ರಾತ್ರಿ 11.43ಕ್ಕೆ ಸರಿಯಾಗಿ ಕರ್ಕಾಟಕ ಲಗ್ನದಲ್ಲಿ ಪವಿತ್ರ ಕಾವೇರಿ ತಾಯಿ  ತೀರ್ಥರೂಪಿಣಿಯಾಗಿ ಉದ್ಭವಿಸಿ ಭಕ್ತರಿಗೆ ದರ್ಶನ ನೀಡಿದಳು.

ದಕ್ಷಿಣ ಗಂಗೆ ತಾಯಿ ಕಾವೇರಿಯ ತೀರ್ಥೋದ್ಭವದ ಪವಿತ್ರ ಸಂದರ್ಭದಲ್ಲಿ ತೀರ್ಥಸ್ನಾನ (ಪ್ರೋಕ್ಷಣೆ)ಗಾಗಿ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಈ ಪ್ರಾಕೃತಿಕ ವಿಸ್ಮಯಕ್ಕೆ ಸಾಕ್ಷಿಯಾದರು.

ಮೈಕೊರೆಯುವ ಚಳಿಯಲ್ಲಿಯೂ ಆ ಅಮೃತ ಕ್ಷಣಕ್ಕಾಗಿ ಕಾಯುತ್ತಿದ್ದ ಸಾರ್ವಜನಿಕರು ಕಾವೇರಿ ತೀರ್ಥರೂಪಿಣಿಯಾಗಿ ಕಂಡೊಡನೆಯೇ ಜೈ ಕಾವೇರಿ ತಾಯಿ, ಕಾವೇರಮ್ಮನಿಗೆ ಜಯವಾಗಲಿ ಎಂದು ಕೂಗುತ್ತಾ ಕೊಳಕ್ಕೆ ನಾಣ್ಯ ಹಾಕಿ ಪವಿತ್ರ ಸ್ನಾನ ಮಾಡಿದರು.

ಪವಿತ್ರ ತೀರ್ಥವನ್ನು ಮನೆಗೆ ಕೊಂಡೊಯ್ಯಲು ಕ್ಯಾನ್, ಕೊಡ, ತಂಬಿಕೆ ತಂದಿದ್ದ ಭಕ್ತರು ಕಾವೇರಿ ಪವಿತ್ರ ಜಲವನ್ನು ತುಂಬಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಪವಿತ್ರ ಕುಂಡಿಕೆಗೆ ಹೂ ಕುಂಕುಮದಿಂದ ಪೂಜೆ ಸಲ್ಲಿಸಿದ ಅರ್ಚಕರು ನೀರನ್ನು ಭಕ್ತರ ಮೇಲೆ ಪ್ರೋಕ್ಷಣೆ ಮಾಡಿದರು.

ಕುಂಡಿಕೆಯ ತೀರ್ಥೋದ್ಭವ ದರ್ಶನಕ್ಕೆ ನೂಕು ನುಗ್ಗಲು ಉಂಟಾದ ಘಟನೆಯೂ ನಡೆಯಿತು. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾದ ಪ್ರಕರಣವೂ ನಡೆಯಿತು.

ಕೊಡವ ಸಮಾಜ, ಮಂಡ್ಯದ ಕಾವೇರಿ ತೀರ್ಥೋದ್ಭವ ಅನ್ನ ಸಂತರ್ಪಣಾ ಸಮಿತಿ, ತಮಿಳುನಾಡಿನ ಹಲವು ಸಮಿತಿಗಳು ಭಕ್ತರಿಗಾಗಿ ಅನ್ನಸಂತರ್ಪಣೆ ಏರ್ಪಡಿಸಿದ್ದರು.

ಇದಕ್ಕೂ ಮುನ್ನ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಮಂಗಳವಾದ್ಯಗಳೊಂದಿಗೆ ತಂದ ಆಭರಣಗಳನ್ನು ತಾಯಿ ಕಾವೇರಿ ಮಾತೆಗೆ ತೊಡಿಸಿ ಅಲಂಕರಿಸಲಾಯಿತು.  

ಮುಖಪುಟ /ಸುದ್ದಿ ಸಮಾಚಾರ