ಮುಖಪುಟ /ಸುದ್ದಿ ಸಮಾಚಾರ

5ಲಕ್ಷ ಜನರಿಂದ ದಸರಾ ವೀಕ್ಷಣೆ
ಅರಮನೆ ನಗರಿಯಲ್ಲಿ ಪರಂಪರೆಯ ಅನಾವರಣ

ದಸರಾ ಪೂಜೆ, ಸದಾನಂದಗೌಡ, sadanandagowda, dasara poojaಬೆಂಗಳೂರು, ಅ.೭: ಮೈಸೂರಿನಲ್ಲಿ ನಿನ್ನೆ ನಡೆದ ಜಗದ್ವಿಖ್ಯಾತ ಜಂಬೂಸವಾರಿಯ ಮನಮೋಹಕ ದೃಶ್ಯಗಳನ್ನು ೫ ಲಕ್ಷಕ್ಕೂ ಹೆಚ್ಚು ಜನರು ಕಣ್ತುಂಬಿಕೊಂಡರು.

 ಎರಡೂವರೆ ತಾಸುಗಳ ಕಾಲ ನಡೆದ ಈ ಮೆರವಣಿಗೆಯಲ್ಲಿ ಕನ್ನಡ  ನಾಡಿನ ಕಲೆ, ಸಂಸ್ಕೃತಿ, ಇತಿಹಾಸ, ಪರಂಪರೆ ಅನಾವರಣಗೊಂಡಿತು.

 ಬೆಳಗಾವಿಯ ಸವಾಯಿ ಗಾಂಧರ್ವ ಸಂಗೀತೋತ್ಸವ, ಬೆಂಗಳೂರಿನ ಮೆಟ್ರೋ ರೈಲು ಸೇರಿದಂತೆ ಪ್ರತಿ ಜಿಲ್ಲೆಗಳ ವಿಶೇಷಗಳನ್ನು ಸಾರುತ್ತಾ ಸಾಗಿದ ಸ್ತಬ್ಧ ಚಿತ್ರಗಳೂ ಕಣ್ಮನ ಸೆಳೆದವು.

 ನಾಡದೇವಿ ಚಾಮುಂಡೇಶ್ವರಿಯ ವಿಗ್ರಹವಿದ್ದ ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಬಲರಾಮನೊಂದಿಗೆ ಮೈಸೂರು ಅರಮನೆಯ ಸಾಂಪ್ರದಾಯಿಕ ಪಲ್ಲಕ್ಕಿ, ಬೆಳ್ಳಿರಥ, ಕುದುರೆಗಾಡಿ, ಎತ್ತಿನಗಾಡಿ, ಪೋಲೀಸ್ ಬ್ಯಾಂಡ್ ಗತಕಾಲದ ವೈಭವವನ್ನೇ  ಕಣ್ಣೆದುರಿಗೆ ತಂದು ನಿಲ್ಲಿಸಿತ್ತು.

 ವೀರಗಾಸೆ, ನಾದಸ್ವರ, ಮಂಗಳವಾದ್ಯ, ಗಾರುಡಿ ಗೊಂಬೆ, ಪೂಜಾ ಕುಣಿತ, ಹಲಗೆಕುಣಿತ, ಜಡೆಕೋಲು, ಕರಡಿ ಮಜಲು, ವಾದ್ಯ ವೃಂದಗಳು ಮೆರವಣಿಗೆಗೆ ಮತ್ತಷ್ಟು ಕಳೆತಂದವು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಡಿವಿ. ಸದಾನಂದಗೌಡ ಅವರು ಅರಮನೆಯ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಹಾಗೂ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. 

ಕೇಂದ್ರ ಪ್ರವಾಸೋದ್ಯಮ ಸಚಿವ ಸುಬೋಧ್ ಕಾಂತ್ ಸಹಾಯ್, ಸಚಿವರಾದ ಗೋವಿಂದ ಎಂ. ಕಾರಜೋಳ, ಎಸ್.ಎ. ರಾಮದಾಸ್, ಮುರುಗೇಶ ನಿರಾಣಿ, ಸಿ.ಪಿ. ಯೋಗೇಶ್ವರ್ ಈ ಸಂದರ್ಭದಲ್ಲಿ ಹಾಜರಿದ್ದರು. 

 

ಮುಖಪುಟ /ಸುದ್ದಿ ಸಮಾಚಾರ