ಮುಖಪುಟ /ಸುದ್ದಿ ಸಮಾಚಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು
ಸಾಕ್ಷಿ ನಾಶಪಡಿಸದಂತೆ ಆದೇಶ

Darshan, ದರ್ಶನ ಬಿಡುಗಡೆಬೆಂಗಳೂರು, ಅ.೭:  ಪತ್ನಿ ವಿಜಯಲಕ್ಷ್ಮೀ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ರಾಜ್ಯ ಹೈಕೋರ್ಟ್ ಕೊನೆಗೂ ಷರತ್ತುಬದ್ಧ ಜಾಮೀನು ನೀಡಿದ್ದು, ಬಿಡುಗಡೆಯ ಭಾಗ್ಯ ಸಿಕ್ಕಂತಾಗಿದೆ.

ದರ್ಶನ್ ಪರ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಬಿ.ವಿ. ಪಿಂಟೋ ಅವರಿದ್ದ ರಾಜ್ಯ ಹೈಕೋರ್ಟ್‌ನ ಏಕ ಸದಸ್ಯ ಪೀಠ ಇಂದು ದರ್ಶನ್‌ಗೆ ಷರತ್ತುಬದ್ಧ ಜಾಮೀನಿನ ಭಾಗ್ಯ ಕರುಣಿಸಿತು.

೨೫ ಸಾವಿರ ರೂಪಾಯಿಗಳ  ವೈಯಕ್ತಿಕ ಬಾಂಡ್ ಅನ್ನು ಭದ್ರತೆಯಾಗಿ ನೀಡಬೇಕು ಎಂದು ತಿಳಿಸಿದ ನ್ಯಾಯಾಧೀಶರು, ದರ್ಶನ್ ಹಾಗೂ ಅವರ ಪತ್ನಿ ವಿಜಯ ಲಕ್ಷ್ಮಿ ಅವರಿಗೆ ಇದೇ ತಿಂಗಳ  ೧೩ ರಂದು ತಮ್ಮ ಮುಂದೆ ಹಾಜರಾಗುವಂತೆ ಕೂಡ ನಿರ್ದೇಶನ ನೀಡಿದರು.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಭಿನ್ನ ಹೇಳಿಕೆ ನೀಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅಕ್ಟೋಬರ್ ೧೩ ರಂದು ಪತಿ ದರ್ಶನ್ ಜೊತೆ ತಮ್ಮ ಕೊಠಡಿಗೆ ಆಗಮಿಸಿ ಹೇಳಿಕೆ ನೀಡುವಂತೆ ಸೂಚಿಸಿದರು.

ಇವರಿಬ್ಬರ ಜೊತೆಯಲ್ಲಿ  ಹಾಜರಾಗುವಂತೆ ಸರ್ಕಾರಿ ಅಭಿಯೋಜಕರು ಮತ್ತು ದರ್ಶನ್ ಪರ ವಕೀಲರಿಗೂ ಅವರು ಆದೇಶ ನೀಡಿದರು. ಎಲ್ಲರೂ ಬನ್ನಿ, ಎಲ್ಲರ ಸಮ್ಮುಖದಲ್ಲೇ ಅಂದು ಈ ಪ್ರಕರಣದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳೋಣ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಪತಿ - ಪತ್ನಿಯರ ನಡುವೆ ಸೌಹಾರ್ದಯುತ ಸಂಬಂಧವಿದೆಯೋ ಇಲ್ಲವೋ ಎಂಬುದನ್ನು ನೋಡಿಕೊಂಡು ನಂತರ ಅಂತಿಮ ನಿರ್ಧಾರಕ್ಕೆ ಬರೋಣ. ದರ್ಶನ್ ಜನಪ್ರಿಯ ನಟರಾಗಿದ್ದು, ಈ ಪ್ರಕರಣ ಅವರ ಅಭಿಮಾನಿಗಳಿಗೂ ಪಾಠವಾಗಲಿದೆ. ಹೀಗಾಗಿ ಮಾದರಿ ವ್ಯಕ್ತಿಯ ಪ್ರಕರಣ ಇದಾಗಿರುವುದರಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಮಾಲೋಚಿಸೋಣ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ  ದರ್ಶನ್ ಅವರನ್ನು ಸೆಪ್ಟೆಂಬರ್ ೯ ರಂದು ಬಂಧಿಸಲಾಗಿತ್ತು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಕಾರಣ. ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು. ಅಂದು ರಾತ್ರಿಯೇ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಅವರನ್ನು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಾಂಡೀಸ್, ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ದರ್ಶನ್ ನಂತರ ಗುಣಮುಖರಾಗಿ ಸೆಪ್ಟಂಬರ್ ೨೧ ರಂದು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು.

 ಅಭಿಮಾನಿಗಳ ದಂಡು: ತಮ್ಮ ನೆಚ್ಚಿನ ನಟನಿಗೆ ಜಾಮೀನು ಸಿಕ್ಕ ವಿಷಯ ತಿಳಿದ ಕೂಡಲೇ ಅವರ ಅಭಿಮಾನಿ ವಲಯದಲ್ಲಿ ಹರ್ಷದ ಹೊನಲು ಹೆರಿದಿದೆ. ಹಲವು ಅಭಿಮಾನಿಗಳು ಬೆಳಗ್ಗಿನಿಂದಲೇ ಪರಪ್ಪನ ಅಗ್ರಹಾರ ಜೈಲಿನ ಬಳಿ ಜಮಾಯಿಸಿ ತಮ್ಮ ನಾಯಕನ ಬಿಡುಗಡೆಗೆ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 

ಈ ಮಧ್ಯೆ ನಟ ವಿಜಯ್, ಬುಲೆಟ್ ಪ್ರಕಾಶ್ ಸೇರಿದಂತೆ ಹಲವು ನಟರೂ ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ಬಿಡುಗಡೆ ಆಗಲಿರುವ ತಮ್ಮ ನೆಚ್ಚಿನ ನಟನನ್ನು ಸ್ವಾಗತಿಸಲು ಕಾಯುತ್ತಿದ್ದರು.

ಸಂಜೆ ಬಿಡುಗಡೆಯಾದ ದರ್ಶನ್ ನೇರವಾಗಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ತಮ್ಮ ಮನೆಗೆ ಮರಳಿದರು. ಪತ್ನಿ ಸಿಹಿ ತಿನ್ನಿಸಿದರು. ಮನೆಯ ಮುಂದೆ ನೆರೆದಿದ್ದ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್

ಮುಖಪುಟ /ಸುದ್ದಿ ಸಮಾಚಾರ