ಮುಖಪುಟ /ಸುದ್ದಿ ಸಮಾಚಾರ   
 

ಬಿಜೆಪಿ ಮತ್ತೆ ಜೈಹೋ...

Assemblyಬೆಂಗಳೂರು, ಅ.೧೪- ಎರಡನೇ ಅಗ್ನಿಪರೀಕ್ಷೆಯಲ್ಲೂ ಬಿಜೆಪಿಗೇ ಜಯ. ಪ್ರತಿಪಕ್ಷಗಳ ಎರಡು ವಾರಗಳ ಸತತ ಷಡ್ಯಂತ್ರಕ್ಕೆ ಸೋಲು. ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಒಂದು ಸಾಲಿನ ವಿಶ್ವಾಸಮತ ಗೊತ್ತುವಳಿಗೆ ಸದನ ಮತ್ತೊಮ್ಮೆ ಜೈಹೋ ಎಂದಿತು.

ಇಂದು ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ೧೧ರಂದು ನಡೆದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಗದ್ದಲ ಉಂಟಾಯಿತು ಎಂದು ಸಮಜಾಯಿಷಿ ನೀಡಿದರು. ಪೊಲೀಸರು ಸದಸ್ಯರನ್ನೇ ಒಳಗೆ ಬಿಡದೆ ತಡೆದರು, ಇದು ಸದಸ್ಯರ ಕೋಪಕ್ಕೆ ಕಾರಣವಾಯಿತು. ಇದು ಹಕ್ಕು ಚ್ಯುತಿಯಾಗಿದ್ದು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು.

ಪ್ರಸ್ತುತ ಶಾಸಕರ ಅನರ್ಹತೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹಾಗೂ ನ್ಯಾಯಾಧೀಶರು ಇಂದಿನ ವಿಶ್ವಾಸ ಮತ ತಾನು ನೀಡುವ ತೀರ್ಪಿಗೆ ಬದ್ಧವಾಗಿರುತ್ತದೆ ಎಂದು ಹೇಳಿರು ಹಿನ್ನೆಲೆಯಲ್ಲಿ ಅಂತಿಮ ತೀರ್ಪು ಬರುವವರೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನೇ ಮುಂದೂಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಸಭಾಧ್ಯಕ್ಷರು ಈ ಮನವಿ ತಿರಸ್ಕರಿಸಿದಾಗ ಸದಸ್ಯರಿಂದ ಗದ್ದಲ. ಗದ್ದಲದ ನಡುವೆಯೇ ಮುಖ್ಯಮಂತ್ರಿ ಈ ಸದನ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ ವಿಶ್ವಾಸ ವ್ಯಕ್ತಪಡಿಸುತ್ತದೆ ಎಂಬ ಗೊತ್ತುವಳಿ ಮಂಡಿಸಿದರು.

ನಿರ್ಣಯದ ಪರ ಹೌದು ಎನ್ನುವವರು ಕೈಯೆತ್ತಿ ಎಂದಾಗ ಆಡಳಿತಪಕ್ಷದ ಸದಸ್ಯರು ಎದ್ದು ನಿಂತು ಕೈ ಎತ್ತಿದರು.

ಪ್ರತಿಪಕ್ಷ ನಾಯಕರು ಮತ ವಿಭಜನೆಗೆ ಒತ್ತಾಯಿಸಿದರು. ಆಗ ಸಭಾಧ್ಯಕ್ಷರು ಮತ ವಿಭಜನೆ, ತಲೆ ಎಣಿಕೆ ಕೇಳಿರುವ ಹಿನ್ನೆಲೆಯಲ್ಲಿ ಮತ ವಿಭಜನೆ ನಡೆಯುತ್ತದೆ ಎಂದು ಪ್ರಕಟಿಸಿದರು.

೬ಮತಗಳ ಅಂತರ

ಸದನದ ಕರೆಗಂಟೆ ಮತ್ತೆ ಮೊಳಗಿತು. ೬ ನಿಮಿಷದ ಬಳಿಕ ಯಾರೂ ಹೊರ ಹೋಗದಂತೆ ಬಾಗಿಲು ಹಾಕಲಾಯಿತು. ಪ್ರತಿ ಸಾಲಿನ ಎಣಿಕೆ ಕಾರ್ಯ ನಡೆಯಿತು.

೮ ಸಾಲುಗಳಲ್ಲಿ ಕುಳಿತಿದ್ದ ಶಾಸಕರು ಸಭಾಧ್ಯಕ್ಷರ ಆದೇಶದಂತೆ ಪ್ರತಿ ಸಾಲಿನಲ್ಲಿ ಸರದಿಯಂತೆ ಎದ್ದು ನಿಂತಾಗ ತಲೆ ಎಣಿಕೆ ನಡೆಯಿತು. ಅಂತೆಯೇ ನಿರ್ಣಯದ ಪರ ಇಲ್ಲ ಎನ್ನುವವರು ಎದ್ದು ನಿಲ್ಲುವಂತೆ ಸೂಚಿಸಿ ೭ ಸಾಲುಗಳಲ್ಲಿ ತಲೆ ಎಣಿಕೆ ಮಾಡಲಾಯಿತು.

ಸಭಾಧ್ಯಕ್ಷರು ಗೊತ್ತುವಳಿಯ ಪರ ೧೦೬ ಮತಗಳೂ, ವಿರುದ್ಧವಾಗಿ ೧೦೦ ಮತಗಳೂ ಬಿದ್ದಿವೆ ಎಂದು ಪ್ರಕಟಿಸಿದರು. ಇಂದಿನ ಕಲಾಪದಲ್ಲಿ ನಾಮಕರಣ ಸದಸ್ಯ ಫುಲ್‌ಇನ್‌ಫಾ ಅವರಿಗೆ ಮತದಾನದ ಹಕ್ಕು ನೀಡಲಾಗಿತ್ತು.

ಇಬ್ಬರ ಗೈರು

ಇಂದು ನಡೆದ ವಿಶ್ವಾಸಮತ ಯಾಚನೆಯ ವೇಳೆ ಇಬ್ಬರು ಶಾಸಕರು ಸದನಕ್ಕೆ ಗೈರು ಹಾಜರಾಗಿದ್ದರು. ಜೆಡಿಎಸ್‌ನ ಸದಸ್ಯ ಚನ್ನಪಟ್ಟಣದ ಶಾಸಕ ಅಶ್ವತ್ಥ್ ಹಾಗೂ ಲಿಂಗಸುಗೂರು ಶಾಸಕ ಬಿಜೆಪಿ ಸದಸ್ಯ ಮಾನಪ್ಪ ವಜ್ಜಲ ಗೈರು ಹಾಜರಾಗಿದ್ದದ್ದು ಎಲ್ಲರ ಗಮನ ಸೆಳೆಯಿತು. ಮೂರೂ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಯಾರೇ ಗೈರು ಹಾಜರಾದರೂ ಅಥವಾ ಅಡ್ಡ ಮತ ಹಾಕಿದರೂ ಅವರು ಅನರ್ಹರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ಶಾಸಕರ ಮೇಲೂ ಅನರ್ಹತೆಯ ತೂಗುಗತ್ತಿ ತೂಗುತ್ತಿದೆ.

ಆಡಳಿತ ಪಕ್ಷದ ಸಾಲಿನಲ್ಲಿ ವರ್ತೂರು

ಇಂದು ಆಡಳಿತ ಪಕ್ಷದ ಸಾಲಿನಲ್ಲಿ ಪಕ್ಷೇತರ ಶಾಸಕ ಕೋಲಾರದ ವರ್ತೂರು ಪ್ರಕಾಶ್‌ಗೆ ಸ್ಥಾನ ಕಲ್ಪಿಸಲಾಗಿತ್ತು. ಈ ಕುರಿತು ಸಣ್ಣ ಚರ್ಚೆಯೂ ಸದನದಲ್ಲಿ ನಡೆಯಿತು. ವರ್ತೂರು ಪ್ರಕಾಶ್ ಆಡಳಿತ ಸ್ಥಾನದಲ್ಲಿ ಕುಳಿತಿರುವ ಬಗ್ಗೆ ಜೆಡಿಎಸ್‌ನ ಬಾಲಕೃಷ್ಣ ಪ್ರಶ್ನಿಸಿದಾಗ, ರೇವಣ್ಣ ದನಿಗೂಡಿಸಿದರು. ಆಗ ಗೃಹ ಸಚಿವ ಅಶೋಕ್ ತಮ್ಮ ಪಕ್ಕದ ಜಾಗ ತೋರಿಸಿ ಮುಂದೆ ಅವರು ಇಲ್ಲಿ ಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ ಎಂದರು.

ಗಾಲಿ ಕುರ್ಚಿಯಲ್ಲಿ ಸದನಕ್ಕೆ

ಇಂದು ನಡೆದ ಬಲಾಬಲ ಪರೀಕ್ಷೆಯಲ್ಲಿ ಒಂದೊಂದು ಮತವೂ ಅತ್ಯಂತ ಅಮೂಲ್ಯವಾಗಿದ್ದ ಕಾರಣ, ಕೊಪ್ಪಳ ಜಿಲ್ಲೆ ಯಲಬುರ್ಗಿ ಶಾಸಕ ಈಶಣ್ಣ ಗುಳಗನ್ನವರ್ ಅವರನ್ನು ಗಾಲಿ ಕುರ್ಚಿಯಲ್ಲಿ ಸದನಕ್ಕೆ ಕರೆತರಲಾಗಿತ್ತು. ಮತ ಎಣಿಕೆ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈಶಣ್ಣನವರು ಗ್ಲಾಸ್ಕೋ ಫೋಮಾ ಕಾಯಿಲೆಯಿಂದ ನರಳುತ್ತಿದ್ದಾರೆ, ಅವರಿಗೆ ಯಾರನ್ನೂ ಗುರುತಿಸುವ ಶಕ್ತಿ ಇಲ್ಲದಂತಾಗಿದೆ. ಅವರಿಗೆ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದರು.

ಸಭಾಧ್ಯಕ್ಷ ಬೋಪಣ್ಣ ವೈದ್ಯರ ಪ್ರಮಾಣ ಪತ್ರವನ್ನೇ ಸಭೆಗೆ ಓದಿ ಹೇಳಿ, ಅವರು ಮಾನಸಿಕವಾಗಿ ಸದೃಢರಾಗಿದ್ದಾರೆ ಎಂದು ಪ್ರಕಟಿಸಿದರು. ನಂತರ ಮತದಾನಕ್ಕೆ ಅವಕಾಶ ನೀಡಲಾಯಿತು.

ಹುಸಿಯಾದ ವದಂತಿ

ಇಂದಿನ ವಿಧಾನಸಭೆಯ ಅಧಿವೇಶನಕ್ಕೆ ಎಲ್ಲ ಕಾಂಗ್ರೆಸ್ ಶಾಸಕರೂ ಗೈರುಹಾಜರಾಗುತ್ತಾರೆ ಎಂಬ ವದಂತಿಗಳು ಇಂದು ಬೆಳಗ್ಗೆ ದಟ್ಟವಾಗಿ ಹಬ್ಬಿತ್ತು. ಸದನ ಸಮಾವೇಶಗೊಳ್ಳಲು ೩೦ ನಿಮಿಷ ಇರುವವರೆಗೂ ಯಾವುದೇ ಕಾಂಗ್ರೆಸ್ ಶಾಸಕರು ಸದನದಲ್ಲಿ ಕಾಣದಿದ್ದುದು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ೧೦-೩೦ರ ಹೊತ್ತಿಗೆ ಮೊದಲಿಗರಾಗಿ ಕೃಷ್ಣಬೈರೇಗೌಡ ಸದನ ಪ್ರವೇಶಿಸಿದಾಗ ಈ ಶಂಕೆ ನಿವಾರಣೆ ಆಯ್ತು. ನಂತರ ಸಿದ್ದರಾಮಯ್ಯ ಅವರೊಂದಿಗೆ ಎಲ್ಲ ಸದಸ್ಯರೂ ಆಗಮಿಸಿದರು. ಜೊತೆಗೆ ೮ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಇಂದು ಗೈರು ಹಾಜರಾಗುತ್ತಾರೆ ಇಲ್ಲವೇ ಬಿಜೆಪಿ ಪರ ಮತ ಚಲಾಯಿಸುತ್ತಾರೆ ಎಂಬ ವದಂತಿಗಳಿಗೂ ತೆರೆ ಬಿತ್ತು.

 

 ಮುಖಪುಟ /ಸುದ್ದಿ ಸಮಾಚಾರ