ಮುಖಪುಟ /ಸುದ್ದಿ ಸಮಾಚಾರ   
 

ಬಿಜೆಪಿಯ ಗೆಲುವು ಕ್ಷಣಿಕ - ಕುಮಾರಸ್ವಾಮಿ

H.D.Kumaraswamyಬೆಂಗಳೂರು, ಅ.೧೪ - ವಿಧಾನಸಭೆಯಲ್ಲಿ ಇಂದು ಬಿಜೆಪಿ ಎರಡನೇ ಬಾರಿ ಬಹುಮತ ಸಾಬೀತು ಪಡಿಸಿದೆಯಾದರೂ ಈ ಗೆಲುವಿನ ಉತ್ಸಾಹ ಕ್ಷಣಿಕ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ಗೆಲುವಿನಿಂದ ಯಡಿಯೂರಪ್ಪನವರು ಬೀಗುವುದು ಬೇಡ. ಇದು ಕೇವಲ ತಾತ್ಕಾಲಿಕ. ಶಾಸಕರ ಅನರ್ಹತೆ ಪ್ರಕರಣದ ತೀರ್ಪು ಹೊರಬಿದ್ದ ಬಳಿಕ ಇದು ತಿಳಿಯುತ್ತದೆ ಎಂದು ಹೇಳಿದರು.

ಆಡಳಿತಾರೂಢ ಬಿಜೆಪಿ ಸಭಾಧ್ಯಕ್ಷರ ಕಚೇರಿಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿತು. ಸ್ಪೀಕರ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ೧೬ ಜನ ಶಾಸಕರನ್ನು ಅನರ್ಹಗೊಳಿಸುವ ಮೂಲಕ ಅದು ವಿಧಾನಸಭೆಯ ಸಂಖ್ಯಾಬಲವನ್ನು ಕಡಿಮೆ ಮಾಡಿ ಜಯ ಸಾಧಿಸಿತು ಇದು ನೈತಿಕ ಗೆಲುವಲ್ಲ ಎಂದರು.

೧೬ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸು ಪಡೆದಾಗಲೇ ಯಡಿಯೂರಪ್ಪ ವಿಶ್ವಾಸ ಕಳೆದುಕೊಂಡರು. ಆ ಕ್ಷಣದಿಂದಲೇ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇರಲಿಲ್ಲ ಎಂದು ಹೇಳಿದರು. ತಮ್ಮ ಹೋರಾಟ ಮುಂದುವರಿಯಲಿದ್ದು, ಮುಂದಿನ ಹೆಜ್ಜೆಗಳ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದರು.

ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ಸ್ವತಂತ್ರರು.  ಅವರು ಯಾರಿಗಾದರೂ ಬೆಂಬಲ ನೀಡಬಹುದು.  ಅವರ ಬಗ್ಗೆ ಚರ್ಚೆಮಾಡುವುದರಲ್ಲಿ ಅರ್ಥವಿಲ್ಲ ಎಂದರು.  

ಚೆನ್ನಪಟ್ಟಣ ಶಾಸಕ ಎಂ.ಸಿ. ಅಶ್ವತ್ಥ್ ಅವರನ್ನು ಬಿಜೆಪಿಯಂತೆ ಶಾಸಕ ಸ್ಥಾನದಿಂದ ನಾನೇನು ಅನರ್ಹಗೊಳಿಸುವುದಿಲ್ಲ ಚನ್ನಪಟ್ಟಣದ ಜನತೆಗೆ ಆ ತೀರ್ಪು ಬಿಡಲಿದ್ದಾರೆ ಎಂದು ಹೇಳಿದರು 

 ಮುಖಪುಟ /ಸುದ್ದಿ ಸಮಾಚಾರ