ಮುಖಪುಟ /ಸುದ್ದಿ ಸಮಾಚಾರ   
 

ಪ್ರಜಾತಂತ್ರಕ್ಕೆ ಸಿಕ್ಕ ಜಯ- ಯಡಿಯೂರಪ್ಪ

ಬೆಂಗಳೂರು ಅ ೧೪:  ವಿಧಾನ ಸಭೆಯಲ್ಲಿ ಇಂದು ಮತ್ತೊಮ್ಮೆ ಬಹುಮತ ಸಾಬೀತು ಪಡಿಸಿರುವುದರಿಂದ ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಮನ್ನಣೆ ಸಿಕ್ಕಂತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ತಿಳಿಸಿದ್ದಾರೆ.

ಕಳೆದ ಒಂದು ವಾರಗಳಿಂದ ರಾಜ್ಯ ರಾಜಕೀಯದಲ್ಲಿ ಉಂಟಾದ ಬೆಳವಣಿಗೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಮುಖ್ಯಮಂತ್ರಿ ಇಂತಹ ಘಟನೆಗಳು ಇನ್ನು ಮುಂದೆ ಮರುಕಳಸದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದರು.

ಸೋಮವಾರ ಕಲಾಪದಲ್ಲಿ ನಡೆದ ಘಟನೆಗಳಿಂದ ಮನಸ್ಸಿಗೆ ನೋವಾಗಿದೆ. ಈ ಘಟನೆಗಳು ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟವರಿಗೆಲ್ಲ ಆಘಾತ ತಂದಿದೆ ರಾಜ್ಯದ ಇತಿಹಾಸದಲ್ಲಿಯೇ ಇದೊಂದು ಕಪ್ಪು ಚುಕ್ಕೆಯಾಗಿದೆ. ಈ ಕರಾಳ ಪರ್ವವನ್ನು ಮರೆತುಬಿಡಬೇಕೆಂದು ನಾಡಿನ ಜನತೆಗೆ ಮನವಿ ಮಾಡಿಕೊಂಡರು. ಒಂದು ಸಲ ಬಹುಮತ ಸಾಬೀತು ಪಡಿಸಿದ ನಂತರ ಸಂವಿಧಾನದ ಪ್ರಕಾರ ಮತ್ತೆ ಆರು ತಿಂಗಳ ವರೆಗೆ ಬಹುಮತ ಸಾಬೀತು ಪಡಿಸುವ ಅಗತ್ಯವಿಲ್ಲ ಆದರೆ ಸಾಂವಿಧಾನಿಕ ಪ್ರಾಧಿಕಾರದ ಜೊತೆ ಸಂಘರ್ಷಕ್ಕೆ ಇಳಿಯಬಾರದು ಎಂದು ಪಕ್ಷದ ವರಿಷ್ಠರು ನೀಡಿರುವ ಸೂಚನೆ ಮೆರೆಗೆ ಎರಡನೇ ಬಾರಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿರುವುದಾಗಿ ತಿಳಿಸಿದರು.

ನನ್ನ ಸರ್ಕಾರದ ಪರವಾಗಿ ಬೆಂಬಲಿಸಿದ ಎಲ್ಲಾ ನಿಷ್ಠಾವಂತ ಶಾಸಕರಿಗೆ ಕೃತಜ್ಞ ಸಲ್ಲಿಸಿದ ಯಡಿಯೂರಪ್ಪ ಕಳೆದ ವಾರದ ರಾಜಕೀಯ ವಿದ್ಯಮಾನಗಳು ನಾಡಿನ ಪ್ರತಿಷ್ಠ್ಯಗೆ ಧಕ್ಕೆ ತಂದಿವೆ ಎಂದರು.

ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಗಣಿ ಲಾಬಿಯೂ ಕಾರಣ ಎಂದ ಅವರು, ಇನ್ನು ಮುಂದಾದರೂ ಪ್ರತಿಪಕ್ಷಗಳ ನಾಯಕರು, ಪ್ರತಿನಿಧಿಗಳು, ಸನ್ನಡತೆಯ ಮೂಲಕ ಪರಿಪಕ್ವತೆಯನ್ನು ಪ್ರದರ್ಶಿಸಿ ನಾಡಿನ ಪ್ರತಿಷ್ಠೆಯನ್ನು ಮರು ಸ್ಥಾಪಿಸಲು ಸಹಕಾರ ಮತ್ತು ಸಮನ್ವಯ ನೀಡಬೇಕೆಂದು ಮನವಿ ಮಾಡಿಕೊಂಡರು.

ಜೆಡಿಎಸ್-ಕಾಂಗ್ರೆಸ್ ವಿರುದ್ಧ ಆಕ್ರೋಶ:

ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಕೊನೆಗಾಲ ಬಂದ ಹಾಗೆ ದೀಪದ ಬದಲು ಜ್ವಾಲೆಯಂತೆಯೇ ಉರಿಯುತ್ತಿದ್ದು, ಕರ್ನಾಟಕದ ಭವ್ಯ ಹಾಗೂ ಸಂಸ್ಕೃತಿಗೆ ಧಕ್ಕೆ ತರುತ್ತಿವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಧರ್ಮ ಮತ್ತು ಅಧರ್ಮದ ಬಗ್ಗೆ ಮಾತನಾಡುತ್ತಾರೆ. ಯಾವುದು ಧರ್ಮ, ಯಾವುದು ಅಧರ್ಮ ಎಂಬುದು ಜನತೆಯೇ ನಿರ್ಧರಿಸಲಿ. ನಾವು ಮಾಡುವ ಸೇವೆ ಜನರ ಕಲ್ಯಾಣಕ್ಕಾಗಿ ಎಂದು ನಂಬಿರುವ ನಾವು ಅಧಿಕಾರ ಶಾಶ್ವತವಲ್ಲ. ಆದರೆ ನಾವು ಮಾಡುವ ಕೆಲಸ ಶಾಶ್ವತವಾಗಿರಬೇಕೆಂದು ಆ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿರುವುದಾಗಿ ಹೇಳಿದರು.

ಕಳೆದ ಎರಡೂವರೆ ವರ್ಷಗಳಿಂದ ಬಹಳಷ್ಟು ಪಾಠ ಕಲಿತಿದ್ದೇನೆ. ಇನ್ನುಮುಂದೆ ಮಾಡಬೇಕಾದ ಕೆಲಸ ಬಹಳಷ್ಟಿದೆ. ಪ್ರತಿಭಾರಿಯು ನಾನು ಹೇಳುತ್ತಾ ಬಂದಂತೆ ಅಭಿವೃದ್ಧಿಗೆ ನಮ್ಮ ಸರ್ಕಾರದ ಮೂಲ ಮಂತ್ರ. ಇನ್ನು ಮುಂದಾದರೂ ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ಸಲಹೆ ಮಾಡಲಿ ಎಂದರು.

ಕಳೆದ ಒಂದು ವಾರ ರಾಜ್ಯದಲ್ಲಿ ನಡೆದ ರಾಜಕೀಯ ವಿದ್ಯಮಾನಗಳಿಗೆ ಕಾರಣರಾದವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

ಭಾಗ್ಯ ಲಕ್ಷ್ಮೀ ಯೋಜನೆ:

ಈಗಾಗಲೇ ನಿಗದಿಯಾಗಿರುವಂತೆ ಭಾಗ್ಯಲಕ್ಷ್ಮೀ ಯೋಜನೆ ಇದೇ ೧೯ ರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ಹತ್ತು ಲಕ್ಷ ಕುಟುಂಬಗಳಿಗೆ ಆರೋಗ್ಯ ತಪಾಸಣೆ ಹಾಗೂ ಸೀರೆ ವಿತರಿಸುವ ಕಾರ್ಯಕ್ರಮ ಆರಂಭವಾಗಲಿದೆ.

ಪ್ರತಿ ವರ್ಷ ವಿಜಯ ದಶಮಿ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ಪ್ರಕಟಿಸಿದರು.

ಅಲ್ಲದೆ ಪಿಯುಸಿ ವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ಗೃಹಗಳಲ್ಲಿ ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುವುದು ಎಂದರು.

 ಮುಖಪುಟ /ಸುದ್ದಿ ಸಮಾಚಾರ