ಮುಖಪುಟ /ಸುದ್ದಿ ಸಮಾಚಾರ   
 

ಇ-ಗ್ರಂಥಾಲಯ ವ್ಯವಸ್ಥೆಗೆ ಚಿಂತನೆ : ಸುರೇಶ್‌ಕುಮಾರ್

sureshkumarಶಿವಮೊಗ್ಗ, ಅ. ೨೫ : ವಕೀಲರಲ್ಲಿ ಕಾನೂನು ಜ್ಞಾನ ಹೆಚ್ಚಿಸಲು ರಾಜ್ಯದ ಎಲ್ಲ ವಕೀಲರ ಸಂಘಗಳಿಗೆ ಡಿಜಿಟಲ್ ಇ-ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲು ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ ಹೇಳಿದರು.

ಅವರು ಭದ್ರಾವತಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯ ಸಂಕೀರ್ಣದ ನೂತನ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾನೂನು ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ಕಾಣುವ ನಿಟ್ಟಿನಲ್ಲಿ ಈಗಾಗಲೇ ಧಾರವಾಡದಲ್ಲಿ ಕಾನೂನು ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿದೆ ಎಂದರು.

ನ್ಯಾಯಾಲಯದಲ್ಲಿ ದಾಖಲಾಗುವ ಪ್ರತಿ ಪ್ರಕರಣಗಳ ಹಿಂದೆ ಕಕ್ಷಿದಾರನಿಗಿರುವ ನೋವು-ಸಂಕಟ-ತಳಮಳವನ್ನು ಅರಿತು ವಿಳಂಬವಾಗದಂತೆ ವಿಶ್ವಾಸಪೂರ್ಣ ಸೇವೆ ನೀಡಬೇಕೆಂದು ವಕೀಲರಿಗೆ ಕರೆ ನೀಡಿದರು. ನ್ಯಾಯಾಲಯದ ಮೆಟ್ಟಿಲೇರಿರುವ ಎಲ್ಲ ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ಮತ್ತು ಸಮೀಪದಲ್ಲಿ ಕಾನೂನು ಸಲಹೆ ಮತ್ತು ಪರಿಹಾರ ದೊರಕಿಸಿಕೊಡಲು ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲಾಗುವುದೆಂದರು. ನ್ಯಾಯಾಂಗದ ವ್ಯವಸ್ಥೆ ಬಗ್ಗೆ ಜನರು ನಂಬಿಕೆ-ವಿಶ್ವಾಸ ಹೊಂದಿದ್ದಾರೆ, ಆದರೆ ಸಾರ್ವಜನಿಕರಲ್ಲಿ ನ್ಯಾಯಾಂಗದ ಬಗ್ಗೆ ಅಪನಂಬಿಕೆ ಮೂಡಿದಲ್ಲಿ ಮಧ್ಯಸ್ಥಿಕೆಗಳು ಆರಂಭವಾಗಿ ಅರಾಜಕತೆ ಉಂಟಾಗಲಿದೆ ಎಂದು ಎಚ್ಚರಿಸಿದರು.

ಈಗಾಗಲೇ ರಚಿಸಲಾಗಿರುವ ಕಾನೂನುಗಳ ತಿದ್ದುಪಡಿಗೆ ನ್ಯಾಯಮೂರ್ತಿ ಮಳೀಮಠ್ ನೇತೃತ್ವದಲ್ಲಿ ಕಾನೂನು ಆಯೋಗ ರಚಿಸಲಾಗಿದ್ದು, ಈವರೆಗೆ ೮ ಕಾಯ್ದೆಗಳ ಕುರಿತು ೧೨ ವರದಿಗಳು ಬಂದಿವೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೈಕೋರ್ಟ್ ನ್ಯಾಯಾಧೀಶ

ಆನಂದ ಭೈರಾರೆಡ್ಡಿ, ಕಕ್ಷಿದಾರರಿಗೆ ತ್ವರಿತಗತಿಯ ನ್ಯಾಯದಾನ ಸಿಗುವಲ್ಲಿ ವಕೀಲರು ಮತ್ತು ನ್ಯಾಯಾಧೀಶರು ಜವಾಬ್ಧಾರಿಯುತ ಕರ್ತವ್ಯ ನಿರ್ವಹಿಸುವಂತೆ ಕಿವಿಮತು ಹೇಳಿದರು.

ಸಾಕ್ಷರತೆಯ ಪ್ರಮಾಣ ಹೆಚ್ಚಾದಂತೆ ನ್ಯಾಯಾಲಯಕ್ಕೆ ದಾಖಲಾಗುವ ಪ್ರಕರಣಗಳ ಸಂಖ್ಯೆಯು ಕಡಿಮೆಯಾಗುತ್ತಿದ್ದು, ಇದೊಂದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಎಂ. ಶಿವನಗೌಡರ್‌ರವರು ಮಾತನಾಡಿ, ರಾಜ್ಯದ ನ್ಯಾಯಾಲಯಗಳಲ್ಲಿ ಖಾಲಿ ಇರುವ ಪ್ರಥಮ ಮತ್ತು ದ್ವಿತೀಯದರ್ಜೆ ಗುಮಾಸ್ತರ ಹುದ್ದೆಗಳನ್ನು ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದಕ್ಕೆ ಪರ್ಯಾಯ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು.

ವಕೀಲರಾಗಿ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ನ್ಯಾಯವಾದಿ ಮಂಗೋಟೆ ಮುರಿಗೆಪ್ಪ ಮತ್ತು ಹೆಚ್.ಸಿ. ಬಸವರಾಜಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶಾಸಕ

ಬಿ.ಕೆ. ಸಂಗಮೇಶ್ವರ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ವಿ.ಹೆಚ್.ರಾಘವೇಂದ್ರರಾವ್ ಉಪಸ್ಥಿತರಿದ್ದರು.

 ಮುಖಪುಟ /ಸುದ್ದಿ ಸಮಾಚಾರ