ಮುಖಪುಟ /ಸುದ್ದಿ ಸಮಾಚಾರ   
 

ಐ.ಟಿ.ದಾಳಿ - ಅಶೋಕ, ಶ್ರೀರಾಮುಲು ಆಕ್ರೋಶ

ashokಬೆಂಗಳೂರು, ಅ.೨೫ - ಇಂದು ರಾಜ್ಯಾದ್ಯಂತ ಬಿಜೆಪಿ ನಾಯಕರ ಮನೆಗಳು ಮತ್ತು ಕಚೇರಿಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿಯ ಬಗ್ಗೆ ಗೃಹ ಸಚಿವ ಆರ್. ಅಶೋಕ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಇದು ಕಾಂಗ್ರೆಸ್‌ನ ಸೇಡಿನ ಕ್ರಮ ಎಂದರು. ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕಳೆದ ಎರಡು ವರ್ಷಗಳಿಂದಲೂ ನಿರಂತರ ಯತ್ನ ಮಾಡುತ್ತಿವೆ. ಕಳೆದ ತಿಂಗಳಿನಲ್ಲಂತೂ ಇದು ಪರಾಕಾಷ್ಟೆ ಮುಟ್ಟಿತ್ತು.

ಈ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಧೃತಿಗೆಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಇಂಥ ಕೆಲಸ ಮಾಡಿಸಿದ್ದಾರೆ. ನಮ್ಮ ಪಕ್ಷದವರ ಮೇಲೆ ದಾಳಿ ಮಾಡಲು ಇದು ಸಕಾಲವಾಗಿರಲಿಲ್ಲ. ಈ ಕೆಲಸವನ್ನು ಮೊದಲೇ ಮಾಡಬಹುದಾಗಿತ್ತಲ್ಲ ಏಕೆ ಮಾಡಲಿಲ್ಲ ಎಂದು ಕೇಳಿದರು.

ಕಾಂಗ್ರೆಸ್ ನಾಯಕರು ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಯತ್ನಸಿದ್ದಾರೆ. ಅದು ಕೈಗೂಡದ ಕಾರಣ ಜನರ ದೃಷ್ಟಿಯಲ್ಲಿ ಬಿಜೆಪಿಗೆ ಕೆಟ್ಟ ಹೆಸರು ತರಲು ಐ.ಟಿ. ದಾಳಿ ಮೂಲಕ ಪ್ರಯತ್ನ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತ ಎಂಬುದರಲ್ಲಿ ಸಂಶಯವೇ ಇಲ್ಲ. ಕಾಂಗ್ರೆಸ್ ಮತ್ತೊಮ್ಮೆ ತನ್ನ ಬೆದರಿಕೆ ತಂತ್ರ ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

sriramuluಈ ಮಧ್ಯೆ ದೂರವಾಣಿ ಮೂಲಕ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ರಾಜ್ಯ ಬಿಜೆಪಿ ಸರ್ಕಾರವನ್ನು ಉರುಳಿಸಬೇಕು ಹಾಗೂ ಬಳ್ಳಾರಿಯಲ್ಲಿ ಬಿಜೆಪಿ ನಾಯಕರಾಗಿರುವ ತಮ್ಮನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ದುರುದ್ದೇಶದಿಂದ ಈ ದಾಳಿ ಮಾಡಿಸಿದೆ ಎಂದರು.

ಕಾಂಗ್ರೆಸ್‌ನ ಹಲವು ನಾಯಕರು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಅವರೆಲ್ಲರ ಮನೆಗಳನ್ನು, ಕಚೇರಿಗಳನ್ನು ಬಿಟ್ಟು ನಮ್ಮ ಹಾಗೂ ನಮ್ಮ ಬಂಧು ಮಿತ್ರರ ಮನೆ, ಕಚೇರಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಇದರಿಂದಲೇ ಇದು ರಾಜಕೀಯ ಪ್ರೇರಿತ ಎಂಬುದು ವೇದ್ಯವಾಗುತ್ತದೆ ಎಂದರು.

ನಾವು ಆದಾಯ ತೆರಿಗೆ ಪಾವತಿಸಿದ್ದೇವೆ. ನಾವುಗಳಾರೂ ಆದಾಯ ತೆರಿಗೆ ಪಾವತಿಸದ ಜನರಲ್ಲ.  ನಾವೆಲ್ಲರೂ ನ್ಯಾಯಬದ್ಧವಾಗಿಯೇ ವ್ಯವಹಾರ ಮಾಡುತ್ತಿದ್ದೇವೆ ಎಂದ ಅವರು, ಕೇಂದ್ರಕ್ಕೆ ಧೈರ್ಯವಿದ್ದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆ ಮೇಲೆ ಹಾಗೂ ಬಳ್ಳಾರಿಯ ಕಾಂಗ್ರೆಸ್ ಗಣಿ ದಣಿಗಳ ಮನೆ ಕಚೇರಿ ಮೇಲೆ ದಾಳಿ ಮಾಡಲಿ ಎಂದರು.

ನಮ್ಮ ಸರ್ಕಾರ ಉರುಳಿಸಲು ಕಾಂಗ್ರೆಸ್ ಜೆಡಿಎಸ್ ಕೈಜೋಡಿಸಿವೆ. ಇಬ್ಬರೂ ಸೇರಿ ರಾಜಕೀಯ ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಎಲ್ಲವನ್ನೂ ಜನ ನೋಡುತ್ತಿದ್ದಾರೆ. ಕೇಂದ್ರ ಕಾಂಗ್ರೆಸ್ ನಾಯಕರು ಪೊಲೀಸರನ್ನು ಮನೆಯಲ್ಲಿ ನುಗ್ಗಿಸಿದ್ದಾರೆ. ಐ.ಟಿ. ಅಧಿಕಾರಿಗಳು ಮೇಲಿನಿಂದ ನಮಗೆ ನಿರ್ದೇಶನ ಇದೆ. ನಮ್ಮ ಕೈಯಲ್ಲೇನಿದೆ. ನಾವು ಮೇಲಿನವರ ಆದೇಶ ಪಾಲಿಸುತ್ತೇವೆ ಎನ್ನುತ್ತಾರೆ. ನಮ್ಮ ಕಾನೂನು ಸಲಹೆಗಾರರ ಮನೆ ಮೇಲೆ ಸಹ ಮಾಡಿದ್ದಾರೆ ಎಂದು ಗುಡುಗಿದರು. ಜನರೇ ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ