ಮುಖಪುಟ /ಸುದ್ದಿ ಸಮಾಚಾರ   
 

ದುರುದ್ದೇಶದ ದಾಳಿ - ಸೋಮಶೇಖರ ರೆಡ್ಡಿ

ಬೆಂಗಳೂರು, ಅ.೨೫- ಇಂದು ಬಿಜೆಪಿ ಮುಖಂಡರ ಮನೆಗಳು ಹಾಗೂ ಕಚೇರಿಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿಯ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡ ಇದೆ ಎಂದು ಕೆ.ಎಂ.ಎಫ್. ಅಧ್ಯಕ್ಷ ಹಾಗೂ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಕೋಲಾರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಜೆಡಿಎಸ್ ಜೊತೆಗೂಡಿ ಯತ್ನಿಸಿದ ಕಾಂಗ್ರೆಸ್ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಹತಾಶರಾಗಿ ಆದಾಯ ತೆರಿಗೆ ದಾಳಿ ಮಾಡಿಸಿವೆ ಎಂದು ಹೇಳಿದರು. ಈ ದಾಳಿಯ ಹಿಂದೆ ರಾಜ್ಯ ಕಾಂಗ್ರೆಸ್ ನಾಯಕರ ಒತ್ತಡವೂ ಇದೆ ಎಂದು ಆಪಾದಿಸಿದರು. ಇಂಥ ಯಾವುದೇ ದಾಳಿಗಳಿಗೆ ತಾವು ಹೆದರುವುದಿಲ್ಲ ಎಂದು ಹೇಳಿದರು.

ಈ ಮಧ್ಯೆ ಸರ್ಕಾರದ ಪರ ವಿಶ್ವಾಸಮತ ಯಾಚನೆ ವೇಳೆ ಮತ ಚಲಾಯಿಸಿದ ವರ್ತೂರು ಪ್ರಕಾಶ್ ಅವರಿಗೆ ಹಣ ನೀಡಲಾಗಿತ್ತೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಪ್ರಕಾಶ್ ಅವರಿಗೆ ಯಾವುದೇ ಹಣದ ಆಮಿಷ ನೀಡಲಾಗಿಲ್ಲ. ಇದು ಕೇವಲ ಪ್ರತಿಪಕ್ಷಗಳ ಪಿತೂರಿ ಎಂದರು. ಆದರೆ, ವರ್ತೂರು ಪ್ರಕಾಶ್‌ಗೆ ಸಚಿವ ಸ್ಥಾನ ದೊರಕುವುದು ಗ್ಯಾರಂಟಿ ಎಂದು ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ